ಮೈಸೂರಿನಲ್ಲಿ ಸಿಕ್ಕ ಚಿನ್ನದ ಕುರಾನ್ ಜಮ್ಮುವಿನಲ್ಲಿ ಕಳುವಾಗಿದ್ದು?
ಮೈಸೂರು, ಆಗಸ್ಟ್ 24 : ಮೈಸೂರಿನಲ್ಲಿ ಪೊಲೀಸರು ವಶಪಡಿಸಿಕೊಂಡ ಚಿನ್ನದ ಲೇಪನವಿರುವ ಹಾಳೆಗಳ ಕುರಾನ್ ಜಮ್ಮು-ಕಾಶ್ಮೀರದ ಸಂಗ್ರಹಾಲಯದಿಂದ ಕಳುವಾಗಿದ್ದು ಎಂದು ಶಂಕಿಸಲಾಗಿದೆ. ಜಮ್ಮು-ಕಾಶ್ಮೀರದ ಪೊಲೀಸರು ಈ ಬಗ್ಗೆ ಮಾಹಿತಿ ಸಂಗ್ರಹಣೆ ಮಾಡಲು ಶೀಘ್ರದಲ್ಲೇ ಮೈಸೂರಿಗೆ ಭೇಟಿ ನೀಡುವ ಸಾಧ್ಯತೆ ಇದೆ.
ಈ ಕುರಾನ್ ಜಮ್ಮು-ಮತ್ತು ಕಾಶ್ಮೀರದ ಶ್ರೀನಗರದ ವಸ್ತು ಸಂಗ್ರಹಾಲಯದಿಂದ 2003ರಲ್ಲಿ ಕಳುವಾಗಿದ್ದು ಎಂಬ ಶಂಕೆ ವ್ಯಕ್ತವಾಗಿದೆ. ಮಾಧ್ಯಮಗಳ ಮೂಲಕ ಮಾಹಿತಿ ತಿಳಿದ ಪ್ರತಾಪ್ ಸಿಂಗ್ ವಸ್ತುಸಂಗ್ರಹಾಲಯದ ಸಿಬ್ಬಂದಿ ಈ ಕುರಿತು ಮೈಸೂರು ಪೊಲೀಸರಿಗೆ ಈ ಮೇಲ್ ಮೂಲಕ ಮಾಹಿತಿ ರವಾನಿಸಿದ್ದಾರೆ, ಕಾಶ್ಮೀರ ಪೊಲೀಸರಿಗೂ ಮಾಹಿತಿ ಕೊಟ್ಟಿದ್ದಾರೆ. [ಖುರಾನ್ ಪಠಿಸದ ಪುತ್ರನ ಕೊಂದುಸುಟ್ಟ ಮಹಾತಾಯಿ]

ಪ್ರತಾಪ್ ಸಿಂಗ್ ವಸ್ತು ಸಂಗ್ರಹಾಲಯದಿಂದ ಕುರಾನ್ ಕಳುವಾದ ಬಗ್ಗೆ ಜಮ್ಮು-ಕಾಶ್ಮೀರ ಸರ್ಕಾರ ಸಿಬಿಐ ತನಿಖೆಗೆ ಆದೇಶಿಸಿತ್ತು. ಆದರೆ, ತನಿಖೆಯಲ್ಲಿ ಈ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ. ಈಗ ಕಾಶ್ಮೀರ ಪೊಲೀಸರು ಮೈಸೂರಿಗೆ ಭೇಟಿ ನೀಡಿ ಕುರಾನ್ ಪರಿಶೀಲನೆ ನಡೆಸಲಿದ್ದಾರೆ.
5 ಕೋಟಿಗೆ ಮಾರಲು ಹೊರಟಿದ್ದರು : ಆ.10ರಂದು ಕೆ.ಆರ್.ನಗರ ತಾಲೂಕಿನ ಹೊಸ ಅಗ್ರಹಾರ ಬಳಿ ಕುರಾನ್ ಮಾರಲು ಯತ್ನಿಸುತ್ತಿದ್ದ 10 ಮಂದಿಯ ತಂಡವನ್ನು ಪೊಲೀಸರು ಬಂಧಿಸಿದ್ದರು. ಕುರಾನ್ ವಶಪಡಿಸಿಕೊಂಡ ಬಳಿಕ ಹಾಳೆಗಳ ಮೇಲೆ ಚಿನ್ನದ ಲೇಪನವಿರುವುದು ಬಹಿರಂಗಗೊಂಡಿದೆ. ಸುಮಾರು 5 ಕೋಟಿ ರೂ.ಗಳಿಗೆ ಇದನ್ನು ಮಾರಲು ಯತ್ನಿಸುತ್ತಿದ್ದರು ಎಂದು ತನಿಖೆಯಿಂದ ತಿಳಿದುಬಂದಿದೆ.












Click it and Unblock the Notifications