ಮೈಸೂರಿನಲ್ಲಿ ಸಂಚಾರಿ ನಿಯಮ ಪಾಲಿಸಿದವರಿಗೆ ಟ್ರಾಫಿಕ್ ಪೊಲೀಸರಿಂದ ಗಿಫ್ಟ್
ಮೈಸೂರು, ಜನವರಿ 1: ಸಂಚಾರ ನಿಯಮ ಪಾಲಿಸುವವರಿಗೆ ಸಿಹಿ ಲಡ್ಡು, ಗ್ರೀಟಿಂಗ್ ಕಾರ್ಡ್ ಹಾಗೂ ನೆನಪಿನ ಕಾಣಿಕೆ ನೀಡುವ ಮೂಲಕ ಪೊಲೀಸರು ಕೂಡ ಸಾರ್ವಜನಿಕರೊಂದಿಗೆ ಹೊಸ ವರ್ಷವನ್ನು ವಿನೂತನವಾಗಿ ಆಚರಿಸಿದ್ದಾರೆ.
"ನಾವು ಪೊಲೀಸರು. ಆದರೆ ನಿಮ್ಮಂತೆಯೇ ನಮಗೂ ಕೂಡ ಮಾನವೀಯ ಸಂಬಂಧಗಳಿವೆ. ನಿಮ್ಮೊಂದಿಗೆ ಹೊಸ ವರ್ಷಾಚರಣೆ ಮಾಡುವ ಮೂಲಕ ಸಂಬಂಧಗಳನ್ನು ಬೆಸೆಯುವ ಕನಸಿದೆ. ನೀವು ಸಂಚಾರ ನಿಯಮ ಪಾಲಿಸಿದಲ್ಲಿ ನಾವು ನಿಮ್ಮೊಂದಿಗೆ ಸಿಹಿ ಹಂಚಿ, ಗ್ರೀಟಿಂಗ್ ಕಾರ್ಡ್ ನೀಡಿ ಹೊಸ ವರ್ಷವನ್ನು ಸಂಭ್ರಮದಿಂದ ಬರಮಾಡಿಕೊಳ್ಳುತ್ತೇವೆ" ಎಂದು ಪೊಲೀಸರು ಹೇಳುತ್ತಾರೆ.

ಇಷ್ಟು ದಿನಗಳ ಕಾಲ ಸಂಚಾರಿ ನಿಯಮ ಉಲ್ಲಂಘಿಸುವವರನ್ನು ಗುರಿಯಾಗಿರಿಸಿಕೊಂಡು ಕಾರ್ಯಾಚರಣೆ ನಡೆಸುತ್ತಿದ್ದ ಸಂಚಾರಿ ನಿಯಂತ್ರಣ ಪೊಲೀಸರು, ಸವಾರರಿಗೆ ಗುಲಾಬಿ ಹೂ ನೀಡುವ ಮೂಲಕ ಪಾಠ ಹೇಳುತ್ತಿದ್ದ ದೃಶ್ಯ ಕಂಡುಬಂತು. ಕೆಲ ದಿನಗಳ ಹಿಂದೆ ಹೆಲ್ಮೆಟ್ ಧರಿಸದವರಿಗೆ ದಂಡದ ಬದಲಾಗಿ ಅಷ್ಟೇ ಹಣವನ್ನು ಪಡೆದು ಹೆಲ್ಮೆಟ್ ವಿತರಣೆ ಕೂಡ ಮಾಡಲಾಗಿತ್ತು. ಇದು ಸಾರ್ವಜನಿಕರ ಪ್ರಶಂಸೆಗೆ ಪಾತ್ರವಾಗಿತ್ತು.
ಇದೀಗ ಒಂದು ಹೆಜ್ಜೆ ಮುಂದೆ ಸಾಗಿರುವ ನಗರ ಪೊಲೀಸ್ ಆಯುಕ್ತ ಸುಬ್ರಹ್ಮಣ್ಯೇಶ್ವರರಾವ್ ಅವರು ಪೊಲೀಸರು ಹಾಗೂ ಸಾರ್ವಜನಿಕರು ಜೊತೆಯಾಗಿ ವರ್ಷಾಚರಣೆ ಮಾಡಬೇಕೆಂಬ ಆಲೋಚನೆ ಮಾಡಿದ್ದು, ನಿಯಮ ಪಾಲಿಸುವವರಿಗೆ ಸಿಹಿ ವಿತರಿಸಿದ್ದಾರೆ.

ಈ ಸಂಬಂಧ ಈಗಾಗಲೇ ಸಾವಿರಕ್ಕೂ ಹೆಚ್ಚು ಲಡ್ಡು, ಗ್ರೀಟಿಂಗ್ ಕಾರ್ಡ್ ಹಾಗೂ ನೆನಪಿನ ಕಾಣಿಕೆಗಳನ್ನು ಸಿದ್ಧವಾಗಿರಿಸಿಕೊಂಡಿರುವ ಪೊಲೀಸರು ಅವುಗಳನ್ನು ಸಂಚಾರ ನಿಯಮ ಪಾಲಿಸುವ ಸವಾರರಿಗೆ ನೀಡುತ್ತಿದ್ದಾರೆ. ಅಷ್ಟೇ ಅಲ್ಲ, ನಿಯಮ ಪಾಲಿಸುವವರು ಹೆಚ್ಚಿದ್ದಷ್ಟು ನಮಗೆ ಸಂತೋಷವೇ ಸರಿ ಎಂದು ಆಯುಕ್ತರು ಹೇಳುತ್ತಾರೆ. ಈ ಮೂಲಕ ವರ್ಷಾಚರಣೆ ಈ ರೀತಿಯಾಗಿ ಕೂಡ ಸ್ವಾಗತಿಸಬಹುದೆಂದು ಪೊಲೀಸರು ತೋರಿಸಿಕೊಡಲು ಮುಂದಾಗಿದ್ದಾರೆ.












Click it and Unblock the Notifications