ಮುಡಾ ಅಕ್ರಮ: 4 ಕೋಟಿ ಮೌಲ್ಯದ ನಿವೇಶನ ಕೇವಲ 500 ರೂ.ಗೆ ಮಾರಾಟ!
ಬೆಂಗಳೂರು, ನ. 28: ಕೋಟ್ಯಂತರ ಬೆಲೆ ಬಾಳುವ ನಿವೇಶವನ್ನು ರಾಜಕೀಯ ಪ್ರಭಾವದಿಂದ ಬರೀ 500 ರೂಪಾಯಿಗಳಿಗೆ ಮಾರಾಟ ಮಾಡಿರುವ ಪ್ರಕರಣ ಮೈಸೂರಿನಲ್ಲಿ ನಡೆದಿರುವುದು ಬೆಳಕಿಗೆ ಬಂದಿದೆ. ವಿಜಯನಗರ 4ನೇ ಹಂತದಲ್ಲಿರುವ ವಿವಾದಿತ ಮುಡಾ ನಿವೇಶನ ಮಾರಾಟಕ್ಕೆ ಹೊಸ ತಿರುವು ಸಿಕ್ಕಿದ್ದು, ಈ ಕುರಿತು ಶುಕ್ರವಾರ ದಾಖಲೆಗಳು ಬಿಡುಗಡೆಯಾಗಿವೆ. ಮುಖ್ಯಮಂತ್ರಿ ಯಡಿಯೂರಪ್ಪ ಅವರ ಪುತ್ರ ಬಿ.ವೈ. ವಿಜಯೇಂದ್ರ ಅವರ ಮೇಲೆ ನಿವೇಶನ ಹಂಚಿಕೆಗೆ ಪ್ರಭಾವ ಬೀರಿರುವ ಆರೋಪ ಮಾಡಲಾಗಿದೆ.
ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ನಂದೀಶ್ ಹಂಚೆ ಪತ್ನಿ ಎಸ್. ದೀಪಾ ಅವರ ಹೆಸರಿಗೆ ನಾಲ್ಕು ಕೋಟಿ ರೂಪಾಯಿಗಳ ಮೌಲ್ಯದ ನಿವೇಶನವು ಅಕ್ರಮವಾಗಿ ವರ್ಗಾವಣೆಯಾಗಿದೆ. ಕೇವಲ 500 ರೂ. ಮಾತ್ರ ಮುಡಾಕ್ಕೆ ಪಾವತಿಯಾಗಿದ್ದು, ಇದು ಕ್ರಿಮಿನಲ್ ಅಪರಾಧ. ಈ ಕೃತ್ಯದಲ್ಲಿ ನಂದೀಶ್ ನೇರವಾಗಿ ಶಾಮೀಲಾಗಿದ್ದಾರೆ. ಮುಖ್ಯಮಂತ್ರಿ ಕಚೇರಿಯ ಪ್ರಭಾವ ಇಲ್ಲಿ ದುರ್ಬಳಕೆಯಾಗಿದೆ. ಇದರ ಹಿಂದೆ ಪ್ರಭಾವಿ ಯುವ ರಾಜಕೀಯ ಮುಖಂಡರೂ ಇದ್ದಾರೆ ಎಂದು ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಜಾಗೃತ ವೇದಿಕೆಯ ಅಧ್ಯಕ್ಷ ಕೆ.ಎಸ್. ಶಿವರಾಮು ಸುದ್ದಿಗೋಷ್ಠಿಯಲ್ಲಿ ಆರೋಪಿಸಿದ್ದಾರೆ.

ಬಿ.ವೈ. ವಿಜಯೇಂದ್ರ ಹೆಸರು ಬಳಕೆ!
ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಪುತ್ರ ಬಿ.ವೈ. ವಿಜಯೇಂದ್ರ ಹೆಸರು ಬಳಸಿಕೊಂಡು ನಂದೀಶ್ ನಿವೇಶನವನ್ನು ಲಪಟಾಯಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ, ನಗರಾಭಿವೃದ್ಧಿ ಸಚಿವರಿಗೆ ದೂರು ನೀಡಿದ್ದು, ತಕ್ಷಣ ಇವರನ್ನು ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಸ್ಥಾನದಿಂದ ತಕ್ಷಣವೇ ವಜಾ ಮಾಡಬೇಕು. ಇದರಲ್ಲಿ ಶಾಮೀಲಾಗಿರುವ ಮುಡಾ ಆಯುಕ್ತ ನಂಟೇಶ್ ಅವರನ್ನು ಅಮಾನತು ಮಾಡಬೇಕು. ಜತೆಗೆ, ಈ ಕುರಿತು ಹೈಕೋರ್ಟ್ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆ ನಡೆಸಬೇಕು ಎಂದು ಕೆ.ಎಸ್. ಶಿವರಾಮು ಆಗ್ರಹಿಸಿದರು.

ಮರು ಪಾವತಿಯಾಗಿದ್ದ ನಿವೇಶನ
ವಿಜಯನಗರ 4ನೇ ಹಂತ 2ನೇ ಫೇಸ್‍ನಲ್ಲಿರುವ 360 ಚದರ ಮೀಟರ್ ವ್ಯಾಪ್ತಿಯ ನಿವೇಶನವನ್ನು(ಸಂಖ್ಯೆ-3165) ಐಎಫ್‍ಎಸ್ ಅಧಿಕಾರಿಯಾಗಿದ್ದ ನಾಗರಾಜು ಎಂಬುವರಿಗೆ 1994ರಲ್ಲಿ ಮುಡಾ ಮಂಜೂರು ಮಾಡಿದೆ. ಇದು ಇವರ ಹೆಸರಿಗೆ 1997ರಲ್ಲಿ ನೋಂದಣಿಯಾಗಿದೆ. ಬೆಂಗಳೂರಿನ ಎಚ್‍ಎಸ್‍ಆರ್ ಬಡಾವಣೆಯಲ್ಲಿ ಇವರು ನಿವೇಶನ ಹೊಂದಿದ್ದ ಕಾರಣಕ್ಕೆ 2006ರಲ್ಲಿ ಈ ನಿವೇಶನವನ್ನು ಮುಡಾಕ್ಕೆ ವಾಪಸ್ ಮಾಡಿ 1.50 ಲಕ್ಷ ರೂ. ಮರುಪಾವತಿ ಪಡೆದಿದ್ದರು. ಬಳಿಕ 2019ರಲ್ಲಿ ನಾಗರಾಜು ನಿಧನರಾಗಿದ್ದಾರೆ. ಆದರೆ, ನಿವೇಶನ ವಾಪಸ್ ಮಾಡಿರುವ ಕುರಿತು ಮುಡಾ ಅಧಿಕಾರಿಗಳು ಮುಚ್ಚಿಟ್ಟು ಮತ್ತೆ ಬೇರೆಯವರಿಗೆ ವರ್ಗಾವಣೆ ಮಾಡಿದ್ದಾರೆ ಎಂದು ಶಿವರಾಮು ದೂರಿದರು.
ಅಂದಾಜು 14 ವರ್ಷಗಳ ಬಳಿಕ ನಾಗರಾಜು ಪತ್ನಿ ಜೆ. ಶಶಿಕಲಾ ಅವರು ಪೌತಿ ಆಧಾರದ ಮೇರೆಗೆ ಮುಡಾಕ್ಕೆ 2020ರ ಆಗಸ್ಟ್ 13ರಂದು ಅರ್ಜಿ ಸಲ್ಲಿಸಿ, ತಮ್ಮ ಹೆಸರಿಗೆ ನಿವೇಶನ ವರ್ಗಾಹಿಸಿಕೊಂಡಿರುತ್ತಾರೆ. ಕ್ರಯಪತ್ರ ಪಡೆದುಕೊಂಡು ಸೆ.21ರಂದು ಇವರ ಹೆಸರಿಗೆ ಖಾತೆ ವರ್ಗಾವಣೆ ಮಾಡಲಾಗಿದೆ. ಅದೇ ದಿನ ಶಶಿಕಲಾ ಅವರು ದೀಪಾ ಅವರಿಗೆ ಶುದ್ಧ ಕ್ರಮಪತ್ರ ಮಾಡಿಕೊಡುವ ಮೂಲಕ ಮಾರಾಟ ಮಾಡಿದ್ದಾರೆ ಎಂದು ಆರೋಪಿಸಿದರು.

ಒಂದೇ ದಿನ: ಎರಡು ಮಾಲೀಕರ ಬದಲಾವಣೆ
ಒಂದೇ ದಿನ ನಿವೇಶನವು ಮುಡಾದಿಂದ ಜೆ. ಶಶಿಕಲಾ ಅವರಿಗೆ ಮತ್ತು ಇವರಿಂದ ದೀಪಾ ಅವರಿಗೆ ಮಾಲೀಕತ್ವ ಮತ್ತು ಖಾತೆ ಬದಲಾವಣೆ ಆಗಿರುವುದು ಹಿಂದೆ ನಂದೀಶ್ ಹಂಚ್ಯ ಮತ್ತು ಮುಡಾ ಅಧಿಕಾರಿಗಳು ಶಾಮೀಲಾಗಿರುವುದು ಮೇಲ್ನೋಟಕ್ಕೆ ಸಾಬೀತಾಗಿದೆ. ನಂದೀಶ್ ತಮ್ಮ ಹೆಸರನ್ನು ಮರೆಮಾಚಲು ದೀಪಾ ಅವರಿಗೆ ಮಾಡಿರುವ ಕ್ರಮಪತ್ರದಲ್ಲಿ ಉದ್ದೇಶಪೂರ್ವಕವಾಗಿ ತಮ್ಮ ಹೆಸರು ಬದಲು ದೀಪಾರವರ ತಂದೆ ಹೆಸರನ್ನು ನಮೂದಿಸಿದ್ದಾರೆ ಎಂದು ದೂರಿದರು.

ಶಶಿಕಲಾ ಬ್ಯಾಂಕ್ ಖಾತೆಗೆ ಹಂಚ್ಯ ಹಣ
ಶಶಿಕಲಾ ಅವರು ಮುಡಾಕ್ಕೆ ಪೌತಿ ಖಾತೆಗೆ ಅರ್ಜಿ ಸಲ್ಲಿಸಿದ ದಿನದಂದೇ ನಂದೀಶ್ ಹಂಚ್ಯ ಅವರ ಬ್ಯಾಂಕ್ ಖಾತೆಯಿಂದ 10 ಲಕ್ಷ ರೂ. ಚೆಕ್ ಮತ್ತು ಬಳಿಕ 60 ಲಕ್ಷ ರೂ. ಮೂಲಕ ಪಾವತಿಯಾಗಿದೆ. ಇದು ನೇರವಾಗಿ ಶಶಿಕಲಾ ಬ್ಯಾಂಕ್ ಖಾತೆಗೆ ವರ್ಗಾವಣೆ ಆಗಿದೆ. ಇದನ್ನು ನೋಡಿದರೆ ಇದು ನಿಯೋಜಿತವಾಗಿದ್ದು, ಈ ಹಗರಣದಲ್ಲಿ ನಂದೀಶ್ ನೇರವಾಗಿ ಭಾಗಿಯಾಗಿ ಬೆಲೆಬಾಳುವ ನಿವೇಶನವನ್ನು ಕಬಳಿಸಿದ್ದಾರೆ. ಇದಕ್ಕಾಗಿ ವಾಮಮಾರ್ಗ ಅನುಸರಿಸಿ ಅಕ್ರಮ ಎಸಗಿದ್ದಾರೆ ಎಂದು ಆರೋಪಿಸಿದ್ದಾರೆ.