ಮೈಸೂರು ವಸ್ತು ಪ್ರದರ್ಶನ ಅಂತ್ಯ: ಬರೋಬ್ಬರಿ 19 ಲಕ್ಷ ದಾಖಲೆಯ ಪ್ರವಾಸಿಗರ ಭೇಟಿ
ಮೈಸೂರು, ಜನವರಿ 13: ಮೈಸೂರಿನ ಪ್ರಮುಖ ಜನಾಕರ್ಷಣೆಯ ಕೇಂದ್ರವಾದ ವಸ್ತು ಪ್ರದರ್ಶನಕ್ಕೆ ಈ ಬಾರಿ ದಾಖಲೆಯ ಪ್ರವಾಸಿಗರು ಭೇಟಿ ನೀಡಿದ್ದಾರೆ. ಸಾಮಾನ್ಯವಾಗಿ ದಸರಾ, ಕ್ರಿಸ್‌ಮಸ್ ಹಾಗೂ ಹೊಸ ವರ್ಷದ ಆರಂಭದಲ್ಲಿ ಮೈಸೂರಿಗೆ ಹೆಚ್ಚಿನ ಪ್ರವಾಸಿಗರು ಆಗಮಿಸುತ್ತಾರೆ.
ಇಲ್ಲಿನ ಚಾಮುಂಡಿಬೆಟ್ಟ, ಮೃಗಾಲಯ ಹಾಗೂ ಅರಮನೆಯಂತೆ ವಸ್ತು ಪ್ರದರ್ಶನಕ್ಕೂ ಭೇಟಿ ನೀಡುತ್ತಾರೆ. ಈ ಬಾರಿ 'ಶಕ್ತಿ' ಯೋಜನೆ ಪರಿಣಾಮ ವಸ್ತುಪ್ರದರ್ಶನಕ್ಕೆ ದಾಖಲೆಯ ಪ್ರಮಾಣದಲ್ಲಿ ಜನಸಾಗರವೇ ಹರಿದು ಬಂದಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಶೇ.20ರಷ್ಟು ಹೆಚ್ಚು ಮಂದಿ ವಸ್ತುಪ್ರದರ್ಶನಕ್ಕೆ ಭೇಟಿ ನೀಡಿದ್ದಾರೆ.

ದಸರಾ ಮಹೋತ್ಸವ ಸಂದರ್ಭದಲ್ಲಿ ಈ ಬಾರಿ ಪ್ರತಿ ದಿನ ವಸ್ತು ಪ್ರದರ್ಶನಕ್ಕೆ 70 ಸಾವಿರ ಪ್ರವಾಸಿಗರು ಭೇಟಿ ನೀಡಿದ್ದಾರೆ. ದೀಪಾವಳಿವರೆಗೂ ಪ್ರವಾಸಿಗರ ಸಂಖ್ಯೆ ಏರುಗತಿಯಲ್ಲೇ ಇತ್ತು. ಇನ್ನು ವಾರಾಂತ್ಯದಲ್ಲಿ 50 ಸಾವಿರಕ್ಕೂ ಹೆಚ್ಚು ಪ್ರವಾಸಿಗರು ವಸ್ತುಪ್ರದರ್ಶನ ವೀಕ್ಷಿಸಿದ್ದರೆ, ಕ್ರಿಸ್‌ಮಸ್, ಹೊಸ ವರ್ಷದಲ್ಲೂ ಇನ್ನು ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಆಗಮಿಸಿದ್ದಾರೆ.
ಕಳೆದ ಬಾರಿ ಬೆಂಗಳೂರಿನ ವರ್ಲ್ಡ್ ಇಂಡಿಯಾ ರೆಸಾರ್ಟ್ ಪ್ರೈ.ಲಿ. 8.08 ಕೋಟಿ ರೂ. ಗೆ ಟೆಂಡರ್ ಪಡೆದುಕೊಂಡಿತ್ತು. ಈ ಬಾರಿಯೂ ನ್ ವರ್ಲ್ಡ್ 11.52 ಕೋಟಿ ರೂ.ಗೆ ಟೆಂಡರ್ ಪಡೆದುಕೊಂಡಿದೆ. ವಸ್ತು ಪ್ರದರ್ಶನದಲ್ಲಿ 145 ವಾಣಿಜ್ಯ ಮಳಿಗೆ, 60 ಫುಡ್ ಕೋರ್ಟ್, 40 ಸರಕಾರದ ಮಳಿಗೆ, 46 ಅಮ್ಯೂಸ್‌ಮೆಂಟ್ ಆಟಗಳು ಈ ಬಾರಿ ಗಮನ ಸೆಳೆದಿವೆ.
ಅಕ್ಟೋಬರ್ 15ರಂದು ಮೈಸೂರು ವಸ್ತು ಪ್ರದರ್ಶನ ಆರಂಭಗೊಂಡಿದ್ದು, ನಿನ್ನೆ (ಜನವರಿ 12)ರಂದು ಕೊನೆಗೊಂಡಿದೆ. ಪ್ರವಾಸೋದ್ಯಮಕ್ಕೆ ಅನುಕೂಲ ಕಲ್ಪಿಸುವ ಜೊತೆಗೆ ಟೆಂಡರ್‌ದಾರರ ಬೇಡಿಕೆ ಹಿನ್ನೆಲೆಯಲ್ಲಿ ಮತ್ತೆ 15 ದಿನ ವಸ್ತುಪ್ರದರ್ಶನವನ್ನು ಮುಂದುವರಿಸಲು ಅವಕಾಶ ನೀಡುವಂತೆ ಪ್ರಾಧಿಕಾರ ಸರ್ಕಾರಕ್ಕೆ ಪತ್ರ ಬರೆದಿತ್ತು. ಒಂದು ವೇಳೆ ಸರ್ಕಾರ ಒಪ್ಪಿಗೆ ಸೂಚಿಸಿದರೆ ಜನವರಿ 28 ರವರೆಗೂ ವಸ್ತು ಪ್ರದರ್ಶನ ವಿಸ್ತರಣೆ ಮಾಡಬೇಕೆಂದುಕೊಂಡಿತ್ತು. ಆದರೆ ಸರ್ಕಾರ ಅನುಮತಿ ನೀಡದ ಹಿನ್ನೆಲೆಯಲ್ಲಿ ಮೈಸೂರು ವಸ್ತು ಪ್ರದರ್ಶನ ಅಂತ್ಯಗೊಂಡಿದೆ.

ಕಳೆದ ಬಾರಿ 98 ದಿನದಲ್ಲಿ 17 ಲಕ್ಷ ಜನರು ವಸ್ತುಪ್ರದರ್ಶನಕ್ಕೆ ಭೇಟಿ ಕೊಟ್ಟಿದ್ದರು. ಈ ಬಾರಿ 75 ದಿನದಲ್ಲೇ 19 ಲಕ್ಷ ಪ್ರವಾಸಿಗರು ವಸ್ತು ಪ್ರದರ್ಶನವನ್ನು ಕಣ್ತುಂಬಿಕೊಂಡಿದ್ದಾರೆ. ವಿವಿಧ ಬಗೆಯ ಶಾಪಿಂಗ್ ಮಾಡಿ, ಅಮ್ಯೂಸ್‌ಮೆಂಟ್ ಗೇಮ್‌ಗಳಲ್ಲಿ ಎಂಜಾಯ್ ಮಾಡಿ, ಆಹಾರ ಮೇಳದಲ್ಲಿ ನಾನಾ ಖಾದ್ಯಗಳನ್ನು ಸವಿದಿದ್ದಾರೆ. ಸರ್ಕಾರದ ಉಚಿತ ಶಕ್ತಿ ಯೋಜನೆಯಿಂದ ದೂರದೂರಿನಿಂದ ಮಹಿಳೆಯರು ಕುಟುಂಬ ಸಮೇತ ಮೈಸೂರಿನ ವಸ್ತುಪ್ರದರ್ಶನಕ್ಕೆ ಲಗ್ಗೆ ಇಟ್ಟಿದ್ದಾರೆ. ಇದರಿಂದ ವಸ್ತು ಪ್ರದರ್ಶನಕ್ಕೆ ಜನರ ದಂಡೇ ಹರಿದುಬಂದಿದೆ.












Click it and Unblock the Notifications