Nagarahole: ಮುಂಗಾರು ಮಳೆಗೆ ತಲೆದೂಗಿದ ನಾಗರಹೊಳೆ ಉದ್ಯಾನ
ಮೈಸೂರು, ಆಗಸ್ಟ್ 10: ಮುಂಗಾರು ಮಳೆಯಿಂದ ನಿಸರ್ಗದ ಚೆಲುವು ಇಮ್ಮಡಿಸಿದೆ. ಇದೀಗ ನಾಗರಹೊಳೆ ರಾಷ್ಟ್ರೀಯ ಉದ್ಯಾನವನ ಆಸುಪಾಸಿನಲ್ಲಿ ಓಡಾಡುತ್ತಿದ್ದರೆ ನಿಸರ್ಗದ ಸುಂದರ ಕಾವ್ಯವೊಂದು ಬರೆದಂತಹ ಅನುಭವ ನೀಡುತ್ತದೆ. ಹೀಗಾಗಿ ಈಗ ನಾಗರಹೊಳೆಗೆ ತೆರಳುವುದು ಮತ್ತು ಅಲ್ಲಿನ ಪರಿಸರದಲ್ಲಿ ಅಡ್ಡಾಡುವುದು ಎಲ್ಲಿಲ್ಲದ ಖುಷಿ ಕೊಡುತ್ತದೆ. ಅದರಲ್ಲೂ ಸಫಾರಿಗೆ ತೆರಳಿದರೆ ನೀಡುವ ಮಜಾ ಅಚ್ಚಳಿಯದೆ ಉಳಿಯುವಂತೆ ಮಾಡಿ ಬಿಡುತ್ತದೆ.
ಈ ಬಾರಿ ಸುರಿದ ಮಳೆಗೆ ನಾಗರಹೊಳೆ ಅರಣ್ಯದೊಳಗಿರುವ ಕೆರೆಕಟ್ಟೆಗಳು ತುಂಬಿದ್ದರೆ, ಲಕ್ಷ್ಮಣ ತೀರ್ಥ ನದಿ ಝುಳುಝುಳು ಎನ್ನುತ್ತಾ ಹರಿಯುತ್ತಿದೆ. ಇದರ ನಡುವಿನ ಹಸಿರಲೋಕದಲ್ಲಿ ವನ್ಯಪ್ರಾಣಿ ಮೈಮರೆಯುತ್ತಿವೆ. ಅರಣ್ಯದೊಳಗೆ ಹಾದು ಹೋಗಿರುವ ರಸ್ತೆಗಳಲ್ಲಿ ಸಾಗುವಾಗ ದಾರಿಯುದ್ದಕ್ಕೂ ಜಿಂಕೆ, ಸಾರಂಗ, ನವಿಲು, ಸೇರಿದಂತೆ ಹತ್ತು ಹಲವು ವನ್ಯಪ್ರಾಣಿಗಳು ದರ್ಶನ ನೀಡಿ ಮೈಮನ ತಣಿಸುತ್ತಿವೆ.

ಹಾಗೆಸುಮ್ಮನೆ ಕಣ್ಣುಹಾಯಿಸಿದರೆ ಹಸಿರ ವನಸಿರಿ ಕಣ್ಮನ ತಣಿಸುತ್ತದೆ ಜತೆಗೆ ಅದರ ನಡುವೆ ಹಿಂಡು ಹಿಂಡಾಗಿ ಅಚ್ಚರಿಯ ನೋಟ ಬೀರುವ ಸದಾ ಗಾಬರಿಯಲ್ಲಿರುವ ಜಿಂಕೆಗಳು ಈಗ ನೆಮ್ಮದಿಯಾಗಿ ಮೇಯುತ್ತಿರುವ ದೃಶ್ಯಗಳು ಸಾಮಾನ್ಯವಾಗಿವೆ ಇದರೊಂದಿಗೆ, ಕಾಡುಕೋಣ, ಕಾಡಾನೆ ಎಲ್ಲೆಂದರಲ್ಲಿ ಅಲೆಯುವ ದೃಶ್ಯಗಳು ಗೋಚರಿಸುತ್ತಿದೆ.
ಇನ್ನು ಸಫಾರಿಗೆ ತೆರಳಿದರೆ ನಿರ್ಭಯವಾಗಿ ಹೆಜ್ಜೆಹಾಕುವ ಹುಲಿ ಕಾಣಸಿಗುತ್ತದೆ. ಇಷ್ಟೇ ಅಲ್ಲದೆ ಇವುಗಳ ಜತೆಗೆ ಹತ್ತಾರು ಸಣ್ಣಪುಟ್ಟ ಪ್ರಾಣಿ, ಪಕ್ಷಿಗಳು ಎಲ್ಲೆಂದರಲ್ಲಿ ಅರಣ್ಯದಲ್ಲಿ ಅಡ್ಡಾಡುತ್ತಾ ಹುರುಪಿನಿಂದ ಓಡಾಡುತ್ತಿರುವುದು ಕಂಡುಬರುತ್ತಿದೆ.

ನಾಗರಹೊಳೆಯಲ್ಲಿ ತುಂಬಿದ ಕೆರೆಕಟ್ಟೆಗಳು
ಈ ಬಾರಿ ಜನವರಿಯಿಂದ ಮೇ ತನಕವೂ ಯಾವುದೇ ರೀತಿಯ ಮಳೆ ಸುರಿಯದ ಕಾರಣ ಇಡೀ ಅರಣ್ಯ ಒಣಗಿ ಹೋಗುವಂತಹ ಸನ್ನಿವೇಶ ಸೃಷ್ಟಿಯಾಗಿತ್ತು. ಆದರೆ ಮೇ ತಿಂಗಳಲ್ಲಿ ಮತ್ತು ಆ ನಂತರ ಸುರಿದ ಮಳೆ ಅರಣ್ಯವನ್ನು ರಕ್ಷಿಸಿ ಹಸಿರಾಗಿಸಿದೆ. ಇದೀಗ ಮುಂಗಾರು ಮಳೆ ಉತ್ತಮವಾಗಿ ಸುರಿದಿದ್ದು. ಅರಣ್ಯದಲ್ಲಿರುವ ಗಿಡಮರ, ಬಿದಿರ ಮೆಳೆಗಳು ಹಸಿರಿನಿಂದ ನಳನಳಿಸುತ್ತಿದ್ದು, ಸಮೃದ್ಧಿ ತುಂಬಿ ಬಂದ ಅನುಭವ ನೀಡುತ್ತಿದೆ. ಕೆಲವು ವರ್ಷಗಳ ಹಿಂದೆ ಬೇಸಿಗೆಯಲ್ಲಿ ಕಾಡ್ಗಿಚ್ಚು ಸಂಭವಿಸಿ ಅರಣ್ಯ ನಾಶವಾಗುತ್ತಿತ್ತು. ಆದರೆ ಕಳೆದ ಕೆಲವರ್ಷಗಳಿಂದ ಕಟ್ಟುನಿಟ್ಟಿನ ಕ್ರಮಗಳಿಂದ ಅರಣ್ಯದ ರಕ್ಷಣೆ ಮಾಡಿದ್ದು ಅರಣ್ಯವೆಲ್ಲವೂ ಸುರಕ್ಷಿತವಾಗಿವೆ.
ಹೂ ಬಿಟ್ಟು ಅಳಿದು ಹೋಗಿ ಬೋಳಾಗಿದ್ದ ಅರಣ್ಯಕ್ಕೆ ಬಿದಿರು ಮೆಳೆಗಳು ಮತ್ತೆ ಜೀವ ತುಂಬಿವೆ. ಕೆಲವೆಡೆ ಈ ಹಿಂದೆ ಸಂಭವಿಸಿದ ಅಗ್ನಿ ಅನಾಹುತದಿಂದಾಗಿ ಕಾಡು ಮರಗಳಿಲ್ಲದೆ ಬೋಳಾಗಿದ್ದರೂ ಬಿದಿರುಮೆಳೆ ಕುರುಚಲು ಕಾಡುಗಳಿಂದ ಮತ್ತೆ ಹಸಿರು ಕಾಣಿಸಿಕೊಂಡಿದೆ. ಇದರ ನಡುವೆ ಸಸ್ಯಹಾರಿ ಪ್ರಾಣಿಗಳು ಖುಷಿಯಾಗಿ ಓಡಾಡುತ್ತಿವೆ.
ಇನ್ನೊಂದೆಡೆ ಅರಣ್ಯದಲ್ಲಿ ಹರಿಯುವ ಜೀವನದಿ ಲಕ್ಷ್ಮಣತೀರ್ಥ ಪ್ರವಾಹೋಪಾದಿಯಲ್ಲಿ ಹರಿದಿದೆ. ಧಾರಾಕಾರ ಮಳೆಗೆ ಅರಣ್ಯದ ನಡುವೆ ಇರುವ ಚನ್ನಮ್ಮನಕಟ್ಟೆ, ಎರೆಕಟ್ಟೆ, ಮಂಟಳ್ಳಿಕೆರೆ, ಮಾದಳ್ಳಿಕಟ್ಟೆ ಮುದಗನೂರುಕೆರೆ, ಬಿಲ್ಲೆನಹೊಸಹಳ್ಳಿಕೆರೆ, ಭೀಮನಕಟ್ಟಿ, ಬಾಣೇರಿಕೆರೆ ಸೇರಿದಂತೆ ಹಲವು ಕೆರೆ-ಕಟ್ಟೆಗಳು ಭರ್ತಿಯಾಗಿವೆ. ಜತೆಗೆ
ಹತ್ತಾರು ಸುಂದರ ದೃಶ್ಯಗಳು ಸೃಷ್ಠಿ
ನಾಗರಹೊಳೆ ರಾಷ್ಟ್ರೀಯ ಉದ್ಯಾನವನವು ಕೊಡಗು ಮತ್ತು ಮೈಸೂರಿಗೆ ಹೊಂದಿಕೊಂಡಂತಿದ್ದು, 643ಚ.ಕಿ.ಮೀ ವ್ಯಾಪ್ತಿ ಹೊಂದಿದೆ. ವನ್ಯಪ್ರಾಣಿಗಳ ಆಹಾರ ಮತ್ತು ಕಾಡಿನ ರಕ್ಷಣೆ ದೃಷ್ಠಿಯಿಂದ ನಾಗರಹೊಳೆ, ಕಲ್ಲಹಳ್ಳ, ವೀರನಹೊಸಹಳ್ಳಿ, ಹುಣಸೂರು, ಆನೆಚೌಕೂರು, ಅಂತರಸಂತೆ, ಡಿ.ಬಿ.ಕುಪ್ಪೆ, ಮೇಟಿಕುಪ್ಪೆ ಹೀಗೆ ಎಂಟು ವಲಯಗಳಾಗಿ ವಿಂಗಡಣೆಗೊಂಡಿದ್ದು, ಈ ಅರಣ್ಯದಲ್ಲಿ ಮುಂಗಾರು ಮಳೆಯ ಲೀಲೆಗೆ ಹತ್ತಾರು ಸುಂದರ ದೃಶ್ಯಗಳು ಸೃಷ್ಠಿಯಾಗಿವೆ.
ಇದೀಗ ಈ ವ್ಯಾಪ್ತಿಯಲ್ಲಿ ಮಳೆ ಸುರಿಯುತ್ತಿದ್ದು, ಕೆರೆಕಟ್ಟೆಗಳು ತುಂಬಿ ಹರಿಯುತ್ತಿವೆ. ಅರಣ್ಯ ಹಚ್ಚ ಹಸಿರಿನಿಂದ ಕಂಗೊಳಿಸುತ್ತಿದೆ. ಕಾಡಾನೆ, ಕಾಡುಕೋಣ ಜಿಂಕೆಗಳ ಓಡಾಟಗಳ ನಡುವೆ ಅಪರೂಪಕ್ಕೆ ರಸ್ತೆ ಬದಿಯಲ್ಲಿ ಕಾಡಿನರಾಜ ಹುಲಿಯ ದರ್ಶನವೂ ಆಗುತ್ತಿದೆ. ಒಟ್ಟಾರೆಯಾಗಿ ಈ ಬಾರಿಯ ಮುಂಗಾರು ಒಂದಷ್ಟು ನೆಮ್ಮದಿಯನ್ನು ತಂದಿದ್ದು, ಇದರಿಂದ ಅರಣ್ಯದಲ್ಲಿಯೇ ವನ್ಯಪ್ರಾಣಿಗಳು ನೆಮ್ಮದಿಯಾಗಿ ಅಡ್ಡಾಡುತ್ತಿವೆ. ಈ ಸಮಯದಲ್ಲಿ ನಾಗರಹೊಳೆ ಅರಣ್ಯ ಪ್ರದೇಶದಲ್ಲಿ ತೆರಳುವುದೇ ಒಂಥರಾ ಮಜಾ.












Click it and Unblock the Notifications