ಡಾ. ಯತೀಂದ್ರ ನೇತೃತ್ವದಲ್ಲಿ ಮುಡಾದಲ್ಲಿ ₹5,000 ಕೋಟಿ ಭ್ರಷ್ಟಾಚಾರ: ಎಚ್.ವಿಶ್ವನಾಥ್ ಆರೋಪ
ಮೈಸೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ)ದಲ್ಲಿ ವಿಧಾನ ಪರಿಷತ್ ಸದಸ್ಯ ಡಾ.ಯತೀಂದ್ರ ನೇತೃತ್ವದಲ್ಲಿ 5 ಸಾವಿರ ಕೋಟಿಗೂ ಅಧಿಕ ಮೊತ್ತದ ಭ್ರಷ್ಟಾಚಾರ ನಡೆದಿದೆ ಎಂದು ವಿಧಾನ ಪರಿಷತ್ ಸದಸ್ಯ ಎಚ್.ವಿಶ್ವನಾಥ್ ಗಂಭೀರ ಆರೋಪ ಮಾಡಿದ್ದಾರೆ.
ನಗರದಲ್ಲಿ ಭಾನುವಾರ ಸುದ್ದಿಗೋಷ್ಠಿ ನಡೆಸಿದ ಅವರು, 2019ರಲ್ಲಿ ಮುಡಾ ಸುಪರ್ದಿನಲ್ಲಿ 9 ಸಾವಿರ ನಿವೇಶನಗಳಿದ್ದವು. ಇದರಲ್ಲಿ 5 ಸಾವಿರಕ್ಕೂ ಹೆಚ್ಚು ನಿವೇಶನಗಳನ್ನು ಮಾರಿಕೊಳ್ಳಲಾಗಿದೆ. ಹಿಂದಿನ ಬಿಜೆಪಿ ಸರಕಾರ ಹಾಗೂ ಈಗಿನ ಕಾಂಗ್ರೆಸ್ ಸರಕಾರದ ಅವಧಿಯಲ್ಲಿ ನಿಯಮ ಬಾಹಿರವಾಗಿ ನಿವೇಶನ ಹಂಚಿಕೆಯಾಗಿದೆ ಎಂದು ದೂರಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪರಮಾಪ್ತನಿಂದ ಮುಡಾ ಅಧೋಗತಿಗೆ ತಲುಪಿದೆ. ಒಂದಷ್ಟು ನಾಯಕರು, ಅಧಿಕಾರಿಗಳು ಸಿಂಡಿಕೇಟ್ ರಚಿಸಿಕೊಂಡಿದ್ದು, ಈ ದಂಧೆ ನಡೆಸಲಾಗುತ್ತಿದೆ. ಈ ಪ್ರಕರಣವನ್ನು ಸಿಬಿಐ ತನಿಖೆಗೆ ಒಳಪಡಿಸಬೇಕು. ಎಲ್ಲ ಆರೋಪಿಗಳನ್ನೂ ಬಂಧಿಸಿ ವಿಚಾರಣೆಗೆ ಒಳಪಡಿಸಬೇಕು ಎಂದು ಒತ್ತಾಯಿಸಿದರು.
ವಿಧಾನ ಪರಿಷತ್ ಸದಸ್ಯ ಸಿ.ಎನ್. ಮಂಜೇಗೌಡ ಅವರು ಕಡತಗಳನ್ನು ಇಟ್ಟುಕೊಂಡು ಮುಡಾ ಕಚೇರಿಗೆ ಅಲೆಯುತ್ತಿದ್ದಾರೆ. ವಿಧಾನ ಪರಿಷತ್ ಸದಸ್ಯ ಡಾ. ಯತೀಂದ್ರ, ಶಾಸಕ ಹರೀಶ್ ಗೌಡ, ರಾಕೇಶ್ ಪಾಪಣ್ಣ, ಮುಡಾದ ಹಾಲಿ ಅಧ್ಯಕ್ಷ ಮರೀಗೌಡ, ಹಿಂದಿನ ಅಧ್ಯಕ್ಷ ಎಚ್.ವಿ. ರಾಜೀವ್, ಹಿಂದಿನ ಆಯುಕ್ತ ನಟೇಶ್, ಈಗಿನ ಆಯುಕ್ತ ದಿನೇಶ್ ಹಾಗೂ ಅವರ ಮೈದುನ ತೇಜಸ್ ಗೌಡ, ಮರಿತಿಬ್ಬೇಗೌಡರ ಶಿಷ್ಯ ಸುದೀಪ್, ದಲ್ಲಾಳಿಗಳಾದ ಉತ್ತಮ್ ಗೌಡ, ಮೋಹನ್ ಸೇರಿದಂತೆ ಹಲವರು ಈ ಭ್ರಷ್ಟಾಚಾರದಲ್ಲಿ ಭಾಗಿಯಾಗಿದ್ದಾರೆ ಎಂದು ಆರೋಪಿಸಿದರು.
ಸಿಎಂ ಪತ್ನಿ ಜಮೀನಿಗೆ ಅಕ್ರಮವಾಗಿ ಪರಿಹಾರ
ಮೈಸೂರಿನ ಕೆಸರೆ ಗ್ರಾಮದ ಸರ್ವೆ ಸಂಖ್ಯೆ 464ರಲ್ಲಿ 3 ಎಕರೆ 16 ಗುಂಟೆ ಜಮೀನನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಮ್ಮ ಅವರ ಸೋದರ ಸಂಬಂಧಿ ಮಲ್ಲಣ್ಣ ಎಂಬುವರು ಖರೀದಿಸಿದ್ದರು. ನಂತರದಲ್ಲಿ ಈ ಜಮೀನನ್ನು ಪಾರ್ವತಮ್ಮ ಹೆಸರಿಗೆ ದಾನಪತ್ರವಾಗಿ ನೀಡಿದ್ದರು. 1994ರಲ್ಲಿ ಇದರ ಭೂಸ್ವಾಧೀನಕ್ಕೆ ಮುಡಾ ಪ್ರಕಟಣೆ ಹೊರಡಿಸಿತ್ತು. 1998ರಲ್ಲಿ ಸಿದ್ದರಾಮಯ್ಯ ಉಪಮುಖ್ಯಮಂತ್ರಿ ಆಗಿದ್ದಾಗ ಇದನ್ನು ಡಿನೋಟಿಫೈ ಮಾಡಲಾಯಿತು. ಆದರೂ ಮುಡಾ ಇದೇ ಜಮೀನಿಗೆ ಪರಿಹಾರ ನೀಡಿದೆ ಎಂದು ದೂರಿದರು.











Click it and Unblock the Notifications