ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಾಜಿ ಪ್ರಧಾನಿ ನೆಹರು ಬಗ್ಗೆ ಸಿ.ಟಿ. ರವಿ ಲಘು ಹೇಳಿಕೆಗೆ ಎಚ್. ವಿಶ್ವನಾಥ್ ಆಕ್ಷೇಪ

By ಮೈಸೂರು ಪ್ರತಿನಿಧಿ
|
Google Oneindia Kannada News

ಮೈಸೂರು, ಆಗಸ್ಟ್ 16: ಭಾರತದ ಮೊದಲ ಪ್ರಧಾನಿ ಜವಾಹರಲಾಲ್ ನೆಹರು ಬಗ್ಗೆ ಲಘುವಾಗಿ ಮಾತನಾಡಿರುವ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಹೇಳಿಕೆಗೆ ಬಿಜೆಪಿ ವಿಧಾನ ಪರಿಷತ್ ಸದಸ್ಯ ಎಚ್. ವಿಶ್ವನಾಥ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಮೈಸೂರಿನಲ್ಲಿ ಸೋಮವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಿಶ್ವನಾಥ್, "ಮಾಜಿ ಪ್ರಧಾನಿ ನೆಹರು ಕುರಿತು ನಮ್ಮದೇ ಪಕ್ಷದ ಮುಖಂಡ ಸಿ.ಟಿ. ರವಿ ಟೀಕೆಯನ್ನು ಯಾರೂ ಮೆಚ್ಚಲ್ಲ. ಸಿ.ಟಿ. ರವಿ ಆಡಿರುವ ಮಾತುಗಳು‌ ನಮ್ಮ ಪಕ್ಷಕ್ಕೆ ಶೋಭೆ ತರುವುದಿಲ್ಲ. ಜವಾಹರಲಾಲ್ ನೆಹರು ಅಸ್ತಂಗತರಾದಾಗ ಅಟಲ್ ಬಿಹಾರಿ ವಾಜಪೇಯಿ ಮಾಡಿದ ಭಾಷಣ ಒಂದು ಚರಿತ್ರಾರ್ಹವಾಗಿದ್ದು, ಸಿ.ಟಿ ರವಿ ಅದನ್ನು ಓದಬೇಕು," ಎಂದು ಸ್ವಪಕ್ಷದ ನಾಯಕನ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.

"ಜವಾಹರಲಾಲ್ ನೆಹರು ಭಾರತ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಮಹಾನ್ ವ್ಯಕ್ತಿ. ಅವರು ಪಧಾನಿಯಾಗಿದ್ದಕ್ಕಿಂತ ಹೆಚ್ಚು ಸಮಯ ಜೈಲುವಾಸ ಅನುಭವಿಸಿದವರು. ಇವರ ಬಗ್ಗೆ ಲಘುವಾಗಿ ಮಾತನಾಡಿರುವ ಸಿ.ಟಿ.ರವಿ, ನೆಹರು ಹೆಸರಿನಲ್ಲಿ ಹುಕ್ಕಾ ಬಾರ್ ಆರಂಭಿಸಿ ಎಂದಿರುವ ಇವರು, ಏನ್ ತಿಳಿದುಕೊಂಡಿದ್ದೀರಾ? ಎಂದು ಪ್ರಶ್ನಿಸಿದರು. ನೆಹರು ಬಗ್ಗೆ ಇಂತಹ ಬಾಲಿಶ ಹೇಳಿಕೆ ಕೊಡುವುದು ತಪ್ಪು," ಎಂದು ಟೀಕಿಸಿದರು.
"ಪ್ರಚಾರಕ್ಕಾಗಿ, ಇನ್ನೊಬ್ಬರನ್ನು ರಮಿಸುವ ಸಲುವಾಗಿ ಸಿ.ಟಿ. ರವಿ ಈ ರೀತಿ ಹೇಳಿಕೆ ಖಂಡನೀಯ. ಆದ್ದರಿಂದ ರವಿ ತಮ್ಮ ಹೇಳಿಕೆಯನ್ನು ವಾಪಾಸ್ ತೆಗೆದುಕೊಂಡರೆ ಸಂತೋಷ," ಎಂದು ಎಂಎಲ್‌ಸಿ ಎಚ್. ವಿಶ್ವನಾಥ್ ಅಸಮಾಧಾನ ವ್ಯಕ್ತಪಡಿಸಿದರು.

 ಪ್ರಿಯಾಂಕ ಖರ್ಗೆ ವಿರುದ್ಧ ಕಿಡಿ

ಪ್ರಿಯಾಂಕ ಖರ್ಗೆ ವಿರುದ್ಧ ಕಿಡಿ

ಇದೇ ವೇಳೆ ಕಾಂಗ್ರೆಸ್ ಶಾಸಕ ಪ್ರಿಯಾಂಕ ಖರ್ಗೆ ವಿರುದ್ಧ ಕಿಡಿಕಾರಿದ ಎಚ್.‌ವಿಶ್ವನಾಥ್, "ಸಿ.ಟಿ ರವಿಯನ್ನು ಹೆದರಿಸುವ ಭರದಲ್ಲಿ ವಾಜಪೇಯಿವರನ್ನು ಕುಡುಕ ಎಂದಿರುವುದು ಸರಿಯಲ್ಲ. ಅಟಲ್ ಬಿಹಾರಿ ವಾಜಪೇಯಿ ಘನತೆ ಎಂತದ್ದು, ಅಂತಹ ವ್ಯಕ್ತಿ ಬಗ್ಗೆ ಈ ರೀತಿ ಹೇಳಿಕೆ ಸರಿಯಲ್ಲ," ಎಂದು ಪ್ರಿಯಾಂಕ ಖರ್ಗೆ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.

ಪ್ರಿಯಾಂಕ ಖರ್ಗೆ ವಿರುದ್ಧ ಏಕವಚನದಲ್ಲೇ ಅಸಮಾಧಾನ ವ್ಯಕ್ತಪಡಿಸಿದ ವಿಶ್ವನಾಥ್, "ನೀನು ನಿನ್ನ ತಂದೆ ಮಲ್ಲಿಕಾರ್ಜುನ ಖರ್ಗೆಯವರನ್ನು ನೋಡಿ ಕಲಿಯಪ್ಪ. ಇನ್ನೊಬ್ಬರ ವೈಯಕ್ತಿಕ ಜೀವನದ ಬಗ್ಗೆ ಮಾತನಾಡುವುದು ತರವಲ್ಲ. ಅವಹೇಳನಕಾರಿಯಾಗಿ ಬಾಲಿಶವಾಗಿ ಹೇಳಿಕೆ ಕೊಡಬಾರದು," ಎಂದು ಬುದ್ಧಿಮಾತು ಹೇಳಿದರು.

 ಶಟಪ್ ಎನ್ನುವ ನೈತಿಕತೆಯನ್ನು ಕಳೆದುಕೊಂಡಿದ್ದೀರಾ?

ಶಟಪ್ ಎನ್ನುವ ನೈತಿಕತೆಯನ್ನು ಕಳೆದುಕೊಂಡಿದ್ದೀರಾ?

ಇದೇ ವೇಳೆ ಮಾಜಿ ಸಿಎಂಗಳಾದ ಎಚ್.ಡಿ. ಕುಮಾರಸ್ವಾಮಿ, ಸಿದ್ದರಾಮಯ್ಯ, ಸದಾನಂದ ಗೌಡ, ಜಗದೀಶ್ ಶೆಟ್ಟರ್, ಯಡಿಯೂರಪ್ಪ ಅವರುಗಳ ವಿರುದ್ಧವೂ ಅಸಮಾಧಾನ ವ್ಯಕ್ತಪಡಿಸಿದ ಎಚ್. ವಿಶ್ವನಾಥ್, "ರಾಜ್ಯದಲ್ಲಿ ಐವರು ಮಾಜಿ ಸಿಎಂಗಳಿದ್ದರೂ ನೀವ್ಯಾಕೆ ಈ ಬಗ್ಗೆ ಬಾಯಿ ಬಿಡುತ್ತಿಲ್ಲ, ನಿಮಗೆ ಸ್ವಲ್ಪವೂ ಕಾಳಜಿ ಇಲ್ವಾ? ನಿಮ್ಮ ಪಕ್ಷದವರಿಗೆ ಶಟಪ್ ಎನ್ನುವ ನೈತಿಕತೆ ಕಳೆದುಕೊಂಡಿದ್ದೀರಾ? ಎಂದು ಪ್ರಶ್ನಿಸಿದರು. ಎಲ್ಲಿದೆ ಪಕ್ಷ ರಾಜಕಾರಣ, ನಾನೇ ಪಕ್ಷ ಎಂದುಕೊಂಡುಬಿಟ್ಟಿದ್ದಾರೆ. ರಾಜ್ಯದಲ್ಲಿ ಪಕ್ಷ ರಾಜಕಾರಣ ಇಲ್ಲ, ರಾಕ್ಷಸ ರಾಜಕಾರಣ ಹೆಚ್ಚಾಗಿದೆ. ಹಿರಿಯ ನಾಯಕರ ವಿರುದ್ಧ ಇಷ್ಟು ಲಘುವಾಗಿ ಮಾತನಾಡುತ್ತೀರಾ ಎಂದಾದರೆ ನಾಚಿಕೆಯಾಗಬೇಕು," ಎಂದು ಸುದ್ದಿಗೋಷ್ಠಿಯಲ್ಲಿ ಹಳ್ಳಿಹಕ್ಕಿ ವಿಶ್ವನಾಥ್ ವಾಗ್ದಾಳಿ ನಡೆಸಿದರು.

 ಬಿಎಸ್‌ವೈಗೆ ಪರೋಕ್ಷ ಟಾಂಗ್

ಬಿಎಸ್‌ವೈಗೆ ಪರೋಕ್ಷ ಟಾಂಗ್

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಗೆ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಮಾರ್ಗದರ್ಶನ ನೀಡುವ ವಿಚಾರದ ಕುರಿತು ಪ್ರತಿಕ್ರಿಯೆ ನೀಡಿದ ವಿಶ್ವನಾಥ್, "ಮುಖ್ಯಮಂತ್ರಿಗಳಿಗೆ ತಂದೆಯ ಮಾರ್ಗದರ್ಶನವಾಗಬೇಕು. ಇದರ ಹೊರತಾಗಿ ಅತ್ತೆಯ ಮಾರ್ಗದರ್ಶನ ಆಗಬಾರದು. ಅತ್ತೆಯ ಮಾರ್ಗದರ್ಶನವಾದರೆ ಆಡಳಿತ ಕೆಟ್ಟು ಹೋಗುತ್ತದೆ," ಎಂದು ಮಾಜಿ ಸಿಎಂ ಬಿಎಸ್‌ವೈ ಬಗ್ಗೆ ಪರೋಕ್ಷವಾಗಿ ಕುಟುಕಿದರು.

 ರಾಜಕಾರಣಿಗಳಿಂದ ಕನ್ನಡದ ಕೊಲೆ

ರಾಜಕಾರಣಿಗಳಿಂದ ಕನ್ನಡದ ಕೊಲೆ

ಇನ್ನು ಜನಪ್ರತಿನಿಧಿಗಳ ಪದಬಳಕೆ ಬಗ್ಗೆಯೂ ಅಸಮಾಧಾನ ಹೊರಹಾಕಿದ ಎಂಎಲ್ಸಿ ಎಚ್. ವಿಶ್ವನಾಥ್, "ರಾಜಕಾರಣಿಗಳಿಂದ ಕನ್ನಡ ಭಾಷೆ ಕೊಲೆಯಾಗುತ್ತಿದೆ. ತಾಕತ್ತೈತಾ, ತಾಕತ್ತಿದ್ರೆ ಮಾಡಿ ನೋಡೋಣ ಇಂತಹ ಭಾಷೆ ಉಪಯೋಗ ಸರಿಯಲ್ಲ. ನನ್ನ ಭಾಷೆ ನನ್ನ ವ್ಯಕ್ತಿತ್ವವನ್ನು ತೋರಿಸುತ್ತದೆ," ಎನ್ನುವ ಮೂಲಕ ರಾಜಕಾರಣಿಗಳಿಗೆ ನೀತಿ ಪಾಠ ಮಾಡಿದರು.

ಅಲ್ಲದೇ ಇಂದಿರಾ ಕ್ಯಾಂಟಿನ್ ಹೆಸರು ಬದಲಾವಣೆ ಕುರಿತಂತೆ ಮಾತನಾಡಿದ ಅವರು, "ಇಂದಿರಾ ಗಾಂಧಿ ಹೆಸರು ತೆಗೆದುಬಿಟ್ಟರೆ ಏನಾಗುತ್ತಪ್ಪ? ಇಂದಿರಾ ಗಾಂಧಿ ಹೆಸರು ತೆಗೆದು ಮತ್ತೊಬ್ಬರ ಹೆಸರು ಹಾಕುವುದರಲ್ಲೇನಿದೆ. ಇದು ಸಣ್ಣತನ ಇಂತಹ ಘಟನೆಗಳು ಆಗಬಾರದು," ಎಂದರು.

 ಸೋಮಶೇಖರ್ ವಿರುದ್ಧ ವಿಶ್ವನಾಥ್ ಟೀಕೆ

ಸೋಮಶೇಖರ್ ವಿರುದ್ಧ ವಿಶ್ವನಾಥ್ ಟೀಕೆ

ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ. ಸೋಮಶೇಖರ್ ವಿರುದ್ಧ ಬಹಿರಂಗವಾಗಿ ಅಸಮಾಧಾನ ಹೊರಹಾಕಿದ ವಿಶ್ವನಾಥ್, "ಜಿಲ್ಲಾ ಮಂತ್ರಿಗಳು ಬೆಂಗಳೂರಿನಿಂದ ಕಾರಿನಲ್ಲಿ ಬರುತ್ತಲೇ ಇಂದು ಸಭೆ ಇದೆ ಎಂದು ಎಲ್ಲರಿಗೂ ಫೋನ್‌ ಮಾಡಿಸುತ್ತಾರೆ. ಏನ್ ಎಲ್ಲರಿಗೂ ಕೆಲಸವೇ ಇಲ್ವಾ, ಎಲ್ಲರೂ ನಿರುದ್ಯೋಗಿಗಳಾ? ನೀವು ಕರೆದಾಗ್ಲೆಲ್ಲಾ ಬರುವುದಕ್ಕೆ ನಿರುದ್ಯೋಗಿಗಳಾಗಿದ್ದೀವಾ? ಎಂದು ಪ್ರಶ್ನಿಸಿದರು. ಮೈಸೂರಿಗೆ ಸ್ಥಳೀಯರನ್ನೇ ಉಸ್ತುವಾರಿ ಸಚಿವರನ್ನಾಗಿ ಮಾಡಬೇಕು. ಇಂತಹ ಪ್ರಮುಖ ಜಿಲ್ಲೆಗೆ ಒಬ್ಬ ಮಂತ್ರಿ ಇಲ್ಲ ಎಂದರೆ ಹೇಗೆ? ಮುಖ್ಯಮಂತ್ರಿ ಬೊಮ್ಮಾಯಿ ಈ ಬಗ್ಗೆ ಗಮನಹರಿಸಿ ಮೈಸೂರಿಗೆ ಜಿಲ್ಲೆಯವರನ್ನೇ ಉಸ್ತುವಾರಿ ಮಂತ್ರಿ ಮಾಡಬೇಕು," ಎಂದು ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದರು.

English summary
MLC H Vishwanath has objected to BJP National Genaral Secretary CT Ravi statement on Former PM Jawaharlal Nehru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X