ಮುಡಾ ಕಡತಗಳು ಭೈರತಿ ಸುರೇಶ್ ಕಚೇರಿಯಲ್ಲಿದೆ: ಶಾಸಕ ಶ್ರೀವತ್ಸ ಆರೋಪ
ಮುಡಾ ನಿವೇಶನ ಹಂಚಿಕೆ ಹಗರಣ ದಿನದಿಂದ ದಿನಕ್ಕೆ ರೋಚಕ ತಿರುವು ಪಡೆಯುತ್ತಿದೆ. ಈಗ ಜಾರಿ ನಿರ್ದೇಶನಾಲಯ ಕೂಡ ಪ್ರವೇಶ ಮಾಡಿದ್ದು, ಮುಡಾ ಕಚೇರಿ ಮೇಲೆ ದಾಳಿ ಮಾಡಿ, ದಾಖಲೆಗಳನ್ನು ಪರಿಶೀಲನೆ ಮಾಡುತ್ತಿದೆ. ಆದರೆ ಶಾಸಕ ಶ್ರೀವತ್ಸ ಸಚಿವ ಬೈರತಿ ಸುರೇಶ್ ಮೇಲೆ ಗಂಭೀರ ಆರೋಪ ಮಾಡಿದ್ದಾರೆ. ಮುಡಾ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ದಾಳಿ ಮಾಡಿರುವುದು ಸ್ವಾಗತಾರ್ಹ. ಆದರೆ, ಮುಡಾ ಕಚೇರಿಯಲ್ಲಿ ಇರಬೇಕಾದ ಕಡತಗಳು ಭೈರತಿ ಸುರೇಶ್ ಆಫೀಸ್‌ನಲ್ಲಿದೆ ಎಂದು ಶಾಸಕ ಟಿ.ಎಸ್. ಶ್ರೀವತ್ಸ ಅನುಮಾನ ವ್ಯಕ್ತಪಡಿಸಿದ್ದಾರೆ.
ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಡಾ ಕಚೇರಿಯಿಂದ ಎಂಟು ಕಡತಗಳು ನಾಪತ್ತೆಯಾಗಿರುವ ಬಗ್ಗೆ ನಮಗೆ ಮಾಹಿತಿ ಇದೆ. ಮುಡಾ ಕಚೇರಿ ಮೇಲೆ ಇಡಿ ದಾಳಿ ನಮಗೆ ಆಶ್ಚರ್ಯ ಉಂಟು ಮಾಡಿಲ್ಲ. ಆದರೆ, ಕಡತಗಳು ಸಿಗುತ್ತವೆಯೇ ಎಂಬುದೇ ಅನುಮಾನ ಎಂದು ಹೇಳಿದರು.

ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಪಾರದರ್ಶಕ ತನಿಖೆಯಾಗಬೇಕಾದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜೀನಾಮೆ ನೀಡಬೇಕು. 2013ರಲ್ಲಿ ಸಿದ್ದರಾಮಯ್ಯ ಅವರು ಸಿಎಂ ಆಗಿದ್ದಾಗ ಅಧಿಕಾರಿಗಳು ಮಾತನಾಡಲು ಹೆದರುತ್ತಿದ್ದರು. ಆದರೆ, ಇದೀಗ ಅಧಿಕಾರಿಗಳೇ ಅವರ ಹೆಸರು ಹೇಳುತ್ತೇವೆ. ಇವರ ಹೆಸರು ಹೇಳುತ್ತೇವೆ ಎಂದು ಧಮಕಿ ಹಾಕುತ್ತಿದ್ದಾರೆ ಎಂದರು.
ಕಳೆದ ಒಂದು ತಿಂಗಳಿನಿಂದ ನಾವು ತನಿಖೆ ಸರಿಯಾಗಿ ಆಗುತ್ತಿಲ್ಲ. ಯಾವಾಗ ಬೇಕಾದರೂ ಇಡಿ, ಸಿಬಿಐ ಬರಬಹುದು ಎನ್ನುತ್ತಿದ್ದೆವು. ಅದರಂತೆ ಇದೀಗ ಇಡಿ ದಾಳಿ ಮಾಡಿದೆ. ಸಚಿವ ಭೈರತಿ ಸುರೇಶ್ ಅವರು ಹೆಲಿಕಾಪ್ಟರ್‌ನಲ್ಲಿ ಎಲ್ಲಾ ದಾಖಲೆ ಕೊಂಡೊಯ್ದಿದ್ದಾರೆ. ಕಡತಗಳು ಸಿಗುತ್ತವೆ ಎಂಬುದೇ ಅನುಮಾನವಾಗಿದೆ ಎಂದರು.
ಸಂಸದ ಯದುವೀರ್ ಒಡೆಯರ್ ಮಾತನಾಡಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಕುಟುಂಬ ಭಾಗಿಯಾಗಿರುವುದರಿಂದ ಪ್ರಕರಣವನ್ನು ಇಡಿ ಗಂಭೀರವಾಗಿ ಪರಿಗಣಿಸಿದೆ. ಸೈಟ್ ವಾಪಸ್ ನೀಡಿ ಸಿಎಂ ಕುಟುಂಬ ತಪ್ಪನ್ನು ಒಪ್ಪಿಕೊಂಡಿದೆ. ಈ ಸಂದರ್ಭದಲ್ಲಿ ಸಿಎಂ ರಾಜೀನಾಮೆ ನೀಡಿ ತನಿಖೆಗೆ ಸಹಕರಿಸಬೇಕು. ಈ ಬಗ್ಗೆ ಮೊದಲಿನಿಂದಲೂ ಒತ್ತಾಯಿಸುತ್ತಿದ್ದೇವೆ. ಇಡಿ ಪ್ರಾಮಾಣಿಕವಾಗಿ ತನಿಖೆ ಮಾಡುತ್ತದೆ ಎಂಬ ವಿಶ್ವಾಸವಿದೆ ಎಂದರು.
ಮುಡಾ ಅಧ್ಯಕ್ಷ ಸ್ಥಾನಕ್ಕೆ ಮರಿಗೌಡ ರಾಜಿನಾಮೆ
ಕೆ.ಮರಿಗೌಡ ಅವರಿಗೆ ಬ್ಲಡ್ ಪ್ರೆಶರ್ ಸಮಸ್ಯೆ ಹೆಚ್ಚಾದ ಕಾರಣ ಮುಡಾ ಅಧ್ಯಕ್ಷ ಸ್ಥಾನಕ್ಕೆ ರಾಜಿನಾಮೆ ನೀಡಿದ್ದಾರೆ, ಅವರಿಗೆ ಯಾರೂ ಒತ್ತಡ ಹೇರಿ ರಾಜೀನಾಮೆ ಕೊಡುವಂತೆ ಮಾಡಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಹೇಳಿದರು.
ಮುಡಾ ಹಗರಣದಲ್ಲಿ ಸಿಎಂ ಸಿದ್ದರಾಮಯ್ಯ ಮತ್ತು ಅವರ ಕುಟುಂಬದವರ ವಿರುದ್ಧ ಲೋಕಾಯುಕ್ತದಲ್ಲಿ ತನಿಖೆ ನಡೆಯುತ್ತಿರುವ ವೇಳೆಯಲ್ಲೇ ಬೆಂಗಳೂರಿಗೆ ತೆರಳಿದ ಮರೀಗೌಡ ನಗರಾಭಿವೃದ್ಧಿ ಇಲಾಖೆಯ ಕಾರ್ಯದರ್ಶಿ ದೀಪಾ ಚೋಳನ್ ಅವರಿಗೆ ರಾಜೀನಾಮೆ ಪತ್ರ ಸಲ್ಲಿಸಿದ್ದರು. ಅನಾರೋಗ್ಯದ ಕಾರಣಕ್ಕೆ ರಾಜೀನಾಮೆ ಸಲ್ಲಿಸುತ್ತಿರುವುದಾಗಿ ಅವರು ತಿಳಿಸಿದ್ದರು.












Click it and Unblock the Notifications