ಸಭ್ಯನಂತೆ ನಟಿಸುತ್ತಾ ಕನ್ನ ಹಾಕುತ್ತಿದ್ದ ಈ ಪಿರಿಯಾಪಟ್ಟಣ ವ್ಯಾಪಾರಿ...
ಮೈಸೂರು, ಫೆಬ್ರವರಿ 22: ಪ್ರಾವಿಷನ್ ಸ್ಟೋರ್ ಮತ್ತು ಫ್ಲೋರ್ ಮಿಲ್ ನಡೆಸುತ್ತಿದ್ದ ವ್ಯಾಪಾರಿ ಸಭ್ಯನಂತೆ ನಟಿಸುತ್ತಾ, ಒಳಗೊಳಗೆ ಕಳ್ಳತನವನ್ನೂ ಮಾಡುತ್ತಿದ್ದ ಸಂಗತಿ ಪಿರಿಯಾಪಟ್ಟಣದಲ್ಲಿ ಬೆಳಕಿಗೆ ಬಂದಿದೆ.
ಮಹಿಳೆಯೊಬ್ಬರು ಮನೆಯಲ್ಲಿ ಒಬ್ಬರೇ ಇದ್ದುದ್ದನ್ನು ಗಮನಿಸಿ ಮನೆಗೆ ನುಗ್ಗಿ ಆಕೆಯ ಮೇಲೆ ಹಲ್ಲೆ ಮಾಡಿ ಕಳ್ಳತನಕ್ಕೆ ಯತ್ನಿಸಿ ಸಿಕ್ಕಿಬಿದ್ದಾಗ, ಆತನ ಇನ್ನಷ್ಟು ಕಳ್ಳತನ ಪ್ರಕರಣಗಳು ಹೊರಗೆ ಬಂದಿವೆ. ಅಲ್ಲಿನ ಶಿವಪ್ಪ ಬಡಾವಣೆಯ ರಸ್ತೆಯಲ್ಲಿ ಪ್ರಾವಿಷನ್ ಸ್ಟೋರ್ ಮತ್ತು ಫ್ಲೋರ್ ಮಿಲ್ ನಡೆಸುತ್ತಿದ್ದ ಮಲ್ಲಿಕಾರ್ಜುನ ಎಂಬಾತನೇ ಕಳ್ಳನಾಗಿದ್ದು, ಈತ ಮೇಲ್ನೋಟಕ್ಕೆ ಸಭ್ಯನಂತೆ ಕಾಣಿಸುತ್ತಿದ್ದನು. ವ್ಯಾಪಾರ ಮಾಡಿಕೊಂಡು ತನ್ನಪಾಡಿಗೆ ತಾನು ಬದುಕುತ್ತಿದ್ದಾನೆ ಎಂಬಂತೆ ಸಾರ್ವಜನಿಕ ವಲಯದಲ್ಲಿ ಬಿಂಬಿಸಿಕೊಂಡಿದ್ದನು.
ಮಲ್ಲಿಕಾರ್ಜುನ ಪಿರಿಯಾಪಟ್ಟಣದಲ್ಲಿ ಆಶಾ ಎಂಬುವರು ಒಬ್ಬರೇ ಇದ್ದಾಗ ಕುಡಿಯಲು ನೀರು ಕೇಳಿಕೊಂಡು ಅವರ ಮನೆಗೆ ಹೋಗಿದ್ದಾನೆ. ನೀರಿನ ಜೊತೆ ಉಪ್ಪು ನೀಡುವಂತೆಯೂ ಕೇಳಿಕೊಂಡಿದ್ದಾನೆ. ಉಪ್ಪಿನ ಡಬ್ಬಿ ತರಲು ಆಶಾ ಒಳಗೆ ಹೋದಾಗ ಮನೆ ಬಾಗಿಲು ಹಾಕಿಕೊಂಡು ಉಪ್ಪಿನ ಗಾಜಿನ ಡಬ್ಬಿಯಿಂದಲೇ ಆಶಾ ಮೇಲೆ ಹಲ್ಲೆ ನಡೆಸಿ, ನೆಲಕ್ಕೆ ಬೀಳಿಸಿ ಕಣ್ಣಿಗೆ ಖಾರದ ಪುಡಿ ಎರಚಿದ್ದಾನೆ. ಅವರ ಕುತ್ತಿಗೆಯಲ್ಲಿದ್ದ ಚಿನ್ನದ ಚೈನ್ ಕಿತ್ತುಕೊಂಡು ದಾರದಿಂದ ಕತ್ತು ಬಿಗಿದು ಕೊಲೆ ಮಾಡಲು ಮುಂದಾಗಿದ್ದಾನೆ. ಈ ಸಂದರ್ಭ ಆಶಾ ಕಿರುಚಿಕೊಂಡಿದ್ದು, ಅಕ್ಕಪಕ್ಕದ ಮನೆಯವರು ದೌಡಾಯಿಸಿದ್ದಾರೆ.

ಇದರಿಂದ ಗಾಬರಿಗೊಂಡು ಮಲ್ಲಿಕಾರ್ಜುನ ಓಡಲು ಪ್ರಯತ್ನಿಸಿದ್ದನು. ಆಗ ಆಶಾ ಅವರು ಮುಂಬಾಗಿಲು ತೆಗೆದು ಸುತ್ತಲಿನವರಿಗೆ ಮಾಹಿತಿ ನೀಡಿದ್ದರು. ತಕ್ಷಣ ಅವರು ಮಲ್ಲಿಕಾರ್ಜುನನ್ನು ಗೃಹಬಂಧನದಲ್ಲಿರಿಸಿ ಪೊಲೀಸರಿಗೆ ಒಪ್ಪಿಸಿದ್ದರು. ಇದಾದ ನಂತರ ಆರೋಪಿ ಮಲ್ಲಿಕಾರ್ಜುನನನ್ನು ಪೊಲೀಸರು 4 ದಿನಗಳ ಕಾಲ ಕಸ್ಟಡಿಗೆ ಪಡೆದು ತೀವ್ರ ವಿಚಾರಣೆ ನಡೆಸಿದ್ದು, ಈ ವೇಳೆ ತಾನು ಇನ್ನಷ್ಟು ಕಳ್ಳತನ ಮಾಡಿರುವುದಾಗಿ ಬಾಯಿ ಬಿಟ್ಟಿದ್ದಾನೆ.











Click it and Unblock the Notifications