ಮೀಟೂ ಪ್ರಕರಣ ರಾಮಾಯಣ, ಮಹಾಭಾರತ ಕಾಲದಿಂದಲೂ ಜೀವಂತವಾಗಿದೆ: ಟಿ. ಸಿ ಪೂರ್ಣಿಮಾ
ಮೈಸೂರು, ಜನವರಿ 26 : ಮೀ ಟೂ ಪ್ರಕರಣಗಳು ರಾಮಾಯಣ, ಮಹಾಭಾರತ ಕಾಲದಿಂದಲೂ ಇದ್ದವು. ಹೀಗಾಗಿ ದ್ರೌಪದಿ ಮೇಲೆ ದುಶ್ಯಾಸನ ಮಾಡಿದ್ದು ಮೀ ಟೂ ಎಂದು ಕವಯಿತ್ರಿ ಟಿ.ಸಿ.ಪೂರ್ಣಿಮಾ ಅಭಿಪ್ರಾಯಪಟ್ಟರು.
ಮೈಸೂರು ಜಿಲ್ಲಾ ಮಹಿಳಾ ಸಾಹಿತ್ಯ ಸಮ್ಮೇಳನದ ಅಂಗವಾಗಿ ಏರ್ಪಡಿಸಿದ್ದ ಮೈಸೂರು ಜಿಲ್ಲಾ ಮಹಿಳಾ ಸಾಹಿತ್ಯದ ನೆಲೆ- ಹಿನ್ನೆಲೆ ಕುರಿತ ವಿಚಾರಗೋಷ್ಠಿಯ ಅಧ್ಯಕ್ಷತೆ ಅವರು ಮಾತನಾಡಿದರು.
ಕುಮಾರವ್ಯಾಸ, ವಾಲ್ಮೀಕಿ, ಕುವೆಂಪು, ಶಿವರಾಮ ಕಾರಂತ, ಎಸ್.ಎಲ್.ಭೈರಪ್ಪ ಮೊದಲಾದವರು ಮಹಿಳೆಯರ ಒಳತೋಟಿಯನ್ನು ಚಿತ್ರಿಸುವ ಸ್ತ್ರೀಪರ ಲೇಖಕರು. ಹೀಗಾಗಿ ಕನ್ನಡ ಸಾಹಿತ್ಯದ ಮುಖ್ಯವಾಹಿನಿಯಲ್ಲಿ ಮಹಿಳೆಯರ ಆಂತರಿಕ ತಳಮಳಗಳ ಕುರಿತು ಪುರುಷರಾಗಲಿ, ಸ್ತ್ರೀಯರಾಗಲಿ ಬರೆದರೂ ಅವುಗಳು ಮಹಿಳಾ ಸಾಹಿತ್ಯವೆ ಎಂದು ಅವರು ಪ್ರತಿಪಾದಿಸಿದರು.

48ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾದ ಜಯದೇವಿತಾಯಿ ಲಿಗಾಡೆ ಅವರು ಪ್ರಧಾನ ಲೇಖಕರು. ಹೀಗಾಗಿ ಸಹಜವಾಗಿ ಅಧ್ಯಕ್ಷರಾದರು. ಆದರೆ, ಈಚೆಗೆ ಲೇಖಕಿಯರು ಅಖಿಲ ಭಾರತ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದು ಹೋರಾಟದ ಪರಿಣಾಮ. ಅಂದರೆ, ಲೇಖಕಿಯರೂ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಬೇಕೆಂಬ ಕೂಗು ಜೋರಾದುದರಿಂದ ಅದು ಸಾಧ್ಯವಾಯಿತು ಎಂದು ಹೇಳಿದರು.
ಸಂಶೋಧಕಿ ಹಾಗೂ ಸಮ್ಮೇಳನದ ಸರ್ವಾಧ್ಯಕ್ಷ ಸ್ಥಾನ ವಹಿಸಿ ಡಾ.ವೈ.ಸಿ.ಭಾನುಮತಿ ಮಾತನಾಡಿ, ಹೆಣ್ಣುಮಕ್ಕಳು ಮನೆಯೊಳಗೆ, ಹೊರಗೆ, ಕೆಲಸ ಮಾಡುವ ಸ್ಥಳಗಳಲ್ಲಿ ಲೈಂಗಿಕ ದೌರ್ಜನ್ಯಕ್ಕೆ ಗುರಿಯಾಗುತ್ತಿದ್ದಾರೆ. ಮಹಿಳೆಯರ ಮೇಲಿನ ದೌರ್ಜನ್ಯಕ್ಕೆ ಕೊನೆಯಿಲ್ಲವೇ? ಹೆಣ್ಣಿನ ಕುರಿತಂತೆ ಪುರುಷ ಪ್ರಧಾನ ಸಮಾಜದ ದೃಷ್ಟಿಕೋನ ಬದಲಾಗಬೇಕಾಗಿದೆ. ಹೆಣ್ಣು ಮಕ್ಕಳನ್ನು ಮಾನಸಿಕವಾಗಿ ಗಟ್ಟಿಗೊಳಿಸುವತ್ತ ಹೆತ್ತವರು, ಶಿಕ್ಷಕರು ಗಮನ ಹರಿಸಬೇಕು ಎಂದರು.
ಸರ್ಕಾರಿ ಶಾಲೆಗಳನ್ನು ಮುಚ್ಚಬೇಡಿ: ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಿದೆ ಎಂಬ ಕಾರಣ ಗ್ರಾಮೀಣ ಪ್ರದೇಶಗಳಲ್ಲಿನ ಸರ್ಕಾರಿ ಶಾಲೆಗಳನ್ನು ಮುಚ್ಚುವ ಪ್ರಯತ್ನ ನಡೆದಿದೆ. ಗ್ರಾಮೀಣ ಪ್ರದೇಶದ ಹೆಣ್ಣುಮಕ್ಕಳ ಹಿತದೃಷ್ಟಿಯಿಂದ ಸರ್ಕಾರಿ ಶಾಲೆಗಳನ್ನು ಮುಚ್ಚಬಾರದು. ತಮ್ಮ ಊರಲ್ಲಿ ಶಾಲೆಗಳಿಲ್ಲದಿದ್ದರೆ, ಪಕ್ಕದ ಊರಿಗೆ ಹೆಣ್ಣುಮಕ್ಕಳನ್ನು ಕಳುಹಿಸಲು ಹೆತ್ತವರು ಹಿಂಜರಿಯುತ್ತಾರೆ ಎಂದು ಹೇಳಿದರು.












Click it and Unblock the Notifications