ಶಾರೀಕ್ ಮನೆ ಮಾಲೀಕನ ವಶಕ್ಕೆ ಪಡೆದ ಪೊಲೀಸರು
ಮೈಸೂರು, ನವೆಂಬರ್ 26: ಮಂಗಳೂರು ಕುಕ್ಕರ್ ಬಾಂಬ್ ಸ್ಫೋಟದ ಆರೋಪಿ ಶಾರೀಕ್ ಬಾಡಿಗೆಗೆ ಇದ್ದ ಮೈಸೂರಿನ ಮನೆಯ ಮಾಲೀಕನನ್ನು ಪೊಲೀಸರರು ವಶಕ್ಕೆ ಪಡೆದು ತನಿಖೆ ಮುಂದುವರಿಸಿದ್ದಾರೆ.
ಆರೋಪಿ ಶಾರೀಕ್ ಯಾರು ಯಾರ ಸಂಪರ್ಕ ಹೊಂದಿದ್ದನು ಎಂಬುದನ್ನು ಪತ್ತೆ ಹಚ್ಚುತ್ತಿರುವ ಪೊಲೀಸರು ತನಿಖೆಯನ್ನು ಚುರುಕುಗೊಳಿಸಿದ್ದಾರೆ. ಈ ನಿಟ್ಟಿನಲ್ಲಿ ಶನಿವಾರ ಆರೋಪಿ ಶಾರಿಕ್ ಬಾಡಿಗೆಗೆ ಇದ್ದ ಮನೆಯ ಮಾಲೀಕನನ್ನು ವಶಕ್ಕೆ ಪಡೆದು ವಿಚಾರಣೆ ಆರಂಭಿಸಿದ್ದಾರೆ.
ಮಂಗಳೂರು ಬ್ಲಾಸ್ಟ್: ಶಂಕಿತ ಉಗ್ರ ಶಾರಿಕ್ ಮೇಲೆ ಝಾಕಿರ್ ನಾಯ್ಕ್ ಭಾಷಣ ಪ್ರಭಾವ
ಮಂಗಳೂರಿನಲ್ಲಿ ಕುಕ್ಕರ್ ಬಾಂಬ್ ಸ್ಫೋಟಗೊಂಡಾಗ ಆರೋಪಿ ಶಾರೀಕ್‌ಗೂ ತೀವ್ರವಾಗಿ ಗಾಯಗೊಂಡಿದ್ದ. ಸದ್ಯ ಆತನಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಆರೋಪಿಯ ಆರೋಗ್ಯ ಸುಧಾರಿಸಿದ ನಂತರ ಆತನನ್ನು ಮೈಸೂರಿಗೆ ಕರೆ ತಂದು ಪೊಲೀಸರು ಇನ್ನಷ್ಟು ತನಿಖೆಗೆ ಪೂರಕವಾದ ಅಗತ್ಯ ಮಾಹಿತಿ ಸಂಗ್ರಹಿಸಲಿದ್ದಾರೆ ಎಂದು ತಿಳಿದು ಬಂದಿದೆ.
ಆರೋಪಿ ಗುಣಮುಖರಾಗುವವರೆಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಇನ್ನಿತರ ಮಾಹಿತಿ ಕಲೆ ಹಾಕಲಿದ್ದಾರೆ. ಈಗಾಗಲೇ ವಶಕ್ಕೆ ಪಡೆದ ಮೊಬೈಲ್ ತರಬೇತಿ ಕೇಂದ್ರದ ಮಾಲೀಕ ಮತ್ತು ಇನ್ನಿಬ್ಬರನ್ನು ಶಂಕಿತರು ಮತ್ತು ಆರೋಪಿ ಶಾರೀಕ್ ಬಾಡಿಗೆ ಇದ್ದ ಮೈಸೂರಿನ ಮನೆಯ ಮಾಲೀಕರನ್ನು ವಿಚಾರಣೆ ನಡೆಸಲಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಮಂಗಳೂರಿನ ಕಂಕನಾಡಿ ಸಮೀಪ ಆಟೋದಲ್ಲಿ ಕುಕ್ಕರ್ ಸ್ಪೋಟ ಪ್ರಕರಣದ ಹಿಂದೆ ಉಗ್ರರ ಕೈವಾಡ ಇದ್ದಾರೆ ಎಂಬ ಶಂಕೆ ವ್ಯಕ್ತವಾಗಿತ್ತು. ಹೀಗಾಗಿ ಪ್ರಕರಣವನ್ನು ವಿಶೇಷ ತನಿಖಾ ದಳ (ಎನ್‌ಐಎ)ಗೆ ವಹಿಸಬೇಕು ಎಂಬ ಆಗ್ರಹವು ಕೇಳಿಬಂದಿತ್ತು. ಇದರ ಬೆನ್ನಲ್ಲೇ ಶುಕ್ರವಾರ ಪ್ರಕರಣವನ್ನು ಎನ್‌ಐಎಗೆ ವಹಿಸಲು ಸರ್ಕಾರ ನಿರ್ಧರಿಸಿರುವುದಾಗಿ ರಾಜ್ಯ ಗೃಹ ಸಚಿವ ಆರಜ ಜ್ಞಾನೇಂದ್ರ ತಿಳಿಸಿದರು.