ತಾಯಿಯ ಸಾವಿನಿಂದ ಮನನೊಂದ ಯುವಕ ಆತ್ಮಹತ್ಯೆ
ಮೈಸೂರು, ಸೆ. 22 : ತಾಯಿಯ ಸಾವಿನಿಂದ ಮನನೊಂದ ಯುವಕನೊಬ್ಬ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮೈಸೂರಿನಲ್ಲಿ ನಡೆದಿದೆ. 'ತಾಯಿಯ ಸಾವಿಗೆ ನಾನು ಕಾರಣನಾದೆ, ಅವರೊಂದಿಗೆ ನಾನು ಹೋಗುತ್ತಿದ್ದೇನೆ' ಎಂದು ಬರೆದು ಯುವಕ ಸಾವಿಗೆ ಶರಣಾಗಿದ್ದಾನೆ.
ಮೃತಪಟ್ಟವನನ್ನು ಮೈಸೂರಿನ ರಾಘವೇಂದ್ರ ಬಡಾವಣೆ ನಿವಾಸಿ ಚಂದ್ರಶೇಖರ್ (30) ಎಂದು ಗುರುತಿಸಲಾಗಿದೆ. ಕಳೆದ ವರ್ಷ ತಾಯಿ ತೀರಿಕೊಂಡ ಬಳಿಕ ಖಿನ್ನನಾಗಿದ್ದ ಚಂದ್ರಶೇಖರ್ ಭಾನುವಾರ ರಾತ್ರಿ ಆತ್ಮಹತ್ಯೆ ಮಾಡಿಕೊಂಡಿದ್ದು, ಸೋಮವಾರ ಬೆಳಗ್ಗೆ ಪ್ರಕರಣ ಬೆಳಕಿಗೆ ಬಂದಿದೆ.

ರಾಘವೇಂದ್ರ ಬಡಾವಣೆಯಲ್ಲಿ ತಾಯಿ ಜೊತೆ ಚಂದ್ರಶೇಖರ್ ವಾಸಿಸುತ್ತಿದ್ದ. 2013ರಲ್ಲಿ ಚಂದ್ರಶೇಖರ್ ತಾಯಿ ಅನಾರೋಗ್ಯದಿಂದಾಗಿ ಮೃತಪಟ್ಟಿದ್ದರು. ಅಂದಿನಿಂದಲೂ ಖಿನ್ನನಾಗಿದ್ದ ಈತ ಅಕ್ಕಪಕ್ಕದವರೊಂದಿಗೆ ಸರಿಯಾಗಿ ಮಾತನಾಡುತ್ತಿರಲಿಲ್ಲ. ಎರಡು ಬಾರಿ ಆತ್ಮಹತ್ಯೆಗೆ ಸಹ ಯತ್ನಿಸಿದ್ದ ಎಂದು ತಿಳಿದುಬಂದಿದೆ. [ಬೆಂಗಳೂರು ಗಾಂಧಿನಗರದಲ್ಲಿ ಭದ್ರಾವತಿ ವಂಚಕಿಯರು!]
ಹಿಂದೆ ಎರಡು ಬಾರಿ ಆತ್ಮಹತ್ಯೆಗೆ ಯತ್ನಿಸಿದ್ದ ಚಂದ್ರಶೇಖರ್ ಅವರನ್ನು ಸ್ಥಳೀಯರು ರಕ್ಷಿಸಿದ್ದರು. ಆದರೆ, ಭಾನುವಾರ ರಾತ್ರಿ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಇಂದು ಬೆಳಗ್ಗೆ ಸ್ಥಳೀಯರು ಕಿಟಕಿ ಮೂಲಕ ನೋಡಿದಾಗ ಚಂದ್ರಶೇಖರ್ ಸಾವನ್ನಪ್ಪಿರುವುದು ತಿಳಿದುಬಂದಿದೆ.
ಅಮ್ಮಾ ನಿನ್ನ ಜೊತೆ ಬರುವೆ : ಸಾವಿಗೆ ಶರಣಾಗುವ ಮುನ್ನ ಚಂದ್ರಶೇಖರ್ 'ನನ್ನ ಅಮ್ಮನ ಸಾವಿಗೆ ನಾನೇ ಕಾರಣನಾದೆ. ಅಮ್ಮಾ ನಿನ್ನ ಜೊತೆ ನಾನು ಬರುವೆ' ಎಂದು ಗೋಡೆಯ ಮೇಲೆ ದೊಡ್ಡದಾಗಿ ಬರೆದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಸ್ಥಳೀಯರು ಹೇಳಿದ್ದಾರೆ. ನಜಾರಾಬಾದ್ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ನಡೆಸುತ್ತಿದ್ದಾರೆ.












Click it and Unblock the Notifications