ಮೈಸೂರಿನಲ್ಲಿ ಪ್ರಗತಿಪರರಿಂದ ಮಹಿಷ ದಸರಾ
ಮೈಸೂರು, ಸೆಪ್ಟಂಬರ್ 18 : ದಸರಾ ಮಹೋತ್ಸವದ ಹೊಸ್ತಿಲಲ್ಲಿ ದಲಿತ ವೆಲ್ ಫೇರ್ ಟ್ರಸ್ಟ್, ಅಶೋಕಪುರಂ ಅಭಿಮಾನಿಗಳ ಬಳಗ, ಗಂಗೋತ್ರಿ ಸಂಶೋಧನಾ ವಿದ್ಯಾರ್ಥಿ ಒಕ್ಕೂಟ ಹಾಗೂ ಪ್ರಗತಿಪರ ಸಂಘಟನೆಗಳ ಸಂಯುಕ್ತಾಶ್ರಯದಲ್ಲಿ ಮಹಿಷ ದಸರಾ ಆಚರಿಸಲಾಯಿತು.
ಮೂಲನಿವಾಸಿಗಳ ಮಹಿಷ ಸಾಂಸ್ಕೃತಿಕ ಹಬ್ಬದ ಅಂಗವಾಗಿ ಮೂಲನಿವಾಸಿ ಶೋಷಿತ ಕೇರಿಗಳಿಂದ ಚಾಮುಂಡಿ ಬೆಟ್ಟಕ್ಕೆ ಬೈಕ್ ರ್ಯಾಲಿ ಹಮ್ಮಿಕೊಳ್ಳಲಾಗಿತ್ತು. ಮಹಿಷಾಸುರನ ಭಾವಚಿತ್ರವಿರುವ ಬೆಳ್ಳಿರಥದೊಂದಿಗೆ ಬೈಕ್ ರ್ಯಾಲಿ ನಗರದ ಪುರಭವನದಿಂದ ಪ್ರಾರಂಭವಾಗಿ ಚಾಮುಂಡಿ ಬೆಟ್ಟ ತಲುಪಿತು. ಮೆರವಣಿಗೆಗೆ ಗಾಂಧಿನಗರದ ಉರಿಲಿಂಗಿಪೆದ್ದಿಮಠದ ಜ್ಞಾನ ಪ್ರಕಾಶ ಸ್ವಾಮೀಜಿ ಚಾಲನೆ ನೀಡಿದರು. ಮೆರವಣಿಗೆಗೆ ತಮಟೆ, ನಗಾರಿ, ಕಂಸಾಳೆ, ಡೊಳ್ಳುಕುಣಿತ, ಪೂಜಾಕುಣಿತ ಕಲಾ ಮೆರಗು ನೀಡಿದವು. ಮಹಿಷಾಸುರ, ಭಗವಾನ್ ಬುದ್ಧನ ವೇಷಧಾರಿಗಳು ಮೆರವಣಿಗೆಯ ಆಕರ್ಷಣೆಯಾಗಿದ್ದರು.

ಕಳೆದ ಐದು ವರ್ಷಗಳಿಂದ ಮಹಿಷ ಹಬ್ಬದ ಆಚರಣೆ ಆರಂಭವಾಗಿದ್ದು, ಮಹಿಷಾಸುರ ರಾಕ್ಷಸನಲ್ಲ, ಮೈಸೂರಿನ ಮೂಲ ಅರಸ. ಚಾಮುಂಡೇಶ್ವರಿಯ ಮಹಿಷಮರ್ದಿನಿ ಕಟ್ಟುಕಥೆ ಎಂಬ ಉದ್ದೇಶದಿಂದ ಮಹಿಷ ಹಬ್ಬ ಆಚರಿಸಲಾಗುತ್ತಿದೆ. ವೈದಿಕ ಧಾರ್ಮಿಕ ವಕ್ತಾರರು ಮತ್ತು ಅವರ ಧಾರ್ಮಿಕ ಸಾಹಿತ್ಯಗಳು, ಪುರಾಣ ಪುಣ್ಯಕಥೆಗಳು, ಪ್ರವಚನಗಳು, ನಾಟಕ, ನಾಟ್ಯ ಮುಂತಾದವುಗಳಲ್ಲಿ ಮಹಿಷಾಸುರನನ್ನು ರಾಕ್ಷಸ, ದುಷ್ಟ, ನೀಚ, ಲೋಕಕಂಟಕ ಎಂದೆಲ್ಲಾ ಚಿತ್ರಿಸಿ ಜನರಿಗೆ ಮಹಿಷಾಸುರನ ಬಗ್ಗೆ ಕೆಟ್ಟ ಭಾವನೆ ಬರುವಂತೆ ಮಾಡಿದ್ದಾರೆ.

ಇದರ ಸತ್ಯಾಸತ್ಯತೆಯನ್ನು ತಿಳಿಯಲು ಹೊರಟ ಚಿಂತಕರಿಗೆ ಕಂಡ ಸತ್ಯಸಂಗತಿ ಎಂದರೆ ಮಹಿಷಾಸುರ ಕೆಟ್ಟವನಲ್ಲ. ದುಷ್ಟನೂ ಅಲ್ಲ. ಲೋಕಕಂಟಕನೂ ಅಲ್ಲ. ಆತ ಮೈಸೂರು ಜನರ ರಕ್ಷಣೆಗಾಗಿ ಹೋರಾಡಿದ ಸ್ವಾಭಿಮಾನಿ ಸಾಂಸ್ಕೃತಿಕ ನಾಯಕ ಎಂದು ಮಹಿಷಾಸುರನ ಬಗ್ಗೆ ಮಹಿಷಮಂಡಲದ ಮೂಲನಿವಾಸಿಗಳಿಗೆ ಅರಿವನ್ನು ಮತ್ತು ಜಾಗೃತಿಯನ್ನು ಮೂಡಿಸುವ ಚಿಂತನೆಯಲ್ಲಿ ಮಹಿಷ ದಸರಾ ಆಚರಿಸಲಾಗುತ್ತಿದೆ ಎನ್ನತ್ತಾರೆ ಕಾರ್ಯಕ್ರಮ ಆಯೋಜಕರು.












Click it and Unblock the Notifications