ಲೋಕಸಭಾ ಚುನಾವಣೆ: ಪ್ರತಾಪ್‌ ಸಿಂಹ ಹ್ಯಾಟ್ರಿಕ್‌ ಗೆಲುವಿಗೆ ಬೀಳುತ್ತಾ ಬ್ರೇಕ್‌?, ‘ಕೈ’ಪಡೆಗೆ ಇವರೇ ಟಾರ್ಗೆಟ್ ಏಕೆ?

ಮೈಸೂರು, ಡಿಸೆಂಬರ್‌ 28: ಕಳೆದ ಎರಡು ಅವಧಿಯ ಲೋಕಸಭಾ ಚುನಾವಣೆಯಲ್ಲಿ ಗೆದ್ದು ಬೀಗಿರುವ ಮೈಸೂರು- ಕೊಡಗು ಸಂಸದ ಪ್ರತಾಪ್‌ ಸಿಂಹ ಅವರು ಈ ಬಾರಿಯೂ ಗೆದ್ದು ಹ್ಯಾಟ್ರಿಕ್ ಸಾಧಿಸುವ ಬಯಕೆಯಲ್ಲಿದ್ದಾರೆ. ಆದರೆ ಅವರ ಮೇಲೆ ಮುಗಿ ಬೀಳುತ್ತಿರುವ 'ಕೈ'ಪಡೆ ಯಾವುದೇ ಕಾರಣಕ್ಕೂ ಗೆಲ್ಲಲು ಬಿಡಬಾರದೆಂಬ ಹಠಕ್ಕೆ ಬಿದ್ದಿದೆ. ಇದಕ್ಕೆ ಕಾರಣ ಹುಡುಕುತ್ತಾ ಹೋದರೆ ಸಿಎಂ ಸಿದ್ದರಾಮಯ್ಯ ಅವರತ್ತ ಬೊಟ್ಟು ಮಾಡುತ್ತಿದೆ.

ಇಷ್ಟಕ್ಕೂ ಮೈಸೂರು ಕೊಡಗು ಲೋಕಸಭಾ ಕ್ಷೇತ್ರದ ಚುನಾವಣೆಗೂ ಸಿಎಂ ಸಿದ್ದರಾಮಯ್ಯ ಅವರಿಗೂ ಏನು ಸಂಬಂಧ? ಬಿಜೆಪಿ ಸಂಸದ ಪ್ರತಾಪ್‌ ಸಿಂಹ ಸೋತರೆ ಸಿದ್ದರಾಮಯ್ಯ ಅವರಿಗೇನು ಲಾಭ? ಹೀಗೆ ಪ್ರಶ್ನೆಗಳು ಹುಟ್ಟಿಕೊಳ್ಳುತ್ತಾ ಹೋಗುತ್ತವೆ. ಕಳೆದ ಎರಡು ಅವಧಿಯಲ್ಲಿ ಅಂದರೆ 2014 ಮತ್ತು 2019ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿದ್ದ ಪ್ರತಾಪ್‌ ಸಿಂಹ ಅವರಿಗೆ ಎದುರಾಳಿಯಾಗಿದ್ದ ಕಾಂಗ್ರೆಸ್ ಅಭ್ಯರ್ಥಿಗಳು ಹೆಚ್ಚಿನ ಪೈಪೋಟಿ ನೀಡಿರಲಿಲ್ಲ. ಹೀಗಾಗಿ ಅವರು ಸುಲಭವಾಗಿ ಗೆದ್ದಿದ್ದರು.

Lok Sabha Election 2024: Why Congress Targeting MP Pratap Simha

2014ರ ಮೈಸೂರು ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಪ್ರತಾಪ್‌ ಸಿಂಹ ಅವರಿಗೆ ಅಂದು ಕಾಂಗ್ರೆಸ್‌ನ ಹಾಲಿ ಸಂಸದರಾಗಿದ್ದ ಹೆಚ್.ವಿಶ್ವನಾಥ್ ಪೈಪೋಟಿ ನೀಡಿದ್ದರು. ಆದರೆ ನರೇಂದ್ರ ಮೋದಿ ಅವರ ಅಲೆಯಲ್ಲಿ ರಾಜಕೀಯದ ಅರಿಯದ ಪತ್ರಕರ್ತ ಪ್ರತಾಪ್‌ ಸಿಂಹ ಗೆದ್ದು ಬಂದಿದ್ದರು. ನಂತರದ ಬೆಳವಣಿಗೆಯಲ್ಲಿ 2019ರ ವೇಳೆಗೆ ಕಾಂಗ್ರೆಸ್‌ನಲ್ಲಿ ಎದುರಾಳಿಗಳೇ ಇಲ್ಲವಾಗಿದ್ದರು. ಕಾರಣ ಆ ವೇಳೆಗೆ ಕಾಂಗ್ರೆಸ್ ನಲ್ಲಿದ್ದ ಹೆಚ್.ವಿಶ್ವನಾಥ್ ಅವರು ಪಕ್ಷ ತೊರೆದು ಜೆಡಿಎಸ್ ಸೇರಿ ಹುಣಸೂರಿನಿಂದ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಶಾಸಕರಾಗಿದ್ದರು.

ಎರಡು ಬಾರಿ ಗೆದ್ದು ಬೀಗಿರುವ ಪ್ರತಾಪ್‌ ಸಿಂಹ

ಕಾಂಗ್ರೆಸ್ ಗೆ 2019ರಲ್ಲಿ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಕಾಂಗ್ರೆಸ್ ಪಕ್ಷದಿಂದ ಮೂಲ ನಾಯಕರೇ ಇರಲಿಲ್ಲ ಹೀಗಾಗಿ ಅನ್ಯ ಮಾರ್ಗವಿಲ್ಲದೆ ಬಿಜೆಪಿಯಿಂದ ಕಾಂಗ್ರೆಸ್‌ಗ ಸೇರ್ಪಡೆಗೊಂಡಿದ್ದ ಸಿ.ಹೆಚ್ ವಿಜಯಶಂಕರ್ ಅವರಿಗೆ ಟಿಕೆಟ್ ನೀಡಲಾಗಿತ್ತು. ಅವತ್ತು ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಮಾಡಿಕೊಂಡಿದ್ದರಿಂದ ಸುಲಭವಾಗಿ ಗೆಲುವು ಸಾಧಿಸಬಹುದು ಎಂಬ ಲೆಕ್ಕಚಾರವಿತ್ತು. ಆದರೆ ಅಂದುಕೊಂಡಂತೆ ನಡೆಯಲೇ ಇಲ್ಲ. 2014ರ ಚುನಾವಣೆಗಿಂತಲೂ ಹೆಚ್ಚಿನ ಮತಗಳೊಂದಿಗೆ ಪ್ರತಾಪ್ ಸಿಂಹ ಗೆದ್ದು ಬಂದಿದ್ದರು.

Lok Sabha Election 2024: Why Congress Targeting MP Pratap Simha

ಅವತ್ತು ರಾಜ್ಯದಲ್ಲಿ ಕಾಂಗ್ರೆಸ್ ಜೆಡಿಎಸ್ ಮೈತ್ರಿ ಸರ್ಕಾರವಿತ್ತು. ಆದರೂ ಮೈಸೂರು ಕೊಡಗು ಲೋಕಸಭಾ ಕ್ಷೇತ್ರದ ಚುನಾವಣೆ ಬಗ್ಗೆ ಸಿದ್ದರಾಮಯ್ಯ ಹೆಚ್ಚು ತಲೆಕೆಡಿಸಿಕೊಂಡಿರಲಿಲ್ಲ. ಜತೆಗೆ ಅವರು ಸರ್ಕಾರದಲ್ಲಿ ಕೇವಲ ಶಾಸಕರಾಗಷ್ಟೆ ಉಳಿದಿದ್ದರು. ಅವರಿಗೆ ತವರು ಕ್ಷೇತ್ರದಲ್ಲಿ ಪಕ್ಷವನ್ನು ಗೆಲ್ಲಿಸಲೇ ಬೇಕೆಂಬ ಪ್ರತಿಷ್ಠೆಯೂ ಇರಲಿಲ್ಲ. ಕಾರಣ ಜೆಡಿಎಸ್ ಮತ್ತು ಕಾಂಗ್ರೆಸ್ ಮೈತ್ರಿ ಸರ್ಕಾರದ ಬಗ್ಗೆ ಹೇಳಿಕೊಳ್ಳುವಂತಹ ಒಲವು ಇರಲಿಲ್ಲ. 2019ರ ಚುನಾವಣೆಯನ್ನು ಗಮನಿಸಿ ರಾಜಕೀಯ ಲೆಕ್ಕಾಚಾರ ಹಾಕಿದರೆ ಅವತ್ತು ಜೆಡಿಎಸ್ ಮತ್ತು ಕಾಂಗ್ರೆಸ್ ಮೈತ್ರಿಯಾದ ಪರಿಣಾಮ ಕಾಂಗ್ರೆಸ್ ಗೆ ಶೇ.41.75ರಷ್ಟು ಮತ ಬಂದಿತ್ತು.

ಜೆಡಿಎಸ್ ಸಖ್ಯದಿಂದ ಬಿಜೆಪಿಗೆ ಲಾಭವಾಗುತ್ತಾ?

ಏಕಾಂಗಿಯಾಗಿ ಚುನಾವಣೆ ಎದುರಿಸಿದ್ದ ಪ್ರತಾಪ್‌ ಸಿಂಹ ಅವರಿಗೆ 52.27ರಷ್ಟು ಮತ ಬಂದಿತ್ತು. ಈ ಬಾರಿ ಜೆಡಿಎಸ್ ಪಕ್ಷ ಬಿಜೆಪಿ ಜತೆಗೆ ಚುನಾವಣೆಗೆ ಹೋಗುತ್ತಿರುವುದರಿಂದ ಜೆಡಿಎಸ್ ಮತಗಳು ಬಿಜೆಪಿ ಕಡೆಗೆ ಬರುವುದರಿಂದ ಪ್ರತಾಪ್‌ ಸಿಂಹ ಅವರಿಗೆ ಸುಲಭ ಜಯ ಸಿಗುತ್ತದೆ ಎಂಬುದು ಬಿಜೆಪಿ ನಾಯಕರ ಆಲೋಚನೆಯಾಗಿದೆ. ಆದರೆ ಕಾಂಗ್ರೆಸ್ ನಾಯಕರ ಲೆಕ್ಕಾಚಾರವೇ ಬೇರೆಯಾಗಿದೆ. ಕಳೆದ ಬಾರಿ ಕಾಂಗ್ರೆಸ್ಸಿಗೆ ಶೇ.41.75ರಷ್ಟು ಮತ ಬಿದ್ದಿತ್ತು. ಈ ಬಾರಿ ಅದು ಜಾಸ್ತಿಯಾಗಲಿದೆ. ಕಾರಣ ಬಿಜೆಪಿಯ ಭದ್ರಕೋಟೆ ಕೊಡಗಿನ ಮತದಾರರು ಕಾಂಗ್ರೆಸ್‌ನ ಕೈಹಿಡಿದಿದ್ದಾರೆ. ಹೀಗಾಗಿ ಅವರು ಲೋಕಸಭಾ ಚುನಾವಣೆಯಲ್ಲಿಯೂ ಕಾಂಗ್ರೆಸ್‌ನತ್ತ ಒಲವು ತೋರುವುದರಿಂದ ಗೆಲುವು ಸುಲಭವಾಗಲಿದೆ ಎಂಬ ಹುಮ್ಮಸ್ಸಿನಲ್ಲಿದ್ದಾರೆ.

Lok Sabha Election 2024: Why Congress Targeting MP Pratap Simha

ಇನ್ನು ಪ್ರತಾಪ್‌ ಸಿಂಹ ಸೋಲು ಕಾಂಗ್ರೆಸ್ಸಿಗರಿಗೆ ಅದರಲ್ಲೂ ಸಿಎಂ ಸಿದ್ದರಾಮಯ್ಯ ಅವರಿಗೆ ಹಲವು ರೀತಿಯಲ್ಲಿ ರಾಜಕೀಯ ಲಾಭ ತಂದುಕೊಡಲಿದೆ ಎಂಬುದನ್ನು ತಳ್ಳಿಹಾಕಲಾಗದು. ಸುಮಾರು 26 ಪಕ್ಷಗಳನ್ನು ಮಗ್ಗುಲಲ್ಲಿ ಕಟ್ಟಿಕೊಂಡು ಐಎನ್‌ಡಿಐಎ ಒಕ್ಕೂಟ ರಚಿಸಿ 2024ರ ಲೋಕಸಭಾ ಚುನಾವಣೆಗೆ ಹೊರಟ ಕಾಂಗ್ರೆಸ್‌ಗೆ ಒಂದೊಂದು ಸ್ಥಾನಗಳ ಗೆಲುವು ಬಹು ಮುಖ್ಯವಾಗಲಿದೆ. ಈಗಾಗಲೇ ಸಮೀಕ್ಷೆಗಳು ಪ್ರಧಾನಿ ನರೇಂದ್ರ ಮೋದಿ ಪರವಾಗಿಯೇ ಇದ್ದರೂ ಅದನ್ನು ಸುಳ್ಳು ಮಾಡುವ ನಿಟ್ಟಿನಲ್ಲಿ ಕಾಂಗ್ರೆಸ್ ನಾಯಕರು ಹಗಲು ರಾತ್ರಿ ಎನ್ನದೆ ಶ್ರಮ ಪಡುತ್ತಿದ್ದಾರೆ.

ಸಿಎಂಗೆ ತವರು ಕ್ಷೇತ್ರದಲ್ಲಿ ಕಾಂಗ್ರೆಸ್‌ಗೆ ಗೆಲುವು ಅಗತ್ಯ

ಇಂತಹ ಸಂದರ್ಭದಲ್ಲಿ ರಾಜ್ಯ ಕಾಂಗ್ರೆಸ್ಸಿನ ಕೊಡುಗೆಯೂ ಅಷ್ಟೇ ಮುಖ್ಯವಾಗುತ್ತದೆ. ರಾಜ್ಯದಿಂದ ಕನಿಷ್ಟ 20 ಸ್ಥಾನಗಳನ್ನು ಗೆಲ್ಲಿಸಿಕೊಡುವಂತೆ ಹೈಕಮಾಂಡ್ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮತ್ತು ಸಿಎಂ ಸಿದ್ದರಾಮಯ್ಯ ಅವರಿಗೆ ಟಾರ್ಗೆಟ್ ನೀಡಿದೆ. ಹೀಗಿರುವಾಗ ತವರು ಕ್ಷೇತ್ರವನ್ನೇ ಗೆಲ್ಲಿಸಿಕೊಡದೆ ಹೋದರೆ ಸಿದ್ದರಾಮಯ್ಯ ಅವರಿಗೆ ಮುಂದೆ ಸಂಕಷ್ಟ ಎದುರಾಗಲಿದ್ದು ಅದು ಸಿಎಂ ಸ್ಥಾನದ ಮೇಲೆ ಪರಿಣಾಮ ಬೀರಿದರೂ ಅಚ್ಚರಿಯಿಲ್ಲ. ಹೀಗಾಗಿ ತವರು ಕ್ಷೇತ್ರದಲ್ಲಿ ಗೆದ್ದೇ ಗೆಲ್ಲಬೇಕೆಂಬ ಪಣ ತೊಟ್ಟಿದ್ದಾರೆ ಎಂಬುದು ರಾಜಕೀಯ ಪಡಸಾಲೆಯಲ್ಲಿ ಕೇಳಿಬರುತ್ತಿರುವ ಅಭಿಪ್ರಾಯವಾಗಿದೆ.

Lok Sabha Election 2024: Why Congress Targeting MP Pratap Simha

ಕಳೆದ ಐದು ವರ್ಷಗಳ ಅವಧಿಯಲ್ಲಿ ಹಿಂದುತ್ವ ವಿಚಾರದಲ್ಲಿ ಏನೇ ಅದರೂ ಮೊದಲ ಬಾರಿಗೆ ಧ್ವನಿ ಎತ್ತುವುದು ಸಂಸದ ಪ್ರತಾಪ್‌ ಸಿಂಹ ಅವರೇ ಹಿಂದೂ ಕಾರ್ಯಕರ್ತರಿಗೆ ತೊಂದರೆಯಾದಾಗ ಸಿಎಂ ಬೊಮ್ಮಾಯಿ ವಿರುದ್ಧವೇ ಆಕ್ರೋಶ ವ್ಯಕ್ತಪಡಿಸಿದ್ದರು. ಹೀಗಾಗಿ ಮೈಸೂರು ಕೊಡಗು ಕ್ಷೇತ್ರದಲ್ಲಿ ಪ್ರತಾಪ್‌ ಸಿಂಹ ಅವರನ್ನು ಇಷ್ಟಪಡುವ ಮತ್ತು ಬೆಂಬಲಿಸುವ ದೊಡ್ಡ ಮತದಾರರ ವರ್ಗವೇ ಇದೆ. ಆದರೆ ಅದೆಲ್ಲವನ್ನು ಮೀರಿಯೂ ಕಾಂಗ್ರೆಸ್ ಈ ಬಾರಿ ಮತವನ್ನು ಸೆಳೆಯಲೇ ಬೇಕೆಂಬ ಹಠದಲ್ಲಿದೆ.

ಪ್ರತಾಪ್‌ ಸಿಂಹ ಮಣಿಸುವ ಹಠ ಇವತ್ತಿನದಲ್ಲ

ಪ್ರತಾಪ್‌ ಸಿಂಹ ಅವರನ್ನು ಮಣಿಸಲೇ ಬೇಕೆಂಬ ಹಠ ಇವತ್ತಿನದಲ್ಲ. ಕಳೆದ ಕೆಲವು ವರ್ಷಗಳಿಂದ ಕಾಂಗ್ರೆಸ್ ವಕ್ತಾರ ಎಂ.ಲಕ್ಷ್ಮಣ್ ಅವರು ಸುದ್ದಿಗೋಷ್ಠಿ ಕರೆದು ಟೀಕಿಸುವುದರೊಂದಿಗೆ ಹಲವು ಸವಾಲುಗಳನ್ನು ಎಸೆಯುತ್ತಲೇ ಬಂದಿದ್ದಾರೆ. ಅಷ್ಟೇ ಅಲ್ಲದೆ ಅವರ ವಿರುದ್ಧ ಹಲವು ಪ್ರತಿಭಟನೆಗಳನ್ನು ನಡೆಸಿ ಆಕ್ರೋಶ ವ್ಯಕ್ತಪಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಹುಶಃ ರಾಜ್ಯದಲ್ಲಿರುವ ಸಂಸದರ ಪೈಕಿ ಪ್ರತಾಪ್‌ ಸಿಂಹ ವಿರುದ್ಧ ಮಾಡಿದಷ್ಟು ಆರೋಪ ಪ್ರತಿಭಟನೆಗಳನ್ನು ಕಾಂಗ್ರೆಸ್ ನಾಯಕರು ಇನ್ಯಾರ ಮೇಲೆಯೂ ಮಾಡಿಲ್ಲ ಎಂಬುದನ್ನು ಒಪ್ಪಿಕೊಳ್ಳಲೆ ಬೇಕಾಗಿದೆ.

ಲೋಕಸಭಾ ಚುನಾವಣೆ ಹತ್ತಿರ ಬರುತ್ತಿರುವುದರಿಂದ ಪ್ರತಾಪ್‌ ಸಿಂಹ ವಿರುದ್ಧ ರಾಜಕೀಯ ಹೋರಾಟವನ್ನು ಕಾಂಗ್ರೆಸ್ ತೀವ್ರಗೊಳಿಸಿದೆ. ಸಂಸತ್ ದಾಂಧಲೆ ಪ್ರಕರಣ, ಸೋಮಾರಿ ಸಿದ್ದ ಪದಬಳಕೆ ಪ್ರಕರಣ ಹೀಗೆ ಎಲ್ಲವನ್ನೂ ಗಂಭೀರವಾಗಿ ತೆಗೆದುಕೊಂಡ ಕಾಂಗ್ರೆಸ್ ಪ್ರತಿಭಟನೆ ಮತ್ತು ಎಫ್‌ಐಆರ್ ದಾಖಲು ಮಾಡುವ ಮೂಲಕ ಹೋರಾಟವನ್ನು ಇನ್ನಷ್ಟು ತೀವ್ರತೆ ಕಡೆಗೆ ಕೊಂಡೊಯ್ಯುತ್ತಿದೆ. ಇನ್ನೊಂದೆಡೆ ಸಿಎಂ ಸಿದ್ದರಾಮಯ್ಯ ಅವರು ದಶಪಥ ರಸ್ತೆ ಮಾಡಿಸಿದ್ದು ನಾವೇ.. ಪ್ರತಾಪ್‌ ಸಿಂಹ ಏನೂ ಮಾಡಿಲ್ಲ ಎನ್ನುವ ಮೂಲಕ ದಶಪಥ ಹೆದ್ದಾರಿಯ ಕ್ರೆಡಿಟ್ ವಾರ್ ಶುರು ಮಾಡಿದ್ದಾರೆ. ಒಟ್ಟಾರೆಯಾಗಿ ಹೇಳಬೇಕೆಂದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಕಾಂಗ್ರೆಸ್ ನಾಯಕರೆಲ್ಲರೂ ಒಟ್ಟಾಗಿ ಪ್ರತಾಪಸಿಂಹ ವಿರುದ್ಧ ಮುಗಿಬಿದ್ದಿದ್ದಂತು ನಿಜ. ಚುನಾವಣೆ ವೇಳೆಗೆ ಇನ್ನು ಏನೆಲ್ಲ ನಡೆಯಲಿದೆಯೋ ಕಾದು ನೋಡಬೇಕಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+