Lok Sabha Election 2024: ಲೋಕಸಭಾ ಚುನಾವಣೆಗೆ ಪ್ರತಾಪ್ ಸಿಂಹ ಎದುರಾಳಿಗಳ ಲೆಕ್ಕಾಚಾರಗಳೇನು?
ಮೈಸೂರು, ಡಿಸೆಂಬರ್ 26: ಸಂಸತ್‌ನಲ್ಲಿ ಸ್ಮೋಕ್ ಬಾಂಬ್ ಸಿಡಿಸಿದ ಪ್ರಕರಣದ ಆರೋಪಿಗಳು ಮೈಸೂರು ಕೊಡಗು ಲೋಕಸಭಾ ಕ್ಷೇತ್ರದ ಸಂಸದ ಪ್ರತಾಪ್ ಸಿಂಹ ಅವರಿಂದ ಪಾಸ್ ಪಡೆದಿದ್ದರು ಎಂಬ ವಿಚಾರದೊಂದಿಗೆ ಅವರ ಹೆಸರು ದೇಶದಾದ್ಯಂತ ಮುನ್ನಲೆಗೆ ಬಂದಿದ್ದು, ಎದುರಾಳಿ ಕಾಂಗ್ರೆಸ್ ನಾಯಕರು ಇದನ್ನು ಹೇಗೆ ಬೇಕೋ ಹಾಗೆ ಬಳಸಿಕೊಳ್ಳುವಲ್ಲಿಯೂ ಯಶಸ್ವಿಯಾಗಿರುವುದರಿಂದ. ಮುಂದಿನ ಲೋಕಸಭಾ ಚುನಾವಣೆಯಲ್ಲಿ ಲಾಭವಾಗಬಹುದು ಎಂಬ ನಿರೀಕ್ಷೆಯಲ್ಲಿದ್ದಾರೆ.
ಕ್ಷೇತ್ರದಲ್ಲಿ ಊಹಾಪೋಹದ ಸುದ್ದಿಗಳು ಹರಿದಾಡುತ್ತಿದ್ದು, ಕೆಲವರು ಈ ಬಾರಿ ಹಾಲಿ ಸಂಸದ ಪ್ರತಾಪ್ ಸಿಂಹ ಅವರಿಗೆ ಬಿಜೆಪಿಯಿಂದ ಟಿಕೆಟ್ ನೀಡಲ್ಲ ಎಂಬಂತಹ ಸುದ್ದಿಗಳಿಗೆ ರೆಕ್ಕೆಪುಕ್ಕಗಳು ಹುಟ್ಟಿಕೊಳ್ಳುತ್ತಿದ್ದು, ಇದು ಎದುರಾಳಿ ಪಕ್ಷದ ನಾಯಕರಲ್ಲಿ ಮಾತ್ರವಲ್ಲದೆ, ಸ್ವಪಕ್ಷದ ಕೆಲವು ನಾಯಕರಲ್ಲಿಯೂ ಬಯಕೆಯನ್ನು ಹುಟ್ಟು ಹಾಕಿದೆ ಎಂದರೂ ತಪ್ಪಾಗಲಾರದು. ಆದರೆ ರಾಜಕೀಯ ಮೂಲಗಳ ಪ್ರಕಾರ ಈ ಬಾರಿಯೂ ಪ್ರತಾಪ್ ಸಿಂಹ ಅವರಿಗೆ ಟಿಕೆಟ್ ನೀಡಲಾಗುತ್ತದೆ ಎಂದು ಹೇಳಲಾಗುತ್ತಿದೆ.

ಎರಡು ಬಾರಿಯೂ ಗೆಲುವಿನ ಪತಾಕೆ ಹಾರಿಸಿರುವ ಸಂಸದ ಪ್ರತಾಪ್ ಸಿಂಹ ಅವರು ಈ ಬಾರಿಯ ಚುನಾವಣೆಯಲ್ಲಿ ಸುಲಭವಾಗಿಯೇ ಗೆಲ್ಲುತ್ತಾರೆ. ವಿಧಾನಸಭಾ ಚುನಾವಣೆ ಮತ್ತು ಲೋಕಸಭಾ ಚುನಾವಣೆಯನ್ನು ಮತದಾರರು ನೋಡುವ ರೀತಿಯೇ ವಿಭಿನ್ನವಾಗಿದೆ. ಹೀಗಾಗಿ ಕೇಂದ್ರದಲ್ಲಿ ಪ್ರಧಾನಿಯಾಗಿ ನರೇಂದ್ರ ಮೋದಿಯೇ ಉಳಿಯಬೇಕೆಂದು ಬಯಸುವ ಮತದಾರರು ಬಿಜೆಪಿಗೆ ಮತ ನೀಡುತ್ತಾರೆ ಎಂಬುದು ಬಿಜೆಪಿಯನ್ನು ಬೆಂಬಲಿಸುವ ಮತದಾರರ ಅಭಿಪ್ರಾಯವಾಗಿದೆ.
ಜೋರಾಯ್ತು ಲಾಭ ನಷ್ಟಗಳ ಲೆಕ್ಕಾಚಾರ
ಬಿಜೆಪಿಯಲ್ಲಿ ಪ್ರತಾಪ್ ಸಿಂಹ ಮಾತ್ರವಲ್ಲದೆ ಹಲವು ನಾಯಕರು ಆಕಾಂಕ್ಷಿಗಳಾಗಿದ್ದಾರೆ. ಆದರೆ ಪ್ರಧಾನಿ ನರೇಂದ್ರಮೋದಿ ಸೇರಿದಂತೆ ಹಲವು ಹಿರಿಯ ಕೃಪಾಶೀರ್ವಾದ ಇರುವ ಕಾರಣ ಸದ್ಯಕ್ಕೆ ಯಾರು ಕೂಡ ತಾನು ಕೂಡ ಆಕಾಂಕ್ಷಿ ಎಂಬ ಹೇಳಿಕೆಯನ್ನು ಬಹಿರಂಗವಾಗಿ ಹೇಳುತ್ತಿಲ್ಲ. ಆದರೆ ಸಂಸತ್ ಸ್ಥಾನಕ್ಕೆ ಸ್ಪರ್ಧಿಸಲು ಪ್ರತಾಪ್ ಸಿಂಹ ಹೊರತುಪಡಿಸಿ ಮಾಜಿ ಸಚಿವ ಅಪ್ಪಚ್ಚು ರಂಜನ್, ಎಸ್.ಎ.ರಾಮದಾಸ್, ಮಾಜಿ ಸ್ಪೀಕರ್ ಕೆ.ಜಿ,ಬೋಪಯ್ಯ, ವಿಧಾನಪರಿಷತ್ ಸದಸ್ಯೆ ತೇಜಸ್ವಿನಿ ಗೌಡ, ನಿವೃತ್ತ ಪೊಲೀಸ್ ಅಧಿಕಾರಿ ಭಾಸ್ಕರ್ ರಾವ್ ಹೀಗೆ ಹಲವರು ಇದ್ದಾರೆ ಎಂಬುದನ್ನು ತಳ್ಳಿಹಾಕಲಾಗದು.
ಸಂಸತ್ ನಲ್ಲಿ ದಾಂಧಲೆ ಘಟನೆ ಬಳಿಕ ಸಂಸದ ಪ್ರತಾಪ್ ಸಿಂಹ ವಿರುದ್ಧ ವಿಪಕ್ಷಗಳ ಅದರಲ್ಲೂ ಕಾಂಗ್ರೆಸ್ ನ ನಾಯಕರು ತಮ್ಮದೇ ಆದ ರೀತಿಯಲ್ಲಿ ಆರೋಪಗಳ ಸುರಿಮಳೆಯನ್ನೇ ಸುರಿಸಿದ್ದಾರೆ. ಆ ಮೂಲಕ ಕ್ಷೇತ್ರದಲ್ಲಿ ರಾಜಕೀಯವಾಗಿ ಲಾಭ ಮಾಡಿಕೊಳ್ಳುವ ಪ್ರಯತ್ನಗಳನ್ನು ಮಾಡಿದ್ದಾರೆ. ಇದು ತಪ್ಪೇನು ಅಲ್ಲ. ಆದರೆ ಮತದಾರರು ಇದನ್ನು ಹೇಗೆ ನೋಡುತ್ತಾರೆ ಎಂಬುದು ಮಾತ್ರ ಬಹುಮುಖ್ಯವಾಗಲಿದೆ. ಇದರಿಂದ ಲಾಭ ಯಾರಿಗೆ ನಷ್ಟ ಯಾರಿಗೆ? ಎಂಬ ಪ್ರಶ್ನೆಗಳು ಹುಟ್ಟಿಕೊಂಡಿವೆ.

ಫಲಪ್ರದವಾಗುತ್ತಾ ಜೆಡಿಎಸ್ ಸಖ್ಯ
ಮೈಸೂರು ಕೊಡಗು ಲೋಕಸಭಾ ಕ್ಷೇತ್ರಕ್ಕೆ ಒಳಪಡುವ ವಿಧಾನಸಭಾ ಕ್ಷೇತ್ರಗಳ ಪೈಕಿ ಹೆಚ್ಚಿನ ಸ್ಥಾನಗಳಲ್ಲಿ ಕಾಂಗ್ರೆಸ್ ಗೆದ್ದು ಪ್ರಾಬಲ್ಯ ಸಾಧಿಸಿದೆ. ಇಲ್ಲಿ ಜೆಡಿಎಸ್ ಗಿಂತಲೂ ಕಡಿಮೆ ಕ್ಷೇತ್ರವನ್ನು ಬಿಜೆಪಿ ಗೆದ್ದು ಕೊನೆಯ ಸ್ಥಾನಕ್ಕೆ ತಳ್ಳಲ್ಪಟ್ಟಿದೆ. ಇದನ್ನು ಗಮನಿಸಿದರೆ ಸದ್ಯದ ಮಟ್ಟಿಗೆ ಕ್ಷೇತ್ರದಲ್ಲಿ ಕಾಂಗ್ರೆಸ್ ಪ್ರಾಬಲ್ಯ ಹೊಂದಿದ್ದು, ಇದರಿಂದ ಈ ಬಾರಿ ಗೆಲುವು ನಮ್ಮದೇ ಎಂಬುದು ಕಾಂಗ್ರೆಸ್ಸಿಗರ ಆಲೋಚನೆಯಾಗಿದೆ.
ಮೇಲ್ನೋಟಕ್ಕೆ ಬಿಜೆಪಿಯಿಂದ ಹಾಲಿ ಸಂಸದ ಪ್ರತಾಪ್ ಸಿಂಹ ಅವರೇ ಈ ಬಾರಿಯ ಅಭ್ಯರ್ಥಿ ಎಂಬುದು ಖಚಿತವಾಗುತ್ತಿದೆ. ಅಷ್ಟೇ ಅಲ್ಲದೆ ಬಹಿರಂಗವಾಗಿ ಬೇರೆ ಯಾವ ನಾಯಕರು ಕೂಡ ತಾವು ಆಕಾಂಕ್ಷಿಗಳು ಎಂದು ಹೇಳುತ್ತಿಲ್ಲ. ಹೀಗಾಗಿ ಬಿಜೆಪಿಯಿಂದ ಪ್ರತಾಪ್ ಸಿಂಹ ಒಮ್ಮತದ ಅಭ್ಯರ್ಥಿ ಎನ್ನುವುದರಲ್ಲಿ ಎರಡು ಮಾತಿಲ್ಲ. ಜೊತೆಗೆ ಅವರಿಗೆ ಹೆಚ್.ಡಿ.ದೇವೇಗೌಡ ಮತ್ತು ಜಿ.ಟಿ.ದೇವೇಗೌಡರ ಕೃಪೆಯೂ ಈ ಬಾರಿ ಇರುವುದು ಗೆಲುವಿಗೆ ಇನ್ನಷ್ಟು ಸಹಕಾರಿಯಾಗಿದೆ. ರಾಜ್ಯದಲ್ಲಿ ಜೆಡಿಎಸ್ ಮತ್ತು ಬಿಜೆಪಿ ಮೈತ್ರಿ ಮಾಡಿಕೊಂಡಿರುವುದರ ಲಾಭವೂ ಇಲ್ಲಿ ಉಪಯೋಗಕ್ಕೆ ಬರಲಿದೆ.
'ಕೈ'ಗೆ ಸವಾಲಾಗುತ್ತಾ ಅಭ್ಯರ್ಥಿ ಆಯ್ಕೆ?
2018ರ ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್ ಕಾಂಗ್ರೆಸ್ ಜತೆಯಾಗಿ ಬಿಜೆಪಿ ವಿರುದ್ಧ ಸಮರ ಸಾರಿದ್ದವು. ಆದರೂ ಬಿಜೆಪಿ ಗೆಲುವು ಕಂಡಿತ್ತು. ಈ ಬಾರಿ ಬಿಜೆಪಿ ಜೊತೆಗೆ ಜೆಡಿಎಸ್ ಇರುವುದು ಮೈಸೂರು ಕೊಡಗು ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಮಟ್ಟಿಗೆ ಹೆಚ್ಚಿನ ಲಾಭ ತಂದು ಕೊಡಲಿದೆ ಎನ್ನುವುದನ್ನು ತಳ್ಳಿಹಾಕಲಾಗದು. ಇದೆಲ್ಲದರ ನಡುವೆ ಕಾಂಗ್ರೆಸ್ ನಲ್ಲಿ ಚುನಾವಣೆ ತಯಾರಿಗಿಂತ ಹೆಚ್ಚಾಗಿ ಆಕಾಂಕ್ಷಿಗಳ ಮನವೊಲಿಸಿ ಒಮ್ಮತದ ಅಭ್ಯರ್ಥಿಯನ್ನು ಆಯ್ಕೆ ಮಾಡುವುದೇ ಸವಾಲ್ ಆಗಿ ಪರಿಣಮಿಸಿದೆ.

ಡಜನ್ ಗಟ್ಟಲೆ ನಾಯಕರು ಸ್ಪರ್ಧಿಸಲು ತುದಿಗಾಲಿನಲ್ಲಿ ನಿಂತಿದ್ದು, ಟಿಕೆಟ್ ಪಡೆಯುವ ಸಲುವಾಗಿ ವಿವಿಧ ತಂತ್ರಗಳ ಮೂಲಕ ಹಿರಿಯ ನಾಯಕರ ಗಮನಸೆಳೆಯುವ ಪ್ರಯತ್ನ ಮಾಡುತ್ತಿದ್ದಾರೆ. ಆದರೆ ಎಲ್ಲೋ ಒಂದು ಕಡೆ ಸಿದ್ದರಾಮಯ್ಯ ಅವರ ಪುತ್ರ ಯತೀಂದ್ರ ಸಿದ್ದರಾಮಯ್ಯ ಅವರು ಸ್ಪರ್ಧಿಸುವ ಬಯಕೆ ವ್ಯಕ್ತಪಡಿಸಿದರೆ ಆಕಾಂಕ್ಷಿಗಳೆಲ್ಲರೂ ಒಪ್ಪಿಕೊಳ್ಳುವುದು ಅನಿವಾರ್ಯವಾಗಲಿದೆ. ಆದರೆ ಅದಕ್ಕೂ ಮುನ್ನ ಹುಟ್ಟಿಕೊಂಡಿರುವ ಆಕಾಂಕ್ಷಿಗಳನ್ನು ಮನವೊಲಿಸಿ ಅವರು ಬಂಡಾಯವೇಳದಂತೆ ನೋಡಿಕೊಳ್ಳುವ ಕೆಲಸ ಪ್ರಮುಖವಾಗಿದೆ.
ಮತದಾರರು ಯಾರತ್ತ ಒಲವು ತೋರುತ್ತಾರೋ?
ಸಂಸತ್ ನಲ್ಲಿ ನಡೆದ ಘಟನೆ ಬಳಿಕ ಪ್ರತಾಪ್ ಸಿಂಹ ಮೌನವಾದಂತೆ ಕಾಣುತ್ತಿದೆ. ಇದು ಕಾಂಗ್ರೆಸ್ಸಿಗರಿಗೆ ಅನುಕೂಲವಾಗಿದೆ. ಇದನ್ನೇ ಮುಂದಿಟ್ಟುಕೊಂಡು ಚುನಾವಣೆಗೆ ಹೋಗುತ್ತಾರಾ? ಅದು ಫಲಕೊಡುತ್ತೋ ಗೊತ್ತಿಲ್ಲ. ಆದರೆ ಕೇಂದ್ರದಿಂದ ಅನುದಾನ ತಂದು ಅನುಷ್ಠಾನಗೊಳಿಸುವ ವಿಚಾರದಲ್ಲಿ ಪ್ರತಾಪ್ ಸಿಂಹ ಅವರಿಗೆ ಅವರೇ ಸಾಟಿ. ಹೀಗಿರುವಾಗ ಪ್ರತಾಪ್ ಸಿಂಹ ಅವರಿಗೆ ಸರಿಸಮಾನಾಗಿ ನಿಲ್ಲುವ ಅಭ್ಯರ್ಥಿಯನ್ನು ಕಾಂಗ್ರೆಸ್ ಕಣಕ್ಕಿಳಿಸಲೇ ಬೇಕಾಗುತ್ತದೆ. ಆ ಅಭ್ಯರ್ಥಿ ಯಾರಾಗಲಿದ್ದಾರೆ ಎಂಬುದೇ ಸದ್ಯದ ಕುತೂಹಲವಾಗಿದೆ. ಒಟ್ಟಾರೆ ಮೈಸೂರು ಕೊಡಗು ಲೋಕಸಭಾ ಕ್ಷೇತ್ರದ ಚುನಾವಣೆ ಅಷ್ಟೊಂದು ಸುಲಭವಾಗಿಯಂತು ಇಲ್ಲವೇ ಇಲ್ಲ. ಮತದಾರರು ಮೂರನೇ ಬಾರಿಗೂ ಪ್ರತಾಪ್ ಸಿಂಹ ಅವರನ್ನೇ ಅಪ್ಪಿಕೊಳ್ಳುತ್ತಾರಾ? ಹೊಸ ಮುಖಕ್ಕೆ ಮಣೆ ಹಾಕುತ್ತಾರಾ? ಕಾದು ನೋಡುವುದು ಅನಿವಾರ್ಯವಾಗಿದೆ.












Click it and Unblock the Notifications