ಮೈಸೂರಿನಲ್ಲಿ ತ್ಯಾಜ್ಯ ನಿರ್ವಹಣೆಗೆ ಜಾಗ ಗುರುತು, ಸಚ್ಛತೆಯಲ್ಲಿ ಮೊದಲ ಸ್ಥಾನ ಅಲಂಕರಿಸುವ ಪ್ಲಾನ್
ಮೈಸೂರು, ಜನವರಿ, 09: ಮೈಸೂರಲ್ಲಿ ಕಟ್ಟಡ ತ್ಯಾಜ್ಯ ನಿರ್ವಹಣೆಗೆ ನಗರದ ನಾಲ್ಕು ಭಾಗದಲ್ಲಿಯೂ ಜಾಗ ಗುರುತಿಸಲಾಗಿದೆ ಎಂದು ಮುಡಾ ಅಧ್ಯಕ್ಷ ಯಶಸ್ವಿ ಎಸ್. ಸೋಮಶೇಖರ್ ಹೇಳಿದರು.
ಮೈಸೂರು ರಾಣಿ ಬಹದ್ದೂರ್ ಸಭಾಂಗಣದಲ್ಲಿ ಮಹಾನಗರ ಪಾಲಿಕೆಯ ಬಜೆಟ್ ಪೂರ್ವಭಾವಿಯಾಗಿ ಆಯೋಜಿಸಿದ್ದ ಸಾರ್ವಜನಿಕರ ಸಮಾಲೋಚನಾ ಸಭೆಯಲ್ಲಿ ಅವರು ಮಾತನಾಡಿದರು. ಜನವರಿ 10ರಂದು ಮಧ್ಯಾಹ್ನ 2ರಿಂದ ಸಂಜೆ 5ರವರೆಗೆ ಸಾರ್ವಜನಿಕ ಆದಾಲತ್ ಆಯೋಜಿಸಲಾಗುವುದು. ಸಿಎ ನಿವೇಶನಗಳಿವೆ, ಅಗತ್ಯ ಉಳ್ಳವರು ಅರ್ಜಿ ಸಲ್ಲಿಸಿದರೆ ನೀಡಲಾಗುವುದು ಎಂದರು. ನಂತರ ಮಾಜಿ ಮೇಯರ್ ಜಿ.ಎಲ್.ಬೈರಪ್ಪ ಮಾತನಾಡಿ, ಕಟ್ಟಡ ತ್ಯಾಜ್ಯ ನಿರ್ವಹಣೆ ಮತ್ತು ಸಿಎ ನಿವೇಶನಗಳ ನಿರ್ವಹಣೆ ಸರಿಯಾಗಿ ಆಗಬೇಕು. ಮುಡಾ ವತಿಯಿಂದ ನಗರ ಪಾಲಿಕೆಗೆ ಸಿಎ ನಿವೇಶನ ಹಸ್ತಾಂತರಿಸಿ ಅಗತ್ಯ ಉಳ್ಳವರಿಗೆ ನಗರ ಪಾಲಿಕೆ ಮೂಲಕ ಸಿಎ ನಿವೇಶನ ನೀಡಿ ಎಂದು ಸಲಹೆ ನೀಡಿದರು.
ಸಿಟಿ ಬಸ್ ನಿಲ್ದಾಣದ ಸ್ಥಳಾಂತರಕ್ಕೆ ಒತ್ತಾಯ
ಇನ್ನು ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಸಿ.ನಾರಾಯಣಗೌಡ ಮಾತನಾಡಿ, ನಗರ ಭಾಗದಲ್ಲಿರುವ ಸಿಟಿ ಬಸ್ ನಿಲ್ದಾಣವನ್ನು ಬೇರೆಡೆಗೆ ಸ್ಥಳಾಂತರಿಸಬೇಕು. ಪ್ರವಾಸೋದ್ಯಮ ದೃಷ್ಟಿಯಿಂದ ಮೃಗಾಲಯದಲ್ಲಿರುವ ಮತ್ಸ್ಯಾಗಾರವನ್ನು ಆದಷ್ಟು ಆರಂಭಿಸಬೇಕು ಎಂದು ಸಲಹೆ ನೀಡಿದರು. ಬಳಿಕ ನಗರ ಪಾಲಿಕೆ ಮಾಜಿ ಸದಸ್ಯ ಪ್ರಶಾಂತ್ ಗೌಡ ಮಾತನಾಡಿ, ಸಚ್ಛತೆಯಲ್ಲಿ ಮೈಸೂರು ಮೊದಲ ಸ್ಥಾನ ಪಡೆಯಲು ಈಗಿಂದಲೇ ಕೆಲಸ ಆರಂಭಿಸಿ, ದಿನಗೂಲಿ ಆಧಾರದ ಮೇಲೆ ಪೌರ ಕಾರ್ಮಿಕರನ್ನು ನೇಮಕ ಮಾಡಿಕೊಳ್ಳಬೇಕು. ಸಂಚಾರಿ ಶೌಚಾಲಯ ನಿರ್ಮಿಸಬೇಕು. "ಖಾಲಿ ನಿವೇಶನಕ್ಕೆ ಹೆಚ್ಚು ತೆರಿಗೆ ವಿಧಿಸುವ ಬದಲು ಜನರಿಂದ ಹಣ ಪೀಕುತ್ತಿರುವ ಬಾರ್‌ಗಳು, ಖಾಸಗಿ ಶಾಲೆಗಳು ಮತ್ತು ಆಸ್ಪತ್ರೆಗಳಿಂದ ಹೆಚ್ಚು ತೆರಿಗೆ ವಸೂಲಿ ಮಾಡಿ," ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಪಾಲಿಕೆಯ ಬಜೆಟ್ ಪೂರ್ವಭಾವಿಯಾಗಿ ನಡೆದ ಸಾರ್ವಜನಿಕರ ಸಮಾಲೋಚನಾ ಸಭೆಯನ್ನು ಮೇಯರ್ ಶಿವಕುಮಾರ್ ಉದ್ಘಾಟಿಸಿದರು. ಪಾಲಿಕೆ ಆಯುಕ್ತ ಲಕ್ಷ್ಮೀಕಾಂತ್ ರೆಡ್ಡಿ, ಮುಡಾ ಅಧ್ಯಕ್ಷ ಯಶಸ್ವಿ ಸೋಮಶೇಖರ್, ಡಾ.ಜಿ.ರೂಪ ಸೇರಿದಂತೆ ಮತ್ತಿತರರು ಇದ್ದರು.
ಸಾರ್ವಜನಿಕರು ಸೇರಿದಂತೆ ಸಂಘ-ಸಂಸ್ಥೆಗಳ ಪ್ರತಿನಿಧಿಗಳು ನೀಡಿರುವ ಸಲಹೆ ಸೂಚನೆಗಳನ್ನು ಆದ್ಯತೆ ಅನುಸಾರ ಪಾಲಿಕೆಯ ಬಜೆಟ್‌ಗೆ ಸೇರ್ಪಡೆ ಮಾಡಿಕೊಂಡು ಅನುಷ್ಠಾನಗೊಳಿಸುವ ಪ್ರಯತ್ನ ಮಾಡಲಾಗುವುದು ಎಂದರು. ನಂತರ ಮೈಸೂರು ಜಿಲ್ಲಾ ಸವಿತಾ ಸಮಾಜದ ಅಧ್ಯಕ್ಷ ಎನ್.ಆ. ನಾಗೇಶ್ ಮಾತನಾಡಿ, ಹಡಪದ ಅಪ್ಪಣ್ಣ ಅಥವಾ ಸವಿತಾ ಮಹರ್ಷಿಗಳ ಹೆಸರಿನಲ್ಲಿ ವೃತ್ತ ಅಥವಾ ಪ್ರತಿಮೆ ಸ್ಥಾಪಿಸಿ ಎಂದು ಮನವಿ ಮಾಡಿದರು.












Click it and Unblock the Notifications