ಮೈಸೂರಿನಲ್ಲಿ ವಿದ್ಯುನ್ಮಾನ ಚಾಲನಾ ಪರೀಕ್ಷಾ ಕೇಂದ್ರ ಉದ್ಘಾಟಿಸಿದ ಸಾರಿಗೆ ಸಚಿವರು
ಮೈಸೂರು, ಜನವರಿ 24: "ಜಾಗೃತಿ ಮೂಡಿಸುವ ಮೂಲಕ ದೇಶದಲ್ಲಿ ಅಪಘಾತ ಪ್ರಮಾಣವನ್ನು ಕಡಿಮೆ ಮಾಡಲು ಸಾಧ್ಯ ಎಂಬುದನ್ನು ಸಾರುವ ಉದ್ದೇಶದೊಂದಿಗೆ ಈ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿದೆ" ಎಂದು ಸಾರಿಗೆ, ಕೃಷಿ ಸಚಿವ, ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಹೇಳಿದ್ದಾರೆ. ಇಂದು ಮೈಸೂರಿನಲ್ಲಿ ದೇವನೂರು ಬಡಾವಣೆ ಸಮೀಪದ ಹೊರವರ್ತುಲ ರಸ್ತೆಯಲ್ಲಿ ಸ್ವಯಂ ಚಾಲಿತ ವಿದ್ಯುನ್ಮಾನ ಚಾಲನಾ ಪರೀಕ್ಷಾ ಪಥಕ್ಕೆ ಚಾಲನೆ ನೀಡಿ ಮಾತನಾಡಿದರು.
"ಮೈಸೂರಿನಲ್ಲಿ ಆಧುನಿಕ ತಂತ್ರಜ್ಞಾನದ ವಿದ್ಯುನ್ಮಾನ ಚಾಲನಾ ಪರೀಕ್ಷಾ ಕೇಂದ್ರದ ಉದ್ಘಾಟನೆಯಾಗಿದೆ. ಮುಂದಿನ ಮೂರು ವರ್ಷಗಳಲ್ಲಿ ಪ್ರತಿ ಜಿಲ್ಲೆಯಲ್ಲಿ ಇಂಥದ್ದೊಂದು ತರಬೇತಿ ಕೇಂದ್ರ ಪ್ರಾರಂಭಿಸುವುದು ನಮ್ಮ ಗುರಿ. ಅದರ ಜೊತೆಗೆ ಪ.ಜಾತಿ/ಪ.ಪಂಗಡದವರಿಗೆ ತರಬೇತಿ ನೀಡುವ ಮೂಲಕ ಅವರನ್ನು ಚಾಲಕರನ್ನಾಗಿ ನಿರ್ಮಾಣ ಮಾಡುವ ಯೋಜನೆ ಇದೆ" ಎಂದು ತಿಳಿಸಿದರು.
"ಸಾರಿಗೆ ಇಲಾಖೆಯಲ್ಲಿ ಪ್ರತಿವರ್ಷ ಮೈಸೂರು ಭಾಗದಿಂದ 450 ಕೋಟಿ ತೆರಿಗೆ ಸಂಗ್ರಹವಾಗಲಿದೆ. ಹೀಗಾಗಿ ಪ್ರಥಮ ಆದ್ಯತೆ ಮೈಸೂರಿಗೆ ಕೊಡಬೇಕೆಂಬ ಉದ್ದೇಶ ನಮ್ಮದು. ಅದಕ್ಕಾಗಿ ಇಲ್ಲಿಯೇ ಮೊದಲು ಉದ್ಘಾಟಿಸಲಾಗಿದೆ. ಮೈಸೂರು ಭಾಗದಲ್ಲಿ 23ಲಕ್ಷ ವಾಹನಗಳ ನೋಂದಣಿ ಆಗಿದೆ. ಇದರಿಂದ ಹೆಚ್ಚಿನ ಆದಾಯ ಬರಲು ಸಾಧ್ಯವಾಗಿದೆ" ಎಂದು ತಿಳಿಸಿದರು.

"ನಮ್ಮ ದೇಶದಲ್ಲಿ ಪ್ರತಿ ವರ್ಷ ಒಂದೂವರೆ ಲಕ್ಷ ಜನ ಅಪಘಾತದಿಂದ ಸಾವನ್ನಪ್ಪುತ್ತಾರೆಂದು ಅಧ್ಯಯನದಿಂದ ತಿಳಿದು ಬಂದಿದ್ದು, ಸುಮಾರು 6 ಲಕ್ಷ ಜನರು ಅಪಘಾತದಿಂದ ಗಾಯಗೊಂಡಿರುವುದು ಅಂಕಿ ಅಂಶಗಳಿಂದ ತಿಳಿದುಬಂದಿದೆ. ಇದಕ್ಕೆ ಕಾರಣ ನಮ್ಮ ಚಾಲಕರ ಅಪಕ್ವ ತರಬೇತಿ. ಅಪಘಾತ ತಡೆಯಲು ಪರಿಪಕ್ವ ಜ್ಞಾನವನ್ನು ಕೊಡುವ ಮೂಲಕ ದೇಶದಲ್ಲಿ ಅಪಘಾತ ಪ್ರಮಾಣವನ್ನು ಕಡಿಮೆ ಮಾಡಲು ಸಾಧ್ಯ" ಎಂದರು.
ಕಾರ್ಯಕ್ರಮದಲ್ಲಿ ಶಾಸಕ ಜಿ.ಟಿ.ದೇವೇಗೌಡ, ವಿಧಾನ ಪರಿಷತ್ ಸದಸ್ಯ ಸಂದೇಶ್ ನಾಗರಾಜು, ಸಾರಿಗೆ ಆಯುಕ್ತರು, ಅಧಿಕಾರಿಗಳು ಮತ್ತಿತರರು ಉಪಸ್ಥಿತರಿದ್ದರು.












Click it and Unblock the Notifications