ಶಿವಮೊಗ್ಗ ಸಮಸ್ಯೆ ಬಗೆಹರಿಯುತ್ತದೆ: ಬಿವೈ ವಿಜಯೇಂದ್ರ
ಮೈಸೂರು, ಮಾರ್ಚ್ 27: ಕೆ. ಎಸ್. ಈಶ್ವರಪ್ಪ. ಸದ್ಯ ಕರ್ನಾಟಕ ರಾಜಕೀಯದಲ್ಲಿ ಭಾರೀ ಚರ್ಚೆ ಹುಟ್ಟುಹಾಕಿರುವ ನಾಯಕ. ಮಾಜಿ ಸಚಿವ ಕೆ. ಎಸ್. ಈಶ್ವರಪ್ಪ ಶಿವಮೊಗ್ಗ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯವ ಘೋಷಣೆ ಮಾಡಿದ್ದಾರೆ.
ಹಾವೇರಿ ಲೋಕಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ಕೆ. ಎಸ್. ಈಶ್ವರಪ್ಪ ಪುತ್ರ ಕಾಂತೇಶ್ ಕೈ ತಪ್ಪಿದೆ. ಇದರಿಂದ ಮಾಜಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ಬಿ. ವೈ. ವಿಜಯೇಂದ್ರ ವಿರುದ್ಧ ಅಸಮಾಧಾನಗೊಂಡ ಅವರು ಬಿ. ವೈ. ರಾಘವೇಂದ್ರ ವಿರುದ್ಧ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರೆ.

ಶಿವಮೊಗ್ಗ ಲೋಕಸಭಾ ಕ್ಷೇತ್ರಕ್ಕೆ ಮೇ 7ರಂದು ಮತದಾನ ನಡೆಯಲಿದೆ. ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಿ. ವೈ. ರಾಘವೇಂದ್ರ. ಎದುರಾಳಿ ಕಾಂಗ್ರೆಸ್‌ನಿಂದ ಗೀತಾ ಶಿವರಾಜ್ ಕುಮಾರ್. ಬಂಗಾರಪ್ಪ ಮತ್ತು ಯಡಿಯೂರಪ್ಪ ಕುಟುಂಬದ ಹೋರಾಟದ ನಡುವೆ ಪಕ್ಷೇತರ ಅಭ್ಯರ್ಥಿಯಾಗಿ ಈಶ್ವರಪ್ಪ ಸ್ಪರ್ಧಿಸಲಿದ್ದಾರೆ.
ಶಿವಮೊಗ್ಗ ಸಮಸ್ಯೆ ಬಗೆಹರಿಯಲಿದೆ: ಬುಧವಾರ ಬಿ. ವೈ. ವಿಜಯೇಂದ್ರ ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ತೆರಳಿ, ನಾಡ ಅಧಿದೇವತೆ ಶ್ರೀ ಚಾಮುಂಡೇಶ್ವರಿ ದೇವಿಯ ಆಶೀರ್ವಾದ ಪಡೆದರು. ಗೋ ಮಾತೆಗೆ ನೀರುಣಿಸುವ ಮೂಲಕ ನಾಡಿನೆಲ್ಲೆಡೆ ಕುಡಿಯುವ ನೀರಿಗೆ ಉಂಟಾಗಿರುವ ಹಾಹಾಕಾರವನ್ನು ದೂರವಾಗಿಸಿ ನಾಡಿನ ಜಲ ಸಂಪತ್ತು ವೃದ್ಧಿಸುವಂತೆ ಹಾಗೂ ರಾಜ್ಯವನ್ನು ಬರಮುಕ್ತವಾಗಿಸುವಂತೆ ಪ್ರಾರ್ಥಿಸಿದರು.
ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಅವರು, "ರಾಜ್ಯದ 28 ಕ್ಷೇತ್ರಗಳಲ್ಲಿಯೂ ಬಿಜೆಪಿ-ಜೆಡಿಎಸ್ ಗೆಲ್ಲುವ ಮೂಲಕ ನರೇಂದ್ರ ಮೋದಿ ಅವರ ಸಂಕಲ್ಪ ಪೂರ್ಣಗೊಳಿಸಬೇಕು. ಅವರ ಕೈ ಬಲಪಡಿಸಬೇಕು ಎಂದು ತಾಯಿಯಲ್ಲಿ ಪ್ರಾರ್ಥನೆ ಮಾಡಿದ್ದೇನೆ" ಎಂದರು.
"ರಾಜ್ಯದಲ್ಲಿ ಉಂಟಾಗಿರುವ ಕೆಲವು ಸಮಸ್ಯೆಗಳು ಬಗೆಹರಿಯುತ್ತವೆ. ಕೇಂದ್ರದಲ್ಲಿ 100ಕ್ಕೆ 100ರಷ್ಟು ಬಿಜೆಪಿ ಅಧಿಕಾರಕ್ಕೆ ಬರಲಿದೆ. ನರೇಂದ್ರ ಮೋದಿ ಅವರು ಪ್ರಧಾನಿಯಾಗುತ್ತಾರೆ ಎಂದಾಗ ಆಕಾಂಕ್ಷಿಗಳು ಸಹಜ. ಕೆಲವು ಕಡೆ ಸಮಸ್ಯೆ ಆಗಿದ್ದು, ಅವುಗಳನ್ನು ಬಗೆಹರಿಸಲಾಗುತ್ತಿದೆ" ಎಂದು ವಿಜಯೇಂದ್ರ ಹೇಳಿದರು.
"ದಾವಣಗೆರೆಯಲ್ಲಿ ಉಂಟಾಗಿದ್ದ ಸಮಸ್ಯೆಯನ್ನು ಯಡಿಯೂರಪ್ಪ ಅವರು ನಿನ್ನೆ ಬಗೆಹರಿಸಿದ್ದಾರೆ. ಶಿವಮೊಗ್ಗ ಮತ್ತು ಈಶ್ವರಪ್ಪ ಅವರ ಸಮಸ್ಯೆಯೂ ಸಹ ಬಗೆಹರಿಯುತ್ತದೆ ಎಂಬ ವಿಶ್ವಾಸ ನನಗಿದೆ" ಎಂದು ವಿಜಯೇಂದ್ರ ಭರವಸೆ ನೀಡಿದರು.
ಕೆ. ಎಸ್. ಈಶ್ವರಪ್ಪ ಸೋಮವಾರ ಚಿಕ್ಕಮಗಳೂರಿನಲ್ಲಿ ಮಾತನಾಡಿ, "ನನ್ನ ಚುನಾವಣಾ ಸ್ಪರ್ಧೆ 100ಕ್ಕೆ 100 ಖಚಿತ. ನಾನು ಯಾವ ಸಂಧಾನಕ್ಕೂ ಒಪ್ಪುವುದಿಲ್ಲ. ಯಡಿಯೂರಪ್ಪನವರ ಬಗ್ಗೆ ಏನೇ ಇದ್ದರೂ ಹೊರಗಡೆ ಮಾತನಾಡುತ್ತೇನೆ" ಎಂದು ತಿಳಿಸಿದರು.
ಈ ಮೂಲಕ ಸ್ಪರ್ಧೆಯಿಂದ ಹಿಂದೆ ಸರಿಯುವುದಿಲ್ಲ ಎಂದು ಖಚಿತಪಡಿಸಿದರು. ಅವರು ಈಗಾಗಲೇ ಮಠಗಳಿಗೆ, ದೇವಾಲಯಗಳಿಗೆ ಭೇಟಿ ನೀಡುತ್ತಿದ್ದಾರೆ. ಅಭಿಮಾನಿಗಳ ಸಭೆಗಳನ್ನು ಮಾಡುವ ಮೂಲಕ ಚುನಾವಣಾ ಪ್ರಚಾರವನ್ನು ಕೈಗೊಂಡಿದ್ದಾರೆ. ಇದು ಬಿಜೆಪಿ ನಾಯಕರಿಗೆ ಬಿಸಿತುಪ್ಪವಾಗಿದೆ.
ಶಿವಮೊಗ್ಗ ಕ್ಷೇತ್ರದ ಬಿಜೆಪಿಯ ಕಾರ್ಯಕರ್ತರು ಈಶ್ವರಪ್ಪ ಬೆಂಬಲಿಸುವುದೋ? ಅಥವ ಪಕ್ಷದ ಅಧಿಕೃತ ಅಭ್ಯರ್ಥಿಯಾದ ಬಿ. ವೈ. ರಾಘವೇಂದ್ರ ಬೆಂಬಲಿಸುವುದೋ? ಎಂಬ ಗೊಂದಲದಲ್ಲಿದ್ದಾರೆ.
ಒಂದು ಕಡೆ ಶಿವಮೊಗ್ಗದಲ್ಲಿ ಪ್ರಧಾನಿ ನರೇಂದ್ರ ಮೋದಿ ಸಮಾವೇಶಕ್ಕೆ ಆಹ್ವಾನ ನೀಡಿದರೂ ಸಹ ಗೈರಾಗುವ ಮೂಲಕ ಈಶ್ವರಪ್ಪ ಬಂಡಾಯದ ಬಾವುಟ ಹಾರಿಸಿದ್ದರು. ಮತ್ತೊಂದು ಕಡೆ ಕರ್ನಾಟಕ ಬಿಜೆಪಿ ಚುನಾವಣಾ ಉಸ್ತುವಾರಿ ರಾಧಾ ಮೋಹನ್ ದಾಸ್ ಅಗರ್ವಾಲ್ ಈಶ್ವರಪ್ಪ ಮನವೊಲಿಕೆ ಮಾಡುವ ಪ್ರಯತ್ನ ಮಾಡಿದರೂ ಅದು ಸಹ ಸಫಲವಾಗಿಲ್ಲ.
ಶಿವಮೊಗ್ಗ ಲೋಕಸಭಾ ಕ್ಷೇತ್ರದ ಮತದಾನಕ್ಕೆ ಏಪ್ರಿಲ್ 12ರಂದು ಅಧಿಸೂಚನೆ ಪ್ರಕಟವಾಗಲಿದೆ. ನಾಮಪತ್ರ ಸಲ್ಲಿಕೆಗೆ ಏಪ್ರಿಲ್ 19 ಕೊನೆಯ ದಿನವಾಗಿದೆ. ಅಷ್ಟರೊಳಗೆ ಬಿಜೆಪಿ ನಾಯಕರು ಅವರ ಮನವೊಲಿಕೆ ಮಾಡುತ್ತಾರೆಯೇ? ಕಾದು ನೋಡಬೇಕಿದೆ.












Click it and Unblock the Notifications