ಬಿಜೆಪಿ ವಿರುದ್ಧ ರೊಚ್ಚಿಗೆದ್ದ ಮೋದಿ ಪ್ರೀತಿಯ ರಾಮದಾಸ್: ನಾಳೆಯೇ ಗುಡ್‌ಬೈ?
ಮೈಸೂರು: ಕೆ.ಆರ್. ಕ್ಷೇತ್ರದ ಬಿಜೆಪಿ ಟಿಕೆಟ್ ಕೈತಪ್ಪುತ್ತಿದ್ದಂತೆ ಹಾಲಿ ಶಾಸಕ ರಾಮದಾಸ್ ಕೆಂಡಾಮಂಡಲರಾಗಿದ್ದು, ಬಿಜೆಪಿಗೆ ಗುಡ್‌ಬೈ ಹೇಳುವ ಸಾಧ್ಯತೆ ದಟ್ಟವಾಗಿದೆ. '30 ವರ್ಷಗಳಿಂದ ನಾನು ತಾಯಿ ಮನೆಯಲ್ಲಿದ್ದೆ. ಈಗ ನನ್ನನ್ನು ಹೊರ ಹಾಕಿದ್ದಾರೆ. ತಾಯಿ ಮನೆಯಲ್ಲಿ ಇರಬೇಕಾ ಬೇಡ್ವಾ ಅಂತಾ ನಾಳೆ ಸಂಜೆ ತಿಳಿಸುತ್ತೇನೆ.' ಎಂದು ಆಕ್ರೋಶ ಭರಿತರಾಗಿ ಮಾತನಾಡಿದ್ದಾರೆ ಮಾಜಿ ಸಚಿವ ರಾಮದಾಸ್.
ಮೈಸೂರಿನಲ್ಲಿ ಬಹಳ ಕುತೂಹಲ ಮೂಡಿಸಿದ್ದ ಕೆ.ಆರ್. ಕ್ಷೇತ್ರದ ಬಿಜೆಪಿ ಟಿಕೆಟ್ ಹಾಲಿ ಶಾಸಕ ಎಸ್.ಎ.ರಾಮದಾಸ್ ಕೈತಪ್ಪಿ ಶ್ರೀವತ್ಸ ಅವರಿಗೆ ಸಿಕ್ಕಿದೆ. ಟಿಕೆಟ್ ಘೋಷಣೆ ಆಗುತ್ತಿದ್ದಂತೆ ಮೈಸೂರು ಬಿಜೆಪಿಯಲ್ಲಿ ಸಂಚಲನ ಸೃಷ್ಟಿಯಾಗಿದ್ದು, ಬಿಜೆಪಿ ವರಿಷ್ಠರ ನಿರ್ಧಾರದ ವಿರುದ್ಧ ಎಸ್.ಎ.ರಾಮದಾಸ್ ತೀವ್ರ ಆಕ್ರೋಶ ಹೊರಹಾಕಿದ್ದಾರೆ. ಅಲ್ಲದೆ ನಾನು ಯಾರನ್ನೂ ಭೇಟಿ ಮಾಡಲ್ಲ. ಯಾರ ಜೊತೆಯೂ ಮಾತುಕತೆ ನಡೆಸಲ್ಲ. ಕಾರ್ಯಕರ್ತರ ಅಭಿಪ್ರಾಯ ಸಂಗ್ರಹಿಸಿ ನಿರ್ಣಯ ಕೈಗೊಳ್ಳುತ್ತೇನೆ ಎಂದಿರುವುದು ತೀವ್ರ ಕುತೂಹಲ ಮೂಡಿಸಿದೆ.

3 ಬಾರಿ ಬಿಜೆಪಿ ಶಾಸಕರಾಗಿ ಕೆ.ಆರ್. ಕ್ಷೇತ್ರದಿಂದ ಆಯ್ಕೆಯಾಗಿದ್ದ ಎಸ್.ಎ. ರಾಮದಾಸ್‌ಗೆ ಟಿಕೆಟ್ ನಿರಾಕರಿಸಲಾಗಿದೆ. ಬಿಜೆಪಿ ಮೊದಲ 2 ಪಟ್ಟಿಯಲ್ಲಿ ರಾಮದಾಸ್ ಹೆಸರು ಇಲ್ಲದಿದ್ದರೂ, 3ನೇ ಪಟ್ಟಿಯಲ್ಲಿ ಹೆಸರು ಘೋಷಣೆ ಆಗಬಹುದು ಎಂಬ ನಿರೀಕ್ಷೆ ದಟ್ಟವಾಗಿತ್ತು. ಅದರಲ್ಲೂ ಪ್ರಧಾನಿ ಮೋದಿ ಅವರ ಕೈಯಿಂದ ಬೆನ್ನು ತಟ್ಟಿಸಿಕೊಂಡಿದ್ದ ಮಾಜಿ ಸಚಿವ ಎಸ್.ಎ. ರಾಮದಾಸ್‌ಗೆ ಟಿಕೆಟ್ ಮಿಸ್ ಆಗುವುದಿಲ್ಲ ಎಂಬ ನಂಬಿಕೆ ಬಿಜೆಪಿ ಕಾರ್ಯಕರ್ತರಿಗೂ ಇತ್ತು. ಆದರೆ ಎಲ್ಲರಿಗೂ ಶಾಕ್ ನೀಡುವಂತಹ ನಿರ್ಧಾರ ಕೈಗೊಂಡಿದೆ ಬಿಜೆಪಿ ಹೈಕಮಾಂಡ್.
ಪ್ರತಾಪ್ ಸಿಂಹ ಬಂದರೂ ಭೇಟಿಯಾಗಿಲ್ಲ!
ಕೆ.ಆರ್. ಕ್ಷೇತ್ರದಿಂದ ಬಿಜೆಪಿ ಟಿಕೆಟ್ ಸಿಗದ ಹಿನ್ನೆಲೆ ಎಸ್.ಎ. ರಾಮದಾಸ್ ಅವರ ಕೋಪ ಹೇಗಿತ್ತು ಎಂದರೆ, ರಾಮದಾಸ್ ಅವರನ್ನು ಸಮಾಧಾನ ಮಾಡಲು ಬಂದಿದ್ದ ಸಂಸದ ಪ್ರತಾಪ ಸಿಂಹ ಹಾಗೂ ಕೆ.ಆರ್. ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಆಯ್ಕೆಯಾಗಿರುವ ಶ್ರೀವತ್ಸ ಅವರನ್ನು ಭೇಟಿ ಆಗಲು ಎಸ್.ಎ. ರಾಮದಾಸ್ ನಿರಾಕರಿಸಿದ್ದಾರೆ. ಇದರ ಜೊತೆಗೆ ತೀವ್ರ ಆಕ್ರೋಶ ವ್ಯಕ್ತಪಡಿಸುವ ಮೂಲಕ, ಬಿಜೆಪಿಗೆ ನುಂಗಲಾರದ ತುತ್ತಾಗುವ ಮುನ್ಸೂಚನೆ ನೀಡಿದ್ದಾರೆ. ಮತ್ತೊಂದು ಕಡೆ ನಾಳೆಯವರೆಗೂ ಡೆಡ್‌ಲೈನ್ ನೀಡಿರುವುದು ಸಂಚಲನ ಸೃಷ್ಟಿಸಿದೆ.

ರಾಮದಾಸ್ ನೆರವಿಗೆ ಬಾರದ ಪ್ರತಿಭಟನೆ!
ಅಷ್ಟಕ್ಕೂ ಎಸ್.ಎ. ರಾಮದಾಸ್ ಅವರಿಗೆ ಟಿಕೆಟ್ ಸಿಗುವುದು ತಡವಾಗುತ್ತಿದ್ದಂತೆ ಆಕ್ರೋಶ ಭುಗಿಲೆದ್ದಿತ್ತು. ಇದೇ ವಿಚಾರವಾಗಿ ಕಳೆದ 3 ದಿನಗಳಿಂದ ರಾಮದಾಸ್ ಬೆಂಬಲಿಗರು ಪ್ರತಿಭಟನೆ ಕೂಡ ನಡೆಸುತ್ತಿದ್ದರು. ಆದರೆ ರಾಮದಾಸ್ ಅಭಿಮಾನಿಗಳ ಪ್ರತಿಭಟನೆ ಕೂಡ ನೆರವಿಗೆ ಬಂದಿಲ್ಲ. ಬಿಜೆಪಿ ನಗರಾಧ್ಯಕ್ಷ ಶ್ರೀವತ್ಸ ಅವರಿಗೆ ವರಿಷ್ಠರು ಮಣೆ ಹಾಕುವ ಮೂಲಕ ಬಿಜೆಪಿ ವರಿಷ್ಠರು ಅಚ್ಚರಿಯ ಆಯ್ಕೆ ಮಾಡಿದ್ದಾರೆ. ಮತ್ತೊಂದು ಕಡೆ ಸಾಮಾನ್ಯ ಕಾರ್ಯಕರ್ತನಿಗೆ ಟಿಕೆಟ್ ನೀಡಿದ್ದಾರೆ ಎಂದು ಬಿಜೆಪಿ ಕಚೇರಿಯಲ್ಲಿ ಸಂಭ್ರಮಾಚರಣೆ ನಡೆಸಲಾಗಿದೆ. ಶ್ರೀವತ್ಸ ಬೆಂಬಲಿಗರು ಸಂತಸಗೊಂಡಿದ್ದಾರೆ.
ಒಟ್ನಲ್ಲಿ ನಿನ್ನೆಯಷ್ಟೇ ಜಗದೀಶ್ ಶೆಟ್ಟರ್ ಅವರ ರಾಜೀನಾಮೆಯಿಂದ ಬಿಜೆಪಿಗೆ ಬಿಗ್ ಶಾಕ್ ಸಿಕ್ಕಿತ್ತು. ಇದೀಗ ಮೈಸೂರು ಭಾಗದ ಪ್ರಭಾವಿ ಶಾಸಕರು ಕೂಡ ಬಿಜೆಪಿ ವರಿಷ್ಠರ ವಿರುದ್ಧ ಆಕ್ರೋಶ ಹೊರಹಾಕುತ್ತಿದ್ದಾರೆ. ಸ್ಥಳೀಯ ನಾಯಕರಿಗೆ ಈ ಬಂಡಾಯ ಶಮನ ಮಾಡುವುದು ಅಸಾಧ್ಯ ಎನ್ನಬಹುದು. ಹೀಗಾಗಿ ಜಗದೀಶ್ ಶೆಟ್ಟರ್ ವಿಚಾರದಲ್ಲಿ ಬಿಜೆಪಿ ಕೇಂದ್ರ ನಾಯಕರೇ ಮಧ್ಯಪ್ರವೇಶ ಮಾಡಿದರೆ, ರಾಮದಾಸ್ ವಿಚಾರದಲ್ಲೂ ಮಧ್ಯ ಪ್ರವೇಶ ಮಾಡುತ್ತಾರಾ. ಅಥವಾ ಜಗದೀಶ್ ಶೆಟ್ಟರ್ ರೀತಿಯೇ ರಾಮದಾಸ್ ನಿರ್ಧಾರ ಕೈಗೊಳ್ಳುತ್ತಾರಾ ಅನ್ನೋದನ್ನ ಕಾದು ನೋಡಬೇಕು. ಮತ್ತೊಂದು ಕಡೆ ಹಳೇ ಮೈಸೂರು ಭಾಗದಲ್ಲಿ ಈ ಬೆಳವಣಿಗೆ ಬಿಜೆಪಿಗೆ ಯಾವ ರೀತಿಯ ಪರಿಣಾಮ ಬೀರುತ್ತದೆ ಎಂಬುದು ಕೂಡ ಕುತೂಹಲ ಕೆರಳಿಸಿದೆ.












Click it and Unblock the Notifications