ಐಐಟಿ ಸ್ಥಾಪನೆ ಸ್ಪರ್ಧೆಗೆ ಸೇರಿಕೊಂಡ ಮೈಸೂರು
ಮೈಸೂರು, ಮಾ. 18 : ಕರ್ನಾಟಕದಲ್ಲಿ ಐಐಟಿ ಎಲ್ಲಿ ಸ್ಥಾಪನೆಯಾಗಬೇಕು ಎಂಬ ಬಗ್ಗೆ ಚರ್ಚೆ ತಾರಕಕ್ಕೇರಿದೆ. ಸದ್ಯ, ಮೈಸೂರು ಈ ಚರ್ಚೆಗೆ ಸೇರಿಕೊಂಡಿದೆ. ಐಐಟಿ ಸ್ಥಾಪನೆ ಮಾಡಲು ನಗರದ ಸುತ್ತ-ಮುತ್ತ ಸ್ಥಳಗಳನ್ನು ಗುರುತಿಸಲಾಗಿದೆ.
ಭಾರತೀಯ ತಂತ್ರಜ್ಞಾನ ಸಂಸ್ಥೆ (ಐಐಟಿ)ಯನ್ನು ಮೈಸೂರಿಗೆ ತರಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ವಿ.ಶ್ರೀನಿವಾಸ ಪ್ರಸಾದ್ ಪ್ರಯತ್ನ ನಡೆಸುತ್ತಿದ್ದಾರೆ. ನಗರದ 15 ರಿಂದ 20 ಕಿ.ಮೀ.ವ್ಯಾಪ್ತಿಯಲ್ಲಿ ಮೂರು ಸ್ಥಳಗಳನ್ನು ಗುರುತಿಸಲಾಗಿದೆ. ಸಾಂಸ್ಕೃತಿ ನಗರಿಗೆ ಐಐಟಿ ಬಂದರೆ ಪ್ರವಾಸೋದ್ಯಮಕ್ಕೂ ನೆರವಾಗಲಿದೆ ಎಂಬ ಲೆಕ್ಕಾಚಾರವಿದೆ. [ಐಐಟಿ ಹರಪನಹಳ್ಳಿಗೆ ಸಿಗಲಿ]

ಮೈಸೂರು-ಬಂಟ್ವಾಳ ಹೆದ್ದಾರಿ, ಬೋಗಾದಿ ರಸ್ತೆ ಮತ್ತು ಎಚ್.ಡಿ.ಕೋಟೆ ರಸ್ತೆಗಳಲ್ಲಿ ಮೂರು ಸ್ಥಳಗಳನ್ನು ಐಐಟಿ ನಿರ್ಮಿಸಲು ಗುರುತಿಸಲಾಗಿದೆ. ಸಚಿವ ಶ್ರೀನಿವಾಸ ಪ್ರಸಾದ್ ಅವರು ಈ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉನ್ನತ ಶಿಕ್ಷಣ ಸಚಿವ ಆರ್.ವಿ.ದೇಶಪಾಂಡೆ ಅವರ ಜೊತೆಗೂ ಚರ್ಚೆ ನಡೆಸಿದ್ದಾರೆ. [ಧಾರವಾಡದಲ್ಲಿ ಐಐಟಿಗೆ 500 ಎಕರೆ: ಗುಂಡೂರಾವ್]
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಹ ಐಐಟಿಯನ್ನು ತಮ್ಮ ತವರು ಜಿಲ್ಲೆಗೆ ಐಐಟಿಯನ್ನು ತರಲು ಆಸಕ್ತಿ ತೋರಿದ್ದಾರೆ. ಧಾರವಾಡ ಮತ್ತು ರಾಯಚೂರು ಜಿಲ್ಲೆಗಳ ಹೆಸರು ಐಐಟಿ ಸ್ಥಾಪನೆ ರೇಸ್‌ನಲ್ಲಿದ್ದು, ಇದಕ್ಕೆ ಈಗ ಮೈಸೂರು ಸೇರಿಕೊಂಡಿದೆ. [ಐಐಟಿ ಎಲ್ಲಿ ಸ್ಥಾಪನೆ ಆಗಬೇಕು? ಉತ್ತರ ಸಿಕ್ಕಿದೆ!]
ಧಾರವಾಡದ ಹೆಸರು ಐಐಟಿ ರೇಸ್‌ನಲ್ಲಿ ಪ್ರಬಲವಾಗಿದ್ದು ಪ್ರತಿಪಕ್ಷ ನಾಯಕ ಜಗದೀಶ್ ಶೆಟ್ಟರ್ ಮತ್ತು ಕರ್ನಾಟಕ ಬಿಜೆಪಿ ಅಧ್ಯಕ್ಷ ಪ್ರಹ್ಲಾದ್ ಜೋಶಿ ಜಿಲ್ಲೆಗೆ ಐಐಟಿ ತರಲು ಕೇಂದ್ರದ ಮಟ್ಟದಲ್ಲಿ ಪ್ರಯತ್ನ ನಡೆಸಬಹುದು. ಒಂದು ವೇಳೆ ಐಐಟಿ ಮೈಸೂರು ಪಾಲಾದರೆ ಸಿದ್ದರಾಮಯ್ಯ ಅವರು ಉತ್ತರ ಕರ್ನಾಟಕದ ವಿರೋಧಿ ಎಂಬ ಹಣೆಪಟ್ಟಿ ಬರಬಹುದು.
ಮೈಸೂರಿನಲ್ಲಿ ಐಐಟಿ ನಿರ್ಮಾಣ ಮಾಡಲು ಮೂರು ಸ್ಥಳಗಳನ್ನು ಗುರುತಿಸಲಾಗಿದೆ ಎಂದು ಜಿಲ್ಲಾಧಿಕಾರಿ ಸಿ.ಶಿಖಾ ಅವರು ಸ್ಪಷ್ಟಪಡಿಸಿದ್ದಾರೆ. ಮೈಸೂರು ಬೆಂಗಳೂರಿಗೆ ಹತ್ತಿರವಿರುವುರಿಂದ ಇಲ್ಲಿ ಇದು ಸೂಕ್ತ ಸ್ಥಳ ಎಂದು ಅವರು ಹೇಳಿದ್ದಾರೆ.












Click it and Unblock the Notifications