ಮೃತ ವೈದ್ಯನ ಕುಟುಂಬಕ್ಕೆ 50 ಲಕ್ಷ ರೂ. ಪರಿಹಾರ ಘೋಷಿಸಿದ ಸರ್ಕಾರ
ಮೈಸೂರು, ಆಗಸ್ಟ್ 21: ನಂಜನಗೂಡು ತಾಲ್ಲೂಕು ಆರೋಗ್ಯಾಧಿಕಾರಿ ಡಾ.ನಾಗೇಂದ್ರ ಅವರು ಆತ್ಮಹತ್ಯೆ ಮಾಡಿಕೊಂಡಿದ್ದ ಹಿನ್ನೆಲೆಯಲ್ಲಿ ಗುರುವಾರ ರಾತ್ರಿ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ ಸುಧಾಕರ್ ಅವರು ಮೈಸೂರಿಗೆ ಭೇಟಿ ನೀಡಿದರು.
ಮೈಸೂರು ನಗರದ ಡಿಎಚ್ಒ ಕಚೇರಿ ಎದುರು ಅಂತಿಮ ದರ್ಶನಕ್ಕೆ ಡಾ.ನಾಗೇಂದ್ರ ಅವರ ಪಾರ್ಥಿವ ಶರೀರ ಇರಿಸಲಾಗಿತ್ತು. ಅಲ್ಲಿಗೆ ಸಚಿವರು ಭೇಟಿ ನೀಡಿ ಅಂತಿಮ ದರ್ಶನ ಪಡೆದರು. ನಂತರ ಅವರ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.
ಮೈಸೂರು: ನಂಜನಗೂಡು ತಾಲೂಕು ಆರೋಗ್ಯಾಧಿಕಾರಿ ಆತ್ಮಹತ್ಯೆಗೆ ಶರಣು
ಇದಕ್ಕೂ ಮುನ್ನ ಮೈಸೂರಿನ ಅತಿಥಿ ಗೃಹದಲ್ಲಿ ಅಧಿಕಾರಿಗಳ ಜತೆ ಚರ್ಚೆ ನಡೆಸಿದ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ ಸುಧಾಕರ್ ಅವರು, ಮೈಸೂರು ಜಿಲ್ಲಾಧಿಕಾರಿ, ಸಂಸದ ಪ್ರತಾಪ್ ಸಿಂಹ, ಹಿರಿಯ ಪೊಲೀಸ್ ಅಧಿಕಾರಿಗಳಿಂದ ಮಾಹಿತಿ ಪಡೆದರು. ವೈದ್ಯ ಡಾ.ನಾಗೇಂದ್ರ ಆತ್ಮಹತ್ಯೆ ಖಂಡಿಸಿ ಮೃತದೇಹವಿಟ್ಟು ಪ್ರತಿಭಟನೆ ನಡೆಸುತ್ತಿದ್ದ ವೈದ್ಯರನ್ನೂ ಭೇಟಿ ಮಾಡಿ ಸಮಾಧಾನ ಪಡಿಸಿದರು.

ಡಾ.ನಾಗೇಂದ್ರ ಅವರ ನಿಧನಕ್ಕೆ ಸಂತಾಪ ಸೂಚಿಸಿರುವ ಸಚಿವ ಡಾ.ಕೆ.ಸುಧಾಕರ್ ಅವರು ಮೃತರ ಕುಟುಂಬಕ್ಕೆ 50 ಲಕ್ಷ ರೂ. ಪರಿಹಾರ ಘೋಷಿಸಿದ್ದಾರೆ. ಅಲ್ಲದೇ, ಈ ಪ್ರಕರಣವನ್ನು ಯಾರೂ ದುರುಪಯೋಗ ಪಡಿಸಿಕೊಳ್ಳಬಾರದು ಎಂದು ಮನವಿ ಮಾಡಿದ್ದಾರೆ.
ಇದಕ್ಕೂ ಮೊದಲು ನಂಜನಗೂಡು ತಾಲೂಕು ಆರೋಗ್ಯಾಧಿಕಾರಿ ಡಾ.ನಾಗೇಂದ್ರ ಅವರ ಆತ್ಮಹತ್ಯೆಗೆ ಮೈಸೂರು ಜಿಲ್ಲಾ ಪಂಚಾಯಿತಿ ಸಿಇಒ ಪ್ರಶಾಂತ್ ಕುಮಾರ್ ಮಿಶ್ರಾ ಕಾರಣ ಎಂದು ಆರೋಪಿಸಿ ಡಿಎಚ್ಒ ಕಚೇರಿ ಎದುರು ಸಂಬಂಧಿಕರು ಹಾಗೂ ವೈದ್ಯರು ಡಾ. ನಾಗೇಂದ್ರ ಅವರ ಮೃತದೇವನ್ನಿಟ್ಟು ಅಹೋರಾತ್ರಿ ಧರಣಿ ನಡೆಸಿದರು.

ಅನಗತ್ಯವಾಗಿ ಕೋವಿಡ್-19 ಆಂಟಿಜೆನ್ ಪರೀಕ್ಷೆ ನಡೆಸುವಂತೆ ಜಿಲ್ಲಾ ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ಒತ್ತಡ ಹಾಕುತ್ತಿದ್ದರು. ಸಿಇಒ ಮಿಶ್ರಾ ಕೊಡುತ್ತಿದ್ದ ಕೆಲಸದ ಒತ್ತಡವನ್ನು ನಿಭಾಯಿಸಲು ಖಾಲಿ ಹುದ್ದೆಗಳಿಂದ ಸಾಧ್ಯವಾಗುತ್ತಿರಲಿಲ್ಲ.
ಹೀಗಾಗಿ ಜಿ.ಪಂ ಸಿಇಒ ಪ್ರಶಾಂತ್ ಕುಮಾರ್ ಮಿಶ್ರಾ ಕಿರುಕುಳದಿಂದ ತಾಲ್ಲೂಕು ಆರೋಗ್ಯಧಿಕಾರಿ ಡಾ.ನಾಗೇಂದ್ರ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆಂದು ಸಂಬಂಧಿಕರು, ಸರ್ಕಾರಿ ಆಸ್ಪತ್ರೆ ವೈದ್ಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.












Click it and Unblock the Notifications