ಕೆ.ಆರ್.ಕ್ಷೇತ್ರ ಹಾಗೂ ಎಚ್.ಡಿ.ಕೋಟೆ ಹೊರತುಪಡಿಸಿ ಮೈಸೂರು ಜಿಲ್ಲೆಯ 9 ಕ್ಷೇತ್ರಗಳಿಗೆ ಬಿಜೆಪಿ ಟಿಕೆಟ್ ಘೋಷಣೆ, ವಿವರ ಇಲ್ಲಿದೆ
ಮೈಸೂರು, ಏಪ್ರಿಲ್, 12: ಕರ್ನಾಟಕ ವಿಧಾನಸಭೆ ಸಾರ್ವತ್ರಿಕ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ 189 ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿದ್ದು, ಮೈಸೂರು ಜಿಲ್ಲೆಯ 11 ಕ್ಷೇತ್ರಗಳಲ್ಲಿ 9 ಕ್ಷೇತ್ರಗಳ ಅಭ್ಯರ್ಥಿಗಳನ್ನು ಘೋಷಿಸಿದೆ. ಮಹಿಳಾ ಅಭ್ಯರ್ಥಿಗೆ ಮಣೆ ಹಾಕದ ಬಿಜೆಪಿಯು, ಯುವಜನರಿಗೆ ಹೆಚ್ಚು ಆದ್ಯತೆ ನೀಡಿದೆ.
ರಾಜ್ಯದ ಗಮನ ಸೆಳೆದಿರುವ ವರುಣ ಕ್ಷೇತ್ರದಿಂದ ವಿ.ಸೋಮಣ್ಣ ಅವರಿಗೆ ಟಿಕೆಟ್ ಘೋಷಿಸಿ ಬಿಜೆಪಿ ಅಚ್ಚರಿ ಮೂಡಿಸಿದೆ. ಹಾಗೆಯೇ ವಿ.ಸೋಮಣ್ಣ ಅವರಿಗೆ ಚಾಮನಗರದಲ್ಲೂ ಟಿಕೆಟ್ ಘೋಷಣೆ ಆಗಿದ್ದು, ಎರಡು ಕ್ಷೇತ್ರದಲ್ಲಿ ಸೋಮಣ್ಣ ಸ್ಪರ್ಧಿಸುತ್ತಿದ್ದಾರೆ. ವಿ.ಸೋಮಣ್ಣ ಸ್ಪರ್ಧೆಯಿಂದ ವರುಣ ಕಣ ರಂಗೇರಿದ್ದು, ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೆ ಟಾಂಗ್ ನೀಡಲು ಬಿಜೆಪಿ ಹೊಸ ಅಸ್ತ್ರ ಪ್ರಯೋಗಿಸಿದೆ. ಮತ್ತೊಂದೆಡೆ ಕೆ.ಆರ್.ಕ್ಷೇತ್ರ ಹಾಗೂ ಎಚ್.ಡಿ.ಕೋಟೆ ಕ್ಷೇತ್ರಗಳಿಗೆ ಬಿಜೆಪಿ ಇನ್ನೂ ಟಿಕೆಟ್ ಘೋಷಣೆ ಮಾಡಿಲ್ಲ.

ಟಿಕೆಟ್ ಘೋಷಣೆಯಾದ ಕ್ಷೇತ್ರಗಳ ವಿವರ
ಮೈಸೂರು ಜಿಲ್ಲೆಯ ಕೆ.ಆರ್.ಕ್ಷೇತ್ರ ಹಾಗೂ ಎಚ್.ಡಿ.ಕೋಟೆ ಹೊರತುಪಡಿಸಿ ಚಾಮರಾಜ, ನರಸಿಂಹರಾಜ, ಕೃಷ್ಣರಾಜ, ವರುಣಾ, ತಿ.ನರಸೀಪುರ, ನಂಜನಗೂಡು, ಹುಣಸೂರು, ಪಿರಿಯಾಪಟ್ಟಣ ಮತ್ತು ಚಾಮುಂಡೇಶ್ವರಿ ಕ್ಷೇತ್ರಗಳಿಗೆ ಬಿಜೆಪಿ ಟಿಕೆಟ್ ಘೋಷಣೆ ಮಾಡಿದೆ.
ರಂಗೇರಿದ ವರುಣ ವಿಧಾನಸಭಾ ಕ್ಷೇತ್ರ
ವರುಣ ಕ್ಷೇತ್ರ ಕಳೆದ ಬಾರಿ ವಿಧಾನಸಭೆ ಚುನಾವಣೆಯಲ್ಲೇ ರಾಜ್ಯರ ಗಮನ ಸೆಳೆದಿತ್ತು. ಸಿಎಂಗಳಿಬ್ಬರ ಮಕ್ಕಳು ಎದುರಾಳಿಗಳಾಗಬಹುದೆಂದು ಬಹುತೇಕರು ಅಂದಾಜಿಸಿದ್ದರು. ಆದರೆ, ಸಿದ್ದರಾಮಯ್ಯ ಅವರ ಪುತ್ರ ಡಾ.ಯತೀಂದ್ರ ಸಿದ್ದರಾಮಯ್ಯ ವಿರುದ್ಧ ಯಡಿಯೂರಪ್ಪ ಅವರ ಪುತ್ರ ಬಿ.ವೈ.ವಿಜಯೇಂದ್ರ ಸ್ಪರ್ಧಿಸುತ್ತಾರೆ ಎನ್ನಲಾಗಿತ್ತು. ಕಡೇ ಕ್ಷಣದಲ್ಲಿ ಅದು ಸುಳ್ಳಾಗಿದೆ. ಆದರೆ, ಈ ಬಾರಿ ಯತೀಂದ್ರ ತಂದೆಗಾಗಿ ಕ್ಷೇತ್ರ ತ್ಯಾಗ ಮಾಡಿದ ಪರಿಣಾಮ ಸಿದ್ದರಾಮಯ್ಯ ಮತ್ತೆ ವರುಣ ಕ್ಷೇತ್ರಕ್ಕೆ ಬಂದಿದ್ದಾರೆ. ಈ ಹಿನ್ನೆಲೆ ಇದೀಗ ಸೋಮಣ್ಣ ಸ್ಪರ್ಧೆಯಿಂದ ಕ್ಷೇತ್ರ ಚುನಾವಣಾ ಕಣ ಮತ್ತಷ್ಟು ರಂಗೇರಿದೆ.

ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಭಾರಿ ಪೈಪೋಟಿ
ಇನ್ನು ಮಾಜಿ ಶಾಸಕ, ಕಾಂಗ್ರೆಸ್ ಮುಖಂಡ ವಾಸು ಪುತ್ರ ಕವೀಶ್ ಗೌಡ ಅವರಿಗೆ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಬಿಜೆಪಿ ಟಿಕೆಟ್ ಘೋಷಿಸಿದೆ. ಜೆಡಿಎಸ್‌ನಿಂದ ಜಿ.ಟಿ.ದೇವೇಗೌಡ ಅವರು ಇಲ್ಲಿ ಸ್ಪರ್ಧಿಸುತ್ತಿದ್ದು, ಪೈಪೋಟಿ ಜೋರಾಗಿಯೇ ಇದೆ. ಇನ್ನು ಕಾಂಗ್ರೆಸ್‌ನಿಂದ ಮಾವಿನಹಳ್ಳಿ ಸಿದ್ದೇಗೌಡ ಅವರಿಗೆ ಟಿಕೆಟ್ ನೀಡಲಾಗಿದೆ.
ಕ್ಷೇತ್ರವಾರು ಅಭ್ಯರ್ಥಿಗಳ ವಿವರ
ಇನ್ನು ನರಸಿಂಹರಾಜ ಕ್ಷೇತ್ರದಿಂದ ಸಂದೇಶ್ ಸ್ವಾಮಿಗೆ ಬಿಜೆಪಿ ಟಿಕೆಟ್ ಘೋಷಿಸಿದೆ. ಕಾಂಗ್ರೆಸ್‌ನಿಂದ ತನ್ವೀರ್ ಸೇಠ್ 6ನೇ ಬಾರಿ ಗೆಲುವಿಗಾಗಿ ತೊಡೆ ತಟ್ಟಿ ನಿಂತಿದ್ದಾರೆ. ಹಾಗೆಯೇ ಚಾಮರಾಜ ಕ್ಷೇತ್ರದಿಂದ ಹಾಲಿ ಶಾಸಕ ನಾಗೇಂದ್ರ, ತಿ. ನರಸೀಪುರದಿಂದ ಡಾ. ರೇವಣ್ಣ, ಪಿರಿಯಾಪಟ್ಟಣದಿಂದ- ಸಿ.ಎಚ್. ವಿಜಯಶಂಕರ್, ಕೆಆರ್ ನಗರ ವೆಂಕಟೇಶ್ ಹೊಸಹಳ್ಳಿ, ನಂಜನಗೂಡು ಕ್ಷೇತ್ರದಿಂದ ಹಾಲಿ ಶಾಸಕ ಹರ್ಷವರ್ಧನ್ ಅವರಿಗೆ ಟಿಕೆಟ್ ನೀಡಲಾಗಿದೆ.
ಇನ್ನು ಕಾಂಗ್ರೆಸ್ ಇತ್ತೀಚಿಗೆ ನಿಧನರಾದ ಮಾಜಿ ಸಂಸದ ಧ್ರುವನಾರಾಯಣ್ ಅವರ ಪುತ್ರ ದರ್ಶನ್ ಧ್ರುವನಾರಾಯಣ್ ಅವರಿಗೆ ಟಿಕೆಟ್ ನೀಡಿದೆ.












Click it and Unblock the Notifications