Somanna vs Siddaramaiah: ವರುಣಾದಲ್ಲಿ ಸಂತೋಷ್ ಠಿಕಾಣಿ; ನಿರ್ಧಾರ ಬದಲಿಸಿ ಕ್ಷೇತ್ರಕ್ಕೆ ದೌಡಾಯಿಸಿದ ಸಿದ್ದು!
2023ರ ಕರ್ನಾಟಕ ವಿಧಾನಸಭೆ ಚುನಾವಣೆ ಭಾರೀ ಜಿದ್ದಾಜಿದ್ದಿನಿಂದ ಕೂಡಿದ್ದು, ಕೆಲವೇ ದಿನಗಳಲ್ಲಿ ಮತದಾನ ನಡೆಯಲಿದೆ. ಆ ಬಳಿಕ ರಾಜ್ಯದಲ್ಲಿ ಹೊಸ ಸರ್ಕಾರ ರಚನೆಯಾಗಲಿದೆ. ಈ ಬಾರಿ ದೇಶದ ಗಮನ ಸೆಳೆದಿರುವ ಕ್ಷೇತ್ರಗಳಲ್ಲಿ ಮೈಸೂರು ಜಿಲ್ಲೆಯ ವರುಣಾ ಕ್ಷೇತ್ರವೂ ಒಂದು.
ಕೋಲಾರದಿಂದ ಕಾಂಗ್ರೆಸ್ ಟಿಕೆಟ್ ಕೈತಪ್ಪಿದ ನಂತರ 2023ರ ವಿಧಾನಸಭೆ ಚುನಾವಣೆಯಲ್ಲಿ ತವರು ಕ್ಷೇತ್ರ ವರುಣಾದಿಂದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪರ್ಧಿಸುತ್ತಿದ್ದಾರೆ. 2018ರಲ್ಲಿ ಕಾಂಗ್ರೆಸ್‌ನಿಂದ ಯತೀಂದ್ರ ಸಿದ್ದರಾಮಯ್ಯ ಅವರು ಗೆಲುವು ಸಾಧಿಸಿದ್ದರು.

ಇತ್ತ ಬಿಜೆಪಿಯಿಂದ ಅಭ್ಯರ್ಥಿಯಾಗಿ ವಿ. ಸೋಮಣ್ಣ ಸ್ಪರ್ಧಿಸುತ್ತಿದ್ದು, ಚಾಮರಾಜನಗರದ ಜೊತೆಗೆ ವರುಣಾದಲ್ಲಿಯೂ ವಿ. ಸೋಮಣ್ಣ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ.
ವರುಣಾ ಕ್ಷೇತ್ರದಲ್ಲಿ ಸುಲಭವಾಗಿ ಗೆಲ್ಲುತ್ತೇನೆ ಎಂದುಕೊಂಡಿದ್ದ ಸಿದ್ದರಾಮಯ್ಯಗೆ ಇದೀಗ ಸೋಲಿನ ಭೀತಿ ಎದುರಾಗಿದೆ. ಎದುರಾಳಿ ಅಭ್ಯರ್ಥಿ ವಿ. ಸೋಮಣ್ಣ ಅವರಿಗೆ ಬಿಜೆಪಿ ನಾಯಕರು ಸಾಥ್ ನೀಡುತ್ತಿರುವುದು ಸಿದ್ದರಾಮಯ್ಯರನ್ನು ನಿದ್ದೆಗೇಡಿಸಿದೆ.

ಪ್ರಚಾರಕ್ಕೆ ಒಂದೆರಡು ಬಾರಿ ಮಾತ್ರ ಬರುತ್ತೇನೆ
ಇದೇ ತಮ್ಮ ಕೊನೆಯ ಚುನಾವಣೆ ಎಂದು ತವರು ಕ್ಷೇತ್ರ ವರುಣಾ ಕ್ಷೇತ್ರಕ್ಕೆ ನಾಮಪತ್ರ ಸಲ್ಲಿಸಿದ ಸಿದ್ದರಾಮಯ್ಯ, "ರಾಜ್ಯಾದಂತ್ಯ ಕಾಂಗ್ರೆಸ್ ಅಭ್ಯರ್ಥಿಗಳ ಪರ ಪ್ರಚಾರ ಮಾಡಬೇಕಿರುವುದರಿಂದ, ವರುಣಾ ಕ್ಷೇತ್ರದಲ್ಲಿ ಚುನಾವಣಾ ಪ್ರಚಾರಕ್ಕೆ ಒಂದೆರಡು ಬಾರಿ ಮಾತ್ರ ಬರುತ್ತೇನೆ. ತಮ್ಮ ಪುತ್ರ ಯತೀಂದ್ರ ಸಿದ್ದರಾಮಯ್ಯ ಪ್ರಚಾರದ ಜವಾಬ್ದಾರಿ ನೋಡಿಕೊಳ್ಳುತ್ತಾರೆ," ಎಂದು ಹೇಳಿದ್ದರು.
ಆದರೆ, ಕಳೆದ ನಾಲ್ಕೈದು ದಿನಗಳಿಂದ ವರುಣಾ ಕ್ಷೇತ್ರದ ಚಿತ್ರಣ ಬದಲಾಗುತ್ತಿದ್ದು, ಬಿಜೆಪಿ ಅಭ್ಯರ್ಥಿ ವಿ. ಸೋಮಣ್ಣ ಬಿರುಸಿನ ಪ್ರಚಾರ ಮಾಡುತ್ತಿದ್ದಾರೆ. ಕ್ಷೇತ್ರದಲ್ಲಿ ಮನೆಮನೆ ಪ್ರಚಾರ, ಕಾಂಗ್ರೆಸ್ ಅಸಮಾಧಾನಿತರನ್ನು ಭೇಟಿಯಾಗುತ್ತಿದ್ದಾರೆ. ತವರಿನಲ್ಲಿ ತಮಗೆ ವಿ. ಸೋಮಣ್ಣ ಪೈಪೋಟಿ ನೀಡುತ್ತಿರುವುದು ಸಿದ್ದರಾಮಯ್ಯ ಗಮನಕ್ಕೂ ಬಂದಿದೆ.
ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಅವರು ವರುಣಾ ಕ್ಷೇತ್ರಕ್ಕೆ ಭೇಟಿ ನೀಡಿ, ಡಿಜಿಟಲ್ ಕಾರ್ಯಕರ್ತರ ಸಮಾವೇಶ ಹಮ್ಮಿಕೊಂಡಿದ್ದರು. ಈ ವೇಳೆ ಕ್ಷೇತ್ರದ ಸಂಪೂರ್ಣ ಮಾಹಿತಿ ಪಡೆದಿರುವ ಅವರು, ಸಿದ್ದರಾಮಯ್ಯನವರನ್ನು ಸೋಲಿಸಲು ತಂತ್ರ ರೂಪಿಸುತ್ತಿದ್ದಾರೆ.
ಬಿ.ವೈ. ವಿಜಯೇಂದ್ರ ಭರ್ಜರಿ ರೋಡ್ ಶೋ
ಇದಕ್ಕೂ ಒಂದು ದಿನದ ಹಿಂದೆ ವಿ. ಸೋಮಣ್ಣ ಪರ ರಾಜ್ಯ ಬಿಜೆಪಿ ಉಪಾಧ್ಯಕ್ಷ ಹಾಗೂ ಬಿ.ಎಸ್. ಯಡಿಯೂರಪ್ಪ ಪುತ್ರ ಬಿ.ವೈ. ವಿಜಯೇಂದ್ರ ಭರ್ಜರಿ ರೋಡ್ ಶೋ ನಡೆಸಿದ್ದರು. ವರುಣಾ ಕ್ಷೇತ್ರದಲ್ಲಿ ವಿಜಯೇಂದ್ರ ಸ್ಪರ್ಧೆಗೆ ಭಾರೀ ಒತ್ತಾಯವಿತ್ತು ಎಂಬುದು ಗಮನಾರ್ಹ.
ಬಿ.ವೈ. ವಿಜಯೇಂದ್ರ ಮತ್ತು ಬಿ.ಎಲ್. ಸಂತೋಷ್ ಅವರು ವರುಣಾ ಕ್ಷೇತ್ರಕ್ಕೆ ಎಂಟ್ರಿ ಕೊಟ್ಟಾಗಿನಿಂದ ಮಾಜಿ ಸಿಎಂ ಸಿದ್ದರಾಮಯ್ಯ ಫುಲ್ ಟೆನ್ಶನ್ ಆಗಿದ್ದಾರೆ. ಕಾಂಗ್ರೆಸ್‌ನ ಮುಖ್ಯಮಂತ್ರಿ ಆಕಾಂಕ್ಷಿಗಳಲ್ಲಿ ಒಬ್ಬರಾಗಿರುವ ಸಿದ್ದರಾಮಯ್ಯನವರಿಗೆ ಸ್ಪರ್ಧಿಸಿರುವ ಒಂದು ಕ್ಷೇತ್ರದಲ್ಲಿ ಸೋಲಿನ ಭೀತಿ ಎದುರಾಗಿದೆ.
ಹೀಗಾಗಿ, ವರುಣಾದಲ್ಲಿ ತಾವು ಪ್ರಚಾರ ನಡೆಸುವುದಿಲ್ಲ ಎಂಬ ನಿರ್ಧಾರವನ್ನು ಎರಡೇ ದಿನದಲ್ಲಿ ಬದಲಾಯಿಸಿ, ಕ್ಷೇತ್ರದ 13 ಗ್ರಾಮಗಳಲ್ಲಿ ಪ್ರಚಾರ ನಡೆಸಿದ್ದಾರೆ. ಪ್ರಚಾರ ನಡೆಸದೆ ಗೆಲುವು ಸುಲಭವಿಲ್ಲ ಎಂಬುದನ್ನು ಸಿದ್ದರಾಮಯ್ಯ ಮನಗಂಡಿದ್ದು, ಕ್ಷೇತ್ರದ ಮತದಾರರನ್ನು ಸಂಪರ್ಕಿಸಲು ಪ್ರಯತ್ನಿಸುತ್ತಿದ್ದಾರೆ.
ನನ್ನನ್ನು ಸೋಲಿಸಲೆಂದೇ ಸಂತೋಷ್ ಬಂದಿದ್ದಾರೆ
ಶನಿವಾರ ಪ್ರಚಾರದ ವೇಳೆ ಮಾತನಾಡಿದ ಮಾಜಿ ಸಿಎಂ ಸಿದ್ದರಾಮಯ್ಯ, "ನನ್ನನ್ನು ಹೇಗಾದರೂ ಮಾಡಿ ಸೋಲಿಸಬೇಕೆಂದೆ ಬಿಜೆಪಿ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್ ವರುಣಾ ವಿಧಾನಸಭೆ ಕ್ಷೇತ್ರಕ್ಕೆ ಬಂದಿದ್ದಾರೆ. ಬಿ.ಎಲ್. ಸಂತೋಷ್ ಅವರೇ ವಿ. ಸೋಮಣ್ಣರನ್ನು ವರುಣಾಗೆ ಕರೆತಂದು ನಿಲ್ಲಿಸಿದ್ದಾರೆ," ಎಂದು ಹೇಳಿದರು.
"ಬಿ.ಎಲ್. ಸಂತೋಷ್ ಆರ್ಎಸ್ಎಸ್ ವ್ಯಕ್ತಿ. ನನಗೆ ಅವರ ಬಗ್ಗೆ ವೈಯಕ್ತಿಕವಾಗಿ ದ್ವೇಷವಿಲ್ಲ, ನಾನು ಕೋಲಾರದಿಂದ ಸ್ಪರ್ಧಿಸುತ್ತೇನೆ ಎಂದಾಗ ಅಲ್ಲಿಗೂ ಬಂದಿದ್ದರು. ಈಗ ವರುಣಾ ಕ್ಷೇತ್ರಕ್ಕೆ ಬಂದು ನನ್ನ ವಿರುದ್ಧ ಕೆಲಸ ಮಾಡುತ್ತಿದ್ದಾರೆ. ಅವರು ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ," ಎಂದು ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದರು.












Click it and Unblock the Notifications