ಕರ್ನಾಟಕ ವಿಧಾನಸಭಾ ಚುನಾವಣಾ ಫಲಿತಾಂಶ: ಮೈಸೂರು ಜಿಲ್ಲೆಯಲ್ಲಿ 12 ಸಾವಿರ ನೋಟಾ ಚಲಾವಣೆ
ಮೈಸೂರು, ಮೇ 17: ರಾಜ್ಯ ವಿಧಾನಸಭೆ ಚುನಾವಣೆ ಮುಕ್ತಾಯ ಕಂಡಿದೆ. ಫಲಿತಾಂಶ ಕೂಡ ಪ್ರಕಟಕೊಂಡಿದ್ದು, ಕಾಂಗ್ರೆಸ್ ಸರ್ಕಾರ ರಚನೆಗೆ ಮುಂದಾಗಿದೆ. ಈ ನಡುವೆ ಯಾವ ಅಭ್ಯರ್ಥಿ ಬಗ್ಗೆಯೂ ಆಸಕ್ತಿ, ವಿಶ್ವಾಸ ಇಲ್ಲದೆ ಮೈಸೂರು ಜಿಲ್ಲೆಯ 11 ವಿಧಾನಸಭಾ ಕ್ಷೇತ್ರದಲ್ಲಿ 12 ಸಾವಿರ ಮಂದಿ ನೋಟಾ ಮತ ಚಲಾವಣೆ ಮಾಡಿದ್ದಾರೆ.
ಪ್ರತಿಯೊಬ್ಬರು ಮತದಾನ ಮಾಡಬೇಕು, ಮತ ಪ್ರಮಾಣ ಹೆಚ್ಚಾಬೇಕೆಂಬ ಉದ್ದೇಶದಿಂದ ಚುನಾವಣಾ ಆಯೋಗ ಪರಿಚಯಿಸಿದ ನೋಟಾ ಇತ್ತೀಚಿನ ಚುನಾವಣೆಯಲ್ಲಿ ಹೆಚ್ಚು ಸದ್ದು ಮಾಡುತ್ತಿದ್ದು, ಸಾಕಷ್ಟು ಮತದಾರರು ಇದನ್ನು ಬಳಕೆ ಮಾಡಲು ಪ್ರಾರಂಭಿಸಿದ್ದಾರೆ.

ನೋಟಾ ಯಾವುದೇ ಕ್ಷೇತ್ರಗಳ ಫಲಿತಾಂಶದ ಮೇಲೆ ಗಂಭೀರ ಪರಿಣಾಮ ಬೀರದೆ ಇದ್ದರೂ ಹಲವು ಕ್ಷೇತ್ರಗಳಲ್ಲಿ ಅಭ್ಯರ್ಥಿಗಳ ಸೋಲು-ಗೆಲುವಿನ ಅಂತರವನ್ನು ಹೆಚ್ಚು ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದೆ.
2018ರ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ 16 ಸಾವಿರ ಮಂದಿ ನೋಟಾ ಪ್ರಯೋಗ ಮಾಡಿದ್ದರು. ಆದರೆ, ಈ ಬಾರಿ ಆ ಸಂಖ್ಯೆ ಕ್ಷೀಣಿಸಿದ್ದು, ಮೈಸೂರು ಜಿಲ್ಲೆಯಲ್ಲಿ 12,575 ಮಂದಿ ನೋಟಾ ಮತ ಚಲಾವಣೆ ಮಾಡಿದ್ದಾರೆ.

ಏನಿದು ನೋಟಾ ಮತ?
2013ರಲ್ಲಿ ದೇಶದಲ್ಲೇ ಪ್ರಥಮ ಬಾರಿಗೆ ಚುನಾವಣೆಯಲ್ಲಿ ನೋಟಾ ಆಯ್ಕೆ ಪರಿಚಯಿಸಲಾಯಿತು. ಛತ್ತೀಸ್‌ಗಢ, ಮಿಜೋರಾಂ, ದಿಲ್ಲಿ, ರಾಜಸ್ಥಾನ ಹಾಗೂ ಮಧ್ಯಪ್ರದೇಶದ ಪಂಚರಾಜ್ಯ ಚುನಾವಣೆಯಲ್ಲಿ ಇವಿಎಂ ಯಂತ್ರದ ಕೊನೆಯ ಆಯ್ಕೆಯಾಗಿ ನೋಟಾ ಸೇರಿಸಲಾಯಿತು. 2019ರ ಲೋಕಸಭೆ ಚುನಾವಣೆಯಲ್ಲೂ ನೋಟಾ ಆಯ್ಕೆ ಇತ್ತು. ಒಂದು ವೇಳೆ ಚುನಾವಣೆಯಲ್ಲಿ ನೋಟಾ ಮತಗಳೇ ಹೆಚ್ಚಾದರೆ ಹೆಚ್ಚು ಮತ ಪಡೆದ ಅಭ್ಯರ್ಥಿ ಆಯ್ಕೆ ಮಾಡಲಾಗುತ್ತದೆ. ಯಾವುದೇ ರೀತಿಯ ಮರು ಚುನಾವಣೆಗೆ ಅವಕಾಶವಿರುವುದಿಲ್ಲ ಎಂದು ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದೆ.
ಮೈಸೂರಿನಲ್ಲಿ ಎಲ್ಲೆಲ್ಲಿ ಎಷ್ಟು ನೋಟಾ ಚಲಾವಣೆ?
ಜೆಡಿಎಸ್‌ನ ಜಿ.ಟಿ.ದೇವೇಗೌಡ, ಕಾಂಗ್ರೆಸ್‌ನ ಮಾವಿನಹಳ್ಳಿ ಸಿದ್ದೇಗೌಡ ಹಾಗೂ ಬಿಜೆಪಿಯ ಕವೀಶ್ ಗೌಡ ಸ್ಪರ್ಧಿಸಿದ್ದ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಅತಿ ಹೆಚ್ಚು 2,220 ಮಂದಿ ನೋಟಾಗೆ ಮತ ಚಲಾಯಿಸಿದ್ದಾರೆ. ಅದನ್ನು ಹೊರತುಪಡಿಸಿದರೆ ದರ್ಶನ್ ಧ್ರುವನಾರಾಯಣ ಹಾಗೂ ಹರ್ಷವರ್ಧನ್ ಸ್ಪರ್ಧಿಸಿದ್ದ ನಂಜನಗೂಡು ಮೀಸಲು ಕ್ಷೇತ್ರದಲ್ಲಿ 1,452 ಮತದಾರರು ನೋಟಾ ಆಯ್ಕೆ ಮಾಡಿದ್ದಾರೆ. ಇಲ್ಲಿ ಸ್ಪರ್ಧಿಸಿದ್ದ 10 ಸ್ಪರ್ಧಿಗಳ ವೋಟು ಸಾವಿರಕ್ಕಿಂತ ಕಡಿಮೆ ಇದೆ. ಅಂದರೆ ಅಭ್ಯರ್ಥಿಗಳಿಗಿಂತ ನೋಟಾ ವೋಟೇ ಹೆಚ್ಚಾಗಿದೆ.
ಉಳಿದಂತೆ ತಿ.ನರಸೀಪುರದಲ್ಲಿ 1,335, ಕೃಷ್ಣರಾಜದಲ್ಲಿ 1,306, ನರಸಿಂಹರಾಜದಲ್ಲಿ 1,209, ಎಚ್.ಡಿ.ಕೋಟೆಯಲ್ಲಿ 1,184, ಚಾಮರಾಜದಲ್ಲಿ 1,181, ಹುಣಸೂರಿನಲ್ಲಿ 894, ವರುಣ ಕ್ಷೇತ್ರದಲ್ಲಿ 634, ಪಿರಿಯಾಪಟ್ಟಣದಲ್ಲಿ 621 ಹಾಗೂ ಕೆ.ಆರ್.ನಗರ ಕ್ಷೇತ್ರದಲ್ಲಿ 539 ಮತದಾರರು ಯಾವುದೇ ಅಭ್ಯರ್ಥಿಗಳಿಗೆ ಮಣೆ ಹಾಕದೆ ನೋಟಾ ಬಟನ್ ಒತ್ತುವ ಮೂಲಕ ತಮ್ಮ ಹಕ್ಕು ಚಲಾವಣೆ ಮಾಡಿದ್ದಾರೆ.












Click it and Unblock the Notifications