Karnataka election 2023: ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ಸೋಮಣ್ಣ ಒಡೆದ ಕಾಯಿ ಹೋಳಾಗಲಿಲ್ಲ, ಕೇಳಿಬರುತ್ತಿದೆ ಅಪಶಕುನದ ಮಾತು
ಮೈಸೂರು, ಏಪ್ರಿಲ್, 14: ವರುಣ ಕ್ಷೇತ್ರದಲ್ಲಿ ಚುನಾವಣಾ ಕಾವು ಜೋರಾಗಿದ್ದು, ಬಿಜೆಪಿ ಅಭ್ಯರ್ಥಿ ವಿ.ಸೋಮಣ್ಣ ಈಗಾಗಲೇ ಪ್ರಚಾರ ಆರಂಭಿಸಿದ್ದಾರೆ. ಇದೀಗ ಚಾಮುಂಡಿ ಬೆಟ್ಟದಲ್ಲಿ ನಡೆದ ಘಟನೆ ರಾಜಕೀಯ ವಲಯದಲ್ಲಿ ಹೆಚ್ಚು ಚರ್ಚೆ ಹುಟ್ಟುಹಾಕಿದೆ.
ಚುನಾವಣಾ ಪ್ರಚಾರ ಆರಂಭಿಸುವ ಮುನ್ನ ಸಚಿವ ವಿ.ಸೋಮಣ್ಣ ಸಂಸದ ಪ್ರತಾಪಸಿಂಹ ಜೊತೆಗೂಡಿ ಚಾಮುಂಡಿ ಬೆಟ್ಟದಲ್ಲಿ ತಾಯಿ ಚಾಮುಂಡೇಶ್ವರಿ ದರ್ಶನ ಪಡೆದರು. ನಂತರ ಹೊರಗಡೆ ಇಡುಕಾಯಿ ಒಡೆಯಲು ಸೋಮಣ್ಣ ಮುಂದಾದರು. ಆದರೆ, ಮೊದಲ ಸಲ ತೆಂಗಿನಕಾಯಿ ಹೋಳಾಗಲಿಲ್ಲ. ಇದರಿಂದ ವಿಚಲಿತರಾದ ವಿ.ಸೋಮಣ್ಣ ಮತ್ತೊಮ್ಮೆ ತೆಂಗಿನಕಾಯಿ ಒಡೆದಿದ್ದು, ಆಗ ಕಾಯಿ ಹೋಳಾಯಿತು. ಮೊದಲ ಸಲ ಕಾಯಿ ಹೋಳಾಗದೆ ಇದ್ದ ಕಾರಣ ಏನೋ ಅಪಶಕುನ ಆಗಿದೆ ಎಂದು ಸೋಮಣ್ಣ ಆಪ್ತರು ಮಾತನಾಡಿಕೊಳ್ಳುತ್ತಿದ್ದರು.

ಕಾಪು ಭೇಟಿ ಮಾಡಿದ ಸೋಮಣ್ಣ
ವರುಣಾ ಕ್ಷೇತ್ರದಲ್ಲಿ ವಿ.ಸೋಮಣ್ಣ ಭರ್ಜರಿ ಪ್ರಚಾರ ನಡೆಸುವ ಮುನ್ನ ಶುಕ್ರವಾರ ಮಾಜಿ ಸಿಎಂ ಯಡಿಯೂರಪ್ಪ ಆಪ್ತ ಕಾಪು ಸಿದ್ದಲಿಂಗಸ್ವಾಮಿ ನಿವಾಸಕ್ಕೆ ಭೇಟಿ ನೀಡಿ ಮಾತುಕತೆ ನಡೆಸಿದ್ದಾರೆ. ಅಲ್ಲದೆ, ವರುಣ ವಿಧಾನಸಭಾ ಕ್ಷೇತ್ರದಲ್ಲಿ ಕಾಪು ಬೆಂಬಲವನ್ನು ಕೇಳಿದ್ದಾರೆ. ಈ ಹಿಂದೆ ಸಿದ್ದರಾಮಯ್ಯ ವಿರುದ್ಧ ಕಾಪು ಸಿದ್ದಲಿಂಗಸ್ವಾಮಿ ಸ್ಪರ್ಧಿಸಿದ್ದರು. ಈ ಬಾರಿ ಸಿದ್ದರಾಮಯ್ಯನವರ ವಿರುದ್ಧ ವಿ. ಸೋಮಣ್ಣ ಕಣಕ್ಕಿಳಿಯುತ್ತಿರುವ ಹಿನ್ನೆಲೆಯಲ್ಲಿ ಕಾಪು ಬೆಂಬಲವನ್ನು ಕೇಳಿದ್ದಾರೆ.
ಅರ್ಧ ಗಂಟೆ ಗೌಪ್ಯ ಮಾತುಕತೆ
ಕಾಪು ಸಿದ್ದಲಿಂಗಸ್ವಾಮಿ ಮನೆಯಲ್ಲಿ ಅರ್ಧಗಂಟೆ ಗೌಪ್ಯ ಮಾತುಕತೆ ನಡೆಸಿದ್ದಾರೆ. ಇದೇ ವೇಳೆ ಚುನಾವಣಾ ರೂಪುರೇಷೆ ಕುರಿತು ಮಹತ್ವದ ಚರ್ಚೆ ನಡೆಸಿದ್ದಾರೆ. ಕಾಪು ವರುಣ ಕ್ಷೇತ್ರದಲ್ಲಿ ತಮ್ಮದೇ ಛಾಪು ಹೊಂದಿದ್ದು , ಸೋಮಣ್ಣ ರಣತಂತ್ರ ಹೆಣೆದಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ನನ್ನ ಸೈನ್ಯದ ಕಮಾಂಡರ್ ನೀನೆ ಆಗಬೇಕು ಎಂದು ವಿ. ಸೋಮಣ್ಣ ಕಾಪು ಬಳಿಯಲ್ಲಿ ಹೇಳಿದ್ದಾರೆ ಎನ್ನಲಾಗಿದೆ. ನಮ್ಮ ಮನೆಯಿಂದಲೇ ಪ್ರಚಾರ ಕಾರ್ಯ ಆರಂಭಗೊಳ್ಳಲಿ ಎಂದು ಬೆಳಗ್ಗೆಯೇ ನಿಮ್ಮ ಹೆಸರಲ್ಲಿ ಪೂಜೆ ಮಾಡಿಸಿದ್ದೇನೆ," ಎಂದು ಕಾಪು ವಿ.ಸೋಮಣ್ಣ ಬಳಿಯಲ್ಲಿ ಹೇಳಿದ್ದಾರೆ.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ವಿ.ಸೋಮಣ್ಣ, ಕಾಪು ಯಾವುದೋ ಜನ್ಮದಲ್ಲಿ ನನ್ನ ಅಣ್ಣ ಅಥವಾ ತಮ್ಮನಾಗಿ ಹುಟ್ಟಿರಬೇಕು. ಹಾಗಾಗಿ ಚುನಾವಣೆ ಸಂಬಂಧ ಕೆಲವೊಂದು ಜವಾಬ್ದಾರಿಯನ್ನು ಕಾಪುಗೆ ನೀಡಿದ್ದೇನೆ. ವರುಣಗೆ ಮಾಜಿ ಸಿಎಂ ಯಡಿಯೂರಪ್ಪ, ಸಿಎಂ ಬಸವರಾಜ ಬೊಮ್ಮಾಯಿ, ಛಲವಾದಿ ನಾರಾಯಣಸ್ವಾಮಿ ಬರಲಿದ್ದು, ಆ ಎಲ್ಲಾ ಜವಾಬ್ದಾರಿಯನ್ನು ಸಿದ್ದಲಿಂಗಸ್ವಾಮಿಗೆ ನೀಡಿದ್ದೇನೆ. ಇಂದಿನಿಂದ ವರುಣದಲ್ಲಿ ಪ್ರಚಾರ ಪ್ರಾರಂಭಿಸಿದ್ದೇವೆ. ಈ ಮೂಲಕ ವರುಣವನ್ನು ಮತ್ತೊಂದು ಗೋವಿಂದರಾಜ ನಗರ ಮಾಡುವ ಗುರಿ ಹೊಂದಿದ್ದೇನೆ ಎಂದು ಹೇಳಿದರು.
ಸಿದ್ದರಾಮಯ್ಯನವರೇ ಸೋಲನುಭವಿಸಲಿದ್ದಾರೆ
ಮತ್ತೊಂದೆಡೆ ರಾಜ್ಯ ವಿಧಾಸಭೆ ಚುನಾವಣೆ ಕಣ ದಿನದಿಂದ ದಿನಕ್ಕೆ ರಂಗೇರುತ್ತಿದ್ದು, ಬಿಜೆಪಿ ಘೋಷಿಸಿದ ಮೊದಲನೇ ಪಟ್ಟಿಯಲ್ಲೇ ವಿ.ಸೋಮಣ್ಣಗೆ ಎರಡು ಕ್ಷೇತ್ರಗಳ ಹೊಣೆಯನ್ನು ಹೊರಿಸಲಾಗಿದೆ. ವರುಣದಲ್ಲಿ ಸಿದ್ದರಾಮಯ್ಯ ವಿರುದ್ಧ ವಿ.ಸೋಮಣ್ಣ ಅಖಾಡಕ್ಕಿಳಿಯಲ್ಲಿದ್ದು, ಇಲ್ಲಿ ಅವರು ಗೆಲ್ಲುವುದಕ್ಕೆ ಆಗುವುದಿಲ್ಲ ಎಂದು ಹಲವು ಕಾಂಗ್ರೆಸ್ ನಾಯಕರು ಹೇಳಿದ್ದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಪ್ರತಾಪ್ ಸಿಂಹ ವರುಣದಲ್ಲಿ ಸಿದ್ದರಾಮಯ್ಯನವರೇ ಸೋಲನುಭವಿಸಲಿದ್ದಾರೆ ಎಂದು ಇತ್ತೀಚೆಗಷ್ಟೇ ಹೇಳಿದ್ದರು.
ವರುಣಾ ಕ್ಷೇತ್ರದ ಮತದಾರರು ಬುದ್ದಿವಂತರಿದ್ದಾರೆ. ಹಾಗಾಗಿ ಈ ಬಾರಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ರಾಜಕೀಯ ಜೀವನವನ್ನು ಕ್ಷೇತ್ರದ ಜನರೇ ಮುಗಿಸುತ್ತಾರೆ ಎಂದು ಸಂಸದ ಪ್ರತಾಪ್ ಸಿಂಹ ತಿಳಿಸಿದ್ದರು. ಆದರೆ ಇದೀಗ ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ವಿ.ಸೋಮಣ್ಣ ತೆಂಗಿನ ಕಾಯಿ ಒಡೆದಿದ್ದು, ಅದು ಒಂದೇ ಬಾರಿಗೆ ಒಡೆಯಲಿಲ್ಲ. ಇದಕ್ಕೆ ಬಿಜೆಪಿ ವಲಯದಲ್ಲೇ ಅಪಶಕುನದ ಮಾತು ಕೇಳಿಬರುತ್ತಿದೆ. ಹಾಗಾದರೆ ಪ್ರತಾಪ್ ಸಿಂಹ ಅವರು ನುಡಿದ ಭವಿಷ್ಯ ಸುಳ್ಳಾಗಲಿದೆ ಅನ್ನುವ ಮಾತುಗಳು ಕೂಡ ಕೇಳಿಬರುತ್ತಿವೆ.












Click it and Unblock the Notifications