HD Kote: ಹೆಚ್.ಡಿ.ಕೋಟೆಯಲ್ಲಿ ಬಿಸಿಲಿಗೆ ಬತ್ತಿದ ಕೆರೆಗಳಿಗೆ ಮರುಜೀವ ಬರುತ್ತಾ?
ಮೈಸೂರು, ಮೇ 05: ಈ ವರ್ಷದ ಮೊದಲ ಮಳೆ ಮೈಸೂರು ಜಿಲ್ಲೆಯ ಹಲವೆಡೆ ಸುರಿಯುವುದರೊಂದಿಗೆ ಬೆಂದು ಕಂಗಾಲಾಗಿದ್ದ ಭೂಮಿಗೆ ಸ್ವಲ್ಪ ಮಟ್ಟಿಗೆ ತಂಪು ಮಾಡಿದೆ. ಗಾಳಿ ಮಳೆಗೆ ಹಲವು ಅನಾಹುತಗಳಾಗಿದ್ದರೂ ಸದ್ಯ ಮಳೆ ಬಂತಲ್ಲ ಎಂಬ ನೆಮ್ಮದಿ ತಂದಿದೆ. ಈ ನಡುವೆ ಹೆಚ್.ಡಿ.ಕೋಟೆ ತಾಲೂಕಿನ ಕೆಲವು ಕೆರೆಗಳಿಗೆ ಜಲಾಶಯದಿಂದ ನೀರು ಹರಿಸಿರುವುದು ರೈತರು ಖುಷಿಪಡುವಂತಾಗಿದೆ.
ಕಳೆದ ಬಾರಿ ಮುಂಗಾರು ಆಶಾದಾಯಕವಾಗಿಲ್ಲದ ಕಾರಣ ವಾಡಿಕೆಯ ಮಳೆ ಸುರಿಯದೆ ಕೆರೆಕಟ್ಟೆಗಳು ತುಂಬಿರಲಿಲ್ಲ. ಹೀಗಾಗಿ ಬೇಸಿಗೆಯ ಆರಂಭದಲ್ಲಿಯೇ ಬಹುತೇಕ ಗ್ರಾಮೀಣ ಭಾಗದ ಕೆರೆಗಳು ನೀರಿಲ್ಲದೆ ಒಣಗಿ ಹೋಗಿವೆ. ಇದರಿಂದ ಜನ ಜಾನುವಾರುಗಳಿಗೆ ಸಂಕಷ್ಟ ಎದುರಾಗಿದೆ. ಇದೀಗ ಮಳೆ ಸುರಿದ ಕಾರಣ ಸ್ವಲ್ಪ ಮಟ್ಟಿಗೆ ತಂಪಾಗಿದೆ. ಆದರೆ ಕೆರೆಗಳು ಮರು ಜೀವ ಪಡೆಯಬೇಕಾದರೆ ಮುಂಗಾರು ಆರಂಭವಾಗಿ ಉತ್ತಮ ಮಳೆ ಸುರಿದರೆ ಮಾತ್ರ ಸಾಧ್ಯ.

ಈಗಾಗಲೇ ಗ್ರಾಮೀಣ ಭಾಗದ ಕೆರೆಗಳು ಬತ್ತಿಹೋಗಿವೆ. ಹೀಗಾಗಿ ಅಂತರ್ಜಲ ಕಾಪಾಡುವ, ಗ್ರಾಮೀಣ ಭಾಗದ ರೈತರಿಗೆ ಅನುಕೂಲವಾಗುವಂತಹ ಕೆರೆಗಳನ್ನು ಆಯ್ಕೆ ಮಾಡಿ ಅಂತಹ ಕೆರೆಗಳನ್ನು ಅಭಿವೃದ್ಧಿಗೊಳಿಸಿದರೆ ಮುಂದಿನ ದಿನಗಳಲ್ಲಿ ನೀರಿನ ಸಮಸ್ಯೆ ತಡೆಗಟ್ಟಲು ಸಾಧ್ಯವಾಗಲಿದೆ. ಆದರೆ ಸರ್ಕಾರಗಳು ಕೆರೆಗಳ ಅಭಿವೃದ್ಧಿಯತ್ತ ಗಮನಹರಿಸಿ ಅವುಗಳ ಸಂರಕ್ಷಣೆಯತ್ತ ಗಮನಹರಿಸದ ಕಾರಣದಿಂದಾಗಿ ಇವತ್ತು ಅಂತರ್ಜಲದ ಸಮಸ್ಯೆ ಎದುರಿಸುವಂತಾಗಿದೆ.
ಜಲಕ್ಷಾಮದಿಂದ ತತ್ತರಿಸಿರುವ ರೈತಾಪಿ ವರ್ಗ
ಈ ನಡುವೆ ರಾಜ್ಯದಲ್ಲಿ ಭೀಕರ ಬರವನ್ನು ಎದುರಿಸುತ್ತಿರುವ ತಾಲೂಕುಗಳಲ್ಲಿ ಮೈಸೂರು ಜಿಲ್ಲೆಯ ಹೆಚ್.ಡಿ.ಕೋಟೆ ತಾಲೂಕು ಕೂಡ ಸೇರಿದೆ. ಇಲ್ಲಿ ನಾಲ್ಕು ಜಲಾಶಯಗಳು ಮತ್ತು ಕೆರೆಕಟ್ಟೆಗಳಿದ್ದರೂ ಇಲ್ಲಿನ ಜನ ಮತ್ತು ರೈತರಿಗೆ ನೀರಿನ ಸಮಸ್ಯೆ ತಪ್ಪಿಲ್ಲ. ಇದಕ್ಕೆ ಕಾರಣವಾಗಿದ್ದು ಬರ. ಕಳೆದ ಬಾರಿಯ ಮುಂಗಾರಿನಲ್ಲಿ ಕಬಿನಿ, ತಾರಕ, ನುಗು ಮತ್ತು ಹೆಬ್ಬಳ್ಳ ಜಲಾಶಯಗಳು ಭರ್ತಿಯಾಗಿದ್ದರೆ ಜಲಕ್ಷಾಮ ಎದುರಾಗುತ್ತಿರಲಿಲ್ಲ.

ಇದೀಗ ಬರವಂತು ತಾಲೂಕನ್ನು ಇನ್ನಿಲ್ಲದಂತೆ ಕಾಡುತ್ತಿದೆ. ಇಲ್ಲಿನ ರೈತರಿಗೆ, ಜಾನುವಾರುಗಳಿಗೆ ಆಶ್ರಯವಾಗಿರುವುದು ಕೆರೆಗಳಾಗಿದ್ದು, ಅವುಗಳು ಬತ್ತಿ ಹೋಗಿರುವುದು ಸಂಕಷ್ಟವನ್ನು ತಂದೊಡ್ಡಿತ್ತು. ಹೀಗಾಗಿ ಮುಂದೇನು ಎಂಬ ಚಿಂತೆಯಲ್ಲಿ ಇಲ್ಲಿನ ರೈತರು ದಿನಕಳೆಯುತ್ತಿದ್ದರು. ಬರದಿಂದಾಗಿ ರೈತರು ಯಾವುದೇ ಬೆಳೆಯನ್ನು ಬೆಳೆಯಲು ಸಾಧ್ಯವಾಗದೆ ಪರಿತಪಿಸುತ್ತಿದ್ದಾರೆ. ಕೊನೆ ಪಕ್ಷ ಜಾನುವಾರುಗಳಿಗೆ ನೀರು ಸಿಕ್ಕರೆ ಸಾಕೆಂಬ ಸ್ಥಿತಿಗೆ ಬಂದು ತಲುಪಿದ್ದಾರೆ.
ಜಲಾಶಯಗಳಿಂದ ಕೆರೆಗೆ ನೀರು
ಕೊಳವೆ ಬಾವಿ ನೀರನ್ನು ಬಳಸಿಕೊಳ್ಳೋಣವೆಂದರೆ ಅಂತರ್ಜಲ ಮಟ್ಟ ತೀವ್ರ ಕುಸಿತಗೊಂಡಿದ್ದು, ನೀರೇ ಬಾರದಂತಾಗಿದೆ. ಸಕಾಲದಲ್ಲಿ ಮಳೆ ಸುರಿಯುತ್ತಿದ್ದರೆ, ಜತೆಗೆ ಕೆರೆಗಳಲ್ಲಿ ನೀರಿದ್ದರೆ ಅಂತರ್ಜಲ ಮಟ್ಟ ಚೆನ್ನಾಗಿದ್ದು, ಕೊಳವೆ ಬಾವಿಗಳಲ್ಲಿ ನೀರು ಬರುತ್ತಿರುತ್ತದೆ. ಆದರೆ ಈ ಬಾರಿ ಅದೆಲ್ಲದಕ್ಕೂ ತೊಂದರೆಯುಂಟಾಗಿದೆ. ರೈತರು ನಾವು ಬೆಳೆ ಬೆಳೆಯದಿದ್ದರೂ ಪರ್ವಾಗಿಲ್ಲ ಜಾನುವಾರುಗಳಿಗೆ ಕುಡಿಯಲು ನೀರೊದಗಿಸಿ ಎಂಬ ಮನವಿಯನ್ನು ಮಾಡುತ್ತಲೇ ಬಂದಿದ್ದರು.

ಇದೀಗ ರೈತರ ಮನವಿಗೆ ಸ್ಪಂದಿಸಿ ತಾರಕ, ಹೆಬ್ಬಳ್ಳ ಜಲಾಶಯದಿಂದ ನಾಲೆಗಳಿಗೆ ನೀರು ಹರಿಸಿದ್ದರ ಪರಿಣಾಮ ನೀರು ಹೆಚ್.ಡಿ.ಕೋಟೆ ಪಟ್ಟಣದ ಕೆಂಕೆರೆಯನ್ನು ತಲುಪಿದೆ. ಪರಿಣಾಮ ಬಿಸಿಲಿನ ಝಳಕ್ಕೆ ಸೊರಗಿ ಹೋಗಿ ಮೈದಾನದಂತಾಗಿದ್ದ ಕೆರೆಯಲ್ಲಿ ನೀರು ಕಾಣಿಸಿದೆ. ಜತೆಗೆ ಅಂತರ್ಜಲ ಕುಸಿತ ಕಂಡಿದ್ದ ಸುತ್ತಮುತ್ತಲ ಕೊಳವೆ ಬಾವಿಗಳಿಗೆ ಮರು ಜೀವ ಬಂದಂತಾಗಿದೆ.
ವರುಣ ಕೃಪೆ ತೋರುವಂತಾಗಲಿ
ಸಾಮಾನ್ಯವಾಗಿ ಹೆಚ್.ಡಿ.ಕೋಟೆ ತಾಲೂಕು ವ್ಯಾಪ್ತಿಯಲ್ಲಿ ಈ ವೇಳೆಗೆ ಮಳೆ ಸುರಿದು ಭೂಮಿ ತಂಪಾಗಬೇಕಿತ್ತು, ಅದರೆ ಮಳೆ ಬಾರದೆ ರಣ ಬಿಸಿಲಿನ ತಾಪ ದಿನೇ ದಿನೇ ಹೆಚ್ಚಾಗುತ್ತಲೇ ಹೋಗುತ್ತಿದೆ. ಹೀಗಾಗಿ ಎಷ್ಟೇ ನೀರಿದ್ದರೂ ಬಿಸಿಲಿನ ಧಗೆಗೆ ಆವಿಯಾಗಿ ಹೋಗುತ್ತಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಮಳೆ ಬಂದರೆ ಕೆರೆಗಳು ಮರು ಜೀವ ಪಡೆಯಲು ಸಾಧ್ಯವಾಗಲಿದೆ. ಎಲ್ಲದಕ್ಕೂ ವರುಣ ಕೃಪೆ ತೋರಬೇಕಷ್ಟೆ.












Click it and Unblock the Notifications