ಕನ್ನಡ ರಾಜ್ಯೋತ್ಸವ: ಮೈಸೂರು ಜಿಲ್ಲಾಡಳಿತದಿಂದ ಸಾಧಕರಿಗೆ ಅಪಮಾನ
ಮೈಸೂರು, ಅಕ್ಟೋಬರ್ 29: ಕನ್ನಡ ರಾಜ್ಯೋತ್ಸವ ಸಂದರ್ಭದಲ್ಲಿ ಮೈಸೂರು ಜಿಲ್ಲಾ ಆಡಳಿತದಿಂದ ವಿವಿಧ ಕ್ಷೇತ್ರಗಳ ಸಾಧಕರಿಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ನೀಡಲಾಗುತ್ತದೆ. ಈ ಪ್ರಶಸ್ತಿಗೆ ಅರ್ಜಿ ಸಲ್ಲಿಸುವವರು ಪೊಲೀಸ್ ಇಲಾಖೆಯಿಂದ ತಾವು ಯೋಗ್ಯರೆಂದು ನಿರಾಪೇಕ್ಷಣಾ ಪತ್ರವನ್ನು (ಎನ್ಓಸಿ) ನೀಡುವಂತೆ ಕೇಳಲಾಗಿದೆ.
ಈ ಹಿನ್ನೆಲೆಯಲ್ಲಿ ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಡಾ. ಎಂ. ಡಿ. ಸುದರ್ಶನ್ ಅವರ ಈ ನಡೆ ಅವಿವೇಕತನದ್ದು , ಸಾಧಕರನ್ನು ಅಪಮಾನಿಸುವ ಇಂಥ ಬುದ್ಧಿಹೀನ ಕ್ರಮ ಎಂದು ಸಾಹಿತಿ ಬನ್ನೂರು ಕೆ.ರಾಜು ತೀವ್ರವಾಗಿ ಖಂಡಿಸಿದ್ದಾರೆ.

ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಬನ್ನೂರು ಕೆ.ರಾಜು, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯೇ ಸಾಧಕರನ್ನು ಹುಡುಕಿ ರಾಜ್ಯೋತ್ಸವ ಪ್ರಶಸ್ತಿಯನ್ನು ನೀಡಬೇಕೇ ಹೊರತು ಸಾಧಕರಿಂದ ಅರ್ಜಿ ಕರೆಯುವ ಕ್ರಮವೇ ಸರಿಯಲ್ಲ. ಹೀಗಿರುವಲ್ಲಿ ಸಾಧಕರಿಂದ ಅರ್ಜಿ ಕರೆದು ಅವರನ್ನು ಪೊಲೀಸ್ ಠಾಣೆಯ ಮೆಟ್ಟಿಲು ಹತ್ತಿಸಿ ಅಲ್ಲಿಂದ ಎನ್‌ಓಸಿ ತರುವಂತೆ ಅಪಮಾನಿಸುವುದು ಸಾಧಕರಿಗಿರಲಿ ಇಲಾಖೆಗೂ ಗೌರವ ತರುವಂಥದ್ದಲ್ಲ.
ಮಾನ ಮರ್ಯಾದೆ ಇರುವ ನಿಜವಾದ ಯಾವ ಸಾಧಕರೂ ಅರ್ಜಿ ಹಿಡಿದು ಪ್ರಶಸ್ತಿಗಾಗಿ ಎನ್ಓಸಿ ನೀಡಿರೆಂದು ಪೊಲೀಸ್ ಠಾಣೆಗೆ ಹೋಗಲಾರರು. ಪ್ರಶಸ್ತಿಯ ಹೆಸರಿನಲ್ಲಿ ಸಾಧಕರ ಗೌರವ ಕಳೆಯುತ್ತಿರುವುದರ ಜೊತೆಗೆ ಸುದರ್ಶನ್ ಅವರು ಇಲಾಖೆಯ ಮಾನವನ್ನು ಹರಾಜು ಹಾಕುತ್ತಿದ್ದಾರೆಂದು ಹೇಳಿರುವ ಬನ್ನೂರು ರಾಜು ಅವರು, ಈ ಹಿಂದೆ ಕೂಡ ಸುದರ್ಶನ್ ಅವರಿಂದ ಕಲಾವಿದರಿಗೆ ನೀಡುವ ಗೌರವ ಧನದಲ್ಲಿ ಕಮಿಷನ್‌ಗೆ ಸಂಬಂಧಪಟ್ಟಂತೆ ದೊಡ್ಡ ವಿವಾದವೇ ಉಂಟಾಗಿತ್ತು.
ಹಾಗಾಗಿ ಈ ಎಲ್ಲಾ ಅವ್ಯವಹಾರಗಳ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಸುದರ್ಶನ್ ಅವರ ಮೇಲೆ ಕ್ರಮ ಕೈಗೊಳ್ಳುವುದರ ಜೊತೆಗೆ ಪ್ರಶಸ್ತಿಗಾಗಿ ಪೊಲೀಸ್ ಇಲಾಖೆಯ ಎನ್‌ಒಸಿ ತರುವುದಕ್ಕೆ ತಿಲಾಂಜಲಿ ಹೇಳಿ ನೈಜ ಸಾಧಕರ ಗೌರವ ಉಳಿಸುವ ಕೆಲಸವನ್ನು ಮಾಡಬೇಕೆಂದು ಸಾಹಿತಿ ಬನ್ನೂರು ಕೆ.ರಾಜು ಆಗ್ರಹಿಸಿದ್ದಾರೆ.

ಮೈಸೂರು ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದ ವಿವರ
ಕಳೆದ ಬಾರಿಯಂತೆ ಈ ಬಾರಿಯೂ ಕನ್ನಡ ರಾಜ್ಯೋತ್ಸವದ ಅಂಗವಾಗಿ ನವೆಂಬರ್ 1 ರಂದು ಕರ್ನಾಟಕ ಕಲಾಮಂದಿರದಲ್ಲಿ ಸಂಜೆ 5 ಗಂಟೆಗೆ ವಿವಿಧ ಕಲಾತಂಡಗಳಿoದ ಸಾಂಸ್ಕೃತಿಕ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಡಾ.ಎಂ.ಡಿ ಸುದರ್ಶನ್ ತಿಳಿಸಿದರು.
ನವೆಂಬರ್ 1ರಂದು ಬೆಳಿಗ್ಗೆ 9 ಗಂಟೆಗೆ ಕಲಾಮಂದಿರದಲ್ಲಿ ಧ್ವಜಾರೋಹಣ ನೆರವೇರಿಸಲಾಗುವುದು. ಅಂದು ಸಂಜೆ 5 ಗಂಟೆಗೆ ನಡೆಯಲಿರುವ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ವಿವಿಧ ಶಾಲಾ ಕಾಲೇಜುಗಳ ಸುಮಾರು 6 ರಿಂದ 8 ತಂಡದ 230 ವಿದ್ಯಾರ್ಥಿಗಳು ಭಾಗವಹಿಸುವ ನಿರೀಕ್ಷೆಯಿದ್ದು, ಭಾಗವಹಿಸಿದ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ಹಾಗೂ ತಂಡಕ್ಕೆ ನೆನಪಿನ ಕಾಣಿಕೆಯನ್ನು ನೀಡಲಾಗುವುದು ಎಂದು ತಿಳಿಸಿದರು.
ಸಾರ್ವಜನಿಕ ಮತ್ತು ಖಾಸಗಿ ಶಾಲೆಗಳನ್ನೊಳಗೊಡಂತೆ ಕನ್ನಡ ಮಾಧ್ಯಮದಲ್ಲಿ ಎಸ್.ಎಸ್.ಎಲ್.ಸಿ ಹಾಗೂ ಪಿಯುಸಿಯಲ್ಲಿ ಅತಿ ಹೆಚ್ಚು ಅಂಕಗಳಿಸಿರುವ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ ಮಾಡಲಾಗುವುದು. ಕಾರ್ಯಕ್ರಮದಲ್ಲಿ ಭಾಗವಹಿಸುವ ವಿದ್ಯಾರ್ಥಿಗಳಿಗೆ ಉಪಹಾರ ವ್ಯವಸ್ಥೆ ಮಾಡಲಾಗಿದೆ ಎಂದು ಡಾ.ಎಂ.ಡಿ ಸುದರ್ಶನ್ ತಿಳಿಸಿದರು.












Click it and Unblock the Notifications