'ಹಾಯ್ ಕೃಷ್ಣ' ಚಿತ್ರದ ನಾಯಕ ನವೀನ್ ಹತ್ಯೆ
ಮೈಸೂರು, ಮಾ. 16 : 'ಹಾಯ್ ಕೃಷ್ಣ' ಚಿತ್ರದ ನಾಯಕ, ನಿರ್ಮಾಪಕ ನವೀನ್ ಅವರನ್ನು ದುಷ್ಕರ್ಮಿಗಳ ಗುಂಪು ಕೊಲೆ ಮಾಡಿದೆ. ಹಳೆ ದ್ವೇಷದ ಹಿನ್ನಲೆಯಲ್ಲಿ ಈ ಕೊಲೆ ಮಾಡಿರಬಹುದು ಎಂದು ಶಂಕಿಸಲಾಗಿದೆ.
ಮೈಸೂರಿನ ಬೆಳವಾಡಿಯ ಮಾರಮ್ಮ ದೇಗುಲದ ಬಳಿ ನವೀನ್ ಮೃತದೇಹ ಸೋಮವಾರ ಮುಂಜಾನೆ ಪತ್ತೆಯಾಗಿದೆ. ಭಾನುವಾರ ತಡರಾತ್ರಿ ಕೊಲೆ ಮಾಡಿರಬಹುದು ಎಂದು ಶಂಕಿಸಲಾಗಿದೆ. ವಿಜಯನಗರ ಪೊಲೀಸರು ಸ್ಥಳಕ್ಕೆ ಧಾವಿಸಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ.

ಬೆಳವಾಡಿಯಲ್ಲಿರುವ ನವೀನ್ ನಿವಾಸದ ಬಳಿಯ ಮಾರಮ್ಮ ದೇವಾಲಯದಲ್ಲಿ ಭಾನುವಾರ ಮಾರಮ್ಮ ದೇವಿಯ ಉತ್ಸವವಿತ್ತು. ನವೀನ್ ಸಹ ಇದರಲ್ಲಿ ಪಾಲ್ಗೊಂಡಿದ್ದರು. ಉತ್ಸವ ಮುಗಿದ ಬಳಿಕ 5 ರಿಂದ 6 ಜನರಿದ್ದ ತಂಡ ನವೀನ್ ಅವರ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಕೊಲೆ ಮಾಡಿದೆ.
'ಹಾಯ್ ಕೃಷ್ಣ' ಚಿತ್ರವು 2012ರಲ್ಲಿ ರಾಜ್ಯಾದ್ಯಂತ ಬಿಡುಗಡೆಯಾಗಿತ್ತು. ಚಿತ್ರ ನಿರೀಕ್ಷಿತ ಗೆಲುವು ಕಾಣದ ಹಿನ್ನಲೆಯಲ್ಲಿ ನವೀನ್ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದರು. ಬೆಳವಾಡಿಯಲ್ಲಿ ಹಲವರ ಬಳಿ ಹಣದ ಸಹಾಯ ಪಡೆದಿದ್ದರು ಮತ್ತು ಸ್ನೇಹಿತನನ್ನು ಕ್ಷುಲ್ಲಕ ಕಾರಣಕ್ಕೆ ಕೊಲೆ ಮಾಡಲು ಯತ್ನಿಸಿದ್ದರು. ಆದ್ದರಿಂದ ಹಳೇ ದ್ವೇಷದ ಹಿನ್ನಲೆಯಲ್ಲಿ ಕೊಲೆ ನಡೆದಿರುಬಹುದು ಎಂದು ಶಂಕಿಸಲಾಗಿದೆ.
ಹಿಂದೆ ಹಲ್ಲೆ ನಡೆದಿತ್ತು : 2013ರಲ್ಲಿ ನವೀನ್ ಮೇಲೆ ಅಪರಿಚಿತರು ಹಲ್ಲೆ ನಡೆಸಿ ಪರಾರಿಯಾಗಿದ್ದರು. ಮೈಸೂರಿನ ಕೆ.ಆರ್. ಆಸ್ಪತ್ರೆಗೆ ಅವರನ್ನು ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. ನವೀನ್ ವಿರುದ್ಧ ವಂಚನೆ ಪ್ರಕರಣವನ್ನು 'ಹಾಯ್ ಕೃಷ್ಣ' ಚಿತ್ರದ ನಾಯಕಿ ಸುಪ್ರಿಯಾ ದಾಖಲಿಸಿದ್ದರು. ಈ ಪ್ರಕರಣ ದಾಖಲಾದ ಕೆಲವು ದಿನಗಳ ಬಳಿಕ ನವೀನ್ ಮೇಲೆ ಹಲ್ಲೆ ನಡೆದಿತ್ತು.












Click it and Unblock the Notifications