ಮೈಸೂರು: ಕುಸಿತ ಕಂಡ ಕಬಿನಿ ಜಲಾಶಯ ಮತ್ತೆ ಭರ್ತಿಯಾಗುತ್ತಾ?
ಮೈಸೂರು, ಸೆಪ್ಟೆಂಬರ್ 12: ಇದು ಕಬಿನಿ ಜಲಾಶಯವನ್ನು ಆಶ್ರಯಿಸಿರುವ ರೈತರು ಮತ್ತು ನಾಗರಿಕರು ಸಂತಸಪಡಬೇಕಾದ ಸುದ್ದಿಯಾಗಿದೆ. ಏಕೆಂದರೆ ತಮಿಳುನಾಡಿಗೆ ನೀರು ಹರಿಸಿದ ಬಳಿಕ ಕುಸಿತ ಕಂಡಿದ ಜಲಾಶಯದ ನೀರಿನ ಮಟ್ಟ ಇದೀಗ ನಿಧಾನವಾಗಿ ಏರಿಕೆಯಾಗುತ್ತಿರುವುದು ಸ್ವಲ್ಪ ಮಟ್ಟಿಗೆ ನೆಮ್ಮದಿ ತಂದಿದೆ.
ಕಬಿನಿ ಜಲಾಶಯದಿಂದ ರೈತರ ಬೆಳೆಗಳಿಗೆ ಮಾತ್ರವಲ್ಲದೆ ಮೈಸೂರು ಸೇರಿದಂತೆ ಹಲವು ಗ್ರಾಮ, ಪಟ್ಟಣಗಳಿಗೆ ಕುಡಿಯುವ ನೀರನ್ನು ಸರಬರಾಜು ಮಾಡಲಾಗುತ್ತಿದೆ. ಹೀಗಾಗಿ ಜಲಾಶಯದ ನೀರಿನ ಮಟ್ಟ ಕಡಿಮೆಯಾದಷ್ಟು ಇದನ್ನು ಆಶ್ರಯಿಸಿದವರ ಮೊಗದಲ್ಲಿ ಆತಂಕ ಮನೆ ಮಾಡುತ್ತದೆ. ಅಂತಹದ್ದೇ ಪರಿಸ್ಥಿತಿ ಈ ಬಾರಿ ಸೃಷ್ಟಿಯಾಗಿತ್ತು. ಆದರೆ ನಿಧಾನವಾಗಿ ಜಲಾಶಯ ಭರ್ತಿಯಾದರೂ ಬಾಗಿನದ ಯೋಗ ಕೂಡಿ ಬರಲಿಲ್ಲ. ಜತೆಗೆ ತಮಿಳುನಾಡಿಗೆ ನೀರು ಹರಿಸಬೇಕಾದ ಅನಿವಾರ್ಯತೆ ಎದುರಾದ ಹಿನ್ನಲೆಯಲ್ಲಿ ಜಲಾಶಯದಲ್ಲಿ ನೀರಿನ ಮಟ್ಟ ಮತ್ತೆ ಇಳಿಕೆಯಾಗಿತ್ತು.

ಸದ್ಯ ವಾಯುಭಾರ ಕುಸಿತ ಉಂಟಾಗಿರುವ ಹಿನ್ನಲೆಯಲ್ಲಿ ಕೇರಳದಲ್ಲಿ ಮಳೆ ಸುರಿಯುತ್ತಿರುವುದರಿಂದ ಅಲ್ಲಿಂದ ಹರಿದು ಬರುವ ನೀರು ಕಬಿನಿ ಜಲಾಶಯವನ್ನು ಸೇರುತ್ತಿದೆ. ಹೀಗಾಗಿ ಜಲಾಶಯದ ನೀರಿನ ಮಟ್ಟದಲ್ಲಿ ಏರಿಕೆ ಕಂಡಿದೆ. ಇದು ಮುಂದುವರೆದರೆ ಕಬಿನಿ ಜಲಾಶಯ ಭರ್ತಿಯಾಗಬಹುದೆಂಬ ನಿರೀಕ್ಷೆ ಇಲ್ಲಿನ ರೈತರು ಮತ್ತು ಜನತೆಯದ್ದಾಗಿದೆ. ಹಿಂಗಾರು ಮಳೆಯಿಂದಲೂ ಜಲಾಶಯ ಭರ್ತಿಯಾದರೂ ಅಚ್ಚರಿಪಡಬೇಕಾಗಿಲ್ಲ. ಆದರೆ ಅಂತಹದೊಂದು ಪವಾಡ ಈ ಬಾರಿ ನಡೆಯಲಿ ಎಂದೇ ಎಲ್ಲರೂ ಆಶಿಸುತ್ತಿದ್ದಾರೆ.
ಜಲಾಶಯದ ಒಳಹರಿವಿನಲ್ಲಿ ಚೇತರಿಕೆ
ಈಗಾಗಲೇ ಅತ್ತ ಕೆಆರ್ ಎಸ್ ಜಲಾಶಯದಲ್ಲಿ ನೀರಿನ ಮಟ್ಟ ಪಾತಾಳಕ್ಕಿಳಿದಿದೆ. ಕೊಡಗು ಸೇರಿದಂತೆ ಹಾಸನ ಚಿಕ್ಕಮಗಳೂರು ಭಾಗದಲ್ಲಿ ಮಳೆಯಾಗುತ್ತಿಲ್ಲ. ಹೀಗಾಗಿ ಕೆಆರ್‌ಎಸ್ ಜಲಾಶಯಕ್ಕೆ ಹರಿದು ಬರುವ ನೀರಿನ ಪ್ರಮಾಣ ಕಡಿಮೆಯಾಗಿದೆ. ಹೀಗಾಗಿ ರೈತರು ನಿರಂತರವಾಗಿ ಹೋರಾಟ ನಡೆಸುತ್ತಲೇ ಬರುತ್ತಿದ್ದಾರೆ. ಹೀಗಿರುವಾಗ ಕಬಿನಿಯಲ್ಲಿ ಸ್ವಲ್ಪ ಮಟ್ಟಿಗೆ ನೀರಿನ ಒಳ ಹರಿವು ಚೇತರಿಕೆ ಕಂಡಿದ್ದು ಖುಷಿಯ ವಿಚಾರವಾಗಿದೆ.

ಹಾಗೆನೋಡಿದರೆ ಮುಂಗಾರು ಮಳೆ ಆರಂಭವಾಗುತ್ತಿದ್ದಂತೆಯೇ ರಾಜ್ಯದಲ್ಲಿ ಕಬಿನಿ ಜಲಾಶಯವೇ ಮೊದಲ ಬಾರಿಗೆ ಭರ್ತಿಯಾಗುತ್ತಿತ್ತು. ಆದರೆ ಈ ವರ್ಷ ಅಂದುಕೊಂಡಂತೆ ಮಳೆ ಆಗಲೇ ಇಲ್ಲ. ಹೀಗಾಗಿ ಜುಲೈ ತಿಂಗಳಾಂತ್ಯಕ್ಕೆ ಜಲಾಶಯ ಭರ್ತಿಯಾಗುವ ಹಂತ ತಲುಪಿತ್ತು. ಜಲಾಶಯ ಭರ್ತಿಯಾದರೆ ಹೆಚ್ಚುವರಿ ನೀರನ್ನು ಹೊರ ಬಿಡಬಹುದು ಎಂದು ಆಲೋಚನೆ ಮಾಡುತ್ತಿರುವಾಗಲೇ ಆಗಸ್ಟ್ ತಿಂಗಳಲ್ಲಿ ಮಳೆ ಕೈಕೊಟ್ಟಿತು. ಪರಿಣಾಮ ಅಂದುಕೊಂಡಂತೆ ಆಗಲೇ ಇಲ್ಲ, ಇದರ ನಡುವೆ ತಮಿಳುನಾಡಿಗೆ 10ಸಾವಿರ ಕ್ಯುಸೆಕ್ ನೀರನ್ನು ಪ್ರತಿದಿನ ಹರಿಸಿದ ಪರಿಣಾಮ ನೀರಿನ ಪ್ರಮಾಣ ಇಳಿಕೆ ಆಗುತ್ತಲೇ ಹೋಗಿತ್ತು.
2,272 ಅಡಿಗಳಿಗೆ ನೀರು ಕುಸಿತ
ಈ ಬಾರಿಯ ಮುಂಗಾರು ದುರ್ಬಲವಾದ ಪರಿಣಾಮ ಮತ್ತು ತಮಿಳುನಾಡಿಗೆ ನೀರು ಹರಿಸಿದ ಪರಿಣಾಮ 2,284 ಅಡಿಯಷ್ಟು ಇದ್ದ ನೀರು 2,272 ಅಡಿಗಳಿಗೆ ಕುಸಿತ ಕಂಡಿತ್ತು, ಇದರಿಂದಾಗಿ ಅಚ್ಚುಕಟ್ಟು ಪ್ರದೇಶದ ರೈತರ ಬೆಳೆಗಳಿಗೆ ನೀರಿನ ಅಭಾವದ ಜೊತೆಗೆ ಎಚ್.ಡಿ.ಕೋಟೆ ತಾಲೂಕು ಹಾಗೂ ಮೈಸೂರು ನಗರ ಸೇರಿದಂತೆ ವಿವಿಧ ಕಡೆಗಳ ಜನರಿಗೆ ಕುಡಿಯುವ ನೀರಿಗೂ ಹಾಹಾಕಾರ ಉಂಟಾಗುವ ಭಯ ಶುರುವಾಗಿತ್ತು.
ಇದೀಗ ಆಂಧ್ರಪ್ರದೇಸ ಮತ್ತು ತೆಲಂಗಾಣ ರಾಜ್ಯದಲ್ಲಿ ಕಂಡು ಬಂದಿರುವ ವಾಯುಭಾರ ಕುಸಿತ ಕೇರಳ ಮತ್ತು ಕರ್ನಾಟಕದ ಮೇಲೆ ಪರಿಣಾಮ ಬೀರಿದ್ದು, ಕಳೆದ ಕೆಲ ದಿನದಿಂದ ಕೇರಳದ ವೈನಾಡು ಮತ್ತು ಕಬಿನಿ ಜಲಾಶಯದ ಹಿನ್ನೀರು ಪ್ರದೇಶದಲ್ಲಿ ಹೆಚ್ಚು ಮಳೆ ಸುರಿಯುವಂತೆ ಮಾಡಿದೆ. ಇದರಿಂದ ಕಬಿನಿ ಜಲಾಶಯಕ್ಕೆ ಹರಿದು ಬರುತ್ತಿರುವ ನೀರಿನ ಪ್ರಮಾಣ ನಾಲ್ಕು ಸಾವಿರ ಕ್ಯುಸೆಕ್ ಗೆ ಏರಿಕೆ ಕಂಡಿದೆ. ಈಗ ಜಲಾಶಯಕ್ಕೆ ಒಂದು ಟಿಎಂಸಿಗೂ ಹೆಚ್ಚು ನೀರು ಹರಿದು ಬಂದಿದೆ. ಇದು ಜನರಲ್ಲಿ ಆಶಾಭಾವ ಮೂಡಿಸಿದೆ.
ಈಗ ಜಲಾಶಯದಲ್ಲಿ ನೀರು ಎಷ್ಟಿದೆ?
ದಿಢೀರ್ ಆಗಿ 2,272 ಅಡಿಗೆ ತಲುಪಿದ್ದ ಜಲಾಶಯದಲ್ಲಿ ಸದ್ಯ 2,275.82 ಅಡಿಗಳಿಗೆ ಏರಿಕೆ ಕಂಡಿದೆ, ಆದರೆ ಜಲಾಶಯ ಮತ್ತೆ ಭರ್ತಿಯಾಗಲು ಇನ್ನು ಏಳು ಅಡಿಗಳಷ್ಟು ನೀರು ಬೇಕಾಗಿದೆ. ಒಂದು ವೇಳೆ ಕೇರಳದ ವೈನಾಡು ಹಾಗೂ ಕಬಿನಿ ಜಲಾಶಯದ ಹಿನ್ನೀರು ಪ್ರದೇಶದಲ್ಲಿ ಇದೇ ರೀತಿ ಮಳೆ ಸುರಿದರೆ ಏಳು ಅಡಿ ನೀರು ತುಂಬುವುದು ಕಷ್ವವಾಗಲಾರದು ಆದರೆ ಅದು ಸಾಧ್ಯನಾ ಎಂಬುದೇ ಪ್ರಶ್ನೆಯಾಗಿ ಉಳಿದಿದೆ. ಈಗಿನ ಪರಿಸ್ಥಿತಿಯಲ್ಲಿ ಎಷ್ಟು ನೀರು ಹರಿದು ಬರುತ್ತೋ ಅಷ್ಟಕ್ಕೆ ಸಮಾಧಾನ ಪಟ್ಟುಕೊಳ್ಳಬೇಕಾಗಿದೆ.
ಇನ್ನು ಜಲಾಶಯದಲ್ಲಿರುವ ನೀರಿನ ಪ್ರಮಾಣ ಮತ್ತು ಒಳ, ಹೊರ ಹರಿವಿನ ಬಗ್ಗೆ ನೋಡುವುದಾದರೆ 2,284 ಅಡಿ ಸಾಮರ್ಥ್ಯದ ಜಲಾಶಯದಲ್ಲಿ ಈಗ 2,275.82 ಅಡಿಯಷ್ಟು ನೀರಿದ್ದು, 14.71 ಟಿಎಂಸಿ ನೀರು ಸಂಗ್ರಹವಾಗಿದೆ. ಜಲಾಶಯಕ್ಕೆ 4,726 ಕ್ಯುಸೆಕ್ ನೀರು ಹರಿದು ಬರುತ್ತಿದ್ದು, ಜಲಾಶಯದಿಂದ ಮುಂಭಾಗದ ನದಿಗೆ ಒಂದು ಸಾವಿರ ಕ್ಯುಸೆಕ್, ಬಲದಂಡೆ ನಾಲೆಗೆ 2,300 ಕ್ಯುಸೆಕ್ ಹಾಗೂ ಎಡದಂಡೆ ನಾಲೆಗೆ 90 ಕ್ಯುಸೆಕ್ ಹೀಗೆ ಒಟ್ಟು 2,390 ಕ್ಯುಸೆಕ್ ನೀರು ಹೊರ ಹೋಗುತ್ತಿದೆ.
ಮತ್ತೆ ಭರ್ತಿಯಾಗುತ್ತಾ ಕಬಿನಿ ಜಲಾಶಯ
ಮುಂಗಾರು ಮಳೆ ಈ ಬಾರಿ ಆಶಾದಾಯಕವಾಗಲೇ ಇಲ್ಲ. ಮುಂದೆ ಹಿಂಗಾರು ಮಳೆಯಾದರೂ ಸುರಿಯುತ್ತಾ? ಗೊತ್ತಿಲ್ಲ. ಆದರೆ 2017ರಲ್ಲಿ ಹಿಂಗಾರು ಮಳೆ ದೊಡ್ಡ ಪ್ರಮಾಣದಲ್ಲಿ ಸುರಿದು ಕೆರೆಕಟ್ಟೆಗಳು ತುಂಬಿದ್ದನ್ನು ನಾವಿಲ್ಲಿ ಸ್ಮರಿಸಬಹುದಾಗಿದೆ. ಅದು ಏನೇ ಇರಲಿ ಕಬಿನಿ ಜಲಾಶಯದ ಒಳಹರಿವು ಇದೇ ರೀತಿ ಇನ್ನಷ್ಟು ದಿನ ಇದ್ದರೆ ಅಷ್ಟೇ ಸಾಕು. ಆದರೆ ಮುಂದೇನಾಗುತ್ತೋ ಎಂಬುದನ್ನು ಕಾಲವೇ ಹೇಳಬೇಕಾಗಿದೆ.











Click it and Unblock the Notifications