ತಮಿಳುನಾಡಿಗೆ ನೀರು..ತಗ್ಗಿದ ಕಬಿನಿ ಒಳಹರಿವು: ಭತ್ತ ಬೆಳೆಯುವ ರೈತರಲ್ಲಿ ಹೆಚ್ಚಿದ ಆತಂಕ
ಮೈಸೂರು, ಆಗಸ್ಟ್ 25: ಎಚ್.ಡಿ.ಕೋಟೆ ತಾಲೂಕಿನ ಕಬಿನಿ ಜಲಾಶಯದ ನೀರನ್ನು ನಂಬಿ ಭತ್ತ ಬೆಳೆಯಲು ಮುಂದಾಗಿದ್ದ ರೈತರಲ್ಲಿ ಆತಂಕ ಶುರುವಾಗಿದೆ. ಕಾರಣ ತಮಿಳುನಾಡಿಗೆ ನೀರು ಹರಿಸಿದ ಪರಿಣಾಮ ಜಲಾಶಯದ ನೀರಿನ ಮಟ್ಟ ತಗ್ಗಿದ್ದು, ಮಳೆ ಬರುವ ಲಕ್ಷಣಗಳು ಕಾಣದಿರುವುದರಿಂದ ಮುಂದೇನು ಎಂಬ ಚಿಂತೆ ಆವರಿಸಿದೆ.
ಇಷ್ಟರಲ್ಲೇ ಮುಂಗಾರು ಮಳೆ ಅಬ್ಬರಿಸಬೇಕಿತ್ತು. ಆದರೆ ಆಗಸ್ಟ್ ತಿಂಗಳಲ್ಲಿ ಮಳೆ ಸುರಿಯದ ಕಾರಣ ತಗ್ಗಿರುವ ಜಲಾಶಯದಲ್ಲಿ ನೀರಿನ ಪ್ರಮಾಣ ಹೆಚ್ಚಾಗುವುದು ಕಷ್ಟ ಸಾಧ್ಯವಾಗಿದೆ. ಒಂದು ವೇಳೆ ಹಿಂಗಾರು ಮಳೆ ಸುರಿದರೆ ಜಲಾಶಯಕ್ಕೆ ಜೀವಕಳೆ ಬರಬಹುದೇನೋ? ಆದರೆ ಭರ್ತಿಯಾಗುವಷ್ಟರ ಮಟ್ಟಿಗೆ ನೀರು ಹರಿದು ಬರುತ್ತಾ? ಎಂಬುದೇ ಈಗ ಪ್ರಶ್ನೆಯಾಗಿ ಉಳಿದಿದೆ.

ಆಗಸ್ಟ್ ತಿಂಗಳಲ್ಲಿ ಪ್ರತಿವರ್ಷ ಎಡಬಿಡದೆ ಸುರಿಯುತ್ತಿದ್ದ ಆಶ್ಲೇಷಾ ಮತ್ತು ಮಖೆ ಮಳೆ ಕೈಕೊಟ್ಟಿದೆ. ಇದರಿಂದ ಕಬಿನಿ ಜಲಾಶಯದ ಒಳಹರಿವಿನ ಪ್ರಮಾಣ ತೀರಾ ಕಡಿಮೆಯಾಗಿದೆ. ಸುಪ್ರೀಂಕೋರ್ಟ್ ಆದೇಶದನ್ವಯ ಭರ್ತಿಗೊಂಡಿದ್ದ ಜಲಾಶಯದಿಂದ ಹೆಚ್ಚಿನ ನೀರನ್ನು ಮುಂಭಾಗದ ನದಿಗೆ ಹರಿಸಿದ್ದರಿಂದ ಜಲಾಶಯದ ಗ್ರಹಮಟ್ಟದಲ್ಲಿ ದಿನದಿಂದ ದಿನಕ್ಕೆ ಕುಸಿತ ಕಾಣಿಸಿದೆ.
ಕಬಿನಿಯಲ್ಲಿ ನೀರಿನ ಮಟ್ಟ ಕುಸಿತ
ಕೇರಳದ ವೈನಾಡು ಮತ್ತು ಜಲಾಶಯದ ಹಿನ್ನೀರಿನಲ್ಲಿ ಕಳೆದ ಜುಲೈ ತಿಂಗಳಲ್ಲಿ ಮುಂಗಾರು ಮಳೆ ಅಬ್ಬರಿಸಿದ್ದರಿಂದ ಹದಿನೈದು ದಿನದ ಅಂತರದಲ್ಲಿ ಜಲಾಶಯ ಭರ್ತಿಗೊಂಡಿತ್ತು. ಆದರೆ ಎಲ್ಲವೂ ಸರಿಹೋಯಿತು ಎಂದು ಖುಷಿಪಡುತ್ತಿರುವಾಗಲೇ ಆಗಸ್ಟ್ ತಿಂಗಳಲ್ಲಿ ಮಳೆ ಬಾರದೆ ವಿರಾಮ ನೀಡಿರುವುದು, ಜತೆಗೆ ತಮಿಳುನಾಡು ನೀರಿಗಾಗಿ ಕ್ಯಾತೆ ತೆಗೆದಿರುವುದು ರೈತರನ್ನು ಚಿಂತೆಗೆ ತಳ್ಳಿದೆ.

ಕಬಿನಿ ಜಲಾಶಯದಿಂದ ಹೆಚ್ಚಿನ ನೀರನ್ನು ಹೊರಬಿಟ್ಟಿದ್ದರಿಂದ ಗರಿಷ್ಟ 2284 ಅಡಿ ಸಂಗ್ರಹ ಮಟ್ಟದ ಜಲಾಶಯದಲ್ಲಿ ಈಗ 2275.72 ಅಡಿಯಷ್ಟು ನೀರಿದೆ. ಜಲಾಶಯ ಪಕ್ಕದ ಸುಭಾಷ್ ಪವರ್ ಹೌಸ್ ಮೂಲಕ ನಿತ್ಯ 5ಸಾವಿರ ಕ್ಯುಸೆಕ್, ಬಲದಂಡೆ ನಾಲೆಗೆ 2300 ಕ್ಯುಸೆಕ್, ಎಡದಂಡೆ ನಾಲೆಗೆ 25 ಕ್ಯುಸೆಕ್ ನೀರು ಹರಿಸಿದ್ದರಿಂದ ಜಲಾಶಯದ ನೀರಿನ ಮಟ್ಟ ಕುಸಿತ ಕಂಡಿದೆ.
ನೀರಿಗಾಗಿ ಕಾಯುತ್ತಿರುವ ರೈತರು
ಜಲಾಯಶದಲ್ಲಿ ನೀರಿನ ಪ್ರಮಾಣ ತಗ್ಗಿರುವುದು ಜಲಾಶಯದ ಅಚ್ಚುಕಟ್ಟು ಪ್ರದೇಶದ ರೈತರಲ್ಲಿ ಭಯವನ್ನುಂಟು ಮಾಡಿದೆ. ಈ ಬಾರಿ ಜಲಾಶಯ ಭರ್ತಿಯಾಗಿ ಜಲಾಶಯದಿಂದ ಅಚ್ಚುಕಟ್ಟು ಪ್ರದೇಶದ ಬಲ ಮತ್ತು ಎಡದಂಡೆ ನಾಲೆಗಳಿಗೆ ಹಂತ ಹಂತವಾಗಿ ನೀರು ಹರಿಸುವುದಾಗಿ ಅಧಿಕಾರಿಗಳು ಹೇಳಿ ಜಲಾಶಯದಿಂದ ಬಲದಂಡೆ ಮತ್ತು ಎಡದಂಡೆ ನಾಲೆಗಳಿಗೆ ನೀರು ಹರಿಸಿದ್ದರು.
ಇದರಿಂದ ಖುಷಿಯಾದ ಅಚ್ಚುಕಟ್ಟು ಪ್ರದೇಶದ ರೈತರು ಈ ಬಾರಿ ಭತ್ತ ಬೆಳೆ ಬೆಳೆಯಲು ಮುಂದಾಗಿ ತಮ್ಮ ಹೊಲ ಗದ್ದೆಗಳನ್ನು ಹದ ಮಾಡಿ ನಾಟಿಗೆ ಸಿದ್ಧತೆ ಮಾಡಿಕೊಂಡಿದ್ದಾರೆ, ಆದರೆ ಜಲಾಶಯದ ಅಧಿಕಾರಿಗಳ ಮೂಲಗಳ ಪ್ರಕಾರ ಸುಪ್ರೀಂಕೋರ್ಟ್ ಅದೇಶ ಪಾಲನೆ ಜೊತೆಗೆ ಕೇರಳದ ವೈನಾಡು ಹಾಗೂ ಜಲಾಶಯದ ಹಿನ್ನೀರಿನಲ್ಲಿ ಮಳೆ ತೀರಾ ಕ್ಷೀಣಿಸಿದ್ದು, ಜಲಾಶಯದ ಸಂಗ್ರಹ ಮಟ್ಟದಲ್ಲೂ ಭಾರೀ ಇಳಿಮುಖವಾಗಿರುವುದರ ಪರಿಣಾಮ ರೈತರ ಭತ್ತದ ಬೆಳೆಗೆ ನೀರು ಹರಿಸುವುದು ಕಷ್ಟವಾಗುತ್ತದೆ ಎನ್ನಲಾಗುತ್ತಿದೆ.
ನೀರು ನಂಬಿ ಭತ್ತದ ಕೃಷಿಗೆ ತಯಾರಿ
ಒಂದು ವೇಳೆ ಈ ರೀತಿಯಾದರೆ ಭತ್ತದ ಕೃಷಿಗೆ ಮುಂದಾಗಿರುವ ರೈತರ ಕಥೆಯೇನು? ಎಂಬ ಪ್ರಶ್ನೆ ಕಾಡುತ್ತಿದೆ. ಒಂದು ವೇಳೆ ಮುಂದಿನ ದಿನಗಳಲ್ಲಿ ಉತ್ತಮವಾಗಿ ಮಳೆ ಬಂದರೆ ರೈತರು ಬದುಕಬಹುದೇನೋ? ಇಲ್ಲದೆ ಹೋದರೆ ಸಂಕಷ್ಟ ತಪ್ಪಿದಲ್ಲ. ಇನ್ನೊಂದೆಡೆ ಭರ್ತಿಯಾದ ಜಲಾಶಯಕ್ಕೆ ಬಾಗಿನ ಅರ್ಪಿಸದೆ ನೇರವಾಗಿ ತಮಿಳುನಾಡಿಗೆ ನೀರು ಹರಿಸಿರುವುದು ರೈತರ ಆಕ್ರೋಶಕ್ಕೆ ಕಾರಣವಾಗಿದೆ.
ಈ ಕುರಿತಂತೆ ಮಾತನಾಡಿರುವ ಅಚ್ಚುಕಟ್ಟು ಪ್ರದೇಶದ ರೈತ ಹೋರಾಟಗಾರ ಹೆಚ್.ಬಿ.ಶಿವಲಿಂಗಪ್ಪ ಅವರು, ಈ ಬಾರಿ ಜಲಾಶಯ ತುಂಬಿದ್ದರಿಂದ ಅಚ್ಚುಕಟ್ಟು ಪ್ರದೇಶದ ರೈತರು, ನೀರು ಸಿಗುತ್ತದೆ ಎಂಬ ಅಶಾಭಾವನೆಯಿಂದ ಭತ್ತದ ಕೃಷಿಗೆ ನಮ್ಮ ಹೊಲ ಗದ್ದೆಗಳನ್ನು ಹದಮಾಡಿ ನಾಟಿಗೆ ತಯಾರಿ ಮಾಡಿಕೊಂಡಿದ್ದಾರೆ.
ಭತ್ತದ ಕೃಷಿಗೆ ನೀರು ನೀಡುವುದು ಕಷ್ಟ
ಇದೀಗ ಭರ್ತಿಯಾಗಿದ್ದ ಜಲಾಶಯದಿಂದ ತಮಿಳುನಾಡಿಗೆ ನೀರು ಹರಿಸಿ ಮಳೆ ಕೊರತೆ, ಭತ್ತಕ್ಕೆ ನೀರು ಕೊಡಲ್ಲ ಅಂದರೆ ನಾವು ಏನು ಮಾಡಬೇಕು? ಭತ್ತ ಬೆಳೆಗೆ ನೀರು ಕೊಡದಿದ್ದರೆ ನಾವೂ ಬಿಡಲ್ಲ, ಬೀದಿಗಿಳಿದು ಹೋರಾಟ ಮಾಡುವುದಾಗಿ ಹೇಳಿದ್ದಾರೆ.
ಕಬಿನಿ ಜಲಾಶಯದ ಎಕ್ಸಿಕ್ಯೂಟೀವ್ ಇಂಜಿನಿಯರ್ ಚಂದ್ರಶೇಖರ್ ಅವರು, ಅಗಸ್ಟ್ ತಿಂಗಳಲ್ಲಿ ವಾಡಿಕೆಯಂತೆ ಸುರಿಯಬೇಕಿದ್ದ ಮಳೆ ಸಂಪೂರ್ಣ ಕ್ಷೀಣಿಸಿದೆ, ಜಲಾಶಯಕ್ಕೆ ಹರಿದು ಬರುತ್ತಿದ್ದ ಒಳ ಹರಿವು ಕಡಿವೆಯಾಗಿದೆ. ಈ ಬಾರಿ ಭತ್ತದ ಬೆಳೆಗೆ ನೀರು ಕಷ್ಟ, ಭತ್ತಕ್ಕೆ ನೀರು ಕೊಡುತ್ತೇವೆ ಎಂದು ನಾವೂ ಹೇಳಿಲ್ಲ. ಆದರೆ ಕುಡಿಯುವ ನೀರಿಗೆ ಯಾವುದೇ ತೊಂದರೆಯಿಲ್ಲ ಎಂದು ತಿಳಿಸಿದ್ದಾರೆ. ಆದರೆ ಮುಂದೇನಾಗುತ್ತದೆ ಎಂಬುದನ್ನು ಕಾದು ನೋಡಬೇಕಾಗಿದೆ.h












Click it and Unblock the Notifications