ಕಪಿಲೆಯ ಪ್ರವಾಹಕ್ಕೆ ನಂಜನಗೂಡು ಭಾಗಶಃ ಜಲಾವೃತ

Recommended Video

      ಇತಿಹಾಸ ಬರೆಯುತ್ತಿದೆ ಕಬಿನಿ ಹೊರಹರಿವು | Oneindia Kannada

      ಮೈಸೂರು, ಆಗಸ್ಟ್.10 : ನೆರೆಯ ಕೇರಳದಲ್ಲಿ ಕುಂಭದ್ರೋಣ ಮಳೆ ಸುರಿಯುತ್ತಿರುವುದರಿಂದ ತಾಲೂಕಿನ ಕಬಿನಿ ಜಲಾಶಯಕ್ಕೆ ಭಾರೀ ಪ್ರಮಾಣದಲ್ಲಿ ನೀರು ಹರಿದುಬರುತ್ತಿದೆ. ಹಾಗಾಗಿ ಕಬಿನಿ ಅಣೆಕಟ್ಟೆಯ ಹೊರ ಹರಿವನ್ನು 80 ಸಾವಿರ ಕ್ಯೂಸೆಕ್ ಗೆ ಹೆಚ್ಚಿಸಲಾಗಿದೆ.

      ಇಷ್ಟೊಂದು ಪ್ರಮಾಣದಲ್ಲಿ ನೀರು ಹರಿಬಿಟ್ಟಿರುವುದು ಈವರೆಗಿನ ದಾಖಲೆ. 2001ರಲ್ಲಿ 68 ಸಾವಿರ ಕ್ಯೂಸೆಕ್ಸ್ ನೀರು ಹೊರಬಿಟ್ಟಿದ್ದೇ ಈವರೆಗಿನ ದಾಖಲೆ ಎಂದು ಅಣೆಕಟ್ಟೆ ಅಧಿಕಾರಿಗಳು ತಿಳಿಸಿದ್ದಾರೆ. ಕಳೆದೆರಡು ದಿನಗಳಿಂದ ಒಳಹರಿವು ಹೆಚ್ಚಿದ್ದರಿಂದ ಬುಧವಾರ ಬೆಳಗ್ಗೆಯಿಂದಲೇ ನೀರನ್ನು ನದಿಗೆ ಹರಿಸಲು ಆರಂಭಿಸಲಾಯಿತು.

      ಸಂಜೆ ವೇಳೆಗೆ 50 ಸಾವಿರ ಕ್ಯೂಸೆಕ್ ಗಳಿಗೆ ಏರಿಸಲಾಯಿತು. ಶುಕ್ರವಾರ ಬೆಳಗ್ಗೆ ವೇಳೆಗೆ ಒಳಹರಿವಿನ ಪ್ರಮಾಣದಲ್ಲಿ ಮತ್ತಷ್ಟು ಹೆಚ್ಚಳವಾಗಿದ್ದರಿಂದ ಹೊರಹರಿವನ್ನು ಹಂತಹಂತವಾಗಿ 80 ಸಾವಿರ ಕ್ಯೂಸೆಕ್ ಗೆ ಹೆಚ್ಚಿಸಲಾಯಿತು.

      ಪರಿಣಾಮ ಜಲಾಶಯದ ಮುಂಭಾಗದ ಕಬಿನಿ- ಎನ್.ಬೇಗೂರು ಹಾಗೂ ಮಾದಾಪುರ-ಬೆಳತೂರು ಹಾಗೂ ಹಂಪಾಪುರ-ಸಂಗಮ ಸೇತುವೆ ಪೂರ್ಣ ಜಲಾವೃತವಾಗಿವೆ. ಮುಳುಗಡೆಯಾಗಿರುವ 3 ಸೇತುವೆಗಳ ಬಳಿಗೂ ಜನರು ತೆರಳದಂತೆ ಪೊಲೀಸ್ ಕಾವಲು ವ್ಯವಸ್ಥೆ ಮಾಡಲಾಗಿದೆ. ಅಣೆಕಟ್ಟೆಗೆ ಸಾರ್ವಜನಿಕರಿಗೆ ಪ್ರವೇಶ ನಿಷೇಧಿಸಲಾಗಿದೆ.

       ಸೇತುವೆ ಮುಳುಗಡೆ

      ಸೇತುವೆ ಮುಳುಗಡೆ

      ಕಬಿನಿ ಜಲಾನಯನ ಪ್ರದೇಶದಲ್ಲಿ ಪ್ರವಾಹ ಉಂಟಾಗಿದ್ದು, ತಗ್ಗು ಪ್ರದೇಶಗಳಿಗೆ ಕಪಿಲಾ ನದಿ ನೀರು ನುಗ್ಗಿದೆ. ಅಲ್ಲದೆ ನಂಜನಗೂಡು ತಾಲೂಕಿನಲ್ಲಿರುವ ಸುತ್ತೂರು ಗ್ರಾಮದ ಸೇತುವೆ ಮುಳುಗಡೆಯಾಗಿ ಸೇತುವೆ ಮೇಲೆ ನೀರು ತುಂಬಿ ಹರಿಯುತ್ತಿದೆ.

      ಮೈಸೂರು-ಸುತ್ತೂರು ನಡುವಿನ ರಸ್ತೆ ಸಂಪರ್ಕ ಬಂದ್ ಆಗಿದ್ದು, ಕಪಿಲಾ ಜಲಾನಯನ ವ್ಯಾಪ್ತಿಯಲ್ಲಿ ಅಪಾರ ಪ್ರಮಾಣದ ಬೆಳೆ ಹಾನಿ ಸಂಭವಿಸಿದೆ. ಎಚ್.ಡಿ.ಕೋಟೆ ತಾಲೂಕಿನ ಹಿನ್ನೀರಿನ ಪ್ರದೇಶಗಳು ಮುಳುಗಡೆಯಾಗಿದ್ದು, ಡಿ.ಬಿ.ಕುಪ್ಪೆ, ವಡಕನಮಾಳ ಸೇರಿ ಇತರೆ ಗ್ರಾಮಗಳಿಗೆ ನೀರು ನುಗ್ಗಿದೆ.

       ಗಂಜಿ ಕೇಂದ್ರ ತೆರೆಯಲು ಕ್ರಮ

      ಗಂಜಿ ಕೇಂದ್ರ ತೆರೆಯಲು ಕ್ರಮ

      ಹೊರಹರಿವು ಹೆಚ್ಚಿಸಿದ ಪರಿಣಾಮ ನದಿ ಪಾತ್ರದ ನಿವಾಸಿಗಳ ಹಿತದೃಷ್ಟಿಯಿಂದ ಮುಂಜಾಗ್ರತಾ ಕ್ರಮವಾಗಿ ತಾಲೂಕು ಆಡಳಿತ ಶ್ರೀಕಂಠೇಶ್ವರಸ್ವಾಮಿ ದೇವಾಲಯದ ದಾಸೋಹ ಭವನದಲ್ಲಿ ಗಂಜಿ ಕೇಂದ್ರ ತೆರೆದು ಅಗತ್ಯ ಕ್ರಮ ಕೈಗೊಂಡಿದೆ.

      ನದಿ ಪಾತ್ರದಲ್ಲಿ ಠಿಕಾಣಿ ಹೂಡಿದ್ದ ಮೀನುಗಾರರನ್ನು ಸ್ಥಳಾಂತರಿಸುವಂತೆ ರಾಜಸ್ವ ನಿರೀಕ್ಷಕರಿಗೆ ಸೂಚನೆ ನೀಡಲಾಗಿದೆ. ಮುಳುಗಡೆ ಪ್ರದೇಶವಾಗಿರುವ ಕುಳ್ಳಂಕಯ್ಯನಹುಂಡಿ, ಹಳ್ಳದಕೇರಿ, ತೋಪಿನ ಬೀದಿ ಸೇರಿದಂತೆ ಇತರ ಸಂತ್ರಸ್ಥರ ನೆರವಿಗಾಗಿ ಗಂಜಿ ಕೇಂದ್ರ ತೆರೆಯಲಾಗಿದ್ದು ಆತಂಕ ಪಡುವ ಅಗತ್ಯವಿಲ್ಲ ಎಂದು ಎಂದು ತಹಸೀಲ್ದಾರ್ ಎಂ.ದಯಾನಂದ್ ತಿಳಿಸಿದ್ದಾರೆ.

       ಮುಳುಗಿದ ಜಮೀನುಗಳು

      ಮುಳುಗಿದ ಜಮೀನುಗಳು

      ನದಿಯ ಪ್ರವಾಹದಿಂದಾಗಿ ತಾಲೂಕಿನ ಮುಳ್ಳೂರು, ನಗರ್ಲೆ, ಸರಗೂರು, ಸುತ್ತೂರು, ಕುಪ್ಪರವಳ್ಳಿ, ಬಿಳುಗಲಿ ಸೇರಿದಂತೆ ನಾನಾ ಕಡೆ ನದಿ ಪಾತ್ರದ ಜಮೀನುಗಳು ಜಲಾವೃತಗೊಂಡು ರೈತರು ಕೃಷಿ ಚಟುವಟಿಕೆ ಸ್ಥಗಿತಗೊಂಡಿದೆ.

      ಜೂನ್, ಜುಲೈ ತಿಂಗಳಲ್ಲಿ ಕಟಾವು ಹಂತದಲ್ಲಿದ್ದ ಭತ್ತದ ಫಸಲು ಮುಳುಗಡೆಗೊಂಡು ಸಂಕಷ್ಟಕ್ಕೀಡಾಗಿದ್ದ ರೈತರು, ಅಚ್ಚುಕಟ್ಟು ಪ್ರದೇಶದ ನಾಲೆಗಳಿಗೆ ನೀರು ಹರಿಸಿದ್ದರಿಂದ ಭತ್ತ, ರಾಗಿ ಬೆಳೆದು ನಾಟಿಗೆ ಕಾರ್ಯಕ್ಕೆ ಮುಂದಾಗಿದ್ದರು.

      ಇದೀಗ ಮಗದೊಮ್ಮೆ ಮೈದುಂಬಿ ಹರಿಯುತ್ತಿರುವ ಕಪಿಲೆಯ ಪ್ರವಾಹಕ್ಕೆ ಜಮೀನುಗಳು ಮುಳುಗಡೆಗೊಂಡು ರೈತರನ್ನು ಮತ್ತಷ್ಟು ಆತಂಕಕ್ಕೀಡು ಮಾಡಿದೆ.

       4 ಮನೆಗಳು ಮುಳುಗಡೆಯಾಗುವ ಸಂಭವ

      4 ಮನೆಗಳು ಮುಳುಗಡೆಯಾಗುವ ಸಂಭವ

      ಕಪಿಲಾ ನದಿಯ ಹಿನ್ನೀರಿನ ಗುಂಡ್ಲು ನದಿಯೂ ಉಕ್ಕಿ ಹರಿಯುತ್ತಿದ್ದು, ಹಳ್ಳದಕೇರಿ ಬಡಾವಣೆಯ ಮಂಜುನಾಥ್, ಶಿವಣ್ಣ, ನಾಗೇಶ್ ಹಾಗೂ ರಮೇಶ್ ಕುಟುಂಬದವರು ವಾಸಿಸುವ ಮನೆಯ ಮುಂದೆ ನದಿ ನೀರು ಚಾಚಿಕೊಂಡು ನಿಂತಿದೆ. ರಾತ್ರೋರಾತ್ರಿ ಪ್ರವಾಹ ಹೆಚ್ಚಾದರೆ ಈ ನಾಲ್ಕು ಮನೆಗಳು ಮುಳುಗಡೆಯಾಗುವ ಸಂಭವವಿದೆ.

      ಇನ್ನೂ ತೋಪಿನ ಬೀದಿಯ ಕೆಲ ಮನೆಗಳಿಗೆ ನೀರು ನುಗ್ಗಿದೆ. ನದಿಯ ತಗ್ಗು ಪ್ರದೇಶದಲ್ಲಿರುವ ಕುಳ್ಳಂಕಯ್ಯನಹುಂಡಿ ಗ್ರಾಮದ ಮನೆಗಳ ಸಮೀಪದಲ್ಲೇ ನದಿ ನೀರು ನಿಂತಿದೆ. ಪ್ರವಾಹದಲ್ಲಿ ಸ್ವಲ್ಪ ಮಟ್ಟಿಗೆ ಏರಿಕೆ ಕಂಡರೂ ಮನೆಗಳು ಮುಳುಗಡೆಯಾಗುವ ಆತಂಕ ತಂದೊಡ್ಡಿದೆ.

      ಇನ್ನು ಹೆಜ್ಜಿಗೆ ಗ್ರಾಮದ ತುಸು ಎತ್ತರದ ಪ್ರದೇಶದಲ್ಲೇ ಇದ್ದರೂ ಈಗಾಗಲೇ ಮನೆಗಳ ಹತ್ತಿರವೇ ನೀರು ಹರಿಯುತ್ತಿದೆ.

       ನೀರೆತ್ತುವ ಘಟಕಗಳು ಜಲಾವೃತ

      ನೀರೆತ್ತುವ ಘಟಕಗಳು ಜಲಾವೃತ

      ಗುಂಡ್ಲು ನದಿಯ ಪ್ರವಾಹಕ್ಕೆ ಚಾಮರಾಜನಗರ ಮುಖ್ಯರಸ್ತೆಯಲ್ಲಿರುವ ತ್ಯಾಜ್ಯ ಸಂಸ್ಕರಣ ಘಟಕ ಸೇರಿದಂತೆ ಗೋಳೂರು, ಆಲಂಬೂರು, ಗಾಂಧಿನಗರ, ದೇಬೂರು, ಕಣೇನೂರು ಗ್ರಾಮದ ಸಮೀಪವಿರುವ ನೀರೆತ್ತುವ ಘಟಕಗಳು ಜಲಾವೃತಗೊಂಡಿವೆ.

      ಜುಲೈನಲ್ಲಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಬಾಗಿನ ಅರ್ಪಿಸುವ ವೇಳೆಗೆ ಹೊರಹರಿವನ್ನು ಕಡಿಮೆ ಮಾಡಲಾಗಿತ್ತು. ಅದಕ್ಕೂ ಮುನ್ನ ಹೊರಹರಿವು 50 ಸಾವಿರ ಕ್ಯೂಸೆಕ್ ಗಳಷ್ಟಿತ್ತು. ಜು.20ರಿಂದ ಆ.7ರವರೆಗೂ ಮಳೆ ಕಡಿಮೆಯಾಗಿದ್ದರಿಂದ ಹೊರಹರಿವನ್ನು 15 ಸಾವಿರ ಕ್ಯೂಸೆಕ್ ಗೆ ತಗ್ಗಿಸಲಾಗಿತು.

      ವಾಹನಗಳ ಸಂಚಾರ ರದ್ದು

      ವಾಹನಗಳ ಸಂಚಾರ ರದ್ದು

      ಸದ್ಯ ಮೈಸೂರು-ನಂಜನಗೂಡು ರಸ್ತೆಯಲ್ಲಿ ವಾಹನಗಳ ಸಂಚಾರವನ್ನು ರದ್ದುಗೊಳಿಸಲಾಗಿದ್ದು, ಇದೀಗ ಮೈಸೂರಿನಿಂದ ನಂಜನಗೂಡಿಗೆ ತೆರಳುವ ವಾಹನಗಳನ್ನು ತಾಂಡಪುರ ಮುಖಾಂತರ ತೆರಳಲು ಮತ್ತು ಗುಂಡ್ಲುಪೇಟೆ ಕಡೆಯಿಂದ ಮೈಸೂರು ಕಡೆ ಹೋಗುವ ವಾಹನಗಳನ್ನು ಹುಲ್ಲಹಳ್ಳಿ ಮುಖಾಂತರ ಮೈಸೂರಿಗೆ ತೆರಳಲು ವ್ಯವಸ್ಧೆ ಮಾಡಲಾಗಿದೆ.

      ಸಂಪರ್ಕದ ಅಡಚಣೆಯಿಂದಾಗಿ ಮಾಮೂಲಿ ಬಸ್ ನಲ್ಲಿ ತೆರಳುವವರು ಪರದಾಡುವಂತಾಗಿದೆ.

      ನಂಜನಗೂಡು ತಾಲೂಕಿನ ಕಣೇನೂರು, ಹುಲ್ಲಹಳ್ಳಿ, ರಾಂಪುರ, ಹಂಡುವಿನಹಳ್ಳಿ, ದೇಬೂರು, ನಂಜನಗೂಡು, ಸುತ್ತೂರು, ವರುಣ ವ್ಯಾಪ್ತಿಯ ಜಮೀನಿನಲ್ಲಿ ಭತ್ತದ ನಾಟಿ ನಡೆದಿದ್ದು ಇವು ಸಂಪೂರ್ಣ ಮುಳುಗಡೆಯಾಗಿದೆ. ಇದೆಲ್ಲದರ ನಡುವೆ ಸುತ್ತೂರು ಸೇತುವೆಯೂ ಮುಳುಗಡೆಯಾಗುವ ಹಂತ ತಲುಪಿದೆ.

      ಈಗಾಗಲೇ ನಂಜುಂಡೇಶ್ವರ ದೇವಾಲಯದ ಬಳಿ ಇರುವ ಪರಶುರಾಮ ದೇವಾಲಯ, ಸ್ಧಾನಘಟ್ಟ, ಒಕ್ಕಲಗೇರಿ, ಸರಸ್ವತಿ ಕಾಲೋನಿ, ತೋಪಿನಬೀದಿಯ ಕೆಲವು ಮನೆಗಳಿಗೆ ನೀರು ನುಗ್ಗಿದ್ದು ನಿವಾಸಿಗಳಲ್ಲಿ ಆತಂಕ ಮನೆ ಮಾಡಿದೆ. ಅಷ್ಟೇ ಅಲ್ಲದೆ ತಾಲೂಕಿನ ಕುಳ್ಳಂಕನಹುಂಡಿ, ಬೊಕ್ಕಳ್ಳಿ, ಹೆಜ್ಜಿಗೆ, ತೊರೆಮಾವು, ಸುತ್ತೂರು, ಗ್ರಾಮಗಳಲ್ಲಿ ನದಿ ಪಾತ್ರದ ಜಮೀನು, ಮನೆಗಳಿಗೂ ನೀರು ನುಗ್ಗುವ ಸಾಧ್ಯತೆ ಇರುವ ಕಾರಣ ಎಚ್ಚರಿಕೆಯಿಂದ ಇರುವಂತೆ ಅಧಿಕಾರಿಗಳು ಸೂಚಿಸಿದ್ದಾರೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+