Breaking; ಕಬಿನಿ ಭರ್ತಿಗೆ ಕ್ಷಣಗಣನೆ, ನದಿ ಪಾತ್ರದ ಜನರಿಗೆ ಎಚ್ಚರಿಕೆ
ಮೈಸೂರು, ಜುಲೈ 08; ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಪುರ್ವವಸು ಮಳೆಯ ಆರ್ಭಟ ಜೋರಾಗಿದೆ. ಕೊಡಗು ಜಿಲ್ಲೆಯಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ಕಬಿನಿ ಜಲಾಶಯಕ್ಕೆ ಒಳಹರಿವು ಹೆಚ್ಚಾಗಿದೆ.
ಕಾವೇರಿ ನೀರಾವರಿ ನಿಗಮ ನಿಯಮಿತ ಕಬಿನಿ ಜಲಾಶಯದ ಕೆಳಭಾಗದ ಜನರಿಗೆ ಪ್ರವಾಹದ ಮುನ್ನೆಚ್ಚರಿಕೆ ಸೂಚನೆ ನೀಡಿದೆ. ಜಲಾನಯನ ಪ್ರದೇಶದಲ್ಲಿ ಹೆಚ್ಚಾಗಿ ಮಳೆಯಾಗುತ್ತಿದ್ದು, ಜಲಾಶಯಕ್ಕೆ ಒಳಹರಿವು ಹೆಚ್ಚಾಗಿದೆ ಎಂದು ಪ್ರಕಟಣೆ ತಿಳಿಸಿದೆ.
ಜಲಾಶಯ ಗರಿಷ್ಠ ಮಟ್ಟ ತಲುಪುವುದರಿಂದ ಸುಮಾರು 4000.0 ಕ್ಯುಸೆಕ್ ನೀರನ್ನು ನದಿಗೆ ಬಿಡಲಾಗುತ್ತಿದೆ. ಯಾವ ಸಂದರ್ಭದಲ್ಲಾದರೂ ನದಿಗೆ ಹೆಚ್ಚುವರಿ ನೀರು ಬಿಡುವ ಸಂಭವಿದೆ.

ಜನರಿಗೆ ಎಚ್ಚರಿಕೆ; ಸಾರ್ವಜನಿಕರಿಗೆ ಈ ಮೂಲಕ ತಿಳಿಯಪಡಿಸುವುದು ಏನೆಂದರೆ ಕಬಿನಿ ನದಿಯ ತಗ್ಗು ಪ್ರದೇಶದಲ್ಲಿರುವ ಮತ್ತು ನದಿಯ ಎರಡೂ ದಂಡೆಯಲ್ಲಿ ವಾಸಿಸುತ್ತಿರುವ ಜನರು ತಮ್ಮ ಆಸ್ತಿ, ಜಾನುವಾರುಗಳ ರಕ್ಷಣೆ ಬಗ್ಗೆ ಮುನ್ನೆಚ್ಚರಿಕೆ ವಹಿಸಿ ಸುರಕ್ಷಿತ ಸ್ಥಳಗಳಿಗೆ ತೆರಳಲು ಕೋರಲಾಗಿದೆ.
ಗುರುವಾರ ಕಬಿನಿ ಜಲಾಶಯಕ್ಕೆ 18,563 ಒಳಹರಿವು ದಾಖಲಾಗಿತ್ತು. ಕಬಿನಿ ಜಲಾಶಯದ ಗರಿಷ್ಠ ಮಟ್ಟ 696.13 ಮೀಟರ್. ಗುರುವಾರ ಡ್ಯಾಂನಲ್ಲಿ 693.93 ಮೀಟರ್ ನೀರಿನ ಸಂಗ್ರಹವಿದೆ.
ಕಾವೇರಿ ಕೊಳ್ಳದ ಎಲ್ಲಾ ಜಲಾಶಯಗಳು ಭರ್ತಿಯಾಗುತ್ತಿದ್ದು, ರೈತರ ಮೊಗದಲ್ಲಿ ಮಂದಹಾಸ ಮೂಡಿದೆ. ಮೈಸೂರು ಜಿಲ್ಲೆ ಹೆಚ್. ಡಿ. ಕೋಟೆ ತಾಲೂಕಿನ ಬೀಚನಹಳ್ಳಿಯಲ್ಲಿ ಕಬಿನಿ ಜಲಾಶಯವಿದೆ. ಕಾವೇರಿ ಕೊಳ್ಳದ ಪ್ರಮುಖ ಜಲಾಶಯಗಳಲ್ಲಿ ಕಬಿನಿ ಸಹ ಒಂದಾಗಿದೆ.
ಉಳಿದಂತೆ 871.38 ಗರಿಷ್ಠ ಮಟ್ಟದ ಹಾರಂಗಿಯಲ್ಲಿ 869. 89.890 ಗರಿಷ್ಠ ಮಟ್ಟದ ಹೇಮಾವತಿಯಲ್ಲಿ 888.02. 38.04 ಗರಿಷ್ಠ ಮಟ್ಟದ ಕೆಆರ್‌ಎಸ್ ಜಲಾಶಯದಲ್ಲಿ 35.64 ಮೀಟರ್ ನೀರಿನ ಸಂಗ್ರಹವಿದೆ.












Click it and Unblock the Notifications