ಸೈಕಲ್ ಏರಲಿದ್ದಾರೆ ಜೆಡಿಎಸ್ ನ ಬೆಂಕಿ ಮಹದೇವು

ಜೆಡಿಎಸ್ ನಾಯಕರ ವಿರುದ್ಧ ಅಸಮಾಧಾನಗೊಂಡಿರುವ ಪ್ರಬಲ ವೀರಶೈವ ನಾಯಕ ಮತ್ತು ಮಾಜಿ ಸಚಿವ ಎಂ.ಮಹದೇವು ಲೋಕಸಭೆ ಚುನಾವಣೆಯಲ್ಲಿ ಸಮಾಜವಾದಿ ಪಕ್ಷದಿಂದ ಮೈಸೂರಿನಿಂದ ಸ್ಪರ್ಧಿಸಲಿದ್ದಾರೆ. ಸಮಾಜವಾದಿ ಪಕ್ಷ ಅವರಿಗೆ ಅಧಿಕೃತ ಆಹ್ವಾನವನ್ನು ನೀಡಿದೆ.
ಗುರುವಾರ ಸಮಾಜವಾದಿ ಪಕ್ಷದ ಅಧ್ಯಕ್ಷ ಬಾಬಾ ಗೌಡ ಪಾಟೀಲ್ ಮತ್ತು ಪಕ್ಷದ ಮುಖಂಡ ಗೂಳಿಹಟ್ಟಿ ಶೇಖರ್ ಮಹದೇವು ಅವರನ್ನು ಭೇಟಿಯಾಗಿ ಪಕ್ಷಕ್ಕೆ ಬರುವಂತೆ ಆಹ್ವಾನ ನೀಡಿದ್ದಾರೆ. ಶೀಘ್ರದಲ್ಲೇ ಮಹದೇವು ಜೆಡಿಎಸ್ ತೊರೆಯುವುದು ಖಚಿತವಾಗಿದೆ.
ಮೈಸೂರಿರನಲ್ಲಿ ಜೆಡಿಎಸ್ ಲೋಕಸಭೆ ಚುನಾವಣೆಯಲ್ಲಿ ನನಗೆ ಟಿಕೆಟ್ ನೀಡುವುದಿಲ್ಲ. ಮೈಸೂರಿನಿಂದ ಮಾಜಿ ಸಿಎಂ ಸದಾನಂದ ಗೌಡರು ಸ್ಪರ್ಧಿಸುವ ಸಾಧ್ಯತೆ ಇದೆ. ಅವರಿಗೆ ಬೆಂಬಲ ನೀಡಿಲು ಜೆಡಿಎಸ್ ಅಭ್ಯರ್ಥಿ ಕಣಕ್ಕಿಳಿಸುವುದಿಲ್ಲ ಎಂದು ಮಹದೇವು ಹೇಳಿದ್ದಾರೆ.
ಆದ್ದರಿಂದ ಸಮಾಜವಾದಿ ಪಕ್ಷ ಸೇರಿ ಮೈಸೂರಿನಿಂದ ಚುನಾವಣೆಗೆ ಸ್ಫರ್ಧಿಸಲು ಬಯಸಿದ್ದೇನೆ. ಪಕ್ಷ ನನಗೆ ಟಿಕೆಟ್ ನೀಡುತ್ತದೆ ಎಂಬ ನಂಬಿಕೆ ಇದೆ ಎಂದು ಹೇಳುವ ಮೂಲಕ ಮಹದೇವು ಸೈಕಲ್ ಏರುವ ಸೂಚನೆಯನ್ನು ಕೊಟ್ಟಿದ್ದಾರೆ.
ಪಕ್ಷದ ವಿರುದ್ಧ ಅಸಮಾಧಾನ : ಎಂ.ಮಹದೇವು ವಿಧಾನಸಭೆ ಚುನಾವವಣೆ ವೇಳೆಯಲ್ಲಿ ಚಾಮುಂಡೇಶ್ವರಿ ಮತ್ತು ಹನ್ನೂರು ಕ್ಷೇತ್ರದಿಂದ ಟಿಕೆಟ್ ಬಯಸಿದ್ದರು. ಆದರೆ. ಜೆಡಿಎಸ್ ರಾಷ್ಟಾಧ್ಯಕ್ಷ ಎಚ್.ಡಿ.ದೇವೇಗೌಡ ಮತ್ತು ಆಗ ರಾಜ್ಯಾಧ್ಯಕ್ಷರಾಗಿದ್ ಕುಮಾರಸ್ವಾಮಿ ಟಿಕೆಟ್ ನೀಡಲು ಕೊನೆಯ ಕ್ಷಣದಲ್ಲಿ ನಿರಾಕರಿಸಿದ್ದರು.
ಅಂದಿನಿಂದಲೇ ಪಕ್ಷದ ನಾಯಕರ ಧೋರಣೆ ವಿರುದ್ಧ ಮಹದೇವು ಅಸಮಾಧಾನಗೊಂಡಿದ್ದರು. ಸದ್ಯ ಸಮಾಜವಾದಿ ಪಕ್ಷದಿಂದ ಆಹ್ವಾನ ಬಂದಿರುವ ಹಿನ್ನೆಲೆಯಲ್ಲಿ ಜೆಡಿಎಸ್ ತೊರೆಯಲು ನಿರ್ಧರಿಸಿದ್ದಾರೆ. ಇದರಿಂದ ಮೈಸೂರು ಭಾಗದಲ್ಲಿ ಸಮಾಜವಾದಿ ಪಕ್ಷಕ್ಕೆ ಮತ್ತಷ್ಟು ಬಲ ದೊರೆಯಲಿದೆ.
ಕೆಲವು ದಿನಗಳ ಹಿಂದೆ ಮಾಜಿ ಸಚಿವ ಬಸನಗೌಡ ಪಾಟೀಲ್ ಯತ್ನಾಳ್ ಜೆಡಿಎಸ್ ತೊರೆದಿದ್ದರು. ಸದ್ಯ ಮತ್ತೊಬ್ಬ ಹಿರಿಯ ನಾಯಕ ಎಂ.ಮಹದೇವು ಪಕ್ಷ ತೊರೆಯಲು ಸಜ್ಜಾಗಿದ್ದಾರೆ. ಲೋಕಸಭೆ ಚುನಾವಣೆ ಹತ್ತಿರವಾಗುತ್ತಿರುವಾಗ ಜೆಡಿಎಸ್ ನಲ್ಲಿ ಪಕ್ಷಾಂತರಿಗಳ ಸಂಖ್ಯೆ ಹೆಚ್ಚಾಗುತ್ತಿದೆ. (ಜೆಡಿಎಸ್ ತೊರೆದ ಯತ್ನಾಳ್)












Click it and Unblock the Notifications