Rain Alert: ರಾಜ್ಯಕ್ಕೆ ವರ್ಷದ ಮೊದಲ ಮಳೆ; ಸಂಕ್ರಾಂತಿ ದಿನವೂ ಮಳೆ ಮುನ್ಸೂಚನೆ
ರಾಜ್ಯದಲ್ಲಿ ಸಂಕ್ರಾಂತಿ ಹಬ್ಬದ ಸಡಗರ ಜೋರಾಗಿದೆ. ಮುಂಗಾರು ಮತ್ತು ಹಿಂಗಾರಿನಲ್ಲಿ ಉತ್ತಮ ಮಳೆಯಾದ ಕಾರಣ ರೈತರು ಕೂಡ ಸಂತಸಗೊಂಡಿದ್ದು ಅದ್ದೂರಿಯಾಗಿ ಹಬ್ಬ ಆಚರಿಸುವ ಉತ್ಸಾಹದಲ್ಲಿದ್ದಾರೆ. ಹಬ್ಬದ ಮುನ್ನಾದಿನ ಖರೀದಿ ಭರಾಟೆ ಜೋರಾಗಿದ್ದು, ಹಬ್ಬಕ್ಕೆ ಮುನ್ನಾ ದಿನವೇ ಮಳೆರಾಯ ದರ್ಶನ ನೀಡಿದ್ದಾನೆ. ಮೈಸೂರಿನ ಹಲವು ಕಡೆಗಳಲ್ಲಿ ಸೋಮವಾರ ಮಧ್ಯಾಹ್ನ ಸಾಧಾರಣ ಮಳೆಯಾಗಿದೆ.
ಹವಾಮಾನ ವೀಕ್ಷಕ ರವಿಕೀರ್ತಿ ಗೌಡ ಮೈಸೂರಿನಲ್ಲಿ ಸೋಮವಾರ ಮಧ್ಯಾಹ್ನ ಮಳೆಯಾಗಿದೆ ಎಂದು ತಮ್ಮ ಎಕ್ಸ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಮಳೆಯ ವಿಡಿಯೋ ಹಂಚಿಕೊಂಡಿರುವ ಅವರು, ಮೈಸೂರಿನಲ್ಲಿ ಚದುರಿದಂತೆ ಮಳೆಯಾಗಿದೆ ಎಂದು ಹೇಳಿದ್ದಾರೆ. ಬಿಸಿಲಿನ ನಡುವೆಯೂ ಅಲ್ಲಲ್ಲಿ ತುಂತುರು ಮಳೆಯಾಗಿದೆ.

ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತಗೊಂಡಿರುವ ಕಾರಣ ದಕ್ಷಿಣ ಕರ್ನಾಟಕದಲ್ಲಿ ಇನ್ನೂ ಎರಡು ಮೂರು ದಿನ ಮೋಡ ಕವಿದ ವಾತಾವರಣ ಇರಲಿದ್ದು, ತುಂತುರು ಮಳೆ ಸುರಿಯುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಮೋಡ ಕವಿದ ವಾತಾವರಣ ಇರುವ ಕಾರಣ ಚಳಿ ಪ್ರಮಾಣ ಕಡಿಮೆಯಾಗಲಿದೆ.
ಮಳೆ ನಡುವೆಯೂ ಸಂಕ್ರಾಂತಿ ಸಂಭ್ರಮ
ಮೈಸೂರಿನಲ್ಲಿ ಮಧ್ಯಾಹ್ನದ ವೇಳೆಗೆ ಕೆಲವು ನಿಮಿಷ ಮಳೆಯಾಗಿದ್ದು ಸಂಜೆಯಾಗುತ್ತಿದ್ದಂತೆ ಸಂಕ್ರಾಂತಿ ಸಡಗರ ಜೋರಾಗಿತ್ತು. ನಗರದ ಪ್ರಮುಖ ಮಾರುಕಟ್ಟೆಗಳಲ್ಲಿ ಜನ ಹಬ್ಬದ ಖರೀದಿಗೆ ಮುಗಿಬಿದ್ದರು. ಹಬ್ಬದ ಹಿನ್ನಲೆಯಲ್ಲಿ ಹೂವು, ಹಣ್ಣು, ತರಕಾರಿ ಬೆಲೆ ದುಬಾರಿಯಾಗಿದ್ದರೂ ಜನ ಖರೀದಿ ಮಾಡಿದ್ದರು.
ಚಿಕ್ಕಮಗಳೂರಿನಲ್ಲಿ ಮಳೆ
ಚಿಕ್ಕಮಗಳೂರು ಜಿಲ್ಲೆಯಲ್ಲಿ ಕೂಡ ಸೋಮವಾರ ಮಳೆಯಾಗಿದೆ. ಸೋಮವಾರ ರಾತ್ರಿ ಚಿಕ್ಕಮಗಳೂರಿನ ಮೂಡಿಗೆರೆಯ ಕೆಲವು ಭಾಗಗಳಲ್ಲಿ ಅರ್ಧಗಂಟೆಗೂ ಹೆಚ್ಚು ಸಮಯ ಮಳೆಯಾಗಿದ್ದು, ದಿಢೀರ್ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತವಾಗಿತ್ತು. ಇನ್ನು ಎರಡು ದಿನ ದಕ್ಷಿಣ ಒಳನಾಡಿನ ಹಲವು ಕಡೆಗಳಲ್ಲಿ ಮಳೆಯಾಗಲಿದೆ ಎಂದು ನಿರೀಕ್ಷೆ ಮಾಡಲಾಗಿದೆ.
ಮಂಗಳವಾರ, ಬುಧವಾರ ಕೂಡ ರಾಜ್ಯದ ಹಲವು ಕಡೆಗಳಲ್ಲಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ಕೊಟ್ಟಿದೆ. ಚಿಕ್ಕಮಗಳೂರು, ಮೈಸೂರು ಜಿಲ್ಲೆಗಳ ಹಲವು ಕಡೆಗಳಲ್ಲಿ ತುಂತುರು ಮಳೆಯಾಗುವ ಸಾಧ್ಯತೆ ಇದೆ.












Click it and Unblock the Notifications