ಮಾಯವಾಗುತ್ತಿರುವ ಶ್ರೀಗಂಧ: ಇದರ ರಕ್ಷಣೆಯೇ ಬೆಳೆಗಾರರಿಗೆ ಸವಾಲ್?
ಮೈಸೂರು, ಸೆಪ್ಟೆಂಬರ್ 30: ಒಂದು ಕಾಲದಲ್ಲಿ ಮೈಸೂರು ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳು ಶ್ರೀಗಂಧದ ನಾಡಾಗಿದ್ದವು ಮತ್ತು ಇಲ್ಲಿ ತಯಾರಾಗುತ್ತಿದ್ದ ಗಂಧದ ಎಣ್ಣೆ ಮತ್ತಿತರ ಉತ್ಪನ್ನಗಳಿಗೆ ಬಹುಬೇಡಿಕೆಯಿತ್ತು ಎಂಬುದು ನಮಗೆಲ್ಲರಿಗೂ ಗೊತ್ತಿರುವ ವಿಚಾರವೇ... ಇದಕ್ಕೆ ಸಾಕ್ಷಿಯಾಗಿ ಮೈಸೂರ್ ಸ್ಯಾಂಡಲ್ ಸೋಪ್ ನಮ್ಮ ಮುಂದಿದ್ದು, ಜನಪ್ರಿಯವಾಗಿದೆ. ಆದರೆ ಇತ್ತೀಚೆಗಿನ ದಶಕಗಳಲ್ಲಿ ಮೈಸೂರು ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಶ್ರೀಗಂಧವನ್ನು ನೋಡುವುದೇ ಅಪರೂಪವಾಗುತ್ತಿದೆ.
ಮೊದಲೆಲ್ಲ ಎಲ್ಲೆಂದರಲ್ಲಿ ಕಂಡು ಬರುತ್ತಿದ್ದ ಮರಗಳು ಮಾಯವಾಗಿವೆ. ಅಳಿದುಳಿದ ಗಿಡಗಳಿದ್ದರೂ ಅವು ಬೆಳೆಯುವ ಮುನ್ನವೇ ಕಳ್ಳರು ಅದಕ್ಕೆ ಕೊಡಲಿಯಿಡುತ್ತಿರುವುದರಿಂದ ನಾಶವಾಗುತ್ತಿದೆ. ಒಂದೆಡೆ ಶ್ರೀಗಂಧವನ್ನು ಬೆಳೆಯಲು ಸರ್ಕಾರ ಪ್ರೋತ್ಸಾಹ ನೀಡುತ್ತಿದ್ದರೆ ಮತ್ತೊಂದೆಡೆ ಕಾಡುಗಳಲ್ಲಿ ಪ್ರಕೃತಿದತ್ತವಾಗಿ ಬೆಳೆಯುತ್ತಿರುವ ಶ್ರೀಗಂಧದ ಗಿಡಗಳನ್ನು ಉಳಿಸಿಕೊಳ್ಳುವುದೇ ನಮಗೆ ಸವಾಲ್ ಆಗುತ್ತಿದೆ.

ಹಳ್ಳಿಯಿಂದ ಆರಂಭವಾಗಿ ನಗರಗಳ ತನಕ ಎಲ್ಲಿ ಶ್ರೀಗಂಧ ಮರ ಕಾಣಿಸುತ್ತದೆಯೋ ಅದಕ್ಕೆ ಕೊಡಲಿ ಇಡಲು ಕಳ್ಳರು ತಯಾರಾಗಿರುವುದು ಎದ್ದು ಕಾಣಿಸುತ್ತಿದೆ. ಕೆಲವರು ತಮ್ಮ ಜಮೀನುಗಳಲ್ಲಿ ನೆಟ್ಟು ಬೆಳೆಸುವ ಪ್ರಯತ್ನ ಮಾಡಿದರೂ ಕಣ್ತಪ್ಪಿಸಿ ಅವುಗಳ ಬುಡಕ್ಕೆ ಕೊಡಲಿಯಿಡುವ ಕಳ್ಳರಿಂದಾಗಿ ಮತ್ತು ಗಂಧ ಮರ ಬೆಳೆದರೆ ತಮ್ಮ ಜೀವಕ್ಕೆ ಎಲ್ಲಿ ಸಂಚಕಾರ ಬಂದು ಬಿಡುತ್ತೋ ಎಂಬ ಭಯವೂ ಗಂಧದ ಮರವನ್ನು ಬೆಳೆಯಲು ಹಿಂದೇಟು ಹಾಕುವಂತೆ ಮಾಡುತ್ತಿದೆ. ಈಗಾಗಲೇ ಗಂಧದ ಮರಕ್ಕಾಗಿ ಹಲವರು ಜೀವ ಕಳೆದುಕೊಂಡಿದ್ದಾರೆ. ಇನ್ನು ಕೆಲವರು ಗಂಧದ ಮರ ಸಾಗಾಟ ಮಾಡಿ ಜೈಲ್ ಕಂಡಿದ್ದಾರೆ
ಕಳ್ಳಸಾಗಾಣಿಕೆಗೆ ಮರಗಳ ಮಾರಣ ಹೋಮ
ಮೊದಲೆಲ್ಲ ಗಂಧದ ಮರಗಳು ಇತರೆ ಗಿಡಗಳಂತೆ ಬೆಳೆಯುತ್ತಿದ್ದವು. ಆದರೆ ಕಳೆದ ಮೂರ್ನಾಲ್ಕು ದಶಕಗಳಿಂದ ಅವುಗಳಿಗೆ ನಿರೀಕ್ಷೆಗೂ ಮೀರಿ ಬೆಲೆ ಬಂದಿದ್ದರಿಂದ ಕಳ್ಳತನದ ಪ್ರಕರಣಗಳು ಹೆಚ್ಚುತ್ತಲೇ ಹೋಗುತ್ತಿವೆ. ಗಿಡಗಳನ್ನು ಬಿಡದೆ ಕಳ್ಳರು ಕಡಿಯುತ್ತಿರುವುದು ಎದ್ದು ಕಾಣಿಸುತ್ತಿದೆ. ಈಗೀಗ ಗಂಧದ ಮರಗಳ ಮಾರಣ ಹೋಮವೇ ನಡೆದು ಹೋಗಿದೆ ಎನ್ನುವುದು ಅಷ್ಟೇ ಸತ್ಯ.
ಅಗರಬತ್ತಿ, ಸೋಪು, ಸುಗಂಧ ದ್ರವ್ಯ ಮುಂತಾದ ಕಾರ್ಖಾನೆಗಳು ವಿರಳವಾಗಿದ್ದ ಕಾಲದಲ್ಲಿ ಶ್ರೀಗಂಧದ ಮರಗಳು ಹೆಮ್ಮರವಾಗಿ ಬೆಳೆದು ನಿಂತು, ಆ ನಂತರ ಒಣಗಿಬಿದ್ದರೂ ಅದರ ಉಪಯೋಗ ಅರಿಯದೆ ಅದಕ್ಕೆ ಹಣ ದೊರೆಯುತ್ತದೆ ಎಂದರೂ ತಲೆಕೆಡಿಸಿಕೊಳ್ಳದೆ ಜನ ತೆಪ್ಪಗಾಗಿದ್ದರು. ಮರಗಳನ್ನು ನೆಟ್ಟುಬೆಳೆಸುವ ಅಗತ್ಯವಿರಲಿಲ್ಲ. ಅವುಗಳ ಪಾಡಿಗೆ ಅವು ಬೆಳೆಯುತ್ತಿದ್ದವು. ಇತರ ಮರಗಿಡಗಳ ನಡುವೆ ಇರುತ್ತಿದ್ದ ಅವುಗಳನ್ನು ರೈತರು ರಕ್ಷಿಸಿ ಬೆಳೆಸುತ್ತಿದ್ದರು. ಆದರೆ ತೋಟ, ಕಾಡು, ಇನ್ನಿತರ ಪ್ರದೇಶಗಳಲ್ಲಿ ಕಾಣಸಿಗುತ್ತಿದ್ದ ಶ್ರೀಗಂಧದ ಮರಗಳು ನಂತರದ ದಿನಗಳಲ್ಲಿ ಧರೆಗುರುಳಿ ನಾಶವಾಗಿ ಹೋಗಿದ್ದೇ ಗೊತ್ತಾಗಲಿಲ್ಲ.

ರಾತ್ರೋ ರಾತ್ರಿ ಮರಗಳಿಗೆ ಕೊಡಲಿಯೇಟು
ಗಂಧದ ಎಣ್ಣೆಯ ಕಾರ್ಖಾನೆಗಳ ಮಾಲೀಕರು ವಾಮಮಾರ್ಗದಲ್ಲಿ ಗಂಧದ ತುಂಡುಗಳನ್ನು ಪಡೆಯಲು ಮುಂದಾಗಿದ್ದೇ ಗಂಧದ ಮರಗಳ ಮಾರಣ ಹೋಮಕ್ಕೆ ಕಾರಣವಾಯಿತು ಎನ್ನುವುದನ್ನು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ. ಗಂಧದ ತುಂಡಿಗೆ ಉತ್ತಮ ಬೆಲೆ ದೊರೆಯುತ್ತಿದ್ದುದರಿಂದಾಗಿ ಕಾಡು ಗಳ್ಳರು ಗಂಧದ ಮರವನ್ನು ಕಡಿದು ಸಾಗಿಸುವ ಕೃತ್ಯಕ್ಕಿಳಿದರು. ಕಳ್ಳರು ತಮ್ಮ ಜಿಲ್ಲೆಗಳ ಗಡಿದಾಟಿ ಕಳ್ಳತನಕ್ಕಿಳಿದರು ಅದನ್ನು ಖರೀದಿ ಮಾಡಲು ಮಧ್ಯವರ್ತಿಗಳು ಅಲ್ಲಲ್ಲಿ ಹುಟ್ಟಿಕೊಂಡರು.
ಯಾವಾಗ ಗಂಧಕ್ಕೆ ಕೆಜಿಗೆ ಇಂತಿಷ್ಟು ಹಣ ಸಿಗುತ್ತದೆ ಎಂಬುದು ಗೊತ್ತಾಯಿತೋ ಗ್ರಾಮೀಣ ಪ್ರದೇಶಗಳಲ್ಲಿ ಗಂಧ ಕಳ್ಳರ ಹಾವಳಿ ಹೆಚ್ಚಾಯಿತು. ರಾತ್ರೋ ರಾತ್ರಿ ಗಂಧದ ಮರಗಳನ್ನು ಕಡಿದು ಸಾಗಿಸಲು ಆರಂಭಿಸಿದರು. ಕೆಲವರು ತಮ್ಮ ತೋಟದಲ್ಲಿದ್ದ ಮರಗಳನ್ನೇ ಮಾರಿಕೊಂಡರು. ಅಕ್ರಮ ಗಂಧಸಾಗಾಟದಲ್ಲಿ ತೊಡಗಿದಾಗ ಕೆಲವರು ಪೊಲೀಸರಿಗೆ ಸಿಕ್ಕಿಬಿದ್ದರೆ ಮತ್ತೆ ಕೆಲವರು ಸಿಕ್ಕಿಕೊಳ್ಳದೆ ದಂಧೆ ಮುಂದುವರೆಸಿದರು. ಅಷ್ಟರಲ್ಲಾಗಲೇ ಅಸಂಖ್ಯಾತ ಗಂಧದ ಮರಗಳು ಧರೆಗುರುಳಿದ್ದವು.
ಶ್ರೀಗಂಧದ ಉಳಿವಿಗೆ ಶ್ರಮ ಅಗತ್ಯ
ಇನ್ನು ಶ್ರೀಗಂಧ ಮರಗಳಿಗೆ ಉಳಿಗಾಲವಿಲ್ಲ ಎಂದು ತಿಳಿದಾಗ ಸರ್ಕಾರ ಒಂದಷ್ಟು ನಿಬಂಧನೆಗಳನ್ನು ಹೇರಿತು. ಆದರೆ ಕಳ್ಳಸಾಗಾಣಿಕೆದಾರರು ಅದ್ಯಾವುದಕ್ಕೆ ಸೊಪ್ಪು ಹಾಕದೆ ವಾಮಮಾರ್ಗದಲ್ಲಿ ಗಂಧವನ್ನು ಸಾಗಿಸುವ ಕಾಯಕವನ್ನು ಮಾಡುತ್ತಲೇ ಇದ್ದರು. ಇದರಿಂದ ಒಂದೆಡೆ ಶ್ರೀಗಂಧ ಮರಗಳು ಸಂಪೂರ್ಣ ನಾಶವಾಗಿ ಹೋದರೆ, ಮತ್ತೊಂದೆಡೆ ಹಣದ ದುರಾಸೆಗೆ ಬಿದ್ದ ಕೆಲವರು ಇನ್ನೂ ಬಲಿಯದ ಮರಗಳಿಗೆ ಕೊಡಲಿಟ್ಟು ನಾಶ ಮಾಡಿದರು. ಈ ನಡುವೆ ಅಳಿದುಳಿದ ಮರಗಳನ್ನು ರಕ್ಷಿಸಿಕೊಳ್ಳುವುದೇ ಒಂದು ಸವಾಲ್ ಆಗಿದೆ. ಗಂಧದ ಮರದಿಂದಾಗಿ ತಮ್ಮ ಜೀವಕ್ಕೆ ಎಲ್ಲಿ ಅಪಾಯ ಬಂದು ಬಿಡಬಹುದೋ ಎಂಬ ಭಯವೂ ಜನರನ್ನು ಕಾಡುತ್ತಿದೆ.
ಇದರ ನಡುವೆ ಸ್ಯಾಂಡಲ್ ಸ್ಪೈಕ್ ಎಂಬ ರೋಗವನ್ನು ಬಾಧಿಸುತ್ತಿದೆ. ಮೈಕೋ ಪ್ಲಾಸ್ಮಾಟಿಕ್ ಆರ್ಗ್ಯನಿಸಂ ಎಂಬ ಬ್ಯಾಕ್ಟೀರಿಯಾದಿಂದ ಹರಡುವ ಈ ರೋಗಕ್ಕೆ ಬಲಿಯಾದ ಗಿಡಗಳ ತುದಿಭಾಗದ ಎಲೆಗಳು ಮೊದಲಿಗೆ ಒಣಗಿ ಬಳಿಕ ಕೊಂಬೆಗಳು ನಿತ್ರಾಣಗೊಂಡು ಸಾಯುತ್ತವೆ. ಈ ರೋಗ ಕೂಡ ಗಂಧದ ಮರವನ್ನು ಬಲಿತೆಗೆದುಕೊಳ್ಳುತ್ತಿದೆ. ಒಟ್ಟಾರೆ ಶ್ರೀಗಂಧದ ಮರಗಳನ್ನು ಮುಂದಿನ ತಲೆಮಾರಿಗೆ ಉಳಿಸುವುದು ಕಷ್ಟವಾಗಿದೆ. ಗಿಡಗಳನ್ನು ಬೆಳೆಸಿ ಮರವನ್ನಾಗಿಸುವುದು ಸವಾಲಿನ ಕೆಲಸವಾಗಿದೆ. ಅರಣ್ಯ ಇಲಾಖೆ ಕಟ್ಟು ನಿಟ್ಟಿನ ಕ್ರಮ ಕೈಗೊಂಡು ಶ್ರೀಗಂಧದ ಉಳಿವಿಗೆ ಶ್ರಮವಹಿಸಬೇಕಾಗಿದೆ.












Click it and Unblock the Notifications