ಕರ್ನಾಟಕದಲ್ಲಿ ವಂದೇ ಭಾರತ್ ರೈಲಿಗೆ ಹೆಚ್ಚಿದ ಬೇಡಿಕೆ: ಪ್ರತಿನಿತ್ಯ 95% ಆಸನಗಳು ಭರ್ತಿ
ಮೈಸೂರು, ಫೆಬ್ರವರಿ 25: ದಕ್ಷಿಣ ಭಾರತದ ಮೊದಲ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಸೇವೆಗೆ ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು, ಪ್ರಯಾಣಿಕರಿಂದಲೂ ಸಕತ್ ಡಿಮಾಂಡ್ ಕೇಳಿ ಬರುತ್ತಿದೆ.
ಚೆನ್ನೈ-ಬೆಂಗಳೂರು-ಮೈಸೂರು ನಡುವೆ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಸಂಚಾರ ನಡೆಸುತ್ತಿದೆ. ಇದು ಕರ್ನಾಟಕದ ಮೊದಲ ವಂದೇ ಭಾರತ್ ರೈಲಾಗಿದೆ. ಬೆಂಗಳೂರು-ಹುಬ್ಬಳ್ಳಿ ಮಾರ್ಗದಲ್ಲಿಯೂ ರೈಲು ಸಂಚಾರ ಆರಂಭಿಸಲು ಈಗಾಗಲೇ ರೈಲ್ವೆ ಇಲಾಖೆ ಮುಂದಾಗಿದೆ. ಸದ್ಯ ಈ ರೈಲು ಕೈಗಾರಿಕಾ ಕೇಂದ್ರ ಚೆನ್ನೈ, ತಂತ್ರಜ್ಞಾನ ಮತ್ತು ಸ್ಟಾರ್ಟ್‌ಅಪ್ ಕೇಂದ್ರ ಬೆಂಗಳೂರು ಮತ್ತು ಪ್ರಸಿದ್ಧ ಪ್ರವಾಸಿ ನಗರವಾದ ಮೈಸೂರಿನ ನಡುವಿನ ಸಂಪರ್ಕ ಹೆಚ್ಚಿದ್ದು, ಪ್ರಯಾಣದ ಅವಧಿಯನ್ನೂ ಕಡಿಮೆ ಮಾಡಿದೆ.

ಬುಧವಾರ ಹೊರತುಪಡಿಸಿ ವಾರದ ಉಳಿದ ಎಲ್ಲಾ ದಿನಗಳಲ್ಲೂ ಸಂಚರಿಸುವ ಈ ಐಷಾರಾಮಿ ರೈಲಿಗೆ ಆರಂಭದಲ್ಲಿ ನೀರಸ ಪ್ರತಿಕ್ರಿಯೆ ಇತ್ತು. ಆದರೆ, ಇದೀಗ ಸರಾಸರಿ ಶೇ.95 ರಷ್ಟು ಆಸನಗಳು ಭರ್ತಿಯಾಗುತ್ತಿವೆ ಎಂದು ನೈರುತ್ಯ ರೈಲ್ವೆ ಮೂಲಗಳು ತಿಳಿಸಿವೆ.
ಹವಾನಿಯಂತ್ರಿತ ಹಾಗೂ ಸುಸಜ್ಜಿತ ಆಸನಗಳುಳ್ಳ ಈ ಐಷಾರಾಮಿ ರೈಲಿನಲ್ಲಿ ಅತಿ ಕಡಿಮೆ ಅವಧಿಯಲ್ಲಿ ಊರು ತಲುಪಬಹುದಾದ್ದರಿಂದ ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ವೃತ್ತಿನಿರತರು, ಉದ್ಯಮಿಗಳು, ಅಧಿಕಾರಿ ವರ್ಗದವರು ಪ್ರಯಾಣಿಸಲು ಆಸಕ್ತಿ ತೋರುತ್ತಿದ್ದಾರೆ. ಅದರಿಂದಾಗಿ ಮೈಸೂರು- ಬೆಂಗಳೂರು ನಡುವಿನ ಪ್ರಯಾಣ ಇದೀಗ ಮತ್ತಷ್ಟು ಸುಗಮವಾಗಿದೆ.
ತಮಿಳುನಾಡು ರಾಜಧಾನಿ ಚೆನ್ನೈನಿಂದ ಬೆಂಗಳೂರು-ಮೈಸೂರು ಮಾರ್ಗವಾಗಿ ವಂದೇ ಭಾರತ್ ರೈಲು ಸಂಚಾರ ನಡೆಸುತ್ತಿದೆ. ಈಗ ತೆಲಂಗಾಣದ ಹೈದರಾಬಾದ್‌ನಿಂದ ಮೈಸೂರಿಗೆ ಇಂತಹ ಮತ್ತೊಂದು ರೈಲು ಸೇವೆ ಆರಂಭಿಸಬೇಕು ಎಂದು ಬೇಡಿಕೆ ಇಡಲಾಗಿದೆ. ರೈಲು ಬಳಕೆದಾರರ ಫೇಸ್‌ಬುಕ್ ಖಾತೆಗಳಲ್ಲಿ ಈ ಕುರಿತು ಚರ್ಚೆಗಳು ನಡೆಯುತ್ತಿವೆ.
ಚೆನ್ನೈನಿಂದ ಮುಂಜಾನೆ 5.30 ಗಂಟೆಗೆ ಹೊರಡುವ ರೈಲು, ಬೆಳಗ್ಗೆ 7.20ಕ್ಕೆ ಕಟ್ಟಾಡಿ ಜಂಕ್ಷನ್, 10.15ಕ್ಕೆ ಬೆಂಗಳೂರು ಹಾಗೂ ಮಧ್ಯಾಹ್ನ 12.30 ಗಂಟೆಗೆ ಮೈಸೂರು ತಲುಪಲಿದೆ. ಅದೇ ದಿನ ಮಧ್ಯಾಹ್ನ 1.05 ಗಂಟೆಗೆ ಮೈಸೂರು ರೈಲು ನಿಲ್ದಾಣದಿಂದ ಹೊರಟು ಮಧ್ಯಾಹ್ನ 2.50 ಗಂಟೆಗೆ ಬೆಂಗಳೂರು, ಸಂಜೆ 5.35ಕ್ಕೆ ಕಟ್ಟಾಡಿ ಜಂಕ್ಷನ್ ಹಾಗೂ ರಾತ್ರಿ 7.30 ಗಂಟೆಗೆ ಚೆನ್ನೈ ರೈಲು ನಿಲ್ದಾಣ ತಲುಪಲಿದೆ.
ಮೈಸೂರಿನಿಂದ ಚೆನ್ನೈಗೆ ಎಕ್ಸಿಕ್ಯೂಟಿವ್ ಚೇರ್‌ಕಾರ್ ಪ್ರಯಾಣ ದರ 1,215 ರೂ, ಚೇರ್‌ಕಾರ್‌ನಲ್ಲಿ 720 ರೂ, ಮೈಸೂರಿನಿಂದ ಚೆನ್ನೈಗೆ ಎಕ್ಸಿಕ್ಯೂಟಿವ್ ಚೇರ್‌ಕಾರ್‌ಗೆ 2,485 ರೂ. ಮತ್ತು ಚೇರ್ ಕಾರ್‌ಗೆ 1,365 ರೂ. ಹಾಗೂ ಚೆನ್ನೈನಿಂದ ಮೈಸೂರಿಗೆ ಎಕ್ಸಿಕ್ಯೂಟಿವ್ ಚೇರ್ ಕಾರ್‌ನಲ್ಲಿ 1,835 ರೂ., ಹಾಗೂ ಚೇರ್ ಕಾರ್‌ನಲ್ಲಿ 940 ರೂ. ಪ್ರಯಾಣ ದರ ನಿಗದಿಯಾಗಿದೆ.
ವಂದೇ ಭಾರತ್ ರೈಲಿನ ವಿಶೇಷತೆ ಏನು..?
ವಂದೇ ಭಾರತ್ ಎಕ್ಸ್‌ಪ್ರೆಸ್ ಭಾರತದ ಮೊದಲ ಸೆಮಿ ಹೈಸ್ಪೀಡ್ ರೈಲು. ಇದು ವಿಶ್ವದರ್ಜೆಯ ಪ್ರಯಾಣಿಕರ ಸೌಕರ್ಯಗಳನ್ನು ಹೊಂದಿದೆ. ವಂದೇ ಭಾರತ್ ರೈಲಿನಲ್ಲಿ ಆನ್ ಬೋರ್ಡ್ ಉಪಾಹಾರದ ವ್ಯವಸ್ಥೆ ಇದೆ, ಮಾಹಿತಿ ವ್ಯವಸ್ಥೆ, ಚಾರ್ಜಿಂಗ್ ಪಾಯಿಂಟ್, ರೀಡಿಂಗ್ ಲೈಟ್ ವ್ಯವಸ್ಥೆ, ಸ್ವಯಂ ಚಾಲಿತ ಬಾಗಿಲು, ಸಿಸಿಟಿವಿ, ಬಯೋ ಶೌಚಾಲಯ ವ್ಯವಸ್ಥೆ. ಪ್ರತಿ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿನಲ್ಲಿ 1,128 ಪ್ರಯಾಣಿಕರ ಸೀಟಿನ ಸಾಮರ್ಥ್ಯ ಇದೆ. 16 ಬೋಗಿಗಳನ್ನು ಹೊಂದಿದ್ದು, 384 ಮೀ. ಉದ್ದವಿದೆ. ಅಲ್ಲದೇ ಪ್ರತ್ಯೇಕ ಇಂಜಿನ್‌ಇಲ್ಲ.












Click it and Unblock the Notifications