ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಚಿತ್ರಗಳಲ್ಲಿ : ಚಿರನಿದ್ರೆಗೆ ಜಾರಿದ ಶ್ರೀಕಂಠದತ್ತ ಒಡೆಯರ್

By Mahesh
|
Google Oneindia Kannada News

ಮೈಸೂರು, ಡಿ.11: ಇಲ್ಲಿನ ಮಧುವನದಲ್ಲಿ ಯದುವಂಶದ ಅರಸ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಅವರ ಅಂತ್ಯಕ್ರಿಯೆ ಧಾರ್ಮಿಕ ವಿಧಿವಿಧಾನದಂತೆ ನಡೆಸಲಾಗಿದೆ. ಒಡೆಯರ್ ಅವರ ಹಿರಿಯ ಸೋದರಿ ಗಾಯತ್ರಿ ದೇವಿ ಅವರ ಪುತ್ರ ಕಾಂತರಾಜೇ ಅರಸ್ ಒಡೆಯರ್ ಚಿತೆಗೆ ಅಗ್ನಿ ಸ್ಪರ್ಶ ಮಾಡಿದರು. ಈ ಮೂಲಕ ಶ್ರೀಕಂಠದತ್ತ ಒಡೆಯರ್ ಪಂಚಭೂತಗಳಲ್ಲಿ ಲೀನವಾದರು.

ಯದುವಂಶದ ಅರಸರ ಅಂತ್ಯಕ್ರಿಯೆಗಾಗಿಯೇ ಮೀಸಲಾಗಿರುವ 10 ಎಕರೆ ವಿಸ್ತೀರ್ಣದ ಮಧುವನದಲ್ಲಿ ಮುಮ್ಮಡಿ ಕೃಷ್ಣರಾಜ ಒಡೆಯರ್, ಚಾಮರಾಜ ಒಡೆಯರ್, ಜಯಚಾಮರಾಜೇಂದ್ರ ಒಡೆಯರ್, ಕಂಠೀರವ ನರಸಿಂಹ ಒಡೆಯರ್ ಸೇರಿದಂತೆ 25ಕ್ಕೂ ಅಧಿಕ ಅರಸರು ಹಾಗೂ ಮಹಾರಾಣಿಯರ ಅಂತ್ಯ ಸಂಸ್ಕಾರ ನಡೆದಿದೆ.

ಇದಕ್ಕೂ ಮುನ್ನ ಮುಂಜಾನೆಯಿಂದ ಅಂಬಾ ವಿಲಾಸ ಅರಮನೆಯಲ್ಲಿ ಒಡೆಯರ್ ಪಾರ್ಥಿವ ಶರೀರವನ್ನು ಅಂತಿಮ ದರ್ಶನಕ್ಕೆ ಇಡಲಾಗಿತ್ತು. ಅರಮನೆ ಪುರೋಹಿತರ ನೇತೃತ್ವದಲ್ಲಿ ಧಾರ್ಮಿಕ ವಿಧಿವಿಧಾನಗಳನ್ನ ನೆರವೇರಿಸಲಾಯ್ತು. [ಶ್ರೀಕಂಠದತ್ತ ಒಡೆಯರ್ ಅವರಿಗೆ ಚಿತ್ರನಮನ]

ಚಾಮುಂಡೇಶ್ವರಿ, ನಂಜನಗೂಡು, ಮೇಲುಕೋಟೆ ಸೇರಿದಂತೆ ಹಲವು ಪ್ರಮುಖ ದೇಗುಲಗಳ ಪ್ರಸಾದ ಅರ್ಪಣೆ ಮಾಡಲಾಯ್ತು. ಚಿನ್ನ ಲೇಪಿತ ಪಲ್ಲಕ್ಕಿಯಲ್ಲಿ ಒಡೆಯರ್ ಪಾರ್ಥಿವ ಶರೀರದ ಅಂತಿಮ ಯಾತ್ರೆ ಹೊರಟಿತು. ಮೈಸೂರಿನ ಅರಮನೆ ವರಹಾ ಗೇಟ್, ಗನ್ ಹೌಸ್, ನಂಜನಗೂಡು ರಸ್ತೆ ಮಾರ್ಗ ಮೂಲಕ ಮಧುವನಕ್ಕೆ ಪಾರ್ಥಿವ ಶರೀರವನ್ನ ತರಲಾಯ್ತು. ಚಿರನಿದ್ರೆಗೆ ಲೀನವಾದ ಶ್ರೀಕಂಠದತ್ತ ಒಡೆಯರ್ ಅವರ ಪಾರ್ಥೀವ ಶರೀರ ಇರಿಸಿದ್ದ ಕಲ್ಯಾಣಮಂಟಪದ ಕಥೆ ಮುಂದೆ ಓದಿ...

ಕಲ್ಯಾಣಮಂಟಪ ಕಾಕತಾಳೀಯ

ಕಲ್ಯಾಣಮಂಟಪ ಕಾಕತಾಳೀಯ

ಅಂಬಾ ವಿಲಾಸ ಅರಮನೆ ಸಮೀಪದ ಅಷ್ಟ ಭುಜಾಕೃತಿ ವಾಸ್ತು ವಿನ್ಯಾಸವುಳ್ಳ ಸಭಾಂಗಣ ಅರಸರ ನೋವು ನಲಿಗೆ ಸಾಕ್ಷಿಯಾಗಿದೆ. ಗಾಜಿನ ಮೇಲ್ಛಾವಣಿ ಹೊಂದಿರುವ ಭವ್ಯ ದೀಪಗಳ ಗೊಂಚಲು ಹೊಂದಿರುವ ಗುಮ್ಮಟ. ಸ್ಕಾಟ್ಲೆಂಡಿನ ಗ್ಲಾಸ್ಗೋನಿಂದ ಬಂದಿರುವ ಗಾಜಿನ ಹಾಳೆಯಲ್ಲಿ ಚಿತ್ರಿತವಾಗಿರುವ ನವಿಲು ಕಣ್ಮನ ಸೆಳೆಯುತ್ತದೆ.

1906ರಲ್ಲಿ ವಿದ್ಯುತ್ ಕಂಡ ಮೈಸೂರು 1912ರಲ್ಲಿ ಅರಮನೆಗೆ ವಿದ್ಯುತ್ ಸಂಪರ್ಕ ಸೌಲಭ್ಯ ಪಡೆಯಿತು. ಸುಂದರ ಬೆಳಕಿನ ನಡುವೆ ನಿನ್ನೆ ದಿನ ಶ್ರೀಕಂಠದತ್ತ ಅವರ ಮೃತದೇಹ ಇರಿಸಲಾಗಿತ್ತು. ಇದೇ ಮಂಟಪದಲ್ಲೇ ಅವರ ಉಪನಯನ, ಮದುವೆ ಕಾರ್ಯ ನಡೆದಿತ್ತು. ಈಗ ಅಲ್ಲೇ ಅಂತಿಮ ದರ್ಶನ ನೀಡಿದರು.

ಅಂತಿಮ ನಮನ

ಅಂತಿಮ ನಮನ

ಮುಂಜಾನೆ 3 ಗಂಟೆಯಿಂದಲೇ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್‌ ಪಾರ್ಥಿವ ಶರೀರದ ದರ್ಶನ ಪಡೆಯಲು ಜನರು ಆಗಮಿಸುತ್ತಿದ್ದರು. ಬೆಳಗ್ಗೆ 9 ಗಂಟೆ ಸುಮಾರಿಗೆ ಸಿಎಂ ಸಿದ್ದರಾಮಯ್ಯ ತಮ್ಮ ಸಂಪುಟ ಸಹೋದ್ಯೋಗಿಗಳ ಜೊತೆ ಆಗಮಿಸಿ ಮೃತರಿಗೆ ಅಂತಿಮ ನಮನ ಸಲ್ಲಿಸಿದರು.

ಅಂತಿಮ ಸಂಸ್ಕಾರ

ಅಂತಿಮ ಸಂಸ್ಕಾರ

ಶ್ರೀಕಂಠದತ್ತ ಒಡೆಯರ್ ಅಂತಿಮ ಸಂಸ್ಕಾರಕ್ಕೆ ಸಿದ್ಧತೆಗಳನ್ನು ನಿನ್ನೆ ರಾತ್ರಿಯಿಂದಲೇ ನಡೆಸಲಾಗಿತ್ತು. ನಂಜನಗೂಡು, ಚಾಮುಂಡೇಶ್ವರಿ, ಮೇಲುಕೋಟೆ, ಶ್ರೀರಂಗಪಟ್ಟಣ ದೇವಾಲಯಗಳ ಪ್ರಸಾದ ಅರಮನೆಗೆ ಬಂದು ತಲುಪಿದ ಮೇಲೆ ವೇ.ಬ್ರ. ಭಾನುಪ್ರಕಾಶ್ ಶರ್ಮ ಅವರ ಮಾರ್ಗದರ್ಶನದಲ್ಲಿ ವೇದ ಮಂತ್ರ ಪಠಣ, ಅಂತಿಮ ಸಂಸ್ಕಾರ ಧಾರ್ಮಿಕ ವಿಧಿ ವಿಧಾನಗಳು ನಡೆದವು

ಅಂತಿಮ ನಮನ

ಅಂತಿಮ ನಮನ

ಮಹಾರಾಜರ ಅಂತಿಮ ದರ್ಶನಕ್ಕೆ ಜನಸಾಗರ ಹರಿದು ಬರುತ್ತಿರುವ ಹಿನ್ನಲೆಯಲ್ಲಿ ಪೊಲೀಸರು ಜನರನ್ನು ನಿಯಂತ್ರಿಸಲು ಅರಮನೆಯ ನಾಲ್ಕು ಗೇಟ್ ಗಳನ್ನು ಮುಚ್ಚಿದ್ದಾರೆ. ಕೆಲವು ಹೊತ್ತಿನಲ್ಲಿ ಅಂತ್ಯಸಂಸ್ಕಾರದ ವಿಧಿವಿಧಾನಗಳು ಆರಂಭವಾಗುವುದರಿಂದ ಜನರನ್ನು ನಿಯಂತ್ರಿಸಲು ಪೊಲೀಸರು ಈ ಕ್ರಮ ಕೈಗೊಂಡಿದ್ದರು.

ನಿನ್ನೆ ದಿವಸ ಬೆಂಗಳೂರು -ಮೈಸೂರು ರಸ್ತೆಯ ಇಕ್ಕೆಲಗಳಲ್ಲಿ ನಿಂತು ಜನರು ಮಹಾರಾಜರಿಗೆ ಅಂತಿಮ ನಮನ ಸಲ್ಲಿಸಿದರು.

ಕುಟುಂಬಸ್ಥರಿಂದ ನಮನ

ಕುಟುಂಬಸ್ಥರಿಂದ ನಮನ

ಸಾರ್ವಜನಿಕ ದರ್ಶನ ನಂತರ ಕುಟುಂಬ ವರ್ಗ, ಮಹಾರಾಣಿ ಪ್ರಮೋದಾ ದೇವಿ, ಒಡೆಯರ್ ಅವರ ಸೋದರಿಯರು ಪಾರ್ಥೀವ ಶರೀರಕ್ಕೆ ವಂದನೆ ಸಲ್ಲಿಸಿದರು. ನಂತರ ಮಧುವನಕ್ಕೆ ಚಿನ್ನದ ಪಲ್ಲಕ್ಕಿ ಮೂಲಕ ಕರೆದೊಯ್ಯಲಾಯಿತು.

ಒಡೆಯರ್ ಅವರ ಉಯಿಲು

ಒಡೆಯರ್ ಅವರ ಉಯಿಲು

ಜಯಚಾಮರಾಜೇಂದ್ರ ಒಡೆಯರ್ ಬಹದ್ದೂರ್ ಹಾಗೂ ತ್ರಿಪುರ ಸುಂದರಮಣಿ ಅವರ ಪುತ್ರರಾಗಿ 1953ರ ಫೆಬ್ರವರಿ 20 ರಂದು ಜನಿಸಿದ ಶ್ರೀಕಂಠದತ್ತ ಒಡೆಯರ್ ಅವರು ಬೆಂಗಳೂರಿನ ವಿಕ್ರಮ್ ಆಸ್ಪತ್ರೆಯಲಿ ಡಿಸೆಂಬರ್ 10 ರಂದು ಮೃತಪಟ್ಟಿದ್ದಾರೆ. ಇವರ ಅಂತ್ಯಸಂಸ್ಕಾರವನ್ನು ಸೋದರಿ ಪುತ್ರ ಕಾಂತರಾಜೇ ಅರಸ್ ನೆರವೇರಿಸಿದ್ದಾರೆ. ಕಾಂತರಾಜೇ ಅರಸ್ ಅವರೇ ಒಡೆಯರ್ ಕುಲದ ಮುಂದಿನ ಉತ್ತರಾಧಿಕಾರಿ ಎನ್ನಲಾಗಿದೆ. ಇನ್ನೂ ಶ್ರೀಕಂಠದತ್ತ ಒಡೆಯರ್ ಅವರ ಉಯಿಲು ವಿವರಗಳು ಬಹಿರಂಗಗೊಂಡಿಲ್ಲ.

English summary
In pics : Srikantadatta Narasimharaja Wodeyar cremation ceremony held at Madhuvana, the graveyard of the Mysore Royal Family, off National Highway 212 (Mysore-Nanjangud road) in Mysore on Wednesday, December 11.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X