'ಚರಂಡಿಯೊಳಗೆ ಮೂವತ್ತು ಸೆಕೆಂಡ್ ಮುಳುಗಿ ಕೈಯಿಂದ ಕಸ ತೆಗೆದೆ'
ಮೈಸೂರು, ಜೂನ್ 9 : ಮೈಸೂರು ನಗರ ಪಾಲಿಕೆಯಲ್ಲಿ ಮ್ಯಾನ್ ಹೋಲ್ ಸ್ವಚ್ಛಗೊಳಿಸಲು ಯಂತ್ರಗಳಿವೆ. ದುಡ್ಡು ಕೊಟ್ಟು ಕರೆಸಿ ಮೇಡಂ. ಅದರಿಂದ ಕ್ಲೀನ್ ಮಾಡ್ಸೋಣ ಅಂತಾ ಹೇಳಿದರೂ ಕೇಳಲಿಲ್ಲ. ಯಂತ್ರ ತರಿಸೋಕೆ ಹಣ ಎಲ್ಲಿಂದ ತರೋದು, ನೀನೇ ಕ್ಲೀನ್ ಮಾಡು ಅಂದರು.
-ಚಾಮುಂಡಿ ಬೆಟ್ಟದಲ್ಲಿ ಉಕ್ಕಿ ಹರಿಯುತ್ತಿದ್ದ ಮ್ಯಾನ್ ಹೋಲ್ ಗೆ ಇಳಿದು, ಅದರಲ್ಲಿ ಮುಳುಗಿ ಸ್ವಚ್ಛಗೊಳಿಸಿದ ಪೌರ ಕಾರ್ಮಿಕ ಗಣೇಶ ಅವರ ಅಸಹಾಯಕತೆಯನ್ನು ಬಿಂಬಿಸುವ ಮಾತುಗಳಿವು.
ಒನ್ ಇಂಡಿಯಾ ಕನ್ನಡದೊಂದಿಗೆ ಗಣೇಶ್ ತಮ್ಮ ಅನುಭವವನ್ನು ಹಂಚಿಕೊಂಡ ಪರಿ ಇದು. ಮಂಗಳವಾರ ಬೆಳಗ್ಗೆ 9 ಗಂಟೆಗೆ ಚಾಮುಂಡಿಬೆಟ್ಟ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಗೀತಾ ನಮ್ಮನ್ನು ಕರೆಸಿ, ನಮ್ಮ ಮನೆ ಮುಂದೆ ಮ್ಯಾನ್ ಹೋಲ್ ಕಟ್ಟಿಕೊಂಡಿದೆ. ಅದನ್ನು ಸ್ವಚ್ಛ ಮಾಡಿ ಎಂದರು.[ಪೌರಕಾರ್ಮಿಕನನ್ನು ಮ್ಯಾನ್ ಹೋಲಿಗಿಳಿಸಿದ ಗ್ರಾಪಂ ಅಧ್ಯಕ್ಷೆ ಅಮಾನತು]

ಅದಕ್ಕೆ ನಾನು ಯಂತ್ರ ಇದೆ ಅಲ್ವಾ ಮೇಡಂ ಅಂದೆ. ಅಷ್ಟೇ ಅಲ್ಲ, ಗ್ರಾಮ ಪಂಚಾಯಿತಿಯಿಂದ ಹಣ ನೀಡಿದರೆ ಅವುಗಳನ್ನು ತಂದು ಸ್ವಚ್ಛ ಮಾಡಿಸಬಹುದಲ್ಲ ಎಂದು ಕೂಡ ಹೇಳಿದೆ. ಅದಕ್ಕೆ ಗೀತಾ ಅವರು ಸಿಡಿಮಿಡಿಗೊಂಡರು. ಯಂತ್ರಕ್ಕೆ ಹಣ ಎಲ್ಲಿದೆ? ನೀನು ಕ್ಲೀನ್ ಮಾಡಿದರೆ ಮಾಡು, ಇಲ್ಲದಿದ್ದಲ್ಲಿ ಪಿಡಿಒಗೆ ಕಂಪ್ಲೇಂಟ್ ಮಾಡುತ್ತೇನೆ ಎಂದು ಹೇಳಿ ಮನೆ ಒಳಗೆ ಹೋದರು.
ಪಿಡಿಒಗೆ ಹೋಗಿ ಫೋನ್ ಮಾಡಿದ್ದೇನೆ. ಅವರು ನೀನೇ ಸ್ವಚ್ಛ ಮಾಡಬೇಕೆಂದು ಹೇಳಿದ್ದಾರೆ ಎಂದರು. ಆದರೂ ನಾನು ಸುಮ್ಮನೆ ನಿಂತಿದ್ದೆ. ಏನು, ನೀನು ಮಾಡುತ್ತಿಯೋ ಇಲ್ವೋ ಅಂದರು. ಅಯ್ಯೋ ಎಲ್ಲಿ, ನನ್ನ ಕೆಲಸಕ್ಕೆ ಕಂಟಕ ಬರುತ್ತದೆಯೋ ಎಂದು ವಿಧಿಯಿಲ್ಲದೆ ಬಟ್ಟೆ ಕಳಚಿ, ಸೊಂಟಕ್ಕೆ ಬಟ್ಟೆಯೊಂದನ್ನು ಸುತ್ತಿಕೊಂಡು, ಮ್ಯಾನ್ ಹೋಲ್ ಮುಚ್ಚಳ ಸರಿಸಿ, ಅದರಲ್ಲಿ ಇಳಿದು, ಕಾಲಿನಿಂದ ಕಟ್ಟಿಕೊಂಡ ಕಸ ತೆಗೆಯಲು ಯತ್ನಿಸಿದೆ.
ಆದರೆ ಆ ಜಾಗ ಎಟುಕದೇ ಇದ್ದಾಗ ಮುಳುಗಿದೆ. 30 ರಿಂದ 35 ಸೆಕೆಂಡ್ ಆ ಕಲುಷಿತ ನೀರಿನಲ್ಲಿ ಮುಳುಗಿಯೇ ಕಟ್ಟಿಕೊಂಡ ಕಸವನ್ನು ಕೈಯಿಂದ ತೆಗೆದ ಮೇಲೆಯೇ ಹೊರ ಬಂದೆ. ಅಷ್ಟರಲ್ಲಿ ಉಸಿರುಗಟ್ಟಿದಂತಾಗಿ ಬಾಯಿ ತೆರೆದಾಗ, ಎರಡು ಗುಟುಕು ಆ ಕಲುಷಿತ ನೀರು ಕುಡಿದುಬಿಟ್ಟೆ.[ಮೈಸೂರಿನಲ್ಲಿ ಪೌರಕಾರ್ಮಿಕನ ಮ್ಯಾನ್ ಹೋಲಿಗಿಳಿಸಿದ ಗ್ರಾಪಂ ಅಧ್ಯಕ್ಷೆ!]

ಅಂತೂ ಮ್ಯಾನ್ ಹೋಲ್ ಸ್ವಚ್ಛ ಮಾಡಿ, ಅದರ ಮುಚ್ಚಳ ಬಂದ್ ಮಾಡಿ ಮನೆಗೆ ಬಂದೆ. ಇದಾದ ನಂತರ ಒಂದು ಗ್ಲಾಸ್ ನೀರು ಸಹ ಕುಡಿಯಲಾಗಲಿಲ್ಲ. ಬಾಯಿ ಹತ್ತಿರ ಏನೇ ತಂದರೂ ವಾಕರಿಕೆ ಬರುವಂತಾಗುತಿತ್ತು. ನಿನ್ನೆ ರಾತ್ರಿ 10 ಗಂಟೆಗೆ ನೀರು ಕುಡಿದರೂ ವಾಂತಿ ಆರಂಭವಾಯಿತು. ಮಾಧ್ಯಮಗಳಲ್ಲಿ ಈ ವಿಚಾರ ನೋಡಿ ತಿಳಿದಿದ್ದ ಅನೇಕ ಮುಖಂಡರು ಮನೆಗೆ ಬಂದು ನನ್ನನ್ನು ಮಾತನಾಡಿಸಿದರು ಎನ್ನುತ್ತಾರೆ ಗಣೇಶ್.
ವಿಡಿಯೋ ಮಾಡಿದ್ದು ನಾನಲ್ಲ...
ಉಕ್ಕಿ ಹರಿಯುತ್ತಿದ್ದ ಮ್ಯಾನ್ ಹೋಲ್ ನಲ್ಲಿ ನಾನು ಇಳಿದು, ಮುಳುಗಿ ಸ್ವಚ್ಛ ಮಾಡಿದ್ದನ್ನು ಮೊಬೈಲ್ ನಲ್ಲಿ ಯಾರೋ ವಿಡಿಯೋ ಮಾಡಿದ್ದಾರೆ. ನಾವಿದ್ದವರು ಇಬ್ಬರೇ. ವಿಡಿಯೋ ಹೇಗೆ ಮಾಡುವುದು ಎಂಬುದೇ ನನಗೆ ಗೊತ್ತಿಲ್ಲ. ಟಿವಿಗಳಲ್ಲಿ ಬಂದಾಗಲೇ ನನಗೆ ವಿಚಾರ ತಿಳಿಯಿತು ಎನ್ನುತ್ತಾರೆ ಪೌರ ಕಾರ್ಮಿಕ.
ಮ್ಯಾನ್ ಹೋಲ್ ಗೆ ಇಳಿಯಲು ಒಪ್ಪದವರನ್ನು ವಜಾ ಮಾಡಿದ್ದರು
ಮ್ಯಾನ್ ಹೋಲ್ ಗೆ ಇಳಿಯಲು ಒಪ್ಪದ ಮೂರು-ನಾಲ್ಕು ಪೌರ ಕಾರ್ಮಿಕರನ್ನು ಈ ಹಿಂದೆ ಕೆಲಸದಿಂದ ತೆಗೆದು ಹಾಕಲಾಗಿತ್ತು. ಹಾಗಾಗಿ ನಾನು ಇಳಿಯದಿದ್ದಲ್ಲಿ ನನ್ನನ್ನೂ ಕೆಲಸದಿಂದ ತೆಗೆಯಬಹುದೇನೋ ಎಂದುಕೊಂಡು ಇಳಿದೆ. ಇದೇ ಮೊದಲಲ್ಲ. ಇದೇ ರೀತಿ ಎರಡು ಬಾರಿ ಇಳಿದಿದ್ದೇನೆ ಎಂಬುದನ್ನು ಗಣೇಶ್ ಸ್ಪಷ್ಟಪಡಿಸಿದ್ದಾರೆ.
ಕೆ.ಆರ್ ಆಸ್ಪತ್ರೆಯಲ್ಲಿ ಚಿಕಿತ್ಸೆ
ಉಕ್ಕಿ ಹರಿಯುತ್ತಿದ್ದ ಮ್ಯಾನ್ ಹೋಲ್ ನಲ್ಲಿ ಮುಳುಗಿ ಸ್ವಚ್ಛತಾ ಕಾರ್ಯ ನಿರ್ವಹಿಸಿದ ಗಣೇಶ್ ಅಸ್ವಸ್ಥರಾದ ಹಿನ್ನೆಲೆಯಲ್ಲಿ ಮೈಸೂರಿನ ಕೆ.ಆರ್ ಆಸ್ಪತ್ರೆಗೆ ದಾಖಲಿಸಲಾಗಿದೆ. ತುರ್ತು ನಿಗಾ ಘಟಕದಲ್ಲಿರುವ ಗಣೇಶ್ ಗೆ ಡಾ.ಬಸವರಾಜ್ ನೇತೃತ್ವದ ನುರಿತ ವೈದ್ಯರ ತಂಡ ಚಿಕಿತ್ಸೆ ನೀಡುತ್ತಿದೆ.












Click it and Unblock the Notifications