ಭತ್ತದ ಬೆಳೆಗೆ ಕಾಡುವ ರೋಗಗಳಿಂದ ಮುಕ್ತಿ ಪಡೆಯುವುದು ಹೇಗೆ?
ಮೈಸೂರು, ನವೆಂಬರ್ 04: ಈ ಬಾರಿ ಮುಂಗಾರು ಆಶಾದಾಯಕವಾಗಿದ್ದರಿಂದ ನೀರಿಗೆ ತೊಂದರೆಯಾಗದ ಕಾರಣ ಬಹುತೇಕ ರೈತರು ಭತ್ತದ ಬೆಳೆಯನ್ನು ಬೆಳೆದಿದ್ದು ಇದೀಗ ತೆನೆಯೊಡೆದು ಹಾಲು ಕಟ್ಟುವ ಹಂತದಲ್ಲಿದೆ. ಈ ಸಂದರ್ಭದಲ್ಲಿಯೇ ಬಹುತೇಕ ರೋಗಗಳು ಬಾಧಿಸುತ್ತಿದ್ದು ಅವುಗಳಿಂದ ಬೆಳೆಯನ್ನು ರಕ್ಷಿಸುವುದೇ ರೈತರಿಗೆ ಸವಾಲ್ ಆಗಿದೆ.
ಈ ಸಮಯದಲ್ಲಿ ರೈತರು ನಿರಾಸಕ್ತಿ ವಹಿಸಿದರೆ ಅದರಿಂದ ನಷ್ಟ ಹೆಚ್ಚಾಗಲಿದೆ. ಹೀಗಾಗಿ ಕೃಷಿ ಇಲಾಖೆ ನಿರ್ವಹಣಾ ಕ್ರಮವನ್ನು ಶಿಫಾರಸ್ಸು ಮಾಡಿದ್ದು ಅದರಂತೆ ರೈತರು ಮಾಡಿದ್ದೇ ಆದರೆ ರೋಗ ಬಾಧೆ ಹಾಗೂ ಕೀಟದ ಹಾವಳಿಯಿಂದ ಭತ್ತದ ಬೆಳೆಯನ್ನು ರಕ್ಷಿಸಲು ಸಾಧ್ಯವಾಗಲಿದೆ.

ಜಿಲ್ಲಾ ಜಂಟಿ ಕೃಷಿ ನಿರ್ದೇಶಕರಾದ ಕೆ.ಹೆಚ್.ರವಿ ಅವರು ಮೈಸೂರು ಜಿಲ್ಲೆಯ ಕೆಲವೆಡೆ ಭತ್ತದಲ್ಲಿ ಕೀಟ ಮತ್ತು ರೋಗಬಾಧೆ ಕಂಡು ಬರುತ್ತಿದ್ದು, ರೈತರು ಅವುಗಳ ಲಕ್ಷಣಗಳ ಆಧಾರದ ಮೇಲೆ ತುರ್ತಾಗಿ ನಿರ್ವಹಣಾ ಕ್ರಮಗಳನ್ನು ಕೈಗೊಳ್ಳಲು ರೋಗ ಲಕ್ಷಣ ಮತ್ತು ಅವುಗಳಿಗೆ ನಿರ್ವಹಣಾ ಕ್ರಮಗಳನ್ನು ನೀಡಿದ್ದು ಅದರಂತೆ ಔಷಧೋಪಚಾರ ಮಾಡುವಂತೆ ಸೂಚಿಸಿದ್ದಾರೆ.
ಸದ್ಯ ಬೆಂಕಿರೋಗ, ಎಲೆಕವಚ ಒಣಗುವ ರೋಗ, ಕಂದು ಜಿಗಿಹುಳು, ತೆನೆ ತಿಗಣೆ, ಹಳದಿ ಕಾಂಡಕೊರಕ ಮತ್ತು ಬಂಬು ಹುಳು/ಗಂಧೀಭಗ್ ಕಾಣಿಸಿದ್ದು ನಿರ್ವಹಣೆ ಮಾಡಲೇ ಬೇಕಾಗಿದೆ. ಇಲ್ಲದೆ ಹೋದರೆ ರೈತರು ನಷ್ಟ ಅನುಭವಿಸುವುದು ಶತಸಿದ್ಧವಾಗಿದೆ.

ಬೆಂಕಿರೋಗವು ಗರಿಗಳ ಮೇಲೆ ವಜ್ರಾಕಾರದ ಕಂದು ಚುಕ್ಕೆಗಳು ಉಂಟಾಗಿ ಚುಕ್ಕೆಗಳ ಮಧ್ಯಭಾಗವು ಬೂದಿಬಣ್ಣ ಹೊಂದಿರುತ್ತದೆ. ತೆನೆಗಳ ಕುತ್ತಿಗೆಯ ಮೇಲೆ ಕಪ್ಪುಮಚ್ಚೆ ಇದ್ದು, ಕಾಳು ಜೊಳ್ಳಾಗುವುದು. ನಿರ್ವಹಣೆಗಾಗಿ 0.5 ಗ್ರಾಂಟ್ರೆಂಫ್ಲೋಕ್ಸಿಸ್ಟ್ಯಾಬಿನ್ 25ರಷ್ಟು + ಟೆಬುಕೊನಝೋಲ್ 50ರಷ್ಟು ಡಬ್ಲೂ.ಜಿ ಸಂಯುಕ್ತ ಶಿಲೀಂದ್ರ ನಾಶಕವನ್ನು ಪ್ರತಿ ಲೀಟರ್ ನೀರಿನಲ್ಲಿ ಬೆರೆಸಿ ಸಿಂಪಡಿಸುವುದು (ಎಕರೆಗೆ 200 ಲೀಟರ್ ಸಿಂಪರಣಾ ದ್ರಾವಣ ಬೇಕಾಗುತ್ತದೆ).
ಎಲೆಕವಚ ಒಣಗುವ ರೋಗದ ಹಾವಳಿ
ಎಲೆಕವಚ ಒಣಗುವ ರೋಗವು ಎಲೆಯ ಕವಚದ ಮೇಲೆ ಕಂದು ಅಂಚುಳ್ಳ ಹುಲ್ಲಿನ ಬಣ್ಣದ ಉದ್ದದ ಮಚ್ಚೆಗಳು ಕಾಣಿಸಿಕೊಳ್ಳುತ್ತವೆ. ನಿರ್ವಹಣೆಗಾಗಿ ಗದ್ದೆಯ ನೀರನ್ನು ಬಸಿದು2 ಮಿ.ಲೀ. ಹೆಕ್ಸಾಕೋನಜೋಲ್ (5 ಎಸ್.ಸಿ.) ಅಥವಾ1 ಗ್ರಾಂಟ್ರೆಂಸೈಕ್ಲೋಜೋಲ್ 45ರಷ್ಟು + ಹೆಕ್ಸಾಕೋನಜೋಲ್ 10ರಷ್ಟು ಡಬ್ಲೂ.ಜಿ ಸಂಯುಕ್ತ ಶಿಲೀಂದ್ರ ನಾಶಕವನ್ನು ಪ್ರತಿ ಲೀಟರ್ ನೀರಿನಲ್ಲಿ ಬೆರೆಸಿ ಸಿಂಪಡಿಸುವುದು (ಎಕರೆಗೆ 200 ಲೀಟರ್ ಸಿಂಪರಣಾ ದ್ರಾವಣ ಬೇಕಾಗುತ್ತದೆ).
ಕಂದು ಜಿಗಿಹುಳುಗಳ ಬಾಧೆಗೆ ಒಳಗಾದ ಬೆಳೆಗಳ ಗರಿಗಳ ಅಂಚು ಹಳದಿ ಬಣ್ಣಕ್ಕೆ ತಿರುಗುವುದು, ನಂತರ ತೆಂಡೆಗಳು ವೃತ್ತಾಕಾರದಲ್ಲಿ ಸುಟ್ಟಂತೆ ಕಾಣುವುದು. ನಿರ್ವಹಣೆಗಾಗಿ ಗದ್ದೆಯಿಂದ ನೀರನ್ನು ಹೊರಹಾಕುವುದು, ಗಾಳಿ ಹಾಗೂ ಬಿಸಿಲು ತಾಗುವಂತೆ ಮಾಡಲು ಪ್ರತೀ 2 ಮೀಟರ್ ಗೆ ಇಕ್ಕಲು ತೆಗೆಯುವುದು 0.48 ಮಿ.ಲೀ. ಟ್ರೆoಫ್ಲೂಮೆಜೋಪೈರಿಂ 10 ಎಸ್.ಸಿ ಅಥವಾ 0.5 ಮಿ.ಲೀ. ಇಮಿಡಾಕ್ಲೋಪ್ರಿಡ್ 200 ಎಸ್.ಎಲ್. ಅಥವಾ 1.4 ಮಿ.ಲೀ. ಬುಪ್ರೋಫೆಜಿನ್ 25 ಇ.ಸಿ. ಅಥವಾ 0.30 ಗ್ರಾಂಡೈನೊಟಿಪ್ಯೂರಾನ್ 20ರಷ್ಟು ಎಸ್.ಜಿ. ಕೀಟನಾಶವನ್ನು ಪ್ರತಿ ಲೀಟರ್ ನೀರಿನಲ್ಲಿ ಬೆರೆಸಿ ಸಿಂಪಡಿಸುವುದು (ಎಕರೆಗೆ 250 ಲೀಟರ್ ಸಿಂಪರಣಾ ದ್ರಾವಣ ಬೇಕಾಗುತ್ತದೆ).
ತೆನೆ ತಿಗಣೆಯು ತೆನೆ ಹಾಲು ತುಂಬುವ ಸಮಯದಲ್ಲಿ ಕಾಳಿನಿಂದ ರಸಹೀರುತ್ತವೆ ಇದರಿಂದ ತೆನೆ ಜೊಳ್ಳಾಗುತ್ತದೆ. ನಿರ್ವಹಣೆಗಾಗಿ 2 ಮಿ.ಲೀ. ಮೆಲಾಥಿಯಾನ್ 50 ಇ.ಸಿ. ಅಥವಾ 2 ಮಿ.ಲೀ. ಫಿಪ್ರೋನಿಲ್ 5 ಎಸ್.ಸಿ. ಅಥವಾ 0.3 ಗ್ರಾಂಥಯಾಮೆಥಾಕ್ಸಾo 25 ಡಬ್ಲೂ.ಜಿ ಕೀಟ ನಾಶವನ್ನು ಪ್ರತಿ ಲೀಟರ್ ನೀರಿನಲ್ಲಿ ಬೆರೆಸಿ ಸಿಂಪಡಿಸುವುದು (ಎಕರೆಗೆ 250 ಲೀಟರ್ ಸಿಂಪರಣಾ ದ್ರಾವಣ ಬೇಕಾಗುತ್ತದೆ).
ತೆನೆಯಲ್ಲಿ ಹಾಲು ಹೀರುವ ಗಂಧೀಭಗ್
ಹಳದಿ ಕಾಂಡಕೊರಕದಲ್ಲಿ ತೆನೆ ಬರುವ ಹಂತದಲ್ಲಿ ತೆನೆಗಳು ಜೊಳ್ಳಾಗುವುದು, ಇಂತಹ ತೆನೆಗಳನ್ನು ಕೈಯಿಂದ ಎಳೆದರೆ ಸುಲಭವಾಗಿ ಬರುವುದು. ನಿರ್ವಹಣೆಗಾಗಿ 2 ಮಿ.ಲೀ. ಕ್ಲೋರೋಪೈರಿಫಾಸ್ (20 ಇ.ಸಿ.) ಅಥವಾ 0.5 ಮಿ.ಲೀ. ಕ್ಲೋರಾಂಟ್ರನಿಲಿಪ್ರೋಲ್ 18.5ರಷ್ಟು ಎಸ್.ಸಿ. ಕೀಟನಾಶವನ್ನು ಪ್ರತಿ ಲೀಟರ್ ನೀರಿನಲ್ಲಿ ಬೆರೆಸಿ ಸಿಂಪಡಿಸುವುದು (ಎಕರೆಗೆ 250 ಲೀಟರ್ ಸಿಂಪರಣಾ ದ್ರಾವಣ ಬೇಕಾಗುತ್ತದೆ) ಅಥವಾ ಎಕರೆಗೆ 4 ಕೆ.ಜಿ. ಕ್ಲೋರಾಂಟ್ರ ನಿಲಿಪ್ರೋಲ್ 0.4ರಷ್ಟು ಜಿ.ಆರ್. ಅಥವಾ 10 ಕೆ.ಜಿ. ಫಿಪ್ರೋನಿಲ್ 0.3 ಜಿರಸಗೊಬ್ಬರ, ಮರಳಿನೊಂದಿಗೆ ಮಿಶ್ರಣಮಾಡಿ ಎರಚುವುದು.
ಬಂಬು ಹುಳು/ಗಂಧೀಭಗ್ ನಲ್ಲಿ ತೆನೆ ಬಿಡುವ ಹಂತದಲ್ಲಿ ಎಲ್ಲಿದ್ದರೂ ಹಾಜರಾಗುತ್ತದೆ. ತೆನೆಯಲ್ಲಿ ಹಾಲು ಕೂಡುವ ಸಮಯದಲ್ಲಿ ಅದರ ರಸಕುಡಿದು ಬಾರಿ ಬೆಳೆನಷ್ಟವನ್ನು ಉಂಟು ಮಾಡುತ್ತದೆ. ಕಾಳುಗಳ ಮೇಲೆ ಕಪ್ಪು ಚುಕ್ಕೆಗಳು ಕಾಣಿಸಿಕೊಳ್ಳುವುದು. ಹಾಲಿನ ಹಂತದಲ್ಲಿ ಕೆಟ್ಟ ವಾಸನೆ ಕಾಣಿಸಿಕೊಳ್ಳುವುದು ಲಕ್ಷಣವಾಗಿವೆ. ನಿರ್ವಹಣೆಗಾಗಿ 75ರಷ್ಟು ಥಯಾಮೆಥಾಕ್ಸಾಂ 25 ಡಬ್ಲ್ಯೂಜಿ 60 ಗ್ರಾಂ ಔಷಧವನ್ನು ಅಥವಾ ಮಾಲಾಥಿಯಾನ್ 50 ಇ.ಸಿ. 500 ಮಿ.ಲೀ ಒಂದು ಔಷಧವನ್ನು ಎಕರೆಗೆ ಸಿಂಪಡಿಸಬೇಕಾಗುತ್ತದೆ.












Click it and Unblock the Notifications