ಗ್ರಾಮದಲ್ಲಿ ಗೂಂಡಾಗಿರಿ: ಸ್ಪೀಡ್ ನ್ಯೂಸ್ ಚಾನೆಲ್ ಮಾಲೀಕನ ಬಂಧನ
ಮೈಸೂರು, ನವೆಂಬರ್ 9: ಗ್ರಾಮಕ್ಕೆ ಗುಂಪು ಕಟ್ಟಿಕೊಂಡು ಬಂದು ಗುಂಡು ಹಾರಿಸಿ ಭಯಗೊಳಿಸಿದ ಘಟನೆ ಶನಿವಾರ (ನ.7) ರಾತ್ರಿ ನಡೆದಿದೆ.
ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ತಾಲೂಕಿನ ಬೆಟ್ಟದಪುರ ಹೋಬಳಿಯ ಬಿಲ್ಲಹಳ್ಳಿ ಗ್ರಾಮದಲ್ಲಿ ಗುರುಲಿಂಗಪ್ಪ ಕುಟುಂಬ ಮತ್ತು ಚನ್ನಬಸವಪ್ಪ ಕುಟುಂಬದ ನಡುವೆ ಮನೆಯ ಗಲ್ಲಿ ವಿಚಾರದ ಕುರಿತ ವ್ಯಾಜ್ಯ ಬಗೆಹರಿಯದೆ ನ್ಯಾಯಾಲಯದಲ್ಲಿ ವಿಚಾರಣೆಗೆ ಬಾಕಿ ಇದೆ.
ಈ ನಡುವೆ ಚನ್ನಬಸವಪ್ಪ ಮತ್ತು ಅವರ ಮೊಮ್ಮಗಳ ಗಂಡ ಸುನಿಲ್ ಕುಮಾರ್ ಎಂಬಾತ ತನ್ನ ಬೆಂಗಳೂರಿನ ಸ್ನೇಹಿತರನ್ನು ಗ್ರಾಮಕ್ಕೆ ಕರೆತಂದು ಗುರುಲಿಂಗಪ್ಪ ಕುಟುಂಬದೊಂದಿಗೆ ಗಲಾಟೆ ಮಾಡಲು ಮುಂದಾಗಿದ್ದಾನೆ. ಈತನೊಂದಿಗೆ ಬಂದಿದ್ದ ಕರ್ನಾಟಕ ಚಳವಳಿ ವೇದಿಕೆ ಅಧ್ಯಕ್ಷ ಬೆಂಗಳೂರು ಮೂಲದ ಎಂ.ಮಧುಗೌಡ ಮತ್ತು ಈತನ 9 ಮಂದಿ ಸಹಚರರು ಗಲಾಟೆಗೆ ಮುಂದಾಗಿದ್ದು, ಇದನ್ನು ಪ್ರಶ್ನಿಸಿದ ಗ್ರಾಮಸ್ಥರನ್ನು ಬೆದರಿಸಲು ಗುಂಡು ಹಾರಿಸಿದ್ದಾರೆ.

ಇದರಿಂದ ಭಯಗೊಂಡ ಗ್ರಾಮಸ್ಥರು ಅವರು ಬಂದಿದ್ದ ವಾಹನಗಳನ್ನು ತಡೆದು ಪೊಲೀಸರಿಗೆ ಸುದ್ದಿ ಮುಟ್ಟಿಸಿದ್ದಾರೆ. ಸುದ್ದಿ ತಿಳಿದ ಪೊಲೀಸರು ಸ್ಥಳಕ್ಕೆ ಆಗಮಿಸಿ ಏಳು ಮಂದಿಯನ್ನು ಬಂಧಿಸಿದ್ದು, ಉಳಿದವರು ನಾಪತ್ತೆಯಾಗಿದ್ದಾರೆ.
ಈ ಘಟನೆಗೆ ಸಂಬಂಧಿಸಿದಂತೆ ಬಿಲ್ಲಹಳ್ಳಿ ಗ್ರಾಮದ ಬಿ.ಎಂ.ಚನ್ನಬಸಪ್ಪ, ಈತನ ಮೊಮ್ಮಗಳ ಗಂಡ ಬಿ.ಎನ್.ಸುನಿಲ್ ಕುಮಾರ್, ಸ್ಪೀಡ್ ನ್ಯೂಸ್ ಕನ್ನಡ ಚಾನಲ್ ಮಾಲೀಕ ಮತ್ತು ಕನ್ನಡ ಚಳವಳಿ ವೇದಿಕೆ ರಾಜ್ಯಾಧ್ಯಕ್ಷ ಬೆಂಗಳೂರು ಗ್ರಾಮದ ಎಂ.ಮಧುಗೌಡ, ಬೆಂಗಳೂರಿನವರಾದ ಯಾಸೀನ್, ಎಂ.ಪುನೀತ್ ಕುಮಾರ್, ಸಚಿನ್, ಬಿ.ಡಿ.ಪುನೀತ ಎಂಬ ಏಳು ಮಂದಿಯನ್ನು ಬಂಧಿಸಿದ್ದಾರೆ. ಇವರೊಂದಿಗೆ ಬಂದಿದ್ದ ಗನ್ ಮ್ಯಾನ್ ಮತ್ತು ಇತರರು ಪರಾರಿಯಾಗಿದ್ದಾರೆ.
ಬಂಧಿತರಿಂದ 11 ಸಜೀವ ಗುಂಡುಗಳು ಮತ್ತು 2 ಖಾಲಿ ಗುಂಡುಗಳು, 2 ಫಾರ್ಚೂನರ್ ಕಾರು, 1 ಮಹೇಂದ್ರ ಸ್ಕಾರ್ಪಿಯೋ ವಾಹನವನ್ನು ವಶಪಡಿಕೊಳ್ಳಲಾಗಿದೆ.
ಏಕಾಏಕಿ ಗ್ರಾಮಕ್ಕೆ ನುಗ್ಗಿ ಗಲಾಟೆ ಮಾಡಿರುವುದಲ್ಲದೆ, ಗುಂಡು ಹಾರಿಸಿ ಗ್ರಾಮಸ್ಥರನ್ನು ಭಯಭೀತಗೊಳಿಸಿರುವವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ನೂರಾರು ಮಂದಿ ಬಿಲ್ಲಹಳ್ಳಿ ಗ್ರಾಮಸ್ಥರು ಪೊಲೀಸ್ ಠಾಣೆ ಎದುರು ಸೇರಿ, ಪೊಲೀಸ್ ಅಧಿಕಾರಿಗಳಿಗೆ ಮನವಿ ಮಾಡಿದರು.
ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಲ್ಲಹಳ್ಳಿ ಗ್ರಾಮದ ಗುರುಲಿಂಗಪ್ಪ ನೀಡಿರುವ ದೂರಿನ ಆಧಾರದ ಮೇಲೆ ಪ್ರಕರಣದ ದಾಖಲಿಸಿಕೊಳ್ಳಲಾಗಿದೆ. ಸ್ಥಳಕ್ಕೆ ಡಿವೈಎಸ್ಪಿ ಸುಂದರ್ ರಾಜ್, ಸರ್ಕಲ್ ಇನ್ಸ್ ಸ್ಪೆಕ್ಟರ್ ಬಿ.ಆರ್.ಪ್ರದೀಪ್ ಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.












Click it and Unblock the Notifications