ಮೈಸೂರಲ್ಲಿ ತಡರಾತ್ರಿ ಭಾರೀ ಮಳೆ: ಮೇಲ್ಛಾವಣಿ ಕುಸಿದು ಮೂವರಿಗೆ ಗಾಯ
ಮೈಸೂರು, ಮೇ 17: ಮೈಸೂರಿನಲ್ಲಿ ಗುರುವಾರ (ಮೇ.16) ತಡರಾತ್ರಿ ಗುಡುಗು ಸಹಿತ ಭಾರೀ ಮಳೆಯಾಗಿದೆ. ಎಚ್.ಡಿ.ಕೋಟೆ, ಪಿರಿಯಾಪಟ್ಟಣ, ನಂಜನಗೂಡು ತಾಲೂಕಿನ ಕೆಲವೆಡೆ ಉತ್ತಮ ಮಳೆ ಸುರಿದಿದೆ. ಮೈಸೂರು ತಾಲೂಕಿನ ರಮ್ಮನಹಳ್ಳಿ ಹಾಗೂ ಕೆ.ಆರ್.ನಗರದ ಚುಂಚನಕಟ್ಟೆಯಲ್ಲಿ 2.25 ಸೆ.ಮೀ.ನಷ್ಟು ಮಳೆ ದಾಖಲಾಗಿದೆ.ನಗರದಲ್ಲೂ ಸಾಧಾರಣ ಮಳೆಯಾಗಿದೆ.
ನಂಜನಗೂಡು ತಾಲೂಕಿನ ಕೋಣನೂರು ಗ್ರಾಮದಲ್ಲಿ ಕಳೆದ ರಾತ್ರಿ ಸುರಿದ ಬಿರುಗಾಳಿ ಸಹಿತ ಆಲಿಕಲ್ಲು ಮಳೆಯಿಂದಾಗಿ ಗ್ರಾಮದ ಚಿಕ್ಕಬಸವಣ್ಣ ಮತ್ತು ಸತೀಶ್ ಎಂಬುವವರ ಮನೆಗಳು ಕುಸಿದು ಬಿದ್ದಿವೆ. ತಡರಾತ್ರಿಯವರೆಗೂ ಸುರಿದ ಮಳೆಯ ಪರಿಣಾಮ ಚಿಕ್ಕಬಸವಣ್ಣ ಎಂಬುವರು ವಾಸವಿದ್ದ ನಾಡಹಂಚಿನ ಮನೆಯ ಗೋಡೆ ಕುಸಿಯಿತು. ಪಕ್ಕದ ಮನೆಯ ಸತೀಶ್ ಎಂಬುವರ ಮನೆಯೂ ಜಖಂಗೊಂಡಿತು. ಸದ್ಯ ಪ್ರಾಣಾಪಾಯ ಉಂಟಾಗಿಲ್ಲ.

ಮೈಸೂರಿನ ಹೊಸ ಡಿ.ಸಿ.ಕಚೇರಿ ಹಾಗೂ ಸಂಗೀತ ಕಾರ್ನರ್ ಬಳಿ ಮರದ ಕೊಂಬೆಗಳು ಬಿದ್ದವು. ಕನಕಗಿರಿಯಲ್ಲಿ ಕೆಲವು ಮನೆಗಳಿಗೆ ಒಳಚರಂಡಿ ನೀರು ನುಗ್ಗಿತು. ಇಲ್ಲೆಲ್ಲ ಪಾಲಿಕೆಯ 'ಅಭಯ್' ರಕ್ಷಣಾ ತಂಡವು ಕಾರ್ಯಾಚರಣೆ ಕೈಗೊಂಡಿತು.

ಎಚ್ ಡಿ ಕೋಟೆ ತಾಲೂಕಿನ ಹಲವೆಡೆ ಕಳೆದ ರಾತ್ರಿ ಸುರಿದ ಗಾಳಿ ಸಹಿತ ಗುಡುಗು - ಸಿಡಿಲಿನ ಮಳೆಗೆ ಮನೆಯ ಮೇಲ್ಛಾವಣಿಗಳು ಹಾರಿ ಹೋಗಿದ್ದು, ಪ್ರತ್ಯೇಕ ಪ್ರಕರಣದಲ್ಲಿ ಮೂವರಿಗೆ ಗಾಯವಾಗಿದೆ. ಮನೆಯ ಗೋಡೆ ಮತ್ತು ಶೀಟ್ ಗಳಿಗೆ ಸಿಲುಕಿ ಮನೆಯಲ್ಲಿದ್ದ ಬಾಲಕಿ ಮತ್ತು ಇಬ್ಬರು ಮಹಿಳೆಯರು ಗಾಯಗೊಂಡಿದ್ದಾರೆ.

ಪೆಂಜಳ್ಳಿ ಹಾಡಿಯ ಗೌರಿ, ಸುನೀತಾ ಮತ್ತು ಅವರಗೆರೆ ಗ್ರಾಮದ ದೇವಮ್ಮ ಗಾಯಗೊಂಡಿದ್ದಾರೆ. ಸದ್ಯ ಇವರನ್ನು ಎಚ್ ಡಿ ಕೋಟೆ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿದೆ.












Click it and Unblock the Notifications