ಮೈಸೂರಿನಲ್ಲಿ ಶಿವರಾತ್ರಿ ರಾಜೇಂದ್ರ ಪುತ್ಥಳಿ ನಿರ್ಮಾಣದ ಆದೇಶ ರದ್ದುಪಡಿಸಿದ ಹೈಕೋರ್ಟ್
ಮೈಸೂರು, ಸೆಪ್ಟೆಂಬರ್ 8: ಮೈಸೂರು ನಗರದ ಗನ್‌ಹೌಸ್ ವೃತ್ತದಲ್ಲಿ ಶ್ರೀ ಶಿವರಾತ್ರಿ ದೇಶಿಕೇಂದ್ರ ರಾಜೇಂದ್ರ ಸ್ವಾಮೀಜಿ ಪುತ್ಥಳಿ ಪ್ರತಿಷ್ಠಾಪಿಸಲು ಸುಪ್ರೀಂ ಕೋರ್ಟ್ ಆದೇಶಕ್ಕೆ ವಿರುದ್ಧವಾಗಿ 2017ರಲ್ಲಿ ಅನುಮತಿ ಪಡೆಯಲಾಗಿದೆ ಎಂದು ಕರ್ನಾಟಕ ಹೈಕೋರ್ಟ್ ಮಂಗಳವಾರ ಹೇಳಿದ್ದು, ರಾಜ್ಯ ಸರ್ಕಾರ ಹೊರಡಿಸಿರುವ ಆದೇಶವನ್ನು ನ್ಯಾಯಾಲಯವು ರದ್ದುಪಡಿಸಿದೆ.
ಅಖಿಲ ಭಾರತ ಕ್ಷತ್ರಿಯ ಮಹಾಸಭಾ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಮನವಿಯ ವಿಚಾರಣೆಯನ್ನು ಹಂಗಾಮಿ ಮುಖ್ಯ ನ್ಯಾಯಮೂರ್ತಿ ಸತೀಶ್ ಚಂದ್ರ ಶರ್ಮಾ ಮತ್ತು ನ್ಯಾಯಮೂರ್ತಿ ಸಚಿನ್ ಶಂಕರ್ ಮಗದುಮ್ ಅವರಿದ್ದ ವಿಭಾಗೀಯ ಪೀಠವು ವಿಚಾರಣೆ ನಡೆಸಿತು.
ಸುಪ್ರೀಂ ಕೋರ್ಟ್ ಆದೇಶವನ್ನು ಉಲ್ಲೇಖಿಸಿ ಶ್ರೀಕಂಠದತ್ತ ಒಡೆಯರ್ ಪುತ್ಥಳಿ ಪ್ರತಿಷ್ಠಾಪಿಸಲು ಮೈಸೂರು ಮಹಾನಗರ ಪಾಲಿಕೆ ಅನುಮತಿ ನೀಡಿರಲಿಲ್ಲ. ಈಗ ಶ್ರೀ ಶಿವರಾತ್ರಿ ದೇಶಿಕೇಂದ್ರ ರಾಜೇಂದ್ರ ಸ್ವಾಮೀಜಿಯವರ ಪುತ್ಥಳಿ ಪ್ರತಿಷ್ಠಾಪಿಸಲು ಅನುಮತಿಸಲಾಗಿದೆ ಎಂದು ಅರ್ಜಿದಾರರು ತಕಾರರು ಎತ್ತಿದ್ದರು.

"ದೇಶಿಕೇಂದ್ರ ರಾಜೇಂದ್ರ ಸ್ವಾಮೀಜಿಯವರ ಪುತ್ಥಳಿ ಪ್ರತಿಷ್ಠಾಪಿಸಲು ಉದ್ದೇಶಿಸಿರುವ ವೃತ್ತವು ಮೈಸೂರು ನಗರದಲ್ಲೇ ಅತ್ಯಂತ ಜನನಿಬಿಡ ವೃತ್ತ ಎಂಬುದು ಸ್ಪಷ್ಟವಾಗಿದೆ. ರಾಜ್ಯ ಸರ್ಕಾರ ಸಲ್ಲಿಸಿರುವ ನಕ್ಷೆ ಮತ್ತಿತರ ದಾಖಲೆಗಳಿಂದ ತಿಳಿದು ಬರುವುದೇನೆಂದರೆ ಸದರಿ ವೃತ್ತಕ್ಕೆ ಆರು ರಸ್ತೆಗಳು ಕೂಡುತ್ತವೆ. ವೃತ್ತವು ರಸ್ತೆಯ ಭಾಗವಾಗಿದೆ," ಎಂದು ಹೈಕೋರ್ಟ್ ನ್ಯಾಯಪೀಠ ಹೇಳಿದೆ.
"ಸಾರ್ವಜನಿಕ ರಸ್ತೆ, ಪಾದಚಾರಿ ಮಾರ್ಗ ಮತ್ತು ಇತರ ಸಾರ್ವಜಿನಿಕ ಉಪಯುಕ್ತ ಸ್ಥಳಗಳಲ್ಲಿ ಯಾವುದೇ ಪ್ರತಿಮೆ ನಿರ್ಮಿಸದಂತೆ ಸುಪ್ರೀಂ ಕೋರ್ಟ್ 2013ರಲ್ಲಿ ನಿರ್ದೇಶನ ನೀಡಿದೆ. ಇದನ್ನು ರಾಜ್ಯದೆಲ್ಲೆಡೆ ಜಾರಿಗೊಳಿಸಲಾಗಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು,'' ಎಂಬುದನ್ನು ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ದ್ವಿಸದಸ್ಯ ಪೀಠ ಸೂಚಿಸಿದೆ.












Click it and Unblock the Notifications