ಟಿಪ್ಪು ಎಕ್ಸ್‌ಪ್ರೆಸ್ ರೀತಿಯಲ್ಲೇ ಗುಂಬಜ್ ಶೈಲಿಯ ಬಸ್ ನಿಲ್ದಾಣದ ಬದಲಾವಣೆ: ಪ್ರತಾಪ್ ಸಿಂಹ
ಮೈಸೂರು, ನವೆಂಬರ್, 18: ಈ ಹಿಂದೆ ಟಿಪ್ಪು ಎಕ್ಸ್‌ಪ್ರೆಸ್ ಬದಲಾಯಿಸುತ್ತೇನೆ ಎಂದು ಹೇಳಿದ್ದೆ, ಹೇಳಿದಂತೆಯೇ ನಡೆದುಕೊಂಡು ಬದಲಾಯಿಸಿದ್ದೇನೆ. ಗುಂಬಜ್ ವಿಚಾರದಲ್ಲೂ ಕೊಟ್ಟ ಮಾತಿಗೆ ಬದ್ಧನಾಗಿರುತ್ತೇನೆ. ಬಸ್ ನಿಲ್ದಾಣದ ಮೇಲಿನ ಅನಧಿಕೃತ ಗುಂಬಜ್ ತೆರವು ಮಾಡಲೇಬೇಕು. ಮೈಸೂರಿನ ಅಭಿವೃದ್ಧಿ ಕಾರ್ಯಗಳು ಮಹಾರಾಜರ ಹೆಸರು ಹೇಳಬೇಕೇ ಹೊರತು ಅವರ ಶತ್ರುಗಳ ಹೆಸರಲ್ಲ. ಗುಂಬಜ್ ಬಗ್ಗೆ ಪರಿಶೀಲನೆಗೆ ಹೊಸ ತಜ್ಞರ ಸಮಿತಿಯ ಅವಶ್ಯಕತೆ ಇಲ್ಲ. ಕೆಆರ್‌ಐಡಿಎಲ್‌ನ ತಜ್ಞರೇ ಮೂಲ ನಕ್ಷೆಗೆ ಅನುಮತಿ ಕೊಟ್ಟಿದ್ದಾರೆ ಎಂದು ಮೈಸೂರಿನಲ್ಲಿ ಪ್ರತಾಪ್ ಸಿಂಹ ಆಕ್ರೋಶ ವ್ಯಕ್ತಪಡಿಸಿದರು.
ನಾನು ಕಿರುಕುಳ ಕೊಡುವಷ್ಟು ದೊಡ್ಡವನಲ್ಲ
ಇನ್ನು ರಾಮದಾಸ್ ಅವರು ಪ್ರಧಾನಿ ಮೋದಿಯಿಂದ ಬೆನ್ನು ತಟ್ಟಿಸಿಕೊಂಡವರಾಗಿದ್ದಾರೆ. ಅವರಿಗೆ ಕಿರುಕುಳ ಕೊಡುವಷ್ಟು ದೊಡ್ಡ ವ್ಯಕ್ತಿ ನಾನಲ್ಲ. ಯಾರು ಏನೇ ಅಂದರೂ ಹಿಂದೆ ಸರಿಯುವ ಮಾತೇ ಇಲ್ಲ. ಕೆಆರ್‌ಡಿಐಎಲ್ ಮಾದರಿಯಂತೆ ಬಸ್ ನಿಲ್ದಾಣ ರೂಪಿಸಬೇಕು. ಪ್ರಾಧಿಕಾರದ ಅನುಮತಿ ಪಡೆಯದೆ ಅನಧಿಕೃತವಾಗಿ ಕಟ್ಟಡ ನಿರ್ಮಾಣ ಮಾಡಲಾಗಿದೆ. ಒಂದು ಗಿಡ ನೀಡಬೇಕಾದರೂ ಅವರ ಅನುಮತಿ ಪಡೆಯಬೇಕಿತ್ತು ಎಂದು ಪ್ರತಾಪ್ ಸಿಂಹ ವಾಗ್ದಾಳಿ ನಡೆಸಿದರು.
ಬಸ್ ನಿಲ್ದಾಣವನ್ನು ಮೂಲವಿನ್ಯಾಸಕ್ಕೆ ಅನುಗುಣವಾಗಿ ಕಟ್ಟಲಿ ನನ್ನದೇನು ಅಡ್ಡಿ ಇಲ್ಲ. ಇಲ್ಲಿನ ಎಲ್ಲಾ ಅಭಿವೃದ್ಧಿ ಕೆಲಸಗಳು ಕೂಡ ಮಹಾರಾಜರ ಹೆಸರಿನಲ್ಲಿವೆ. ಅದು ಮಹಾರಾಜರ ಪರಂಪರೆಗೆ ಪೂರಕವಾಗಿರಬೇಕು ಎಂದರು.

ಟಿಪ್ಪು ಅನುಯಾಯಿಗಳಿಗೆ ಕಿರುಕುಳ
ರಾಮದಾಸ್ ಅವರು ನಮ್ಮ ಹಿರಿಯ ನಾಯಕರಾಗಿದ್ದಾರೆ. ಗುಂಬಜ್ ಹೊಡೆದರೆ ಟಿಪ್ಪು ಅನುಯಾಯಿಗಳಿಗೆ ಕಿರುಕುಳ ಆದಂತಾಗುತ್ತದೆ. ಶಿವಾಜಿ ಅನುಯಾಯಿಗಳಿಗೆ ಕಿರುಕುಳ ಅನಿಸುವುದಿಲ್ಲ. ರಾಮದಾಸ್ ಯಾವ ಅರ್ಥದಲ್ಲಿ ತಮಗೆ ಕಿರುಕುಳ ಆಗಿದೆ ಎಂದು ಹೇಳಿದ್ದಾರೆ ಎಂಬುದು ನನಗೆ ಗೊತ್ತಿಲ್ಲ ಎಂದು ತಿರುಗೇಟು ನೀಡಿದರು. ಅವರಿಗೆ ಕಿರುಕುಳ ಕೊಡುವಷ್ಟು ಶಕ್ತಿ ನನ್ನಲಿಲ್ಲ. ನಾನು ರಿಯಲ್ ಎಸ್ಟೇಟ್ ಮಾಡಲು ರಾಜಕಾರಣಕ್ಕೆ ಬಂದಿಲ್ಲ. ಮೈಸೂರಿನ ರಾಜಕಾರಣಿಗಳ ಜೊತೆ ಸೇರಿಕೊಂಡು ವ್ಯವಹಾರ ಮಾಡುವ ಅವಶ್ಯಕತೆ ಇಲ್ಲ. ನಾನು ಅಭಿವೃದ್ಧಿಗಾಗಿ ರಾಜಕಾರಣ ಮಾಡುತ್ತಿದ್ದೇನೆ ಎಂದು ತಿಳಿಸಿದ್ದಾರೆ ಎಂದರು.












Click it and Unblock the Notifications