ಭಕ್ತೆಯೊಂದಿಗೆ ಅಸಭ್ಯ ವರ್ತನೆ: ವಿಷ ಕುಡಿದ ಗುಡ್ಡಪ್ಪ
ಮೈಸೂರು, ಮೇ 22: ಮಕ್ಕಳಿಲ್ಲದ ಮಹಿಳೆಯರಿಗೆ, ಮಕ್ಕಳಾಗುವಂತೆ ಮಾಡುತ್ತೇನೆ ಎಂದು ವಂಚಿಸಿ, ಸಿಕ್ಕಿಬಿದ್ದಿದ್ದ ಗುಡ್ಡಪ್ಪ ಇದೀಗ ವಿಷ ಸೇವಿಸಿ ಆಸ್ಪತ್ರೆಗೆ ದಾಖಲಾದ ಘಟನೆ ಮೈಸೂರಿನಲ್ಲಿ ನಡೆದಿದೆ.
ನಂಜನಗೂಡು ತಾಲ್ಲೂಕಿನ ನೆಲ್ಲಿನಾಥಪುರ ಗ್ರಾಮದಲ್ಲಿ ಪೂಜಾರಿಯಾಗಿರುವ ವೆಂಕಟೇಶ ನಾಯ್ಕ (22) ಎಂಬಾತನೇ ಇದೀಗ ಆಸ್ಪತ್ರೆಗೆ ದಾಖಲಾಗಿರುವ ಗುಡ್ಡಪ್ಪ.
ಪೂಜೆ ಸಲ್ಲಿಸಿದರೆ ಮಕ್ಕಳಾಗುತ್ತದೆ ಎಂದು ನಂಬಿದ್ದ ತಾಲ್ಲೂಕಿನ ಮಂಡನಹಳ್ಳಿ ಮಹಿಳೆಯೊಬ್ಬರು ನೆಲ್ಲಿನಾಥ ಪುರಕ್ಕೆ ತೆರಳಿ ವೆಂಕಟೇಶನನ್ನು ಭೇಟಿಯಾಗಿದ್ದಾರೆ. ಇದೇ ವೇಳೆ, ನಿನ್ನ ಮನೆಗೆ ಬಂದು ವಿಶೇಷ ಪೂಜೆ ಮಾಡಿದ್ದಲ್ಲಿ ಮಕ್ಕಳಾಗುತ್ತದೆ ಎಂದು ಭರವಸೆ ನೀಡಿದ್ದ ಗುಡ್ಡಪ್ಪ ಆಕೆಯನ್ನು ನಂಬಿಸಿದ್ದ. ಆ ಮಹಿಳೆಯೊಂದಿಗೆ ಇದೇ ನೆಪದಲ್ಲಿ ಅಸಭ್ಯವಾಗಿ ನಡೆದುಕೊಳ್ಳಲು ಮುಂದಾಗಿದ್ದ.

ಗುಡ್ಡಪ್ಪನ ಈ ವರ್ತನೆ ಬಗ್ಗೆ ಅನುಮಾನಗೊಂಡ ಗೃಹಿಣಿ ತನ್ನ ಪತಿಗೆ ವಿಷಯವನ್ನು ತಿಳಿಸಿದ್ದಾರೆ. ನಂತರ ಇದೇ ವಿಷಯವಾಗಿ, ಪೂಜೆ ಮಾಡಿಸುವ ನೆಪದಲ್ಲಿ ಗುಡ್ಡಪ್ಪನನ್ನು ಗ್ರಾಮಕ್ಕೆ ಕರೆಸಿ ಗ್ರಾಮಸ್ಥರು ಕೂಡಿಹಾಕಿ ಥಳಿಸಿದ್ದರು. ಘಟನೆ ನಂತರ ಜಯಪುರ ಠಾಣೆಗೆ ಆತನನ್ನು ಒಪ್ಪಿಸಿದರು. ಇದಕ್ಕೆ ಸಂಬಂಧಿಸಿದಂತೆ ಯಾವುದೇ ದೂರು ದಾಖಲಾಗಿರಲಿಲ್ಲ. ಈ ಘಟನೆಯಿಂದ ಮನನೊಂದು ವಿಷ ಸೇವಿಸಿದ್ದಾನೆ ಎನ್ನಲಾಗಿದ್ದು, ನಗರದ ಖಾಸಗಿ ಆಸ್ಪತ್ರೆಗೆ ಆತನನ್ನು ದಾಖಲಿಸಲಾಗಿದೆ.












Click it and Unblock the Notifications