ಜೆಡಿಎಸ್ ರಾಜ್ಯಾಧ್ಯಕ್ಷರ ಆಯ್ಕೆ: ಸಭೆಗೆ ಹಾಜರಾಗಲ್ಲ ಎಂದ್ರು ಜಿಟಿಡಿ
ಮೈಸೂರು, ಜನವರಿ 11: ಕರ್ನಾಟಕ ಜೆಡಿಎಸ್ ರಾಜ್ಯಾಧ್ಯಕ್ಷರು ಯಾರು? ಎಂಬುದು ಈಗ ಚರ್ಚೆಗೆ ಕಾರಣವಾಗಿದೆ. ಕೇಂದ್ರ ಸಚಿವ ಎಚ್. ಡಿ. ಕುಮಾರಸ್ವಾಮಿ ಪುತ್ರ ನಿಖಿಲ್ ಕುಮಾರಸ್ವಾಮಿ ರಾಜ್ಯಾಧ್ಯಕ್ಷರಾಗಲಿದ್ದಾರೆ? ಎಂಬ ಸುದ್ದಿಗಳು ಹಬ್ಬಿವೆ. ಇದಕ್ಕೆ ಪಕ್ಷದಲ್ಲಿಯೇ ಅಸಮಾಧಾನವಿದೆ. ರಾಜ್ಯಾಧ್ಯಕ್ಷರ ಆಯ್ಕೆ ಕುರಿತು ಚರ್ಚಿಸಲು ಬೆಂಗಳೂರಿನಲ್ಲಿ ಸಭೆ ಕರೆಯಲಾಗಿದೆ. ಆದರೆ ಹಿರಿಯ ನಾಯಕ ಈ ಸಭೆಗೆ ಹಾಜರಾಗಲ್ಲ ಎಂದು ಹೇಳಿದ್ದಾರೆ.
ಮೈಸೂರಿನ ಚಾಮುಂಡೇಶ್ವರಿ ಕ್ಷೇತ್ರದ ಶಾಸಕ, ಜೆಡಿಎಸ್ ಕೋರ್ ಕಮಿಟಿ ಅಧ್ಯಕ್ಷ ಜಿ. ಟಿ. ದೇವೇಗೌಡ ಪಕ್ಷದ ಚಟುವಟಿಕೆಗಳಿಂದ ಅಂತರ ಕಾಯ್ದುಕೊಂಡಿದ್ದಾರೆ. ಈಗ ಅವರು ರಾಜ್ಯಾಧ್ಯಕ್ಷರ ಆಯ್ಕೆ ಕುರಿತು ಚರ್ಚಿಸಲು ನಡೆಯುವ ಸಭೆಯಲ್ಲಿ ಪಾಲ್ಗೊಳ್ಳುವುದಿಲ್ಲ ಎಂದು ಹೇಳುವ ಮೂಲಕ ಅಚ್ಚರಿಯನ್ನು ಮೂಡಿಸಿದ್ದಾರೆ.

ಶನಿವಾರ ಮೈಸೂರಿನಲ್ಲಿ ಮಾತನಾಡಿದ ಜಿ. ಟಿ. ದೇವೇಗೌಡ, "ಜೆಡಿಎಸ್ ರಾಜ್ಯಾಧ್ಯಕ್ಷರ ಆಯ್ಕೆಯ ಕುರಿತು ನಡೆಯುವ ಸಭೆಯಲ್ಲಿ ಭಾಗಿಯಾಗುವುದಿಲ್ಲ. ನಾಳೆ (ಭಾನುವಾರ) ಸಭೆಯಲ್ಲಿ ನಾನು ಭಾಗಿಯಾಗಲ್ಲ" ಎಂದು ಹೇಳಿದ್ದಾರೆ. ಕಳೆದ ವಾರದ ಮೈಸೂರಿನಲ್ಲಿ ಎಚ್. ಡಿ. ಕುಮಾರಸ್ವಾಮಿ ನೇತೃತ್ವದಲ್ಲಿ ನಡೆದ ದಿಶಾ ಸಭೆಗೂ ಶಾಸಕ ಜಿ. ಟಿ. ದೇವೇಗೌಡ ಗೈರಾಗಿದ್ದರು.
"ಎಚ್. ಡಿ. ದೇವೇಗೌಡರು 92 ವರ್ಷದ ಹಿರಿಯ ಮುತ್ಸದ್ಧಿಯಾಗಿದ್ದಾರೆ, ಅವರು ಜಯಪ್ರಕಾಶ್ ನಾರಾಯಣ ಜೊತೆ ಸೇರಿ ಕಟ್ಟಿದ ಪಕ್ಷವಿದು. ಎಚ್. ಡಿ. ಕುಮಾರಸ್ವಾಮಿ ಅವರು ಸಹ ಎರಡೆರಡು ಬಾರಿ ರಾಜ್ಯದ ಮುಖ್ಯಮಂತ್ರಿಯಾಗಿ ಅಪಾರ ರಾಜಕೀಯ ಅನುಭವ ಹೊಂದಿದ್ದಾರೆ. ಅವರಿಬ್ಬರೇ ಸೂಕ್ತ ವ್ಯಕ್ತಿಯನ್ನು ಆರಿಸುತ್ತಾರೆ" ಎಂದು ಜಿ. ಟಿ. ದೇವೇಗೌಡ ತಿಳಿಸಿದರು.
ಮಗನ ಹೇಳಿಕೆಯಲ್ಲಿ ತಪ್ಪಿಲ್ಲ: ಜಿ. ಟಿ. ದೇವೇಗೌಡ ಮಾತನಾಡಿ, "ನಿಖಿಲ್ ಕುಮಾರಸ್ವಾಮಿಯ ಆಪ್ತ ಸ್ನೇಹಿತ ನನ್ನ ಪುತ್ರ. ನಿಖಿಲ್ ಅವರೇ ರಾಜ್ಯಾಧ್ಯಕ್ಷನಾಗಲಿ ಎಂದು ಹೇಳಿದರೆ ಅದರಲ್ಲಿ ತಪ್ಪೇನು ಬಂತು?" ಎಂದು ಪ್ರಶ್ನೆ ಮಾಡಿದರು.
"ನಾನು ಚಾಮುಂಡೇಶ್ವರಿ ಕ್ಷೇತ್ರದ ಅಭಿವೃದ್ಧಿಗೆ ಓಡಾಡುತ್ತಿದ್ದೇನೆ. ಆದ್ದರಿಂದ ಪಕ್ಷದ ಸಂಘಟನೆ ಹಾಗೂ ಸಭೆಗೆ ಹಾಜರಾಗಲು ಆಗುತ್ತಿಲ್ಲ. ಇದನ್ನು ಹೊರತುಪಡಿಸಿದರೆ ನನಗೆ ಯಾವುದೇ ಬೇಸರವೂ ಇಲ್ಲ. ದಿಶಾ ಸಭೆಗೆ ನಮ್ಮ ನಾಯಕರು ಬಂದ ವೇಳೆ ನಾನು ಹೋಗಬೇಕಿತ್ತು. ಆರೋಗ್ಯ ಸರಿಯಿಲ್ಲದ ಕಾರಣದಿಂದ ನಾನು ಹೋಗಲು ಸಾಧ್ಯವಾಗಿಲ್ಲ" ಎಂದು ಜಿ. ಟಿ. ದೇವೇಗೌಡ ಸ್ಪಷ್ಟಪಡಿಸಿದರು.
"2028ರ ಚುನಾವಣೆ ಬಳಿಕ ಯಾರು ಮುಖ್ಯಮಂತ್ರಿಯಾಗುತ್ತಾರೆ? ಎಂದು ಹೇಳಲು ನಾನು ಜ್ಯೋತಿಷಿಯಲ್ಲ. ಜನರಿಂದ ಗೆದ್ದು ಬಂದವರು ಮುಖ್ಯಮಂತ್ರಿಯಾಗುತ್ತಾರೆ. ಸದ್ಯಕ್ಕೆ ಸಿಎಂ ಆಗುವ ಆಸೆ, ಹಣಬಲ, ಶಕ್ತಿ ನನ್ನಲ್ಲಿ" ಇಲ್ಲ ಎಂದು ಜಿ. ಟಿ. ದೇವೇಗೌಡ ಹೇಳಿದರು.
"ನನಗೆ ಯಾರ ಮೇಲೆಯೂ ಯಾವುದೇ ಕೋಪ, ಬೇಸರ ಇಲ್ಲ. ತಾಳ್ಮೆಯಿಂದ ಇದ್ದೇನೆ. ಮನೆಯ ಜವಾಬ್ದಾರಿ ಜಾಸ್ತಿ ಆಗಿದೆ, ಕ್ಷೇತ್ರದ ಕೆಲಸಗಳು ನಿಮಗೇ ತಿಳಿದಿದೆ. ನನಗೆ 75 ವರ್ಷ ವಯಸ್ಸಾಗಿದೆ. ಆದ್ದರಿಂದ ಹೆಚ್ಚಿನ ಓಡಾಟ ಮಾಡಲು ಕಷ್ಟ ಆಗುತ್ತಿದೆ" ಎಂದು ಶಾಸಕರು ತಿಳಿಸಿದರು.
ಹಾಲಿ ಜೆಡಿಎಸ್ ರಾಜ್ಯಾಧ್ಯಕ್ಷರು ಎಚ್. ಡಿ. ಕುಮಾರಸ್ವಾಮಿ. ಆದರೆ ಅವರು ಮಂಡ್ಯದ ಸಂಸದರು, ಕೇಂದ್ರದಲ್ಲಿ ನರೇಂದ್ರ ಮೋದಿ ಸಂಪುಟದಲ್ಲಿ ಸಚಿವರು. ಆದ್ದರಿಂದ ರಾಜ್ಯದಲ್ಲಿ ಪಕ್ಷ ಸಂಘಟನೆಗೆ ಹೆಚ್ಚಿನ ಗಮನ ನೀಡಲು ಸಾಧ್ಯವಿಲ್ಲ. ಮುಂಬರುವ ತಾಲೂಕು ಮತ್ತು ಜಿಲ್ಲಾ ಪಂಚಾಯಿತಿ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಜೆಡಿಎಸ್ ಪಕ್ಷಕ್ಕೆ ಹೊಸ ರಾಜ್ಯಾಧ್ಯಕ್ಷರನ್ನು ನೇಮಕ ಮಾಡಲು ಪಕ್ಷ ಮುಂದಾಗಿದೆ.












Click it and Unblock the Notifications