• search
  • Live TV
ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಗ್ರೌಂಡ್ ರಿಪೋರ್ಟ್: ಪಿರಿಯಾಪಟ್ಟಣದಲ್ಲಿ ಮಹದೇವು ಒಂದು ಹೆಜ್ಜೆ ಮುಂದೆ

By ಕಿಕು
|

ಮೈಸೂರು, ಮೇ 7: ಕಳೆದೆರಡು ವಿಧಾನಸಭಾ ಚುನಾವಣೆಗಳಲ್ಲಿ ಜಿದ್ದಾಜಿದ್ದಿನ ಸ್ಪರ್ಧೆ ಏರ್ಪಟ್ಟಿದ್ದ ಕ್ಷೇತ್ರಗಳಲ್ಲಿ ಮೈಸೂರಿನ ಪಿರಿಯಾಪಟ್ಟಣ ಕೂಡ ಒಂದು. ಹಾಲಿ ಶಾಸಕ ಕೆ. ವೆಂಕಟೇಶ್ 7 ಬಾರಿ ಸ್ಪರ್ಧಿಸಿ, 5 ಬಾರಿ ಗೆದ್ದು ಮತ್ತೆ 8ನೇ ಬಾರಿಗೆ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧೆಗಿಳಿದಿದ್ದಾರೆ.

2008ರಲ್ಲಿ ಹೆಚ್ಚೇನೂ ಪ್ರಬಲ ಸ್ಪರ್ಧೆಯೇ ಇಲ್ಲದಂತಿದ್ದ ಸನ್ನಿವೇಶದಲ್ಲಿ ವೆಂಕಟೇಶ್ ಸಿದ್ದರಾಮಯ್ಯರ ಹಿಂಬಾಲಕರಾಗಿ ಜೆಡಿಎಸ್ ತೊರೆದು ಕಾಂಗ್ರೆಸ್ ಸೇರಿದ್ದರು. ಹೀಗೆ ಕಾಂಗ್ರೆಸಿಗೆ ಬಂದು 2008ರಲ್ಲಿ ಸ್ಪರ್ಧೆಗಿಳಿದು, ತೀಕ್ಷ್ಣ ಸ್ಪರ್ಧೆಯಲ್ಲಿ 879 ಮತಗಳ ಅತ್ಯಲ್ಪ ಅಂತರದಿಂದ ಗೆಲುವಿನ ದಡಸೇರಿದರು.

ಪಿರಿಯಾಪಟ್ಟಣ : ಕಾಂಗ್ರೆಸ್- ಜೆಡಿಎಸ್ ಕುತೂಹಲದ ಹಣಾಹಣಿ

ತಮ್ಮ ಎದುರಾಳಿ ಮಹದೇವು ಪಿರಿಯಾಪಟ್ಟಣದ ಜನತಾದಳದಲ್ಲಿ ಎರಡನೇ ಹಂತದ ನಾಯಕ ಹಾಗೂ ವೆಂಕಟೇಶ್ ರ ಅನುಯಾಯಿಯಾಗಿದ್ದವರು ಎಂಬುದು ಇಲ್ಲಿ ಗಮನಾರ್ಹ.

 2013ರಲ್ಲಿ ಅಲ್ಪ ಮತಗಳ ಗೆಲುವು

2013ರಲ್ಲಿ ಅಲ್ಪ ಮತಗಳ ಗೆಲುವು

2013 ರಲ್ಲೂ ಕಾಂಗ್ರೆಸ್ ಮತ್ತು ಜೆಡಿಎಸ್ ನಿಂದ ಮತ್ತದೇ ಹುರಿಯಾಳುಗಳು ಸ್ಪರ್ಧಿಸಿದ್ದರು. ಈ ಚುನಾವಣೆಗೆ ಒಂದು ವಾರದ ಮುಂಚೆ ಬಿಜೆಪಿ ಅಭ್ಯರ್ಥಿ ಸಣ್ಣಮೋಘೇಗೌಡ ಹೃದಯಾಘಾತದಿಂದ ಅಕಾಲಿಕ ಮರಣಕ್ಕೆ ತುತ್ತಾದರು. ಇದರಿಂದ ಪಿರಿಯಾಪಟ್ಟಣ ಕ್ಷೇತ್ರದ ಚುನಾವಣೆ ಒಂದು ತಿಂಗಳಿಗೆ ಮುಂದೂಡಲ್ಪಟ್ಟಿತ್ತು. ಈ ಮತದಾನದ ಸಮಯಕ್ಕಾಗಲೇ, ಕಾಂಗ್ರೆಸ್ ಪಕ್ಷ ಇನ್ನುಳಿದ 223 ಕ್ಷೇತ್ರಗಳಲ್ಲಿ ಸ್ಪರ್ಧಿಸಿ ಅದಾಗಲೇ ಭರ್ಜರಿಯಾಗಿ ಬಹುಮತ ಪಡೆದು, ಸಿದ್ದರಾಮಯ್ಯ ಮುಖ್ಯಮಂತ್ರಿಯೂ ಆಗಿದ್ದರು.

ಹೀಗಾಗಿ ತನ್ನ ಆಪ್ತ ವೆಂಕಟೇಶ್ ರನ್ನು ಗೆಲ್ಲಿಸಿಕೊಳ್ಳುವುದಕ್ಕಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ತನ್ನ ಇಡೀ ಮಂತ್ರಿಮಂಡಲವನ್ನೇ ಪಿರಿಯಾಪಟ್ಟಣದ ಒಂದೊಂದು ಪಂಚಾಯ್ತಿಗೆ ಕೆಲಸಕ್ಕೆ ಹಚ್ಚಿದರು. ಎಲ್ಲ ಸಮುದಾಯದ ನಾಯಕರನ್ನು ಕರೆಸಿ ಪ್ರಚಾರ ನಡೆಸಿದರು. ಸ್ವತಃ ಮೈಸೂರು ಜಿಲ್ಲೆಯ ಪ್ರಮುಖ ನಾಯಕರು ಹಾಗು ಪ್ರಭಾವಿ ಸಚಿವರುಗಳಾದ ಡಾ.ಹೆಚ್.ಸಿ.ಮಹದೇವಪ್ಪ, ಶ್ರೀನಿವಾಸ್ ಪ್ರಸಾದ್, ದಿವಂಗತ ಮಹದೇವ್ ಪ್ರಸಾದ್ ಸಂಪೂರ್ಣ ಹೊಣೆಗಾರಿಕೆ ಹೊತ್ತು ಹೋರಾಟಕ್ಕಿಳಿದರು. ಇದರ ಪರಿಣಾಮ ಜೆಡಿಎಸ್ ನ ಮಹದೇವು ಸಿದ್ದರಾಮಯ್ಯ ಅಂಡ್ ಟೀಮ್ ವಿರುದ್ಧ 2088 ಮತಗಳ ಅಂತರದಿಂದ ಗೆಲುವಿನ ಮನೆಯ ಹೊಸ್ತಿಲಲ್ಲಿ ಜಾರಿಬಿದ್ದರು.

 ಮಹದೇವುಗೆ ಹೆಚ್ಚಿನ ಬಲ

ಮಹದೇವುಗೆ ಹೆಚ್ಚಿನ ಬಲ

ಕಳೆದೆರಡು ಚುನಾವಣೆಯಂತೆ ಈ ಬಾರಿಯೂ ಪಿರಿಯಾಪಟ್ಟಣದಲ್ಲಿ ಕಾಂಗ್ರೆಸ್ ಹಾಗು ಜೆಡಿಎಸ್ ನಡುವೆ ನೇರ ಸ್ಪರ್ಧೆ. ಬಿಜೆಪಿ ಇಲ್ಲಿ ಆಟಕ್ಕುಂಟು ಲೆಕ್ಕಕ್ಕಿಲ್ಲ.

ದಿನೇ ದಿನೇ ಪಿರಿಯಾಪಟ್ಟಣದಲ್ಲಿ ಜೆಡಿಎಸ್ ಬಲ ವೃದ್ಧಿಯಾಗುತ್ತಿದೆ. ಅನೇಕ ವರ್ಷಗಳಿಂದ ಕಾಂಗ್ರೆಸ್ ಹಾಗೂ ವೆಂಕಟೇಶ್ ಜೊತೆ ಗುರುತಿಸಿಕೊಂಡಿದ್ದ ವಿವಿಧ ಸಮುದಾಯಕ್ಕೆ ಸೇರಿದ ನಾಯಕರು ಹಾಗು ಕಾರ್ಯಕರ್ತರು ಕಾಂಗ್ರೆಸ್ ತೊರೆದು ಜೆಡಿಎಸ್ ಸೇರುತ್ತಿದ್ದಾರೆ. ಇದು ಮಹದೇವುಗೆ ಮೇಲ್ನೋಟಕ್ಕೆ ಹೆಚ್ಚಿನ ಬಲ ನೀಡಿದಂತೆ ಭಾಸವಾಗುತ್ತಿದೆ.

ಪಿರಿಯಾಪಟ್ಟಣದಲ್ಲಿ ಗೆಲುವಿನ ನಗೆ ಬೀರುವರ್ಯಾರು?

 ಪಿರಿಯಾಪಟ್ಟಣದ ಪುರಸಭೆ ವ್ಯಾಪ್ತಿಯಲ್ಲಿ ಹೆಚ್ಚಿದ ಜೆಡಿಎಸ್ ಬಲ

ಪಿರಿಯಾಪಟ್ಟಣದ ಪುರಸಭೆ ವ್ಯಾಪ್ತಿಯಲ್ಲಿ ಹೆಚ್ಚಿದ ಜೆಡಿಎಸ್ ಬಲ

ಪಟ್ಟಣದ ಲಿಂಗಾಯತ ಸಮುದಾಯದ ನಾಯಕರು ಹಣದ ದೇಣಿಗೆಯನ್ನೂ ನೀಡಿ ಮಹದೇವುಗೆ ಬೆಂಬಲ ಘೋಷಿಸಿದ್ದಾರೆ. ಹಾಗೂ ಪುರಸಭೆ ಅಧ್ಯಕ್ಷ ಸ್ಥಾನವೂ ಜೆಡಿಎಸ್ ಕೈಲಿದೆ.

ಇನ್ನು ತಾಲೂಕಿನ 5 ರಲ್ಲಿ 3 ಜಿಲ್ಲಾ ಪಂಚಾಯಿತಿ ಸ್ಥಾನಗಳು ಜೆಡಿಎಸ್ ಬಳಿ ಇದ್ದರೆ, 17ರಲ್ಲಿ 9 ಜೆಡಿಎಸ್ ತಾಲೂಕು ಪಂಚಾಯ್ತಿ ಸದಸ್ಯರಿದ್ದಾರೆ.

ಶಾಸಕ ವೆಂಕಟೇಶ್ ಮೂಲತಃ ತಾಲೂಕಿನ ಕಿತ್ತೂರಿನವರು. ಸ್ವಾಭಾವಿಕವಾಗೇ ಹೆಚ್ಚು ಪ್ರಭಾವ ಹೊಂದಿರುವವರು. ಆದರೆ ತಾಲೂಕಿನ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯಾಗಿದ್ದ ಕೃಷ್ಣೇಗೌಡ ಹಾಗೂ ಪ್ರಭಾವಿ ನಾಯಕ ಅಣ್ಣಯ್ಯ ಶೆಟ್ಟಿ ಕಾಂಗ್ರೆಸ್ ತೊರೆದು ಜೆಡಿಎಸ್ ಸೇರಿರುವುದು ಜೆಡಿಎಸ್ ಗೆ ಕಿತ್ತೂರು ಜಿಲ್ಲಾ ಪಂಚಾಯ್ತಿ ವ್ಯಾಪ್ತಿಯಲ್ಲಿ ಹೆಚ್ಚು ಬಲಸಿಕ್ಕಂತಾಗಿದೆ.

 ಜೆಡಿಎಸ್ ಗೆ ಹೋಲ್ ಸೇಲ್ ಪಕ್ಷಾಂತರ

ಜೆಡಿಎಸ್ ಗೆ ಹೋಲ್ ಸೇಲ್ ಪಕ್ಷಾಂತರ

ಮಡಿವಾಳ ಜನಾಂಗದ ಆಟೋ ಮಹದೇವು ಮತ್ತು ಸಂಗಡಿಗರು ಹಾಗೂ ಪುರಸಭಾ ಸದಸ್ಯ ಅಂಜುಮ್ ಪಾಶ, ಟಿವಿಎಸ್ ಷೋರೂಮ್ ನ ಅನ್ಸರ್, ರಿಯಲ್ ಎಸ್ಟೇಟ್ ಗೌಸ್ ಮುಖಂಡತ್ವದಲ್ಲಿ ಸುಮಾರು ಸಾವಿರದಷ್ಟು ಮುಸಲ್ಮಾನರು ಜೆಡಿಎಸ್ ಸೇರಿದ್ದಾರೆ.

ನಾಯಕ ಸಮುದಾಯದ ತಮ್ಮನಾಯಕ, ಪುರಸಭಾ ಮಾಜಿ ಸದಸ್ಯ ಸಣ್ಣಪ್ಪನಾಯಕ ಸೇರಿದಂತೆ ಅನೇಕ ನಾಯಕ ಸಮುದಾಯ ಮುಖಂಡರು ಮಹದೇವುಗೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಇವರಲ್ಲದೆ

ದಲಿತ ಮುಖಂಡರಾದ ಐಲಾಪುರದ ರಾಮು, ಈರಯ್ಯ ನಾಯಕತ್ವದಲ್ಲಿ ಸಾವಿರಾರು ಕಾಂಗ್ರೆಸ್ ಕಾರ್ಯಕರ್ತರು ಜೆಡಿಎಸ್ ಸೇರಿದ್ದಾರೆ.

ಹುಣಸೆಕೊಪ್ಪಲಿನ ಜಗದೀಶ್,ಕಣಗಾಲ್ ಮಹದೇವ್, ಕೋರನಳ್ಳಿ ಸೋಮಶೇಖರ್, ಬೆಟ್ಟದಪುರದ ರೈತಸಂಘದ ನಾಯಕ ದೇವರಾಜ್ ಹಾಗು ಗಿರಿಗೌಡ, ಉದ್ಯಮಿ ನಾಗೇಶ್ (ಜೋಳದ ವ್ಯಾಪಾರಿ), ಮಾಲಂಗಿ ಅಣ್ಣೇಗೌಡರ ಮಗ ನಾಗೇಶ್ ಹೀಗೆ ಹಲವಾರು ಜನರು ಜೆಡಿಎಸ್ ಸೇರಿದ್ದಾರೆ.

 ಮುಸ್ಲಿಂ ತಾಂಡಾದಲ್ಲಿ ಪ್ರಜ್ವಲ್ ಹವಾ

ಮುಸ್ಲಿಂ ತಾಂಡಾದಲ್ಲಿ ಪ್ರಜ್ವಲ್ ಹವಾ

ಬಹುತೇಕ ಮುಸ್ಲಿಂ ಸಮುದಾಯದ ಮತದಾರರಿರುವ ತಾಲೂಕಿನ ಹಳಗಹಳ್ಳಿಯಲ್ಲಿ ಪ್ರಜ್ವಲ್ ರೇವಣ್ಣ ನೇತೃತ್ವದಲ್ಲಿ ನಡದ ಸಮಾವೇಶಕ್ಕೆ ಹೆಚ್ಚು ಮತದಾರರು ಸೇರಿದ್ದು ವಿಶೇಷವಾಗಿತ್ತು.

ಕಿತ್ತೂರಿನ ಜಿಲ್ಲಾ ಪಂಚಾಯ್ತಿ ಸದಸ್ಯ ಮಂಜುನಾಥ್ ಶಾಸಕ ವೆಂಕಟೇಶ್ ಪುತ್ರ ನಿತಿನ್ ವೆಂಕಟೇಶ್ ಗೆ ಸೋಲುಣಿಸಿದ್ದರು. ಪ್ರಭಾವಿಯೂ ಆಗಿರುವ ಮಂಜುನಾಥ್ ಕಿತ್ತೂರು ಭಾಗದಲ್ಲಿ ಜೆಡಿಎಸ್ ಪರವಾಗಿ ನಿಂತಿರುವ ಪ್ರಬಲ ಕಟ್ಟಾಳುಗಳಲ್ಲಿ ಒಬ್ಬರು.

 ಅಮಿತ್ ಶಾ ಫ್ಲಾಪ್ ರೋಡ್ ಶೋ

ಅಮಿತ್ ಶಾ ಫ್ಲಾಪ್ ರೋಡ್ ಶೋ

ಬಿಜೆಪಿ ಅಭ್ಯರ್ಥಿ ಮಂಜುನಾಥ್ ಪರ ಪ್ರಚಾರಕ್ಕೆಂದು ಸ್ವತಃ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಪಿರಿಯಾಪಟ್ಟಣಕ್ಕೆ ಆಗಮಿಸಿದ್ದರು. ಪಟ್ಟಣದ ಮುಖ್ಯ ರಸ್ತೆಯಲ್ಲಿ ಪ್ರತಾಪ್ ಸಿಂಹ ನೇತೃತ್ವದಲ್ಲಿ ಜಿಲ್ಲಾ ಬಿಜೆಪಿ ತಂಡ ರೋಡ್ ಶೋ ಆಯೋಜಿಸಿತ್ತು. ಆದರೆ ರೋಡ್ ಶೋಗೆ ಕೇವಲ 500 ಕಾರ್ಯಕರ್ತರಷ್ಟೇ ಬಂದ ಕಾರಣ ಅಮಿತ್ ಶಾ ಪ್ರಚಾರವನ್ನು ಅರ್ಧಕ್ಕೆ ಮೊಟಕುಗೊಳಿಸಿ ಮೈಸೂರಿಗೆ ಹಿಂದುರುಗಿದ್ದರು.

ಕುರುಬ ಸಮುದಾಯಕ್ಕೆ ಸೇರಿದ ಬಿಜೆಪಿ ಅಭ್ಯರ್ಥಿ ಮಂಜುನಾಥ್ ಕಳೆದ ಒಂದು ವರ್ಷದ ಹಿಂದೆಯೇ ಬೆಂಗಳೂರಿನಿಂದ ಬಂದು ಒಂದಷ್ಟು ಕಾರ್ಯಕ್ರಮವನ್ನು ಆಯೋಜಿಸಿ ಓಡಾಡತೊಡಗಿದ್ದರು.ಆದರೆ ಚುನಾವಣೆ ಹತ್ತಿರವಾಗುತ್ತಿದ್ದಂತೆ 3-4 ತಿಂಗಳು ಕಾಣೆಯಾಗಿದ್ದ ಮಂಜುನಾಥ್, ಟಿಕೆಟ್ ಖಾತ್ರಿಯಾದ ಮೇಲೆ ಕ್ಷೇತ್ರದಲ್ಲಿ ಮತ್ತೆ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದಾರೆ. ಸದ್ಯದ ಪರಿಸ್ಥಿತಿಯಲ್ಲಿ ಮಂಜುನಾಥ್ ಠೇವಣಿ ಉಳಿಸಿಕೊಳ್ಳುವುದೂ ಅನುಮಾನವೆಂಬ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ ಹೆಸರು ಹೇಳಲು ಇಚ್ಛಿಸದ ಬಿಜೆಪಿ ಕಾರ್ಯಕರ್ತರೊಬ್ಬರು.

 ಶಾಸಕ ವೆಂಕಟೇಶ್ ಬಲ

ಶಾಸಕ ವೆಂಕಟೇಶ್ ಬಲ

ಕಳೆದ ಒಂದೂವರೆ ವರ್ಷದಿಂದ ಬಿಡಿಎ ಅಧ್ಯಕ್ಷರಾಗಿರುವ ವೆಂಕಟೇಶ್ ರ ಹಣಬಲ ಕ್ಷೇತ್ರದಲ್ಲಿ ಕಾಣಿಸುತ್ತಿದೆ. ಜೊತೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಆಪ್ತರಾಗಿರುವುದು, ಕುರುಬ ಜನಾಂಗದ ಬೆಂಬಲ ಅವರ ಸಹಾಯಕ್ಕೆ ಬರಲಿದೆ.

ಬಿಜೆಪಿಯ ನಾಯಕ ಗ್ಯಾಸ್ ಏಜೆನ್ಸಿ ಗಣೇಶ್ ಕಾಂಗ್ರೆಸ್ ಸೇರಿರುವುದು ವೆಂಕಟೇಶ್ ಅವರ ಬಲ ಹೆಚ್ಚಿಸಿದೆ.

ಇವೆಲ್ಲಾ ಲೆಕ್ಕಾಚಾರಗಳ ಆಚೆಗೆ ರಾಜ್ಯದ ಬಹುತೇಕ ಕ್ಷೇತ್ರಗಳಲ್ಲಿ ಮತದಾನಕ್ಕೆ ಇನ್ನುಳಿದ 5 ದಿನಗಳಲ್ಲಿ ಏನು ಬೇಕಾದರೂ ನಡೆಯಬಹುದು. ಅದರಲ್ಲೂ ಇಂತಹ ಜಿದ್ದಾಜಿದ್ದಿನ ಕ್ಷೇತ್ರದಲ್ಲಿ ಕೇವಲ ಬೆರಳೆಣಿಕೆಯಷ್ಟು ಮತಗಳು ಇಲ್ಲಿಂದಲ್ಲಿಗೆ ಬದಲಾದರೆ ಸೋಲು ಗೆಲುವಿನ ಲೆಕ್ಕಾಚಾರದಲ್ಲಿ ಬದಲಾವಣೆಯಾಗುವುದು ನಿಶ್ಚಿತ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Karnataka assembly elections 2018: Periyapatna Ground Report: JDS candidate K Mahadevu having more chances to win against congress candidate and MLA K Venkatesh in the constituency.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more