ಅದ್ದೂರಿ ಮೈಸೂರು ದಸರಾಗೆ ಖರ್ಚಾಗಿದ್ದೆಷ್ಟು?, ಲೆಕ್ಕ ಕೊಟ್ಟ ಸಚಿವರು
ಮೈಸೂರು, ನವೆಂಬರ್ 1: ಎರಡು ವರ್ಷಗಳ ಕೋವಿಡ್ 19 ಬಿಕ್ಕಟ್ಟಿನ ನಂತರ ನಡೆದ ಅದ್ದೂರಿಯಾಗಿ ನಡೆದ ವಿಶ್ವವಿಖ್ಯಾತ ಮೈಸೂರು ದಸರಾ ಹಬ್ಬಕ್ಕೆ ಈ ಬಾರಿ 28.74 ಕೋಟಿ ರೂ. ವ್ಯಯಿಸಲಾಗಿದೆ ಎಂದು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್. ಟಿ. ಸೋಮಶೇಖರ್ ಮಾಹಿತಿ ನೀಡಿದ್ದಾರೆ.
ಸರಕಾರ ನೀಡಿದ ಅನುದಾನ ಉತ್ತಮವಾಗಿ ಬಳಕೆಯಾಗಿದ್ದು 2.34 ಕೋಟಿ ರೂ. ಉಳಿತಾಯವಾಗಿದೆ ಎಂದು ನಗರದ ಅರಮನೆ ಮಂಡಳಿಯಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು. ದಸರಾ ಮಹೋತ್ಸವದಲ್ಲಿ ವೆಚ್ಚವಾಗದೆ ಉಳಿತಾಯವಾದ ಹಣವನ್ನು ಯಾವ ಉದ್ದೇಶಕ್ಕೆ ಬಳಕೆ ಮಾಡಬೇಕು ಎಂಬುದರ ಬಗ್ಗೆ ಚರ್ಚೆ ನಡೆಸಿ ನಿರ್ಧಾರ ಕೈಗೊಳ್ಳಲಾಗುವುದು ಎಂದರು.
ಕಲ್ಯಾಣ ಕರ್ನಾಟಕ ವಿಭಾಗಕ್ಕೆ 1,600 ಬಸ್ ಖರೀದಿ: ಶ್ರೀರಾಮುಲು ಭರವಸೆ
ಒಟ್ಟು ಅನುದಾನದಲ್ಲಿ ದಸರಾ ಉಪ ಸಮಿತಿಗಳಿಗೆ 26.54 ಕೋಟಿ ರೂ., ಮಂಡ್ಯ, ಚಾಮರಾಜನಗರ, ಹಾಸನ ಮತ್ತು ಮಡಿಕೇರಿ ದಸರಾ ಉತ್ಸವಕ್ಕೆ 2.2 ಕೋಟಿ ರೂ. ವೆಚ್ಚವಾಗಿದೆ. ಇದರೊಂದಿಗೆ ರಾಜವಂಶ್ಥರಿಗೆ 47 ಲಕ್ಷ ರೂ. ಗೌರವ ಧನ ನೀಡಲಾಗಿದೆ. 31,08,88, 819 ರೂ.ಗಳಲ್ಲಿ 28.74 ಕೋಟಿ ರೂ. ವೆಚ್ಚ ಮಾಡಲಾಗಿದ್ದು, 2.34 ಕೋಟಿ ರೂ. ಉಳಿಕೆಯಾಗಿದೆ ಎಂದು ಹೇಳಿದರು.
"ದಸರಾ ಉತ್ಸವಕ್ಕಾಗಿ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಿಂದ 10 ಕೋಟಿ ರೂ., ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ 15 ಕೋಟಿ ರೂ., ಅರಮನೆ ಆಡಳಿತ ಮಂಡಳಿಯಿಂದ 5 ಕೋಟಿ ರೂ. ಅನುದಾನ ನೀಡಲಾಗಿತ್ತು. ದಸರಾ ಪ್ರಾಯೋಜಕತ್ವದಿಂದ 32.5 ಲಕ್ಷ ರೂ., ಟಿಕೆಟ್ ಮತ್ತು ಗೋಲ್ಡ್ ಕಾರ್ಡ್ ಮಾರಾಟದಿಂದ 76.38 ಲಕ್ಷ ರೂ. ಬಂದಿದ್ದು , ಒಟ್ಟಾರೆ. 31.08 ಕೋಟಿ ರೂ. ಸಂಗ್ರಹವಾಗಿತ್ತು" ಎಂದು ಮಾಹಿತಿ ನೀಡಿದರು.
ಎಲ್ಲಿ ಎಷ್ಟು ಖರ್ಚು?; ಅರಣ್ಯ ಇಲಾಖೆಗೆ 1.46 ಕೋಟಿ ರೂ., ರಂಗಾಯಣಕ್ಕೆ 1 ಕೋಟಿ, ಸಿವಿಲ್ ಮತ್ತು ವಿದ್ಯುತ್ ಕಾಮಗಾರಿಗಳಿಗೆ ಮುಡಾ, ಪಾಲಿಕೆ ಹಾಗೂ ಲೋಕೋಪಯೋಗಿ ಇಲಾಖೆಯಿಂದ 5.76 ಕೋಟಿ ರೂ., ದಸರಾ ದರ್ಶನ ಉಪಸಮಿತಿಗೆ 18.50 ಲಕ್ಷ ರೂ., ಯೋಗ ದಸರಾ ಉಪಸಮಿತಿಗೆ 18.94 ಲಕ್ಷ ರೂ., ಯುವ ಸಂಭ್ರಮ ಮತ್ತು ಯುವ ದಸರಾ ಉಪಸಮಿತಿಗೆ 6.36 ಕೋಟಿ ರೂ., ಮಹಿಳಾ ಮತ್ತು ಮಕ್ಕಳ ದಸರಾ ಉಪಸಮಿತಿಗೆ 31.07 ಲಕ್ಷ ರೂ., ಮೆರವಣಿಗೆ ಉಪಸಮಿತಿಗೆ 2.22 ಕೋಟಿ ರೂ. ಸೇರಿದಂತೆ 28.74 ಕೋಟಿ ಖರ್ಚು ಮಾಡಲಾಗಿದೆ.

ಸಂಸದ ಪ್ರತಾಪ್ ಸಿಂಹ, ಮೇಯರ್ ಶಿವಕುಮಾರ್, ವಸ್ತುಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷ ಮಿರ್ಲೆ ಶ್ರೀನಿವಾಸಗೌಡ, ಮೃಗಾಲಯ ಪ್ರಾಧಿಕಾರದ ಅಧ್ಯಕ್ಷ ಎಂ. ಶಿವಕುಮಾರ್, ಜಿಲ್ಲಾಧಿಕಾರಿ ಡಾ. ಕೆ. ವಿ. ರಾಜೇಂದ್ರ, ನಗರ ಪೊಲೀಸ್ ಆಯುಕ್ತ ಡಾ. ಚಂದ್ರಗುಪ್ತ, ಎಸ್ಪಿ ಆರ್.ಚೇತನ್, ಡಿಸಿಪಿ ಗೀತ ಪ್ರಸನ್ನ , ಜಿಪಂ ಸಿಇಒ ಬಿ.ಆರ್. ಪೂರ್ಣಿಮಾ, ಪಾಲಿಕೆ ಆಯುಕ್ತ ಲಕ್ಷ್ಮೀಕಾಂತ ರೆಡ್ಡಿ ಇತರರು ಇದ್ದರು.