ಹುಣಸೂರಿನಲ್ಲಿ ಕೊಟ್ಟಿಗೆಗೆ ನುಗ್ಗಿ ಮೇಕೆ ಎಳೆದೊಯ್ದ ಹುಲಿ: ಆತಂಕದಲ್ಲಿ ಗ್ರಾಮಸ್ಥರು
ಮೈಸೂರು, ಮೇ. 25: ಸಾಂಸ್ಕೃತಿಕ ರಾಜಧಾನಿ ಮೈಸೂರು ಭಾಗದಲ್ಲಿ ಹುಲಿ ಹಾವಳಿ ಹೆಚ್ಚಾಗಿದೆ. ಹುಣಸೂರು ತಾಲೂಕಿನಲ್ಲಿ ಹುಲಿ ದಾಳಿಗೆ ಮೇಕೆಯೊಂದು ಬಲಿಯಾಗಿದೆ. ಹಳ್ಳಿಯ ಕೊಟ್ಟಿಗೆಗೆ ನುಗ್ಗಿದ ಹುಲಿಯೊಂದು ಮೇಕೆಯನ್ನು ಕೊಂದು ಎಳೆದೊಯ್ದು ತಿಂದು ಹಾಕಿರುವ ಘಟನೆ ಸಿಂಡೇನಹಳ್ಳಿ ಗ್ರಾಮದಲ್ಲಿ ಗುರುವಾರ ವರದಿಯಾಗಿದೆ.
ನಾಗರಹೊಳೆ ಉದ್ಯಾನದಂಚಿನ ಹುಣಸೂರು ತಾಲೂಕಿನ ಸಿಂಡೇನಹಳ್ಳಿ ಗ್ರಾಮದಲ್ಲಿ ಗುರುವಾರ ಬೆಳಗಿನ ಜಾವ ಹುಲಿ ಮೇಕೆಯನ್ನು ಎಳೆದೊಯ್ದು ತಿಂದಿರುವ ಘಟನೆ ನಡೆದಿದ್ದು, ಈ ಘಟನೆಯಿಂದ ಗ್ರಾಮಸ್ಥರು ಭಯ ಭೀತರಾಗಿದ್ದಾರೆ. ಸಿಂಡೇನಹಳ್ಳಿ ಗ್ರಾಮದ ಸತೀಶ್ ಎಂಬುವವರ ಕೊಟ್ಟಿಗೆಯಲ್ಲಿ ಕಟ್ಟಿ ಹಾಕಿದ್ದ ಮೇಕೆಯ ಮೇಲೆ, ಗುರುವಾರ ಬೆಳಗಿನ ಜಾವ ಹುಲಿ ದಾಳಿ ನಡೆಸಿ ಸಂಪೂರ್ಣ ತಿಂದು ಹಾಕಿದೆ.

ಸಿಂಡೇನಹಳ್ಳಿ ಗ್ರಾಮಸ್ಥರು ನೀಡಿದ ಮಾಹಿತಿ ಮೇರೆಗೆ ಸ್ಥಳಕ್ಕೆ ಭೇಟಿ ನೀಡಿದ ಅರಣ್ಯ ಇಲಾಖೆಯ ಸಿಬ್ಬಂದಿ, ಸ್ಥಳ ಮಹಜರು ನಡೆಸಿದ್ದಾರೆ. ಹುಲಿ ದಾಳಿ ನಡೆಸಿರುವ ಜಾಗದಲ್ಲಿ ಹುಲಿಯ ಹೆಜ್ಜೆ ಗುರುತುಗಳು ಕಂಡಿ ಬಂದಿವೆ, ಇದನ್ನುಕುಡ ಅಧಿಕಾರಿಗಳಿಗೆ ಗ್ರಾಮಸ್ಥರು ತೋರಿಸಿದ್ದಾರೆ. ಈ ಭಾಗದಲ್ಲಿ ಈಗಾಗಲೆ ಜೋಳ, ಶುಂಠಿ ನಾಟಿ ಮಾಡಿದ್ದು, ಕೆಲವೇ ದಿನಗಳಲ್ಲಿ ಬೆಳೆ ಎತ್ತರಕ್ಕೆ ಬೆಳೆಯಲಿದೆ. ಆಗ ಹುಲಿ ಹಿಡಿಯುವುದು ಮತ್ತಷ್ಟು ಕಷ್ಟವಾಗಲಿದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.
ಬೆಳೆ ಬೆಳೆಯುವ ಮುನ್ನ ಈಗಲೇ ಹುಲಿ ಹೆಜ್ಜೆ ಪತ್ತೆಮಾಡಿ ಹುಲಿಯನ್ನು ಸೆರೆ ಹಿಡಿಯಬಹುದು, ಬೆಳೆ ಬೆಳೆದ ನಂತರದಲ್ಲಿ ಹುಲಿಯನ್ನು ಪತ್ತೆ ಮಾಡುವುದೇ ಕಷ್ಟವಾಗಲಿದೆ. ಬುಧವಾರ ರೈತರ ಜಮೀನಿನಲ್ಲಿ ಹುಲಿ ಓಡಾಡಿರುವ ಹೆಜ್ಜೆ ಗುರಿತಿದೆ. ಗುರುವಾರ ಬೆಳಗ್ಗೆ ಮನೆ ಮುಂದೆ ಓಡಾಡಿ, ಕೊಟ್ಟಿಗೆಗೆ ನುಗ್ಗಿ ಮೇಕೆ ಕೊಂದು ಹಾಕಿದೆ ಹೀಗಾಗಿ ಆದಷ್ಟು ಬೇಗ ಹುಲಿ ಸೆರೆ ಹಿಡಿಯಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

ನಾಗರಹೊಳೆ ಉದ್ಯಾನದಂಚಿನ ಈ ಭಾಗದಲ್ಲಿ ಆಗಾಗ ಹುಲಿ, ಚಿರತೆಗಳು ಜನ ಜಾನುವಾರುಗಳ ಮೇಲೆ ದಾಳಿ ನಡೆಸಿ ಕಾಡಂಚಿನ ಜನರನ್ನು ಭಯಭೀತಿಗೊಳಿಸುತ್ತಿವೆ. ಈ ಭಾಗದಲ್ಲಿ ಗಿರಿಜನ ಹಾಡಿಗಳು ಸೇರಿದಂತೆ ಹತ್ತಾರು ಗ್ರಾಮಗಳಿದ್ದು, ಹುಲಿಯ ಭಯದಿಂದ ಜನರು ಓಡಾಡಲು ಹೆದರುತ್ತಿದ್ದಾರೆ. ಹೀಗಾಗಿ ಹುಲಿ ಹಿಡಿಯಲು ಬೋನಿಟ್ಟು ಹುಲಿ ಸೆರೆಹಿಡಿದು, ಈ ಭಾಗದ ಜನರು ನೆಮ್ಮದಿಯಿಂದ ಬದುಕಲು ಅವಕಾಶ ಕಲ್ಪಿಸಬೇಕು ಎಂದು ಗ್ರಾಮಸ್ಥರು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ.












Click it and Unblock the Notifications