ವಿಡಿಯೋ: ಹುಟ್ಟೂರಿನ ಜಾತ್ರೆಯಲ್ಲಿ ವೀರ ಕುಣಿತ ನೃತ್ಯ ಮಾಡಿದ ಮಾಜಿ ಸಿಎಂ ಸಿದ್ದರಾಮಯ್ಯ
ಮೈಸೂರು, ಮಾರ್ಚ್ 25: ವಿಪಕ್ಷ ನಾಯಕ ಹಾಗೂ ಕರ್ನಾಟಕದ ಮಾಜಿ ಸಿಎಂ ಸಿದ್ದರಾಮಯ್ಯ ಅವರು ತಮ್ಮ ಹುಟ್ಟೂರು ಮೈಸೂರು ಜಿಲ್ಲೆ ಸಿದ್ದರಾಮನಹುಂಡಿ ಗ್ರಾಮದ ದೇವಸ್ಥಾನದ ಉತ್ಸವದಲ್ಲಿ ಗ್ರಾಮಸ್ಥರೊಂದಿಗೆ ವೀರ ಕುಣಿತ- ಜಾನಪದ ನೃತ್ಯವನ್ನು ಪ್ರದರ್ಶಿಸಿದರು.
ತಮ್ಮ ಪಾದಗಳ ಲಯಬದ್ಧ ಚಲನೆಯೊಂದಿಗೆ ಗಾಳಿಯಲ್ಲಿ ಕೈಗಳನ್ನು ಚಲಿಸುವ ಮೂಲಕ, 73 ವರ್ಷದ ಸಿದ್ದರಾಮಯ್ಯ ಅವರು ಸಿದ್ದರಾಮೇಶ್ವರ ದೇವರನ್ನು ಸ್ತುತಿಸುತ್ತಾ ನೃತ್ಯ ತಂಡವನ್ನು ಮುನ್ನಡೆಸಿದರು. ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕನಿಗೆ ಸಿದ್ದರಾಮೇಶ್ವರ ದೇವರ ಹೆಸರನ್ನು ಇಡಲಾಗಿದ್ದು ಮತ್ತು ಬಾಲ್ಯದಲ್ಲಿ ಕಲಾ ಪ್ರಕಾರದಲ್ಲಿ ಔಪಚಾರಿಕ ತರಬೇತಿಯನ್ನು ಪಡೆದಿದ್ದಾರೆ.
ಸಿದ್ದರಾಮಯ್ಯನವರ ನೃತ್ಯದ ವಿಡಿಯೋವನ್ನು ಅವರ ಪುತ್ರ ಹಾಗೂ ವರುಣಾ ಕ್ಷೇತ್ರದ ಕಾಂಗ್ರೆಸ್ ಶಾಸಕ ಯತೀಂದ್ರ ಸಿದ್ದರಾಮಯ್ಯ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
"ಸಿದ್ದರಾಮೇಶ್ವರ ದೇವಸ್ಥಾನದ ಉತ್ಸವವು ಮೂರು ವರ್ಷಗಳಿಗೊಮ್ಮೆ ನಡೆಯುತ್ತದೆ ಆದರೆ ದೇವಸ್ಥಾನ ನಿರ್ಮಾಣ ಮತ್ತು ಕೋವಿಡ್‌ನಿಂದಾಗಿ ಕಳೆದ ಆರು ವರ್ಷಗಳಿಂದ ಇದನ್ನು ಆಯೋಜಿಸಲಾಗಿಲ್ಲ. ಕೊನೆಗೂ ಗುರುವಾರ ಮಧ್ಯರಾತ್ರಿ ಉತ್ಸವ ಆರಂಭವಾಯಿತು. ಅವರ ಸ್ನೇಹಿತರು ಮತ್ತು ಅಭಿಮಾನಿಗಳು ಕೇಳಿದ ನಂತರ ತಂದೆ ನಮ್ಮ ಹಳ್ಳಿಯ ತಂಡದೊಂದಿಗೆ ನೃತ್ಯ ಮಾಡಿದರು," ಎಂದು ಯತೀಂದ್ರ ತಿಳಿಸಿದರು.

ಊರಿನೊಂದಿಗೆ ಮೊದಲಿನಿಂದಲೂ ನಿಕಟ ಸಂಪರ್ಕ
ನಮ್ಮೂರಿನ ಜಾತ್ರೆಗೆ ನಾನು ಎಂದಿಗೂ ತಪ್ಪಿಸಿಕೊಂಡಿಲ್ಲ. ನಾನು ಮೂಲತಃ ಇದೇ ಊರಿನವನು ಎಂದು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು. ಸಿದ್ದರಾಮನಹುಂಡಿಯ ಜಾತ್ರೆಯಲ್ಲಿ ಪಾಲ್ಗೊಂಡು, ಪೂಜೆಯ ನಂತರ ಮಾತನಾಡಿದ ಅವರು, ಊರಿನೊಂದಿಗೆ ಮೊದಲಿನಿಂದಲೂ ನಿಕಟ ಸಂಪರ್ಕ ಇರಿಸಿಕೊಂಡಿದ್ದೇನೆ ಎಂದರು.
ಜಾತ್ರೆಯಲ್ಲಿ ಪಾಲ್ಗೊಳ್ಳುವುದನ್ನು ಎಂದಿಗೂ ತಪ್ಪಿಸಿಕೊಳ್ಳುವುದಿಲ್ಲ. ಹಿಂದೆ ಸಚಿವನಾಗಿದ್ದಾಗಲೂ ಬಂದಿದ್ದೆ, ಮುಖ್ಯಮಂತ್ರಿಯಾಗಿದ್ದಾಗಲೂ ಬಂದಿದ್ದೆ, ಈಗಲೂ ಬಂದಿದ್ದೇನೆ. ಹಿಂದೆ ಎರಡು ವರ್ಷಗಳಿಗೊಮ್ಮೆ ಜಾತ್ರೆ ನಡೆಯುತ್ತಿತ್ತು. ಬಳಿಕ ಮೂರು ವರ್ಷಗಳಿಗೊಮ್ಮೆ ಆಯ್ತು. ಕೋವಿಡ್ ಬಂದಿದ್ದ ಕಾರಣ ಕಳೆದ ವರ್ಷ ಹಬ್ಬ ಮಾಡಿರಲಿಲ್ಲ. ಈ ವರ್ಷ ಮಾಡುತ್ತಿದ್ದೇವೆ. ಜಾತ್ರೆಗೆ ಬೇರೆ ಕಡೆಯಿಂದೆಲ್ಲಾ ನೆಂಟರಿಷ್ಟರು, ಗೆಳೆಯರು ಬಂದಿರುತ್ತಾರೆ. ಊರಿಗೆ ಬಂದು ಹೋಗುವುದೇ ಖುಷಿ ಎಂದು ಹೇಳಿದರು.

ಜಾತ್ರಾ ಮಹೋತ್ಸವದಲ್ಲಿ ಸ್ನೇಹಿತರು, ಬೆಂಬಲಿಗರ ಜತೆ ಸುಮಾರು 40 ನಿಮಿಷ ಕುಣಿದರು. ಮನೆಯಿಂದ ಕಾಲುನಡಿಗೆಯಲ್ಲಿಯೇ ದೇವಸ್ಥಾನಕ್ಕೆ ಆಗಮಿಸಿದ ಸಿದ್ದರಾಮಯ್ಯ ಸಿದ್ದರಾಮೇಶ್ವರನಿಗೆ ಪೂಜೆ ಸಲ್ಲಿಸಿದರು. ಸಿದ್ದರಾಮಯ್ಯನ ಹುಂಡಿಯಲ್ಲಿ ಜಾತ್ರೆ ಎರಡು ದಿನ ನಡೆಯುತ್ತದೆ. ಜಾತ್ರೆಯಲ್ಲಿ ಕೆಲ ಬೆಂಬಲಿಗರು 'ಮುಂದಿನ ಸಿಎಂ ಸಿದ್ದರಾಮಯ್ಯ' ಎಂದು ಘೋಷಣೆಗಳನ್ನು ಕೂಗಿದರು.
ಬಂದಾನಪ್ಪೋ ಬಂದಾನು, ಸಿದ್ದರಾಮಯ್ಯ ಬಂದಾನು, ಮುಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಎಂದು ಗ್ರಾಮಸ್ಥರು ಘೋಷಣೆ ಮೊಳಗಿಸಿದರು. ಹುಟ್ಟೂರಲ್ಲಿ ಸಿದ್ದರಾಮಯ್ಯಗೆ ಬಹುಪರಾಕ್ ಹೇಳಿದರು. ಗ್ರಾಮಸ್ಥರೊಬ್ಬರು ಸಿದ್ದರಾಮಯ್ಯ ಕಾಲಿಗೆ ಬಿದ್ದರು. ಏ ಯಾರಪ್ಪ ನೀನು ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು. ತಕ್ಷಣ ಆತನನ್ನು ಪೊಲೀಸರು ಪಕ್ಕಕ್ಕೆ ಸರಿಸಿದರು.
ಜಾತ್ರೆಯಲ್ಲಿ ಸಿದ್ದರಾಮಯ್ಯ ತುಂಬಾ ಖುಷಿಯಾಗಿ ಡಾನ್ಸ್ ಮಾಡಿದರು. ಜಾನಪದ ವಾದ್ಯಗಳ ಹಿಮ್ಮೆಳಕ್ಕೆ ತಕ್ಕಂತೆ ಹೆಜ್ಜೆ ಹಾಕಿದ ಅವರು, ಸುಮಾರು 40 ನಿಮಿಷ ತಮ್ಮ ಸ್ನೇಹಿತರು ಹಾಗೂ ಬೆಂಬಲಿಗರ ಜೊತೆ ಕುಣಿದರು. ಸಿದ್ದರಾಮಯ್ಯ ಅವರು ಜಾತ್ರೆಯಲ್ಲಿ ಕುಣಿದು ಸುಮಾರು 15 ವರ್ಷಗಳೇ ಆಗಿತ್ತು. ಉಪಮುಖ್ಯಮಂತ್ರಿ ಆಗಿದ್ದ ಕಾಲದಲ್ಲಿ ಕುಣಿದಿದ್ದೇ ಕೊನೆಯದು. ನಂತರ ಕುಣಿದಿರಲಿಲ್ಲ. ನೆಚ್ಚಿನ ನಾಯಕನ ಕುಣಿತ ನೋಡಲು ಗ್ರಾಮಸ್ಥರು ಮುಗಿಬಿದ್ದರು. ತಳ್ಳಾಟ ನೂಕಾಟದ ನಡುವೆಯೇ ಸಿದ್ದರಾಮಯ್ಯ ಬಿಂದಾಸ್ ಆಗಿ ಹೆಜ್ಜೆ ಹಾಕಿದರು.












Click it and Unblock the Notifications