ಚಾಮುಂಡಿ ಬೆಟ್ಟ ಪ್ಲಾಸ್ಟಿಕ್ ಮುಕ್ತ ಮಾಡಲು ಅರಣ್ಯ ಇಲಾಖೆಯಿಂದ ದಂಡ ಅಸ್ತ್ರ: ಇಲ್ಲಿದೆ ಸಂಪೂರ್ಣ ಮಾಹಿತಿ
ಮೈಸೂರು, ಆಗಸ್ಟ್ 17: ರಾಜ್ಯದ ಪ್ರಮುಖ ಧಾರ್ಮಿಕ ಕೇಂದ್ರವಾದ ಚಾಮುಂಡಿ ಬೆಟ್ಟದಲ್ಲಿ ಇನ್ಮುಂದೆ ಎಲ್ಲೆಂದರಲ್ಲಿ ತ್ಯಾಜ್ಯ ಬೀಸಾಡಿದ್ರೆ ದಂಡ ಬೀಳಲಿದೆ. ಈ ಬಗ್ಗೆ ಅರಣ್ಯ ಇಲಾಖೆ ಅಧಿಕೃತ ಆದೇಶ ಹೊರಡಿಸಿದೆ.
ದಿನೇ ದಿನೇ ಪ್ಲಾಸ್ಟಿಕ್ ಬಳಕೆ ಹೆಚ್ಚಾಗುತ್ತಲೇ ಇದೆ. ಪ್ಲಾಸ್ಟಿಕ್ ಹಾವಳಿ ತಡೆಗೆ ಸರ್ಕಾರದಿಂದಲೂ ಸಾಕಷ್ಟು ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಆದರೆ, ಪ್ರಯೋಜನ ಮಾತ್ರ ಶೂನ್ಯ. ಆದರೂ ರಾಜ್ಯದ ಪ್ರಮುಖ ಧಾರ್ಮಿಕ ಕೇಂದ್ರವಾದ ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ಇದೀಗ ಪ್ಲಾಸ್ಟಿಕ್ ಬಳಕೆಯನ್ನು ಸಂಪೂರ್ಣ ನಿಷೇಧಿಸಲು ತೀರ್ಮಾನಿಸಲಾಗಿದೆ.

ಪ್ಲಾಸ್ಟಿಕ್ ಬಳಕೆ ಕಡಿಮೆ ಮಾಡಬೇಕೆಂಬ ಕೂಗು ಕೂಡ ಎಲ್ಲೆಡೆ ಕೇಳಿ ಬಂದಿದೆ. ಪ್ಲಾಸ್ಟಿಕ್‌ಗೆ ಪರ್ಯಾಯವಾಗಿ ಬಟ್ಟೆ ಬ್ಯಾಗ್ ಬಳಸುವಂತೆಯೂ ಸಲಹೆಗಳು ಕೇಳಿ ಬಂದಿದೆ. ಈಗಾಗಲೇ ಏಕಬಳಕೆಯ ಪ್ಲಾಸ್ಟಿಕ್ ನಿಷೇಧ ಜಾರಿಯಾಗಿದೆ. ಆದರೆ, ಅದರ ಅನುಷ್ಠಾನ ಸಂಪೂರ್ಣ ವಿಫಲವಾಗಿದೆ. ಈ ನಡುವೆಯೂ ಅರಣ್ಯ ಇಲಾಖೆ ಚಾಮುಂಡಿ ಬೆಟ್ಟದಲ್ಲಿ ವರ್ತಕರು, ಭಕ್ತರು ಪ್ಲಾಸ್ಟಿಕ್ ಬಳಸಿದರೆ ದಂಡ ವಿಧಿಸಲು ನಿರ್ಧರಿಸಿದೆ.
ಪ್ಲಾಸ್ಟಿಕ್ ಎಸೆದರೆ 500ರೂ ದಂಡ..!
ಪ್ರವಾಸಿಗರು ಚಾಮುಂಡಿ ಬೆಟ್ಟದಲ್ಲಿ ಪ್ಲಾಸ್ಟಿಕ್ ಎಸೆದರೆ 500ರೂ ದಂಡ ವಿಧಿಸಲಾಗುತ್ತದೆ. ಇನ್ನು ಚಾಮುಂಡಿ ಬೆಟ್ಟದ ಅಂಗಡಿಯವರಿಗೂ ಕಟ್ಟುನಿಟ್ಟಿನ ಸೂಚನೆ ನೀಡಿದ್ದು, ಮೊದಲ ಬಾರಿಗೆ ತ್ಯಾಜ್ಯ ಎಸೆದರೆ 2,500 ದಂಡ, ಎರಡನೇ ಬಾರಿಗೆ 5 ಸಾವಿರ ಹಾಗೂ ಮೂರನೇ ಬಾರಿಗೆ 10 ಸಾವಿರ ಹಾಗೂ ಲೈಸನ್ಸ್ ರದ್ದು ಮಾಡಲಾಗುತ್ತದೆ ಎಂದು ಸೂಚಿಸಲಾಗಿದೆ.
ಚಾಮುಂಡಿ ಬೆಟ್ಟದ ಪ್ರಮುಖ ಧಾರ್ಮಿಕ ಕೇಂದ್ರ ಹೇಗೋ ಹಾಗೆಯೇ ಪ್ರವಾಸಿತಾಣವೂ ಹೌದು. ನಿತ್ಯ ಸಾವಿರಾರು ಜನ ಬೆಟ್ಟಕ್ಕೆ ಭೇಟಿ ನೀಡಿ ತಾಯಿ ಚಾಮುಂಡೇಶ್ವರಿ ತಾಯಿ ದರ್ಶನ ಪಡೆಯುತ್ತಾರೆ. ಹೀಗಾಗಿ ಬೆಟ್ಟದಲ್ಲಿ ಪ್ಲಾಸ್ಟಿಕ್ ಹಾವಳಿ ಹೆಚ್ಚಾಗಿದೆ.
ರಾತ್ರಿ 10ರಿಂದ ಬೆಳಿಗ್ಗೆ 6 ಗಂಟೆಯವರೆಗೆ ಚಾಮುಂಡಿ ಬೆಟ್ಟಕ್ಕೆ ನಿರ್ಬಂಧ ವಿಧಿಸಲಾಗಿದ್ದು, ಮದ್ಯ ಹಾನಿಕಾರಕ ವಸ್ತು ಸಾಗಿಸಿದರೆ 5 ಸಾವಿರ ರೂ ದಂಡ, ಕಾಡು ಪ್ರಾಣಿಗಳಿಗೆ ಆಹಾರ ನೀಡಿದರೆ 1 ಸಾವಿರ ದಂಡ ವಿಧಿಸಲು ನಿರ್ಧರಿಸಲಾಗಿದೆ.
ಇನ್ನು ಅರಣ್ಯದ ಒಳಗೆ ತೆರಳಿದರೆ 500 ರೂ ದಂಡ, ನಿರ್ಬಂಧಿತ ಪ್ರದೇಶದಲ್ಲಿ ವಾಹನ ನಿಲುಗಡೆ ಮಾಡಿದರೆ 1 ಸಾವಿರ ರೂ ದಂಡ ವಿಧಿಸಲು ಪ್ಲ್ಯಾನ್ ಮಾಡಲಾಗಿದ್ದು, ಸೆಪ್ಟೆಂಬರ್ 1 ರಿಂದ ಈ ಆದೇಶ ಜಾರಿಯಾಗಲಿದೆ ಎಂದು ಮೈಸೂರು ಅರಣ್ಯ ಸಂರಕ್ಷಣಾಧಿಕಾರಿಯವರು ಆದೇಶಿಸಿದ್ದಾರೆ.
ಪ್ಲಾಸ್ಟಿಕ್ ಆರೋಗ್ಯಕ್ಕೆ ಮಾರಕ ಅಂತ ಗೊತ್ತಿದ್ದರೂ ಕೂಡ ಹಲವೆಡೆ ಈಗಲೂ ಹೆಚ್ಚಾಗಿ ಬಳಕೆ ಮಾಡುತ್ತಿದ್ದಾರೆ. ಇದರಿಂದ ಬರೀ ಪರಿಸರದ ಮೇಲೆ ಅಷ್ಟೇ ಅಲ್ಲದೇ ಮನುಷ್ಯರ ಆರೋಗ್ಯದ ಮೇಲೂ ಪರಿಣಾಮ ಬೀರುವುದರಲ್ಲಿ ಯಾವುದೇ ಸಂದೇಹವಿಲ್ಲ. ಆದ್ದರಿಂದ ಇದನ್ನು ಅರಿತುಕೊಂಡು ಜನರೇ ಪ್ಲಾಸ್ಟಿಕ್ ತ್ಯಜಿಸಿ ಜಾಗೃತಿ ಮೂಡಿಸುವುದರಿಂದ ಮುಂದೆ ಆಗುವ ಅನಾಹುತಗಳನ್ನು ತಡೆಯಬಹುದಾಗಿದೆ.












Click it and Unblock the Notifications